ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಪಕ್ಷಗಳಲ್ಲಿ ಅಸಮಾಧಾನದ ಹೊಗೆ

ಮಹತ್ವ ಪಡೆದುಕೊಳ್ಳುತ್ತಿರುವ ಜಾತಿರಾಜಕಾರಣ
Last Updated 30 ಏಪ್ರಿಲ್ 2019, 15:28 IST
ಅಕ್ಷರ ಗಾತ್ರ

ಬೀದರ್‌: ಕಾಂಗ್ರೆಸ್‌ ಹಾಗೂ ಬಿಜೆಪಿ ಬೀದರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಎರಡು ವಾರ ಕಳೆದಿದೆ. ಆದರೆ ಉಭಯ ಪಕ್ಷಗಳ ಮುಖಂಡರ ಅಸಮಾಧಾನ ಶಮನಗೊಂಡಿಲ್ಲ. ಪಕ್ಷದ ವರಿಷ್ಠರ ನಿರ್ಲಕ್ಷ್ಯದ ಆರೋಪ, ಚುನಾವಣೆಯ ನಂತರ ಕಡೆಗಣನೆ ಹಾಗೂ ಅಭ್ಯರ್ಥಿಗಳ ಮಾತುಗಳು ಸ್ಥಳೀಯ ಮುಖಂಡರಲ್ಲಿ ಅಸಮಾಧಾನ ಹೊಗೆಯಾಡುವಂತೆ ಮಾಡಿವೆ.

ಹುಮನಾಬಾದ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶದಲ್ಲಿ ಹುಮನಾಬಾದ್‌ ಹಾಗೂ ಬೀದರ್‌ ತಾಲ್ಲೂಕಿನ ಕಾರ್ಯಕರ್ತರು ಅಂತರ ಕಾಯ್ದುಕೊಂಡಿದ್ದರು. ಎರಡೂ ಬ್ಲಾಕ್‌ಗಳಲ್ಲಿ ಹಾಕಿದ್ದ ಕುರ್ಚಿಗಳು ಖಾಲಿ ಖಾಲಿ ಇದ್ದವು. ನಿಷ್ಠಾವಂತ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಆಳಂದ ಕಾರ್ಯಕರ್ತರು ಅಂದು ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದರು. ಪಕ್ಷದ ಪ್ರಮುಖರು ತೇಪೆ ಹಾಕಿ ಸರಿಪಡಿಸಲು ಯತ್ನಿಸಿದ್ದರು.

ಬೀದರ್‌ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯೊಬ್ಬರಿಗೆ ಇಂತಹದ್ದೇ ಸಮಸ್ಯೆಯಾಗಿತ್ತು. ಅದನ್ನು ಸರಿಪಡಿಸುವ ವೇಳೆಗೆ ಕಾಲ ಮಿಂಚಿ ಹೋಗಿತ್ತು. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಮತ್ತಷ್ಟು ದಟ್ಟವಾಗಿದೆ.

ಕಾಂಗ್ರೆಸ್‌ನಲ್ಲಿಯೂ ಎಲ್ಲವೂ ಸರಿಯಾಗಿಲ್ಲ. ಅಲ್ಪಸಂಖ್ಯಾಂತ ಸಮುದಾಯದ ಮುಖಂಡರು ಹಾಗೂ ಮಾಜಿ ಶಾಸಕರ ಅಭಿಪ್ರಾಯ ಪಡೆಯದೆ ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗಿದೆ. ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿರುವ ಬೀದರ್‌ ಲೋಕಸಭಾ ಕ್ಷೇತ್ರದ ಟಿಕೆಟ್‌ನ್ನು ಅಲ್ಪಸಂಖ್ಯಾತರಿಗೆ ಕೊಡದೆ ಅನ್ಯಾಯ ಮಾಡಲಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರು ಬಹಿರಂಗವಾಗಿಯೇ ಅಸಮಾಧಾನ ಹೊರಗೆ ಹಾಕುತ್ತಿದ್ದಾರೆ.

‘ಮುಸ್ಲಿಮರು, ದಲಿತರು ಹಾಗೂ ಅಲ್ಪಸಂಖ್ಯಾತರು ಅಧಿಕ ಸಂಖ್ಯೆಯಲ್ಲಿದ್ದರೂ ಅವರನ್ನು ಮತಬ್ಯಾಂಕ್‌ ಆಗಿ ಬಳಸಿಕೊಳ್ಳಲಾಗಿದೆ. ಈ ಸಮುದಾಯದವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ನಿರ್ಧಾರಕ್ಕೆ ಮುಖಂಡರು ಬಂದಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಪಕ್ಷ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಮಾಜಿ ಶಾಸಕ ಮಹಮ್ಮದ್‌ ಲೈಕೋದ್ದಿನ್‌ ಎಚ್ಚರಿಕೆ ನೀಡಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ರಹೀಂ ಖಾನ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದರೆ ರಾಜಕೀಯ ಚಿತ್ರಣವೇ ಬದಲಾಗುತ್ತಿತ್ತು ಎಂದು ಕಾಂಗ್ರೆಸ್‌ ಮುಖಂಡರು ಹೇಳುತ್ತಿದ್ದಾರೆ. ಚಿಟಗುಪ್ಪ ಪುರಸಭೆ ಮಾಜಿ ಅಧ್ಯಕ್ಷ ಶಾನುಲ್ ಹಕ್ ಬುಖಾರಿ 40 ವರ್ಷಗಳ ನಂತರ ಕಾಂಗ್ರೆಸ್‌ ತೊರೆದು ಬಿಎಸ್‌ಪಿ ಸೇರಿದ್ದಾರೆ. ಕಾಂಗ್ರೆಸ್‌ ಮೇಲಿನ ಮುಸ್ಲಿಮರ ಕೋಪದ ಭರದಲ್ಲಿ ಒಂದಿಷ್ಟು ಮತಗಳು ಬಿಎಸ್‌ಪಿಗೆ ಬರಲಿವೆ ಎನ್ನುವ ನಿರೀಕ್ಷೆಯಲ್ಲಿ ಇದ್ದಾರೆ.

ಈ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಸೇರಿ ಒಟ್ಟು 14 ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. 8 ಪಕ್ಷೇತರರು ಚುನಾವಣಾ ಕಣದಲ್ಲಿ ಇದ್ದಾರೆ. ಮುಸ್ಲಿಂ ಮತದಾರರು ಅಧಿಕ ಸಂಖ್ಯೆಯಲ್ಲಿ ಇದ್ದಾರೆ ಎಂಬ ಕಾರಣ ಧರ್ಮ ಹಾಗೂ ಜಾತಿ ಲೆಕ್ಕಾಚಾರದಲ್ಲಿ ಹೈದರಾಬಾದ್‌ನ ಒಬ್ಬ ಮೌಲ್ವಿ ಸೇರಿದಂತೆ ಮುಸ್ಲಿಂ ಸಮುದಾಯದ 8 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಇದು ರಾಷ್ಟ್ರೀಯ ಪಕ್ಷಗಳಿಗೆ ತಲೆ ನೋವಾಗಿದೆ.

**

ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಎಲ್ಲ ಪಕ್ಷಗಳಲ್ಲೂ ಇರುತ್ತವೆ. ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇನೆ.
–ಭಗವಂತ ಖೂಬಾ, ಬಿಜೆಪಿ ಅಭ್ಯರ್ಥಿ

**

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಚುನಾವಣೆಗೆ ಸ್ಪರ್ಧಿಸಬಹುದು. 8 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದರೂ ಜಿಲ್ಲೆಯ ಮತದಾರರು ಅರ್ಹರನ್ನೇ ಆಯ್ಕೆ ಮಾಡಲಿದ್ದಾರೆ.
–ಈಶ್ವರ ಖಂಡ್ರೆ, ಕಾಂಗ್ರೆಸ್‌ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT