ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಮತ್ತೊಂದು ಸಾವು, 70 ಮಂದಿಗೆ ಸೋಂಕು

38 ಮಂದಿ ಗುಣಮುಖ, 388ಕ್ಕೆ ಏರಿದ ಸಕ್ರಿಯ ಪ್ರಕರಣಗಳ ಸಂಖ್ಯೆ, ನ್ಯಾಯಾಧೀಶರೊಬ್ಬರಿಗೂ ಸೋಂಕು
Last Updated 10 ಆಗಸ್ಟ್ 2020, 14:09 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್‌–19 ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಸೋಮವಾರ ಮೃತಪಟ್ಟಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು, ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟಿದ್ದಾರೆ ಎಂದು ಜಿಲ್ಲಾಡಳಿತ ಹೇಳಿದೆ.

ಆದರೆ, ರಾಜ್ಯ ಮಟ್ಟದಲ್ಲಿ ಆರೋಗ್ಯ ಇಲಾಖೆಯು ಕೋವಿಡ್‌ ಸೋಂಕಿನಿಂದಾಗಿ ಮೃತಪಟ್ಟವರ ಪಟ್ಟಿಯಲ್ಲಿ ಈ ಪ್ರಕರಣವನ್ನು ಸೇರಿಸಿದೆ. ಅದರ ಪ್ರಕಾರ, ಜಿಲ್ಲೆಯಲ್ಲಿ ಮೃತಪಟ್ಟವರ ಸಂಖ್ಯೆ 21ಕ್ಕೆ ತಲುಪಿದೆ.

ಜಿಲ್ಲಾಡಳಿತದ ಪಟ್ಟಿಯಲ್ಲಿ ಇನ್ನೂ 14 ಎಂದಿದೆ. ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟರ ಸಂಖ್ಯೆ 8ಕ್ಕೆ ಏರಿದೆ.

ಸೋಮವಾರ ಮೃತಪಟ್ಟವರು ಚಾಮರಾಜನಗರ 68 ವರ್ಷದ ಪುರುಷ (ರೋಗಿ ಸಂಖ್ಯೆ–1,60,650). ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಜುಲೈ 27ರಂದು ಕೋವಿಡ್‌ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾರೆ.

ಜಿಲ್ಲಾ ವರದಿ ಹಾಗೂ ರಾಜ್ಯದ ವರದಿಯಲ್ಲಿ ಆಗುತ್ತಿರುವ ವ್ಯತ್ಯಾಸದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಸರ್ಜನ್‌ ಡಾ.ಕೃಷ್ಣಪ್ರಸಾದ್‌, ‘ರೋಗಿಯು ಕೋವಿಡ್‌ನಿಂದಾಗಿ ಅಥವಾ ಕೋವಿಡ್‌ಯೇತರ ಕಾರಣದಿಂದ ಮೃತಪಟ್ಟಿದ್ದಾರೆಯೇ ಎಂಬುದನ್ನು ಆಸ್ಪತ್ರೆಯ ತಜ್ಞ ವೈದ್ಯರ ಸಮಿತಿ ತೀರ್ಮಾನಿಸುತ್ತದೆ. ವರದಿಯಲ್ಲಿ ವ್ಯತ್ಯಾಸ ಆಗಿರುವುದು ಗಮನಕ್ಕೆ ಬಂದಿದೆ. ರಾಜ್ಯಮಟ್ಟದ ಪಟ್ಟಿಯಲ್ಲಿ ತಿದ್ದುಪಡಿಯಾಗಬೇಕು. ಈ ಸಂಬಂಧ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದೇವೆ’ ಎಂದು ಹೇಳಿದರು.

70 ಪ್ರಕರಣಗಳು:ಸೋಮವಾರ ಜಿಲ್ಲೆಯಲ್ಲಿ 70 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ವರದಿಯಾದ ಪ್ರಕರಣ 1,221ಕ್ಕೆ ಏರಿದೆ. 38 ಮಂದಿ ಗುಣಮುಖರಾಗಿದ್ದಾರೆ. ಈವರೆಗೆ ಸೋಂಕು ಮುಕ್ತರಾದವರ ಸಂಖ್ಯೆ 811ಕ್ಕೆ ತಲುಪಿದೆ. 388 ಸಕ್ರಿ‌ಯ ಪ್ರಕರಣಗಳಿವೆ. 13 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

568 ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷೆಗಳನ್ನು (ಆರ್‌ಟಿಪಿಸಿಆರ್‌–418, ರ‍್ಯಾಪಿಡ್‌ ಆ್ಯಂಟಿಜೆನ್‌–139, ಟ್ರು ನಾಟ್‌–11) ನಡೆಸಲಾಗಿದ್ದು, 498 ಮಂದಿ ವರದಿ ನೆಗೆಟಿವ್‌ ಬಂದಿದೆ.

ಸೋಮವಾರ ದೃಢಪಟ್ಟ 70 ಪ್ರಕರಣಗಳಲ್ಲಿ ಕೊಳ್ಳೇಗಾಲ ತಾಲ್ಲೂಕಿನ 28, ಚಾಮರಾಜನಗರದ 25, ಯಳಂದೂರಿನ 10 ಮತ್ತು ಹನೂರು ತಾಲ್ಲೂಕಿನ ಒಂದು ಪ್ರಕರಣಗಳು ಸೇರಿವೆ.

ನ್ಯಾಯಾಧೀಶರಿಗೆ ಸೋಂಕು: ಯಳಂದೂರಿನ ನ್ಯಾಯಾಧೀಶರೊಬ್ಬರೂ ಕೋವಿಡ್‌ಗೆ ತುತ್ತಾಗಿದ್ದಾರೆ.

‘ನ್ಯಾಯಾಧೀಶರು ಭಾನುವಾರ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಎಲ್ಲ ರೀತಿಯ ಪರೀಕ್ಷೆಗಳನ್ನು ನಡೆಸಿದ್ದೇವೆ. ಅವರಲ್ಲಿ ರೋಗ ಲಕ್ಷಣಗಳಿಲ್ಲ. ಹಾಗಾಗಿ, ಕೋವಿಡ್‌ ಕೇರ್‌ ಕೇಂದ್ರಕ್ಕೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಸರ್ಜನ್‌ ಡಾ.ಕೃಷ್ಣಕುಮಾರ್‌ ಅವರು ಹೇಳಿದ್ದಾರೆ.

ಗುಣಮುಖರಾದ 38 ಮಂದಿಯಲ್ಲಿ ಚಾಮರಾಜನಗರ ತಾಲ್ಲೂಕಿನ 14, ಕೊಳ್ಳೇಗಾಲದ 13, ಯಳಂದೂರಿನ ಮೂರು, ಹನೂರು ತಾಲ್ಲೂಕಿನ ಇಬ್ಬರು ಇದ್ದಾರೆ.

ಚಾಲಕನಿಗೆ ಪೊಲೀಸ್‌ ಸಿಬ್ಬಂದಿ ಹಲ್ಲೆ?

ಈ ಮಧ್ಯೆ, ಕೋವಿಡ್‌ ಕೇರ್‌ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಭಾನುವಾರ ಹೊರ ಬಂದಿದ್ದ ಮೂರ್ನಾಲ್ಕು ಪೊಲೀಸ್‌ ಸಿಬ್ಬಂದಿ ಸರ್ಕಾರಿ ಇಲಾಖೆಯೊಂದರ ವಾಹನ ಚಾಲಕರೊಬ್ಬರೊಂದಿಗೆ ಜಗಳ ಮಾಡಿ ಹಲ್ಲೆ ನಡೆಸಿರುವ ಘಟನೆ, ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಆವರಣದಲ್ಲಿ ನಡೆದಿದೆ.

ಸೋಂಕು ಮುಕ್ತರಾಗಿದ್ದ ಪೊಲೀಸರನ್ನು ಮನೆಗೆ ಕರೆದುಕೊಂಡು ಹೋಗಲು ಇಲಾಖೆಯೊಂದರ ವಾಹನದ ವ್ಯವಸ್ಥೆ ಮಾಡಲಾಗಿತ್ತು. ಸೋಂಕು ಮುಕ್ತರಾಗಿದ್ದರೂ, ಇನ್ನೂ 14 ದಿನಗಳ ಕಾಲ ಮನೆಯಲ್ಲೇ ಕ್ವಾರಂಟೈನ್‌ ಆಗಬೇಕಾಗಿರುವುದರಿಂದ ವಾಹನದಲ್ಲಿ ಚಾಲಕನ ಪಕ್ಕದ ಆಸನದಲ್ಲಿ ಯಾರನ್ನೂ ಕೂರಿಸಬಾರದು ಎಂದು ಚಾಲಕನಿಗೆ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳು ಹೇಳಿದ್ದರು.

ಚಾಲಕ ಇದನ್ನೇ ಪೊಲೀಸ್‌ ಸಿಬ್ಬಂದಿಗೆ ತಿಳಿಸಿದಾಗ, ಕೋಪಗೊಂಡ ಅವರು ಚಾಲಕನೊಂದಿಗೆ ವಾಗ್ವಾದಕ್ಕೆ ಇಳಿದು ಹಲ್ಲೆಯನ್ನೂ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್‌ ಅವರು ಡಿವೈಎಸ್‌ಪಿ ಹಾಗೂ ಸರ್ಕಲ್‌ ಇನ್‌ಸ್ಪೆಕ್ಟರ್‌ ಅವರನ್ನು ಸ್ಥಳಕ್ಕೆ ಕಳುಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ. ಹಲ್ಲೆ ಮಾಡಿದ್ದಕ್ಕೆ ಪೊಲೀಸ್‌ ಸಿಬ್ಬಂದಿಯಿಂದ ತಪ್ಪೊಪ್ಪಿಗೆ ಪತ್ರವನ್ನು ಬರೆಸಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ದಿವ್ಯಾ ಸಾರಾ ಥಾಮಸ್‌ ಅವರು, ‘ಅದು ಸಣ್ಣ ಘಟನೆ. ತಪ್ಪಾಗಿ ಅರ್ಥೈಸಿಕೊಂಡ ಕಾರಣಕ್ಕೆ ಆಗಿದೆ. ಸಮಸ್ಯೆಯನ್ನು ಬಗೆಹರಿಸಲಾಗಿದೆ’ ಎಂದರು.

ಆರೋಪಿಗೆ ಸೋಂಕು: ಠಾಣೆ ಸೀಲ್‌ಡೌನ್‌

ಸಂತೇಮರಹಳ್ಳಿ:ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಆರೋಪದಲ್ಲಿ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ ಆರೋಪಿಯೊಬ್ಬರಲ್ಲಿ ಸೋಂಕು ದೃಢಪಟ್ಟ ಕಾರಣದಿಂದ ಸಂತೇಮರಹಳ್ಳಿ ಪೊಲೀಸ್ ಠಾಣೆಯನ್ನು ಸೀಲ್‍ಡೌನ್ ಮಾಡಲಾಗಿದೆ. ಆರೋಪಿಯೊಂದಿಗೆ ನೇರ ಸಂಪರ್ಕಕ್ಕೆ ಬಂದಿದ್ದ ಐವರು ಪೊಲೀಸ್‌ ಸಿಬ್ಬಂದಿಯನ್ನು ಮನೆ ಕ್ವಾರಂಟೈನ್‍ನಲ್ಲಿ ಇರಿಸಲಾಗಿದೆ.

ಶನಿವಾರ ನಡುಕಲಮೋಳೆ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಸಂತೇಮರಹಳ್ಳಿ ಪೊಲಿಸರು ಬಂಧಿಸಿ ಯಳಂದೂರು ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಮೊದಲು ಕೋವಿಡ್‌ ಪರೀಕ್ಷೆ ನಡೆಸಿದಾಗ ಆರೋಪಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ನಂತರ ಅವರನ್ನು ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಕರೆದೊಯ್ದಿದ್ದ ಸಿಬ್ಬಂದಿ ಈಗ ಕ್ವಾರಂಟೈನ್‌ನಲ್ಲಿದ್ದಾರೆ. ಠಾಣೆಯನ್ನು ಸೀಲ್‌ಡೌನ್‌ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT