ಬುಧವಾರ, ಫೆಬ್ರವರಿ 26, 2020
19 °C
ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಾಥಮಿಕ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳ

ಚಾಮರಾಜನಗ‌ರ: 342 ಮಕ್ಕಳು ಪ್ರಾಥಮಿಕ ಶಿಕ್ಷಣ ವಂಚಿತ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗ‌ರ: ಮಕ್ಕಳನ್ನು ಶಾಲೆಗೆ ಕರೆತರಲು ಶಿಕ್ಷಣ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಜಿಲ್ಲೆಯಲ್ಲಿ 6ರಿಂದ 13 ವರ್ಷದ ಒಳಗಿನ 342 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಪೈಕಿ 191 ಬಾಲಕರು ಮತ್ತು 151 ಬಾಲಕಿಯರು. 

2018–19ನೇ ಶೈಕ್ಷಣಿಕ ವರ್ಷದಲ್ಲಿ ನಡೆಸಲಾದ ಸರ್ವ ಶಿಕ್ಷಣ ಅಭಿಯಾನ ಸಮೀಕ್ಷೆಯಿಂದ ಈ ಮಾಹಿತಿ ತಿಳಿದು ಬಂದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾದ ಮಕ್ಕಳ ಸಂಖ್ಯೆ 92 ಜಾಸ್ತಿ ಇದೆ. 

250 ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ಹಿಂದಿನ ಸಮೀಕ್ಷೆಯಲ್ಲಿ ತಿಳಿದು ಬಂದಿತ್ತು. ಈ ಪೈಕಿ 105 ಮಕ್ಕಳನ್ನು ಮುಖ್ಯವಾಹಿನಿಗೆ ತರುವಲ್ಲಿ (ಶಾಲೆಗೆ ಸೇರ್ಪಡೆಗೊಳಿಸುವಲ್ಲಿ) ಶಿಕ್ಷಣ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದರು. 

ಈ ಶೈಕ್ಷಣಿಕ ವರ್ಷ 342 ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಜವಾಬ್ದಾರಿ ಅಧಿಕಾರಿಗಳ ಮೇಲಿದ್ದು, ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ. ದಾಖಲಾತಿ ಆಂದೋಲನದ ಅಡಿಯಲ್ಲಿ ಮಕ್ಕಳನ್ನು ಶಾಲೆಗೆ ಸೇರಿಸಲು ಪ್ರಯತ್ನಿಸುತ್ತಿದ್ದಾರೆ. 

ಚಾಮರಾಜನಗರ ಮುಂದೆ: ಜಿಲ್ಲೆಯ ಐದು ಶಿಕ್ಷಣ ವಲಯಗಳ ಪೈಕಿ ಚಾಮರಾಜನಗರದಲ್ಲಿ ಅತಿ ಹೆಚ್ಚು ಅಂದರೆ 153 ಮಕ್ಕಳು ಪ್ರಾಥಮಿಕ ಶಿಕ್ಷಣದಿಂದ ಹೊರಗುಳಿದಿದ್ದಾರೆ. ಕೊಳ್ಳೇಗಾಲದಲ್ಲಿ 82, ಗುಂಡ್ಲುಪೇಟೆಯಲ್ಲಿ 52, ಹನೂರಿನಲ್ಲಿ 44 ಮತ್ತು ಯಳಂದೂರಿನಲ್ಲಿ 11 ಮಕ್ಕಳು ಶಿಕ್ಷಣ ವಂಚಿತರಾಗಿದ್ದಾರೆ.

ಹಲವು ಕಾರಣಗಳು: ಶಾಲೆಗೆ ಸೇರ್ಪಡೆಗೊಂಡ ಮಕ್ಕಳು ಒಂದು ವಾರಕ್ಕೂ ಹೆಚ್ಚು ಕಾಲ ಶಾಲೆಗೆ ಗೈರು ಆದಾಗ ಅವರನ್ನು ಶಾಲೆಯಿಂದ ಹೊರಗುಳಿದವರು ಎಂದು ಪರಿಗಣಿಸಲಾಗುತ್ತದೆ.  

ಮಕ್ಕಳು ಶಾಲೆಯಿಂದ ವಿಮುಖವಾಗುತ್ತಿರುವುದಕ್ಕೆ ಹಲವು ಕಾರಣಗಳನ್ನು ನೀಡುತ್ತಾರೆ ಅಧಿಕಾರಿಗಳು.

ಜ್ಞಾನದ ಕೊರತೆ, ಪೋಷಕರ ನಿರಾಸಕ್ತಿ, ಮಕ್ಕಳಿಗೆ ಆಸಕ್ತಿ ಇಲ್ಲದಿರುವುದು, ಶಾಲೆ ದೂರ ಇರುವುದು, ಮನೆ ಕೆಲಸ ಮಾಡುವುದಕ್ಕಾಗಿ ಮಕ್ಕಳನ್ನು ಮನೆಯಲ್ಲಿ ಇರಿಸುವುದು, ಹೆಣ್ಣುಮಗು ಎ‌ಂಬ ಕಾರಣ, ಹೆಣ್ಣುಮಕ್ಕಳು ಪ್ರೌಢಾವಸ್ಥೆಗೆ ಬಂದಿರುವುದು, ಅನಾರೋಗ್ಯ, ಕೌಟುಂಬಿಕ ಕಲಹ, ಮಕ್ಕಳ ಪಾಲನೆ... ಸೇರಿದಂತೆ ಹಲವು ಕಾರಣಗಳನ್ನು ಅವರು ಪಟ್ಟಿ ಮಾಡುತ್ತಾರೆ.

‘ವಸತಿ ಶಾಲೆಗಳಲ್ಲಿ ಇರಿಸಿ ಓದಿಸಲು ಕ್ರಮ’
‘ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮಕ್ಕಳಿಗೆ ಶಾಲೆ ಆಧರಿತ ತರಬೇತಿ ನೀಡುತ್ತೇವೆ. ಬಿಳಿಗಿರಿ ರಂಗನಬೆಟ್ಟದಲ್ಲಿ ಇದೇ ಉದ್ದೇಶಕ್ಕಾಗಿರುವ ವಸತಿಸಹಿತ ತರಬೇತಿ ಕೇಂದ್ರ ಇದೆ. ಅಲ್ಲಿ 30 ಮಕ್ಕಳಿಗೆ ಅವಕಾಶ ಇದೆ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಭಾರ ಉಪ ನಿರ್ದೇಶಕ (ಡಿಡಿಪಿಐ) ಪಿ.ಮಂಜುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಇದಲ್ಲದೇ, ಮಕ್ಕಳನ್ನು ಮದರಸಾಗಳಲ್ಲಿ ಇರಿಸಿ ಶಿಕ್ಷಣ ನೀಡಲಿದ್ದೇವೆ. ಬಿಸಿಎಂ, ಸಮಾಜ ಕಲ್ಯಾಣ ಇಲಾಖೆಗಳ ಹಾಸ್ಟೆಲ್‌ಗಳಲ್ಲಿ ಇರಿಸಿ ವ್ಯಾಸಂಗಕ್ಕೆ ಅನುವು ಮಾಡಿಕೊಡುತ್ತೇವೆ. ಕಸ್ತೂರ ಬಾ ಗಾಂಧಿ ಬಾಲಿಕಾ ವಸತಿ ಶಾಲೆಯಲ್ಲೂ ಮಕ್ಕಳನ್ನು ಇರಿಸಿ ಶಿಕ್ಷಣ ನೀಡುವುದಕ್ಕೆ ಅವಕಾಶ ಇದೆ’ ಎಂದು ಅವರು ವಿವರಿಸಿದರು.

 ‘ಶಿಕ್ಷಣ ವಂಚಿತ ಮಕ್ಕಳನ್ನು ಮುಖ್ಯ‌ವಾಹಿನಿಗೆ ತರಲು ಈ ಹಿಂದೆ ಸ್ವಯಂಸೇವಾ ಸಂಸ್ಥೆಗಳು (ಎನ್‌ಜಿಒ) ಮುಂದೆ ಬರುತ್ತಿದ್ದವು. ಈಗ ಯಾವ ಎನ್‌ಜಿಇಗಳು ಆಸಕ್ತಿ ತೋರುತ್ತಿಲ್ಲ’ ಎಂದು ಮಂಜುನಾಥ್‌ ಮಾಹಿತಿ ನೀಡಿದರು. 

ಅಂಕಿ ಅಂಶ

342 –2018–19ರ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಶಾಲೆಯಿಂದ ಹೊರಗುಳಿದ ಮಕ್ಕಳು

250 –2017–18ರಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು

105 –2018–19ರಲ್ಲಿ ಮುಖ್ಯವಾಹಿನಿಗೆ ಬಂದ ಮಕ್ಕಳು

342 –2018–19ರ ಶೈಕ್ಷಣಿಕ ವರ್ಷದಲ್ಲಿ ಪ್ರಾಥಮಿಕ ಶಾಲೆಯಿಂದ ಹೊರಗುಳಿದ ಮಕ್ಕಳು

250– 2017–18ರಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳು

105– 2018–19ರಲ್ಲಿ ಮುಖ್ಯವಾಹಿನಿಗೆ ಬಂದ ಮಕ್ಕಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು