ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗುರಿಯತ್ತ ಬಿತ್ತನೆ, ಶೇ 93 ಪ್ರಗತಿ

ಉತ್ತಮ ಮಳೆ, ಕೃಷಿ ಚಟುವಟಿಕೆಗೆ ಅನುಕೂಲ, ತಿಂಗಳಾಂತ್ಯಕ್ಕೆ ನಿಗದಿತ ಗುರಿ ತಲುಪುವ ವಿಶ್ವಾಸದಲ್ಲಿ ಅಧಿಕಾರಿಗಳು
Last Updated 16 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಉತ್ತಮ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ನಿರೀಕ್ಷೆಯಂತೆಯೇ ನಡೆಯುತ್ತಿದ್ದು, ಮುಂಗಾರು ಅವಧಿಯಲ್ಲಿ ಬಿತ್ತನೆ ಚೆನ್ನಾಗಿ ನಡೆಯುತ್ತಿದ್ದು ಗುರಿ ತಲುಪುವತ್ತ ಸಾಗಿದೆ.

ಮುಂಗಾರು ಅವಧಿಯಲ್ಲಿ ಒಟ್ಟು 1.20 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ನಡೆಸುವ ಗುರಿ ಹೊಂದಲಾಗಿತ್ತು. ಈವರೆಗೆ 1.12 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಶೇ92.93ರಷ್ಟು ಪ್ರಗತಿಯಾಗಿದೆ. ಇನ್ನು 10 ದಿನಗಳಲ್ಲಿ ಶೇ 100ರಷ್ಟು ಗು‌ರಿ ಸಾಧಿಸುವ ನಿರೀಕ್ಷೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಇದ್ದಾರೆ.

ಕಳೆದ ವರ್ಷ ಜಿಲ್ಲೆಯಲ್ಲಿ ಶೇ 87ರಷ್ಟು ಬಿತ್ತನೆಯಾಗಿತ್ತು. ಈಗಾಗಲೇ ಶೇ 93ರಷ್ಟು ಬಿತ್ತನೆಯಾಗಿದೆ. ಶುಕ್ರವಾರದ ವೇಳೆಗೆ ಅದು ಶೇ 97ಕ್ಕೆ ತಲುಪಲಿದೆ. ಭತ್ತ ಬಿತ್ತನೆ ಇನ್ನೂ ನಡೆಯುತ್ತಿದೆ. ಹಾಗಾಗಿ, ಈ ಬಾರಿ ಶೇ 100ರಷ್ಟು ಬಿತ್ತನೆಯಾಗಲಿದೆ ಎಂದು ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

ಮುಂಗಾರು ಅವಧಿಯಲ್ಲಿ ಮುಸುಕಿನ ಜೋಳ, ಜೋಳ, ಸೂರ್ಯಕಾಂತಿ, ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. 25,673 ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, 15,625 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, ರಾಗಿಯನ್ನು 15,378 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ.

‘ಜಿಲ್ಲೆಯಲ್ಲಿ ಈ ವರ್ಷ ಬಿತ್ತನೆ ಚೆನ್ನಾಗಿ ಆಗಿದೆ. ಹಿಂಗಾರು ಅವಧಿಯ ಬಿತ್ತನೆ ಆರಂಭಕ್ಕೆ ಇನ್ನೂ ಸ್ವಲ್ಪ ಸಮಯ ಇದೆ. ಭತ್ತದ ಬಿತ್ತನೆ ನಡೆಯುತ್ತಿದೆ. ಅದು ಪೂರ್ಣ ಪ್ರಮಾಣದಲ್ಲಿ ಮುಕ್ತಾಯವಾದರೆ, ಪೂರ್ಣ ಗುರಿ ತಲುಪಲಿದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಎಚ್‌.ಟಿ.ಚಂದ್ರಕಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ತಿಂಗಳ ಅಂತ್ಯದಿಂದ ಹಿಂಗಾರು ಬಿತ್ತನೆ ಆರಂಭವಾಗಲಿದೆ. ಹಸಿಗಡಲೆ, ಹುರುಳಿ ಸೇರಿದಂತೆ ಇತರ ಬೆಳೆಗಳ ಬಿತ್ತನೆ ಕಾರ್ಯವನ್ನು ರೈತರು ಮಾಡಲಿದ್ದಾರೆ. ಅದಕ್ಕಾಗಿ ಸಿದ್ಧತೆಯನ್ನೂ ಆರಂಭಿಸಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ಕೃಷಿಗೆ ನೆರವಾದ ಮಳೆ:ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಆಗಸ್ಟ್‌ನಲ್ಲಿ ಶೇ 2ರಷ್ಟು ಕಡಿಮೆ ಮಳೆಯಾಗಿದ್ದರೂ, ಮುಂಗಾರು ಅವಧಿಯಲ್ಲಿ ಶೇ 66ರಷ್ಟು ಹೆಚ್ಚು ಮಳೆಯಾಗಿದೆ. ನೈರುತ್ಯ ಮುಂಗಾರು ಆರಂಭವಾಗುವ ಜೂನ್‌ 1ರಿಂದ ಸೆ.16ರವರೆಗೆ ವಾಡಿಕೆಯಲ್ಲಿ 24.6 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 40.7 ಸೆಂ.ಮೀ ಮಳೆಯಾಗಿದೆ. ಜನವರಿಯಿಂದ ಮಳೆ ಪ‍್ರಮಾಣ ಲೆಕ್ಕ ಹಾಕಿದರೂ ಶೇ 42ರಷ್ಟು ಹೆಚ್ಚು ವರ್ಷಧಾರೆಯಾಗಿದೆ. ಸಾಮಾನ್ಯವಾಗಿ ಒಂಬತ್ತೂವರೆ ತಿಂಗಳ ಅವಧಿಯಲ್ಲಿ 44.9 ಸೆಂ.ಮೀ ಮಳೆಯಾಗುತ್ತದೆ. ಈ ಬಾರಿ 63.7 ಸೆಂ.ಮೀ ಮಳೆ ಬಿದ್ದಿದೆ.

ಆಗಸ್ಟ್‌ನಲ್ಲಿ ಕೊಂಚ ಮಳೆ ಕಡಿಮೆಯಾದ ಕಾರಣ ಬೆಳೆ ಒಣಗುವ ಆತಂಕ ಕಾಡಿತ್ತಾದರೂ, ತಿಂಗಳ ಕೊನೆಯಲ್ಲಿ ಸಾಧಾರಣ ಮಳೆಯಾಗಿದ್ದರಿಂದ ಬೆಳೆಗಳಿಗೆ ತೊಂದರೆಯಾಗಲಿಲ್ಲ. ಆದರೆ, ಈ ತಿಂಗಳಲ್ಲಿ ನಿರಂತರ ಮಳೆಯಾಗಿರುವುದರಿಂದ ರೈತರಲ್ಲಿ ಸಣ್ಣ ಆತಂಕ ಇದೆ.

‘ಚೆನ್ನಾಗಿ ಬೆಳೆಯಾಗಿರುವುದರಿಂದ ರೈತರಿಗೆ ಅನುಕೂಲವಾಗಿದೆ. ಉತ್ತಮ ಇಳುವರಿ ನಿರೀಕ್ಷೆಯೂ ಇದೆ. ಆದರೆ, ಇತ್ತಿಚೆಗೆ ಮಳೆ ಹೆಚ್ಚಾಗುತ್ತಿದೆ. ಈಗ ಮಳೆ ಜಾಸ್ತಿ ಬಂದರೆ ಪೈರಿಗೆ ತೊಂದರೆಯಾಗುತ್ತದೆ’ ಎಂದು ರೈತ ಮುಖಂಡ ಹೊನ್ನೂರು ಪ್ರಕಾಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಭತ್ತ ಬಿತ್ತನೆ, ಶೇ 50ರಷ್ಟು ಪೂರ್ಣ

ಜಿಲ್ಲೆಯಲ್ಲಿ ಸಂತೇಮರಹಳ್ಳಿ, ಯಳಂದೂರು ಮತ್ತು ಕೊಳ್ಳೇಗಾಲ ಭಾಗದ ರೈತರು ಭತ್ತ ಬೆಳೆಯುತ್ತಿದ್ದು, ಈ ಬಾರಿ 12 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ. ಈ ವರೆಗೆ 5,920 ಹೆಕ್ಟೇರ್‌ನಲ್ಲಿ ಬಿತ್ತನೆ ಪೂರ್ಣಗೊಂಡಿದೆ.

ರೈತರು ಈಗಲೂ ಬಿತ್ತನೆ ಬೀಜ ಖರೀದಿಸುತ್ತಿದ್ದಾರೆ, ಬಿತ್ತನೆ ಮಾಡುತ್ತಿದ್ದಾರೆ. ಹಾಗಾಗಿ ಗುರಿ ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT