ಶುಕ್ರವಾರ, ಮಾರ್ಚ್ 5, 2021
30 °C

ಕೃಷಿ ಸಂಶೋಧನೆಗಳಿಂದ ರೈತರಿಗೆ ಲಾಭವಾಗಲಿ: ಸಚಿವ ಬಿ.ಸಿ.ಪಾಟೀಲ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಕೃಷಿ ಕಾಲೇಜುಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ಅನುಕೂಲವಾಗುವ ಸಂಶೋಧನೆಯಲ್ಲಿ ತೊಡಗಿಕೊಳ್ಳಬೇಕು. ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನೆರವಾಗುವ ಮೂಲಕ ರೈತರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು’ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಭಾನುವಾರ ಹೇಳಿದರು.

ತಾಲ್ಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಕಾಲೇಜಿನಲ್ಲಿ ವಿಜ್ಞಾನಿಗಳು ಹಾಗೂ ಕಾಲೇಜಿನ ಸಿಬ್ಬಂದಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕೃಷಿ ಕಾಲೇಜು, ಕೃಷಿ ವಿವಿಗಳು ಶೈಕ್ಷಣಿಕ ಉದ್ದೇಶದ ಸಂಸ್ಥೆಗಳು, ಇವುಗಳಿಂದ ತಮಗೆ ಏನೂ ಲಾಭವಿಲ್ಲ ಎಂಬ ಮನೋಭಾವನೆ ರೈತರು, ಸಾಮಾನ್ಯ ಜನರಲ್ಲಿದೆ’ ಎಂದು ಹೇಳಿದರು. 

‘ಶನಿವಾರ ಬರಗಿಯಲ್ಲಿ ನಡೆದ ರೈತರೊಂದಿಗೊಂದು ದಿನ ಕಾರ್ಯಕ್ರಮದಲ್ಲಿ ರೈತರೊಬ್ಬರ ಕಲ್ಲಂಗಡಿ ಬೆಳೆಗೆ ಬಂದಿರುವ ರೋಗದ ಬಗ್ಗೆ ವಿಜ್ಞಾನಿಗಳಿಗೆ ಮಾಹಿತಿ ಇರಲಿಲ್ಲ. ಅವರು ಹೇಳಿದ ಔಷಧಗಳ ವಿವರಗಳೆಲ್ಲವೂ ಆ ರೈತನಿಗೇ ತಿಳಿದಿದ್ದವು. ಹೀಗಾದರೆ ರೈತರಿಗೆ ಏನು ಪ್ರಯೋಜನ ಬಂತು. ವಿಜ್ಞಾನಿಗಳು ನಡೆಸುವ ಸಂಶೋಧನೆಗಳು ರೈತರಿಗೆ ಅನುಕೂಲ ಕಲ್ಪಿಸಬೇಕು. ವಿಜ್ಞಾನಿಗಳು ಅವರ ಕೈಗೆ ಸುಲಭವಾಗಿ ಸಿಗಬೇಕು’ ಎಂದು ಹೇಳಿದರು. 

ಕೃಷಿ ಕಾಲೇಜುಗಳು ಕೂಡ ರೈತರ ಅನುಕೂಲಕ್ಕೆ ಆಗಿಬರಬೇಕು. ಬೋಧಕರು ಪಠ್ಯಕ್ಕೆ ಮಾತ್ರ ಸೀಮಿತವಾಗದೆ ಪ್ರಾಯೋಗಿಕವಾಗಿ ಕಾರ್ಯನಿರ್ವಹಿಸಬೇಕು. ವಿದ್ಯಾರ್ಥಿಗಳಿಗೆ ಪಠ್ಯವನ್ನು ಬೋಧಿಸುವ ಜೊತೆಗೆ ರೈತರ ಕೃಷಿ ಸಂಬಂಧಿ ಬೆಳವಣಿಗೆಗೆ ಹಾಗೂ ಸಮಸ್ಯೆಗಳ ನಿವಾರಣೆಗೆ ತೊಡಗಿಕೊಳ್ಳಬೇಕು’ ಎಂದರು. 

‘ಹೊಸ ತಳಿಗಳ ಸಂಶೋಧನೆ ಹಾಗೂ ಬೆಳೆಗಳಿಗೆ ತಗಲುವ ರೋಗಗಳ ನಿವಾರಣೆಗೆ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಕಾಲೇಜುಗಳು ಮುಂದಾದಾಗ ರೈತರಿಗೆ ಪ್ರಯೋಜನವಾಗಲಿದೆ. ಈ ನಿಟ್ಟಿನಲ್ಲಿ ನಿರಂತರ ಚಟುವಟಿಕೆಗಳು ನಡೆಯಬೇಕು’ ಎಂದು ಬಿ.ಸಿ.ಪಾಟೀಲ ಅವರು ಸಲಹೆ ನೀಡಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು