ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

International Yoga Day 2021: ಯೋಗ ಕಲಿಸುವ ವೈದ್ಯ

Last Updated 21 ಜೂನ್ 2021, 2:57 IST
ಅಕ್ಷರ ಗಾತ್ರ

ಬಸವಕಲ್ಯಾಣ: ನಗರದ ಡಾ.ಬಸವರಾಜ ಸ್ವಾಮಿ ಅವರು ವೃತ್ತಿಯಿಂದ ವೈದ್ಯರಾದರೂ ಯೋಗ ಕಲಿಸಲು ಆಸಕ್ತಿ ಹೆಚ್ಚು. ಹಲವು ಶಿಬಿರಗಳನ್ನು ಆಯೋಜಿಸಿ ಸಾವಿರಾರು ಜನರಿಗೆ ಯೋಗಾಸನ ತರಬೇತಿ ನೀಡಿದ್ದಾರೆ.

ಆಯುರ್ವೇದದಲ್ಲಿ ಪದವಿ ಪಡೆದಿರುವ ಅವರು ಗುಜರಾತ್‌ನ ಆಯುರ್ವೇದ ವಿಶ್ವವಿದ್ಯಾಲಯ ಮತ್ತು ಹರಿದ್ವಾರದ ಪತಂಜಲಿ ಯೋಗ ಪೀಠದಲ್ಲಿ ಯೋಗದ ಶಿಕ್ಷಣ ಪಡೆದಿದ್ದಾರೆ. ಆಸನ, ಪ್ರಾಣಾಯಾಮ ಹಾಗೂ ಷಟ್ಕರ್ಮಗಳಾದ ಧೌತಿ, ನೇತಿ, ಬಸ್ತಿ, ನವಲಿ ತ್ರಾಟಕ್‌ಗಳನ್ನು ಸಲೀಸಾಗಿ ಮಾಡುತ್ತಾರೆ. ಇವುಗಳಿಂದ ಆಗುವ ಪ್ರಯೋಜನಗಳ ಬಗ್ಗೆಯೂ ಶಿಬಿರಾರ್ಥಿಗಳಿಗೆ ಮನಮುಟ್ಟುವಂತೆ ತಿಳಿಸುತ್ತಾರೆ.

ಮನೋರೋಗಿಗಳಿಗೆ ಅಲ್ಲದೇ ಪಚನ ಸಮಸ್ಯೆ, ನಿದ್ರಾಹೀನತೆ, ಮೊಳಕಾಲು ನೋವು, ಸೊಂಟ ನೋವು, ಗಂಟಲು ಬೇನೆ, ಥೈರಾಯ್ಡ್‌, ರಕ್ತದೊತ್ತಡ ಮತ್ತು ಮಧುಮೇಹದಿಂದ ಬಳಲುವವರಿಗೆ ಯೋಗ ಹೇಳಿಕೊಟ್ಟಿದ್ದಾರೆ. ಹಲವರ ಜೀವನಶೈಲಿ ಬದಲಾಯಿಸಿದ್ದಾರೆ.

ಯೋಗಗುರು ಬಾಬಾ ರಾಮದೇವ ಅವರನ್ನು ಇಲ್ಲಿಗೆ ಆಹ್ವಾನಿಸಿ ಬೃಹತ್ ಯೋಗ ಶಿಬಿರ ಆಯೋಜಿಸಿದ್ದರು. ತಾಲ್ಲೂಕಿನಲ್ಲಿ ಯೋಗ ಸಂದೇಶ ಯಾತ್ರೆ ಮತ್ತು ತೇಜಸ್ವಿಭಾರತ ಅಭಿಯಾನ ಕೈಗೊಂಡಿದ್ದರು.

‘ಯೋಗ ಹಾಗೂ ಆಯುರ್ವೇದ ನಂಬಿದವರಿಗೆ ಕೋವಿಡ್‌ನಿಂದ ತೊಂದರೆ ಆಗಲಿಲ್ಲ. ಜಲನೇತಿ, ವಮನಧೌತಿಯಿಂದ ರೋಗನಿದಾನ ಸಾಧ್ಯ. ಆಧೋಮುಖ ಶ್ವಾನಾಸನ, ಸೂರ್ಯ ನಮಸ್ಕಾರ, ಭ್ರಾಮರಿ ಪ್ರಾಣಾಯಾಮದ ಅಭ್ಯಾಸದಿಂದ ಹಲವರಿಗೆ ಅನುಕೂಲವಾಯಿತು. ಕಫದೋಷ, ಉಸಿರಾಟದ ತೊಂದರೆ ಹಾಗೂ ಇತರೆ ಸಮಸ್ಯೆಗಳು ದೂರವಾದವು’ ಎಂದು ಡಾ.ಬಸವರಾಜ ಸ್ವಾಮಿ ತಿಳಿಸಿದರು.

‌ಯೋಗ ಸಾಧನೆಗಾಗಿ ಡಾ.ಬಸವರಾಜ ಸ್ವಾಮಿ ಅವರಿಗೆ ‘ಶ್ರೀಚೆನ್ನರತ್ನ ಪ್ರಶಸ್ತಿ’, ‘ಯೋಗಿರಾಜ ನಾಗಭೂಷಣ ಶ್ರೀ ಪ್ರಶಸ್ತಿ’ ಮತ್ತು ‘ಆಯುರ್ವೇದ ಸೇವಕ ಪ್ರಶಸ್ತಿ’ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT