ಸೋಮವಾರ, ಡಿಸೆಂಬರ್ 6, 2021
27 °C
ಜಿಲ್ಲೆಯ 1.37 ಲಕ್ಷ ಜನರಿಗೆ ನರೇಗಾದಡಿ ಉದ್ಯೋಗ

ಕಾರ್ಮಿಕರ ₹ 1.57 ಕೋಟಿ ಕೂಲಿ ಬಾಕಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಜಿಲ್ಲೆಯಲ್ಲಿ ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲಾ ಪಂಚಾಯಿತಿ ಮೂಲಕ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ನರೇಗಾ) ಯೋಜನೆ ಅಡಿಯಲ್ಲಿ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದರೂ ಇನ್ನೂ ಅನೇಕ ಜನರ ಬ್ಯಾಂಕ್‌ ಖಾತೆಗೆ ಕೂಲಿ ಹಣವೇ ಪಾವತಿಯಾಗಿಲ್ಲ.

ಕಷ್ಟಕಾಲದಲ್ಲಿ ಕೂಲಿ ಕೆಲಸ ದೊರಕಿದ್ದರಿಂದ ಕೂಲಿ ಕಾರ್ಮಿಕರು ಆರಂಭದಲ್ಲಿ ಖುಷಿ ಪಟ್ಟರೂ ತಾಂತ್ರಿಕ ಕಾರಣಗಳಿಂದಾಗಿ ಕೂಲಿ ಪಾವತಿಯಾಗದ ಕಾರಣ ತೊಂದರೆ ಅನುಭವಿಸುತ್ತಿದ್ದಾರೆ. ಕೆಲವರು ನಿತ್ಯ ಪಂಚಾಯಿತಿ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ.

ನಿಮ್ಮ ಹಣ ಎಲ್ಲಿಗೂ ಹೋಗುವುದಿಲ್ಲ. ಬ್ಯಾಂಕ್‌ ಖಾತೆಗೆ ಜಮಾ ಮಾಡುತ್ತೇವೆ ಎಂದು ಅಧಿಕಾರಿಗಳು ಭರವಸೆಗಳನ್ನೇ ಕೊಡುತ್ತಿದ್ದಾರೆ ಹೊರತು ತಾಂತ್ರಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿಲ್ಲ ಎಂದು ಬಸವಕಲ್ಯಾಣ ತಾಲ್ಲೂಕಿನ ಗ್ರಾಮವೊಂದರ ಕೂಲಿ ಕಾರ್ಮಿಕ ಬೇಸರ ವ್ಯಕ್ತಪಡಿಸುತ್ತಾರೆ.

ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಈವರೆಗೆ 81,132 ಕುಟುಂಬಗಳಿಗೆ ಅಂದರೆ 1,37,062 ಜನರಿಗೆ ಉದ್ಯೋಗ ಒದಗಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಕೂಲಿ ಹಾಗೂ ಸಾಮಗ್ರಿ ಸೇರಿ ಒಟ್ಟು ₹90.32 ಕೋಟಿ ಪಾವತಿಸಲಾಗಿದೆ. ಈಗಾಗಲೇ ಒಟ್ಟು ₹ 66 ಕೋಟಿ ಕೂಲಿ ಪಾವತಿಸಲಾಗಿದೆ. ₹ 1 .57 ಕೋಟಿ ಕೂಲಿ ಹಣ ಪಾವತಿಸಬೇಕಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರ ಮೂಲಕ ಕೂಲಿ ಮಾಡಿದ ವ್ಯಕ್ತಿಗಳ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಹಣ ಪಾವತಿಸಲಾಗಿದೆ.

ನಿರ್ವಹಣಾ ಮಾಹಿತಿ ವ್ಯವಸ್ಥೆ (ಎಂಐಎಸ್) ಅಡಿಯಲ್ಲಿ ಹಣ ವರ್ಗಾವಣೆ ಮಾಡಿ ಪಿಡಿಒ ಒಬ್ಬರೇ ಸಹಿ ಮಾಡಿದ್ದರೂ ಒಮ್ಮೊಮ್ಮೆ ಬಾಕಿ ತೋರಿಸುತ್ತದೆ. ಅಧ್ಯಕ್ಷರ ಸಹಿ ಮಾಡಿದ ನಂತರ ಪೂರ್ಣ ಹಣ ಪಾವತಿ ದಾಖಲಾಗುತ್ತದೆ. ಕೆಲವು ಸಂದರ್ಭದಲ್ಲಿ ಮಾತ್ರ ತಡವಾಗಿ ದಾಖಲಾಗುತ್ತದೆ. ಸಾಮಾನ್ಯವಾಗಿ ಕೂಲಿ ಮಾಡಿದ ದಿನವೇ ಕಾರ್ಮಿಕರಿಗೆ ಹಣ ಪಾವತಿಸಲಾಗುತ್ತಿದೆ ಎಂದು ಹೇಳುತ್ತಾರೆ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು.

ನರೇಗಾ ಕೂಲಿ ಹಣ ಪಾವತಿಗೆ ಯಾವುದೇ ಸಮಸ್ಯೆ ಇಲ್ಲ. ಕೆಲ ಕೂಲಿ ಕಾರ್ಮಿಕರು ಬ್ಯಾಂಕ್‌ ಖಾತೆ ಸಂಖ್ಯೆಗಳನ್ನು ಸರಿಯಾಗಿ ಬರೆದುಕೊಟ್ಟಿಲ್ಲ. ಕೆಲವರು ಆಧಾರ್ ಕಾರ್ಡ್‌ ಲಿಂಕ್‌ ಮಾಡಿಲ್ಲ. ಈ ಕಾರಣಗಳಿಂದಾಗಿ ಕೂಲಿ ಪಾವತಿಗೆ ವಿಳಂಬವಾಗಿದೆ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸೂರ್ಯಕಾಂತ.

ಕೂಲಿ ಕಾರ್ಮಿಕರ ಬ್ಯಾಂಕ್‌ ಖಾತೆಗಳನ್ನು ಮತ್ತೊಮ್ಮೆ ಸರಿಯಾಗಿ ದಾಖಲಿಸಿ ಆಧಾರ್ ಲಿಂಕ್‌ ಮಾಡಿಕೊಂಡು ಹಿಂದಿನ ಲೋಪ ಸರಿಪಡಿಸಿಕೊಂಡು ಅವರವರ ಖಾತೆಗೆ ಹಣ ಪಾವತಿಸುವಂತೆ ಹಾಗೂ ಹದಿನೈದು ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು