ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಮ ಶಾಲೆ: ಈ ವರ್ಷದಿಂದ 6ನೇ ತರಗತಿ ಆರಂಭ

15 ದಿನಗಳಿಂದ ದಾಖಲಾತಿ ಆಂದೋಲನ, ಹೆಚ್ಚು ಮಕ್ಕಳ ದಾಖಲಾತಿ ಶಿಕ್ಷಕರ ಹೊಣೆ
Published 30 ಮೇ 2024, 5:00 IST
Last Updated 30 ಮೇ 2024, 5:00 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ವಹಿಸುವ ಸರ್ಕಾರಿ ಬುಡಕಟ್ಟು ವಾಲ್ಮೀಕಿ ಆಶ್ರಮ ಶಾಲೆಗಳಲ್ಲಿ ಈ ವರ್ಷದಿಂದ 6ನೇ ತರಗತಿ ಆರಂಭವಾಗಲಿದೆ. 

ಆಶ್ರಮ ಶಾಲೆಗಳಲ್ಲಿ ತರಗತಿಗಳನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು. 

ಜಿಲ್ಲೆಯಲ್ಲಿ ಈವರೆಗೂ ಐದನೇ ತರಗತಿವರೆಗೆ ಮಾತ್ರ ಸೌಲಭ್ಯ ಇತ್ತು. ಮೈಸೂರು, ದಕ್ಷಿಣ ಕನ್ನಡ ಸೇರಿದಂತೆ ಇತರ ಕೆಲವು ಜಿಲ್ಲೆಗಳಲ್ಲಿ ಏಳನೇ ತರಗತಿವರೆಗೆ ಶಿಕ್ಷಣ ಲಭ್ಯವಿತ್ತು. ಈ ವರ್ಷದಿಂದ ಆ ಜಿಲ್ಲೆಗಳಲ್ಲಿ ಎಂಟನೇ ತರಗತಿ ಆರಂಭವಾಗಲಿದೆ. 

ಜಿಲ್ಲೆಯಲ್ಲಿ 20 ಆಶ್ರಮ ಶಾಲೆಗಳಿವೆ. ವಸತಿ ಸಹಿತ ಶಿಕ್ಷಣದ ಸೌಲಭ್ಯ ಇಲ್ಲಿವೆ.  ಹನೂರು ತಾಲ್ಲೂಕಿನಲ್ಲಿ ಎಂಟು, ಚಾಮರಾಜನಗರದಲ್ಲಿ ಆರು, ಗುಂಡ್ಲುಪೇಟೆಯಲ್ಲಿ 3, ಕೊಳ್ಳೇಗಾಲದಲ್ಲಿ 2 ಮತ್ತು ಯಳಂದೂರು ತಾಲ್ಲೂಕಿನಲ್ಲಿ ಒಂದು ಶಾಲೆ ಕಾರ್ಯಾಚರಿಸುತ್ತಿದೆ. 

ಇಲ್ಲಿಯವರೆಗೂ ಆಶ್ರಮ ಶಾಲೆಗಳಲ್ಲಿ ಓದಿದ ಗಿರಿಜನ ಮಕ್ಕಳು ಐದನೇ ತರಗತಿ ಮುಗಿಸಿದ ನಂತರ ಬೇರೆ ಶಾಲೆಗಳಿಗೆ ಸೇರಬೇಕಾಗಿತ್ತು. ಕೆಲವರು ಬೇರೆ ಶಾಲೆಗೆ ಹೋಗಲು ಆಸಕ್ತಿ ತೋರುತ್ತಿರಲಿಲ್ಲ. ಹೀಗಾಗಿ ಆಶ್ರಮ ಶಾಲೆಗಳಲ್ಲಿಯೇ ಹೆಚ್ಚಿನ ಶಿಕ್ಷಣ ಸಿಗುವಂತಾಗಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. 

ಜಿಲ್ಲಾಧಿಕಾರಿಯಾಗಿದ್ದ ಚಾರುಲತಾ ಸೋಮಲ್‌ ಅವರು ಈ ಸಂಬಂಧ ಸರ್ಕಾರಕ್ಕೆ ಮನವಿಯನ್ನೂ ಸಲ್ಲಿಸಿದ್ದರು.  

‘ಈ ವರ್ಷದಿಂದ ಆರನೇ ತರಗತಿ ಆರಂಭವಾಗಲಿರುವುದರಿಂದ ಮಕ್ಕಳಿಗೆ ಅನುಕೂಲವಾಗಲಿದೆ’ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಕೆ.ಮಂಜುಳ ‘ಪ್ರಜಾವಾಣಿ’ಗೆ ತಿಳಿಸಿದರು. 

ಅರ್ಧದಷ್ಟು ಸೀಟು ಮಾತ್ರ ಭರ್ತಿ: ಜಿಲ್ಲೆಯಲ್ಲಿರುವ 20 ಶಾಲೆಗಳಲ್ಲಿ 2,450 ಮಕ್ಕಳನ್ನು ದಾಖಲು ಮಾಡಿಕೊಳ್ಳಲು ಅವಕಾಶ ಇದೆ. 1,209 ಮಕ್ಕಳು ಇದ್ದರು. ಅಂದರೆ, ಲಭ್ಯವಿರುವ ಸೀಟುಗಳಲ್ಲಿ ಶೇ 50ರಷ್ಟು ಮಾತ್ರ ಭರ್ತಿಯಾಗಿವೆ. 

ದಾಖಲಾತಿಗೆ ಗುರಿ: ಈ ಮಧ್ಯೆ, 2024–25ನೇ ಶೈಕ್ಷಣಿಕ ವರ್ಷ ಆರಂಭಕ್ಕೆ ಇಲಾಖೆ ಸಿದ್ಧತೆ ನಡೆಸಿದೆ. ಬುಧವಾರದಿಂದ ಶಾಲೆಗಳು ತೆರೆದಿವೆ.  ಶುಕ್ರವಾರದಿಂದ ತರಗತಿಗಳು ಆರಂಭವಾಗಲಿವೆ. 

ಗಿರಿಜನ ಮಕ್ಕಳನ್ನು ದಾಖಲಾತಿ ಮಾಡಿಸಿಕೊಳ್ಳಲು ಇಲಾಖೆಯ ಅಧಿಕಾರಿಗಳು, ಆಶ್ರಮ ಶಾಲೆಯ ಶಿಕ್ಷಕರು ಜಿಲ್ಲೆಯಾದ್ಯಂತ ಹಾಡಿಗಳಲ್ಲಿ ದಾಖಲಾತಿ ಆಂದೋಲನವನ್ನು ನಡೆಸುತ್ತಿದ್ದಾರೆ. ಮನೆ ಮನೆಗಳಿಗೆ ತೆರಳಿ, ಮಕ್ಕಳ ವಿವರಗಳನ್ನು ದಾಖಲಿಸಿಕೊಂಡು ಅವರನ್ನು ಶಾಲೆಗೆ ಸೇರಿಸುತ್ತಿದ್ದಾರೆ. 

ಗರಿಷ್ಠ ಪ್ರಮಾಣದಲ್ಲಿ ಮಕ್ಕಳನ್ನು ದಾಖಲು ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಅಧಿಕಾರಿಗಳು ಶಾಲಾ ಮುಖ್ಯ ಶಿಕ್ಷಕರು ಹಾಗೂ ಬೋಧಕರಿಗೆ ದಾಖಲಾತಿ ಗುರಿ ನೀಡಿದ್ದಾರೆ.

‘ಹೆಚ್ಚು ಮಕ್ಕಳನ್ನು ದಾಖಲಿಸಿಕೊಳ್ಳಬೇಕು ಎಂಬ ಸೂಚನೆಯನ್ನು ಹಿರಿಯ ಅಧಿಕಾರಿಗಳು ನೀಡಿದ್ದಾರೆ. ನಾವು ಕೂಡ ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ. ಎಲ್ಲ ಶಾಲೆಗಳಿಗೂ ಗುರಿ ನೀಡಲಾಗಿದೆ. 60–70 ಮಕ್ಕಳು ಇರುವ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು 100ಕ್ಕೆ ಹೆಚ್ಚಿಸಬೇಕು, 120–130 ಮಕ್ಕಳಿರುವ ಕಡೆಗಳಲ್ಲಿ 150 ಮಕ್ಕಳು ಇರುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದ್ದೇವೆ’ ಎಂದು ಮಂಜುಳ ಅವರು ಮಾಹಿತಿ ನೀಡಿದರು. 

‘ಕಾಡಂಚಿನ ಪ್ರದೇಶ ಮಾತ್ರವಲ್ಲದೆ, ನೆಲ್ಲಿಕತ್ರಿ, ಗೊಂಬೆಗಲ್ಲಿನಂತಹ, ಅರಣ್ಯದ ಕೋರ್‌ ವಲಯದಲ್ಲಿರುವ ಹಾಡಿಗಳಿಗೂ ಭೇಟಿ ನೀಡಿ ಶಾಲಾ ದಾಖಲಾತಿ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಮಕ್ಕಳನ್ನು ಶಾಲೆಗೆ ಸೇರಿಸಲಾಗುತ್ತಿದೆ’ ಎಂದು ಅವರು ವಿವರಿಸಿದರು. 

ಹೆಚ್ಚು ಮಕ್ಕಳನ್ನು ಆಶ್ರಮ ಶಾಲೆಗಳಿಗೆ ಸೇರಿಸಬೇಕು ಎಂಬ ಉದ್ದೇಶದಿಂದ ಪರಿಣಾಮಕಾರಿಯಾಗಿ ದಾಖಲಾತಿ ಆಂದೋಲನ ನಡೆಸಲಾಗುತ್ತಿದೆ

-ಮಂಜುಳ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ

ಎಸ್‌ಸಿ ಒಬಿಸಿ ಮಕ್ಕಳಿಗೂ ಅವಕಾಶ

ಆಶ್ರಮ ಶಾಲೆಯಲ್ಲಿ ಲಭ್ಯವಿರುವ ಸೀಟುಗಳಲ್ಲಿ ಶೇ 75ರಷ್ಟು ಪರಿಶಿಷ್ಟ ವರ್ಗದ ಮಕ್ಕಳಿಗೆ ಮೀಸಲು. ಉಳಿದ ಶೇ 25ರಷ್ಟು ಸೀಟುಗಳನ್ನು ಪರಿಶಿಷ್ಟ ಜಾತಿ ಮತ್ತು ಇತರ ಹಿಂದುಳಿದ ವರ್ಗಗಳ ಸಮುದಾಯಗಳ ಮಕ್ಕಳಿಗೆ ನೀಡುವುದಕ್ಕೆ ಅವಕಾಶ ಇದೆ.  ಹಾಗಾಗಿ ಶೇ 25ರಷ್ಟು ಸೀಟುಗಳ ಭರ್ತಿಗೂ ಅಧಿಕಾರಿಗಳು ಶಿಕ್ಷಕರು ಯತ್ನಿಸುತ್ತಿದ್ದಾರೆ. ಕಾಡಂಚಿನ ಪ್ರದೇಶಗಳಲ್ಲಿ ವಾಸವಿರುವ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ಗುರುತಿಸಿ ಅವರನ್ನು ಆಶ್ರಮ ಶಾಲೆಗೆ ಸೇರಿಸುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT