ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯಳಂದೂರು | ತುಂತುರು ಮಳೆ: ಅರಳಿದ ಹುರುಳಿ ಬೆಳೆ

Published 29 ಜೂನ್ 2024, 6:49 IST
Last Updated 29 ಜೂನ್ 2024, 6:49 IST
ಅಕ್ಷರ ಗಾತ್ರ

ಯಳಂದೂರು: ಸತತ 3 ವರ್ಷಗಳಿಂದ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಕಂಗೆಟ್ಟಿದ ತಾಲ್ಲೂಕಿನ ರೈತರು ಜಾನುವಾರು ಮೇವಿಗಾಗಿ ಪರದಾಡಿ ಹಣಕೊಟ್ಟು ಜಾನುವಾರಿಗೆ ಮೇವು ಖರೀದಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವರ್ಷ ಸುರಿದ ಮಳೆ ಅಲ್ಫಾವಧಿ ಬೆಳೆಗಳಿಗೆ ವರವಾಗಿದ್ದು, ಕೃಷಿಕರು ಉತ್ತಮ ಹುರುಳಿ  ಫಸಲಿನ ನಿರೀಕ್ಷೆಯಲ್ಲಿ ಇದ್ದಾರೆ.

ತಾಲ್ಲೂಕಿನಲ್ಲಿ ಸೆಪ್ಟೆಂಬರ್-ಅಕ್ಟೋಬರ್ ನಡುವೆ 150 ಹೆಕ್ಟೇರ್ ಪ್ರದೇಶದಲ್ಲಿ ಹುರುಳಿ ಬಿತ್ತನೆ ನಡೆಯುತ್ತದೆ. ಆದರೆ, ಈ ವರ್ಷ ಜೂನ್ ತಿಂಗಳಿಂದಲೇ ಬಿತ್ತನೆ ಆರಂಭವಾಗಿದೆ. ತುಂತುರು ಹನಿಯುತ್ತಿರುವುದು ಹುರುಳಿ ಬೆಳೆ ತೆಗೆಯಲು ಪೂರಕ ವಾತಾವರಣ ನಿರ್ಮಾಣವಾಗಿದೆ. ಕಾಡಂಚಿನ ಕೃಷಿಕರು ರಾಸುಗಳಿಗೆ ಸಮೃದ್ಧ ಮೇವು ಮತ್ತು ಕುಟುಂಬಕ್ಕೆ ಆಹಾರದ ಮೂಲವಾದ ಹುರುಳಿ ಬೆಳೆಯುವತ್ತ ಚಿತ್ತ ಹರಿಸಿದ್ದಾರೆ.

ಹೋಬಳಿ ವ್ಯಾಪ್ತಿಯಲ್ಲಿ ಕಳೆದವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಬೀಳದ್ದರಿಂದ ಆಹಾರ ಧಾನ್ಯಗಳ ಬಿತ್ತನೆ ಪ್ರಮಾಣ ಕುಸಿದಿತ್ತು. ಹಿಂಗಾರು ಹಂಗಾಮಿನಲ್ಲಿ ಅಲ್ಪ ಪ್ರಮಾಣದಲ್ಲಿ ದ್ವಿದಳಧಾನ್ಯ ಬೆಳೆ ಬಿತ್ತನೆ ನಡೆದು ವಿಶೇಷವಾಗಿ ಹುರುಳಿ ಬಿತ್ತನೆಗೆ ರೈತರು ಆಸಕ್ತಿ ತೋರಿದ್ದರು. ಆದರೆ, ನೀರಿನ ಕೊರತೆಯಿಂದ ಇಳುವರಿ ನಿರೀಕ್ಷಿಸಿದಷ್ಟು ಬಂದಿರಲಿಲ್ಲ. ಪ್ರಸ್ತುತ ಸಾಲಿನಲ್ಲಿ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದ್ದು, ಅಲ್ಪ ಪ್ರಮಾಣದಲ್ಲಿ ಹುರುಳಿ ಬಿತ್ತನೆ ನಡೆದಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು

ಹಸು ಮತ್ತು ಮೇಕೆಗಳನ್ನು ಸಾಕಣೆ ಮಾಡಿದ್ದು ಕಳೆದ ಬೇಸಿಗೆಯಲ್ಲಿ ಹುಲ್ಲು, ಹಸಿರು ಮೇವಿನ ಸಂಗ್ರಹ ಮಾಡಲಾಗಿರಲಿಲ್ಲ. ಕಳೆದೊಂದು ವಾರದಿಂದ ತುಂತುರು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ್ದ ಹುರುಳಿ ಕಳೆಗಟ್ಟಿದೆ. ಇದು ರಾಸುಗಳಿಗೆ ಪೌಷ್ಟಿಕ ಆಹಾರದ ಜತೆಗೆ, ಮನೆ ಮಂದಿಗೆ ಅಗತ್ಯ ಪ್ರಮಾಣದ ಕಾಳು ಸಿಗಲಿದೆ ಎನ್ನುತ್ತಾರೆ ಕೃಷಿಕ ಆಲ್ಕೆರೆ ಅಗ್ರಹಾರ ಚೌಡನಾಯಕ.

ಕಳೆದ ಮೂರು ವರ್ಷಗಳಿಂದ ಹುರುಳಿ ಮಳೆಯ ಕೊರತೆಯಿಂದ ಗಟ್ಟಿ ಕಾಳು ಮತ್ತು ತೆನೆ ಕಟ್ಟಿರಲಿಲ್ಲ. ಗಿಡಗಳಿಗೂ ರೋಗ ರುಜಿನ ಕಾಡಿತ್ತು. ಆದರೆ, ಈ ಬಾರಿ ಉತ್ತಮ ಬೆಳೆ ಬಂದಿದ್ದು, ಬೆಳೆಯಿಂದ ಕಾಳು ಬೇರ್ಪಡಿಸಿ ಒಕ್ಕಣೆ ಮಾಡಿ ಇಟ್ಟುಕೊಂಡರೆ ಜಾನುವಾರುಗಳ ಮೇವಿನ ಅಗತ್ಯತೆ ನೀಗಬಹುದು ಎನ್ನುತ್ತಾರೆ ಕೃಷಿಕರು.       

ಹುರುಳಿ ಮೇವು ಅತ್ಯಂತ ಸಮೃದ್ಧ ಹಾಗೂ ನಾರಿನ ಅಂಶದಿಂದ ಕೂಡಿದ ದ್ವಿದಳಧಾನ್ಯ. ನಿತ್ಯ ಆಹಾರ ಬಳಕೆಗೆ ಹಾಗೂ ಆಕಳು ಮತ್ತು ಆಡು ಕುರಿಗಳಿಗೆ ಪೌಷ್ಟಿಕಾಂಶಯುಕ್ತ ಆಹಾರವಾಗಿಯೂ ಬಳಸಬಹುದು. ಪಶುಪಾಲಕರು ಹಾಲಿನ ಹೆಚ್ಚಳಕ್ಕೆ ಹುರುಳಿ ಸೆತ್ತೆ ಮತ್ತು ಕಾಳಿನ ಸಾರವನ್ನು ನೀಡುತ್ತಾರೆ. ರೋಗ ಬಾಧಿತ ಪಶುಗಳಿಗೆ ಚೇತರಿಸಿಕೊಳ್ಳಲು ಹಾಗೂ ಹೋರಿ ಮತ್ತು ಕುದುರೆಗಳಿಗೆ ಪ್ರತಿನಿತ್ಯ ಹುರುಳಿ ನೀಡಿ ಸಾಕುತ್ತಾರೆ ಎಂದು ಪಶು ವೈದ್ಯರು ಮಾಹಿತಿ ನೀಡಿದರು.

ಸಾಧಾರಣ ಮಳೆ
ಜುಲೈ 30ರವರೆಗೆ ಜಿಲ್ಲೆಯಲ್ಲಿ ಮೋಡ ಮಸುಕಿದ ವಾತಾವರಣ ಕಂಡುಬರಲಿದ್ದು ಅಲ್ಲಲ್ಲಿ ತುಂತುರು ಮಳೆಯಿಂದ ಹಗುರ ಮಳೆ ಬೀಳುವ ಸಾಧ್ಯತೆ ಇದೆ. ಜೂನ್ 30ರ ನಂತರ ಗಾಳಿಯ ವೇಗ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT