ಬುಧವಾರ, ಮೇ 18, 2022
29 °C
ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿರುವ ಜಿಲ್ಲೆ, ವಿಶೇಷ ಶಿಬಿರ ನಡೆಸಲು ಇಲಾಖೆ ನಿರ್ಧಾರ

ಚಾಮರಾಜನಗರ: ಯುಡಿಐಡಿ ಶೇ 56ರಷ್ಟು ಅಂಗವಿಕಲರಿಗೆ ಸ್ಮಾರ್ಟ್‌ಕಾರ್ಡ್‌

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಅಂಗವಿಕಲರಿಗೆ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ) ನೀಡುವ ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಜಿಲ್ಲೆಯಲ್ಲಿ ಇದುವರೆಗೆ ಶೇ 55.87ರಷ್ಟು ಅಂಗವಿಕಲರಿಗೆ, ಆಧಾರ್‌ ಮಾದರಿಯ ವಿಶಿಷ್ಟ ಗುರುತಿನ ಸಂಖ್ಯೆ ಇರುವ ಸ್ಮಾರ್ಟ್‌ಕಾರ್ಡ್‌ ಸಿಕ್ಕಿದೆ.

ಕೇಂದ್ರ ಸರ್ಕಾರದ ಅಂಗವಿಕಲರ ಕಲ್ಯಾಣ ಇಲಾಖೆಯು 2018ರಲ್ಲಿ ಈ ಯೋಜನೆಗೆ ಚಾಲನೆ ನೀಡಿದ್ದು, ರಾಜ್ಯದಲ್ಲಿ 2019ರಿಂದ ಜಾರಿಗೆ ಬಂದಿದೆ. ರಾಜ್ಯದಲ್ಲಿ ನಿಧಾನವಾಗಿ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಜಿಲ್ಲೆಯು ಮೂರನೇ ಸ್ಥಾನದಲ್ಲಿದೆ. ರಾಮನಗರ ಮತ್ತು ಚಿತ್ರದುರ್ಗ ಜಿಲ್ಲೆಗಳು ಮೊದಲೆರಡು ಸ್ಥಾನಗಳಲ್ಲಿವೆ. ರಾಮನಗರ ಜಿಲ್ಲೆಯಲ್ಲಿ ಶೇ 64.22ರಷ್ಟು ಹಾಗೂ ಚಿತ್ರದುರ್ಗದಲ್ಲಿ ಶೇ 58.93ರಷ್ಟು ಅಂಗವಿಕಲರಿಗೆ ಸ್ಮಾರ್ಟ್‌ಕಾರ್ಡ್‌ ಸಿಕ್ಕಿದೆ. 

2011ರ ಜನಗಣತಿಯ ಪ್ರಕಾರ ಜಿಲ್ಲೆಯಲ್ಲಿ 20,564 ಅಂಗವಿಕಲರು ಇದ್ದಾರೆ. ಈ ಪೈಕಿ 15,026 ಮಂದಿಗೆ ರಾಜ್ಯ ಸರ್ಕಾರ ಅಂಗವೈಕಲ್ಯದ ಪ್ರಮಾಣ ಪತ್ರ ನೀಡಿದೆ. ಯುಡಿಐಡಿ ಯೋಜನೆ ಅನುಷ್ಠಾನವಾದ ಬಳಿಕ 8,411 ಮಂದಿಗೆ ಸ್ಮಾರ್ಟ್‌ಕಾರ್ಡ್‌ಗಳು ಬಂದಿವೆ. ಇನ್ನೂ ಶೇ 44ರಷ್ಟು ಅಂಗವಿಕಲರಿಗೆ ವಿಶಿಷ್ಟ ಗುರುತಿನ ಚೀಟಿ ಸಿಕ್ಕಿಲ್ಲ.

ಉಳಿದವರಿಗೂ ಯುಡಿಐಡಿ ಸಿಗುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅಂಗವಿಕಲರ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದು, ಈ ತಿಂಗಳು ಹೋಬಳಿ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. 

ಹೇಗಿದೆ ಕಾರ್ಡ್?‌: ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮಾದರಿಯ ಈ ಗಣಕೀಕೃತ ಸ್ಮಾರ್ಟ್‌ ಕಾರ್ಡ್‌, ಅಂಗವಿಕಲರ ಗುರುತು, ಅಂಗವೈಕಲ್ಯದ ಪ್ರಮಾಣ ಹಾಗೂ ಇತರೆ ವಿವರಗಳನ್ನು ಹೊಂದಿದೆ. ಕಾರ್ಡ್‌ನಲ್ಲಿ ಕ್ಯುಆರ್‌ ಕೋಡ್‌ ಇದ್ದು, ಅದನ್ನು ಸ್ಕ್ಯಾನ್‌ ಮಾಡಿದರೆ ಸಂಪೂರ್ಣ ವಿವರಗಳನ್ನು ತಿಳಿಯಬಹುದು. ಇದೇ ಕಾರ್ಡ್‌ ಬಳಸಿಕೊಂಡು ಅಂಗವಿಕಲರು ದೇಶದಾದ್ಯಂತ ಸರ್ಕಾರಿ ಸೌಲಭ್ಯಗಳನ್ನು ಪಡೆಯಬಹುದು.  

ಆನ್‌ಲೈನ್‌ನಲ್ಲಿ ಅರ್ಜಿ: ಸ್ಮಾರ್ಟ್‌ಕಾರ್ಡ್‌ಗಾಗಿ ಅಂಗವಿಕಲರು ‌www.swavlambancard.gov.in ಮೂಲಕ  ಅರ್ಜಿ ಸಲ್ಲಿಸಬೇಕು. ನಂತರ ಅರ್ಜಿ ಸ್ವೀಕೃತಿ ಪ್ರತಿಯನ್ನು ಜಿಲ್ಲಾಸ್ಪತ್ರೆಗೆ ಸಲ್ಲಿಸಿ ತಜ್ಞ ವೈದ್ಯರಿಂದ ತಪಾಸಣೆ ನಡೆಸಿ, ವೈದ್ಯಕೀಯ ಪ್ರಮಾಣಪತ್ರ ಪಡೆಯುಬೇಕು. ಈ ವೈದ್ಯಕೀಯ ಪ್ರಮಾಣಪತ್ರವನ್ನು ಜಿಲ್ಲಾ ಸರ್ಜನ್‌ ಅವರೇ ಆನ್‌ಲೈನ್‌ನಲ್ಲಿ ಅಪ್‌ಲೋಡ್‌ ಮಾಡುತ್ತಾರೆ. ಅದಾದ ಬಳಿಕ ಅಂಗವಿಕಲರ ವಿಳಾಸಕ್ಕೆ ನೇರವಾಗಿ ಅಂಚೆ ಮೂಲಕ ಸ್ಮಾರ್ಟ್‌ ಬರುತ್ತದೆ. 

ನಿಧಾನ: ಯುಡಿಐಡಿಗಾಗಿ ವೈದ್ಯಕೀಯ ತಪಾಸಣೆ ನಡೆಸಿ ಪ್ರಮಾಣಪತ್ರ ಸಲ್ಲಿಸುವುದು ಅತ್ಯಂತ ಮುಖ್ಯ. ಜಿಲ್ಲೆಯಲ್ಲಿ ಈ ಪ್ರಕ್ರಿಯೆ ನಿಧಾನವಾಗುತ್ತಿದೆ. ತಪಾಸಣೆಗಾಗಿ ಅಂಗವಿಕಲರು ಆಸ್ಪತ್ರೆಗೆ ಬರುತ್ತಿಲ್ಲ. ಬಂದವರಿಗೂ ಸರಿಯಾದ ಸೇವೆ ಲಭಿಸುತ್ತಿಲ್ಲ ಎಂಬ ಆರೋಪವೂ ಇದೆ. 

‘ಜಿಲ್ಲಾ ಸರ್ಜನ್‌ ಸೇರಿದಂತೆ ಮೂವರು ತಜ್ಞ ವೈದ್ಯರ ಸಮಿತಿ ತಪಾಸಣೆ ನಡೆಸಿ ಪ್ರಮಾಣಪತ್ರ ನೀಡಬೇಕಾಗುತ್ತದೆ. ಮೊದಲು ಇದಕ್ಕಾಗಿ ಅಂಗವಿಕಲರು ಜಿಲ್ಲಾಸ್ಪತ್ರೆಗೇ ಬರಬೇಕಾಗಿತ್ತು. ಈಗ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಮಾಣಪತ್ರ ಮಾಡಿಸಿಕೊಂಡರೂ ಸಾಕು’ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

‘ತೀವ್ರತರ ಅಂಗವೈಕಲ್ಯ ಹೊಂದಿರುವವರಿಗೆ ಆಸ್ಪತ್ರೆಗೆ ಬರುವುದು ಕಷ್ಟವಾಗುತ್ತದೆ. ಈ ಕಾರಣಕ್ಕೆ, ನಾವೇ ಅವರ ಬಳಿಗೆ ಹೋಗಿ ವೈದ್ಯಕೀಯ ಪ್ರಮಾಣ ಪತ್ರ ಕೊಡಿಸಲು ಯತ್ನಿಸುತ್ತಿದ್ದೇವೆ. ಇದೇ ಉದ್ದೇಶಕ್ಕೆ ವಿಶೇಷ ಶಿಬಿರ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಪ್ರಭಾರ ಅಂಗವಿಕಲರ ಕಲ್ಯಾಣ ಅಧಿಕಾರಿ ಎಂ.ತಿಬ್ಬಯ್ಯ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಲ್ಲೆಯಲ್ಲಿರುವ ಎಲ್ಲ ಅಂಗವಿಕಲರಿಗೂ ಯುಡಿಐಡಿ ಮಾಡಿಸಲು ಪ್ರಯತ್ನಿಸಲಾಗುತ್ತಿದೆ. ಇನ್ನೂ ಅರ್ಜಿ ಸಲ್ಲಿಸಿದವರನ್ನು ಗುರುತಿಸಿ, ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಸಹಾಯ ಮಾಡುವಂತೆ ಗ್ರಾಮ ಪುನರ್‌ವಸತಿ ಕಾರ್ಯಕರ್ತರಿಗೆ (ವಿಆರ್‌ಡಬ್ಲ್ಯು) ಸೂಚನೆ ನೀಡಲಾಗಿದೆ’ ಎಂದು ತಿಬ್ಬಯ್ಯ ಅವರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು