ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಫಿ ಬೆಳೆ: ಸೋಲಿಗರಿಗೆ ಬಲ ತುಂಬಿದ ನರೇಗಾ

ಚಾಮರಾಜನಗರ: ರಾಜ್ಯದಲ್ಲೇ ಮೊದಲ ಪ್ರಯೋಗ, 162 ಕುಟುಂಬಗಳಿಗೆ ಅನುಕೂಲ
Last Updated 19 ನವೆಂಬರ್ 2020, 11:53 IST
ಅಕ್ಷರ ಗಾತ್ರ

ಚಾಮರಾಜನಗರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ)ಯೋಜನೆಯು ಗಡಿ ಜಿಲ್ಲೆಯ 162 ಸೋಲಿಗ ಕುಟುಂಬಗಳಿಗೆ ವರವಾಗಿ ಪರಿಣಮಿಸಿದೆ.

ಜಿಲ್ಲಾ ಪಂಚಾಯಿತಿಯು ರಾಜ್ಯದಲ್ಲೇ ಮೊದಲ ಬಾರಿಗೆ ನರೇಗಾ ಅಡಿಯಲ್ಲಿ ಕಾಫಿ ಬೆಳೆಯಲು ಅನುಕೂಲ ಕಲ್ಪಿಸಿದೆ. ಜಿಲ್ಲೆಯ ಪುಣಜನೂರು ಹಾಗೂ ಬಿಳಿಗಿರಿರಂಗನ ಬೆಟ್ಟ ಗ್ರಾಮ ಪಂಚಾಯಿತಿಗಳ 162 ಸೋಲಿಗ ಕುಟುಂಬಗಳು ನರೇಗಾ ಅನುದಾನವನ್ನು ಬಳಸಿಕೊಂಡು ತಮ್ಮ ಜಮೀನಿನಲ್ಲಿ ಕಾಫಿ ಗಿಡಗಳನ್ನು ಬೆಳೆಸಿವೆ.

ಒಂದು ವರ್ಷದಿಂದೀಚೆಗೆ ಈ ಕಾರ್ಯ ನಡೆಯುತ್ತಿದ್ದು, ಕಾಫಿ ಗಿಡಗಳು ಉತ್ತಮವಾಗಿ ಬಂದಿವೆ. ಜಿಲ್ಲಾ ಪಂಚಾಯಿತಿಯು ಈ ಯೋಜನೆಗೆ ₹ 29.83 ಲಕ್ಷ ವ್ಯಯಿಸಿದೆ. ಬಿಳಿಗಿರಿರಂಗನ ಬೆಟ್ಟದ ಎಂಟು ಪೋಡುಗಳ 56 ಸೋಲಿಗ ಕುಟುಂಬಗಳು ಹಾಗೂ ಪುಣಜನೂರು ವ್ಯಾ‌ಪ್ತಿಯ ಏಳು ಪೋಡುಗಳ 106 ಕುಟುಂಬಗಳು ಇದರ ಲಾಭ ಪಡೆದಿವೆ.

ಈ ಕುಟುಂಬಗಳ ಸದಸ್ಯರಿಗೆ ನರೇಗಾ ಅಡಿಯಲ್ಲಿ ಉದ್ಯೋಗ ಕಾರ್ಡ್‌ ನೀಡಿ, ₹30 ಸಾವಿರದಿಂದ ₹70 ಸಾವಿರದವರೆಗೂ ಅನುದಾನ ಮಂಜೂರು ಮಾಡಿ, ಕಾಫಿ ಗಿಡಗಳನ್ನು ಹಾಕುವಂತೆ ಜಿಲ್ಲಾ ಪಂಚಾಯಿತಿ ಪ್ರೇರೇಪಿಸಿದೆ. ಕೆಲವು ಕುಟುಂಬಗಳು ಎರಡು ಎಕರೆಯಷ್ಟು ಜಾಗದಲ್ಲೂ ಕಾಫಿ ಗಿಡಗಳನ್ನು ಹಾಕಿವೆ. ಗಿಡ ನೆಡುವುದಕ್ಕೆ ಮಾತ್ರವಲ್ಲದೇ, ಎರಡು ವರ್ಷಗಳ ನಿರ್ವಹಣೆಗೂ ಜಿಲ್ಲಾ ಪಂಚಾಯಿತಿ ಅನುದಾನ ನೀಡಲಿದೆ.

ಇದೇ ಮೊದಲು: ಕಾಫಿ ಬೆಳೆಗೆ ನರೇಗಾ ಅನುದಾನ ಕಲ್ಪಿಸಿರುವುದು ರಾಜ್ಯದಲ್ಲಿ ಇದೇ ಮೊದಲು. ಸೋಲಿಗರು ಪಡೆದಿರುವ ಹಕ್ಕು ಪತ್ರದ ಆಧಾರದಲ್ಲಿ ಅವರಿಗೆ ಉದ್ಯೋಗ ಚೀಟಿಗಳನ್ನು ನೀಡಲಾಗಿದೆ.ಬಡ ಸೋಲಿಗ ಕುಟುಂಬಗಳಿಗೆ ನೆರವು ನೀಡಿ ಅವರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

‘ಹಿಂದೆ ಹಕ್ಕು ಪತ್ರಗಳ ಸಮಸ್ಯೆ ಇದ್ದುದರಿಂದ ನರೇಗಾ ಅನುಷ್ಠಾನ ಸಾಧ್ಯವಾಗಿರಲಿಲ್ಲ. ಈಗ ಬಹುತೇಕ ಸೋಲಿಗ ಕುಟುಂಬಗಳು ಹಕ್ಕು ಪತ್ರ ಹೊಂದಿವೆ. ಅದರ ಆಧಾರದಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ. ಫಲಿತಾಂಶ ಉತ್ತಮವಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಹರ್ಷಲ್‌ ಭೊಯರ್‌ ನಾರಾಯಣರಾವ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಳುಮೆಣಸು ಬೆಳೆಯುವವರಿಗೂ ನೆರವು

ಕಾಫಿ ಬೆಳೆಗಾರರ ಮಾದರಿಯಲ್ಲಿ ಕಾಳು ಮೆಣಸು ಬೆಳೆಯುವ ಸೋಲಿಗ ಕುಟುಂಬಗಳಿಗೂ ನರೇಗಾ ಅಡಿಯಲ್ಲಿ ನೆರವು ನೀಡಲು ಜಿಲ್ಲಾ ಪಂಚಾಯಿತಿ ಮುಂದಾಗಿದ್ದು, ಬೆಳೆಗಾರರು ಕೂಡ ಆಸಕ್ತಿ ತೋರಿದ್ದಾರೆ. ಈ ಸಂಬಂಧ ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸಿಇಒ ಅವರು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT