ಸೋಮವಾರ, ಅಕ್ಟೋಬರ್ 19, 2020
25 °C
ಜಿಲ್ಲೆಯ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಪ್ರಸ್ತಾಪಿಸಿದ ಜಿಲ್ಲಾಧಿಕಾರಿ

ಚಾಮರಾಜನಗರ: ಸಾಕ್ಷರತೆ ಪ್ರಮಾಣ ಹೆಚ್ಚಳಕ್ಕೆ ‘ಅಕ್ಷರೋತ್ಸವ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿರುವ ಅನಕ್ಷರಸ್ಥರಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಅಕ್ಷರೋತ್ಸವ ಎಂಬ ವಿನೂತನ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ರವಿ ಅವರು ಘೋಷಿಸಿದರು. 

ಜಿಲ್ಲೆಯಲ್ಲಿ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕ್ರಮಗಳ ಬಗ್ಗೆ ಶುಕ್ರವಾರ ಫೇಸ್‌ಬುಕ್‌ ಲೈವ್‌ನಲ್ಲಿ ವಿವರ ನೀಡಿದ ಅವರು, ‘ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಜಿಲ್ಲೆಯ ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಶೇ 37ರಿಂದ 38 ರಷ್ಟು ಜನರು ಶಾಲೆಯ ಮೆಟ್ಟಿಲು ಹತ್ತಿಲ್ಲ. ಅವರಿಗೆ ಓದಲು ಬರೆಯಲು ಬರುತ್ತಿಲ್ಲ. ಇದು ಒಳ್ಳೆಯ ಬೆಳವಣಿಗೆಯಲ್ಲ. ಅವರನ್ನು ಅಕ್ಷರವಂತರನ್ನಾಗಿ ಮಾಡಬೇಕಾಗಿದೆ’ ಎಂದು ಹೇಳಿದರು. 

‘ಇದಕ್ಕಾಗಿ ಅಕ್ಷರೋತ್ಸವ ಕಾರ್ಯಕ್ರಮವನ್ನು ಜಾರಿಗೆ ತರಲಾಗುವುದು. ಕಾಡಂಚಿನ ಪ್ರದೇಶದ ಜನರಿಗೆ ಶಿಕ್ಷಣ ನೀಡುವುದು ನಮ್ಮ ಉದ್ದೇಶ. ಜಿಲ್ಲೆಯ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣದಿಂದ ವಂಚಿತರಾಗಿರುವ 2.50 ಲಕ್ಷದಿಂದ 2.75 ಲಕ್ಷ ಜನರು ಕೂಡ ಮುಖ್ಯವಾಹಿನಿಗೆ ಬರಬೇಕು’ ಎಂದು ಅವರು ಹೇಳಿದರು.  

ಚೆಲುವ ಚಾಮರಾಜನಗರ ಅಭಿಯಾನ: ‘ಜಿಲ್ಲೆಯಲ್ಲಿರುವ ನಗರ, ಪಟ್ಟಣಗಳ ಸೌಂದರ್ಯೀಕರಣ, ಕೆರೆಗಳ ಪೋಷಣೆ, ಪರಿಸರ ಸಂರಕ್ಷಣೆ ಸೇರಿದಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ಸಹಕಾರ ಪಡೆದು ‘ಚೆಲುವ ಚಾಮರಾಜನಗರ’ ಅಭಿಯಾನ ಆರಂಭಿಸಲಾಗುತ್ತಿದ್ದು, ನಗರ, ಪಟ್ಟಣಗಳ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರವನ್ನು ತೆರವುಗೊಳಿಸಿ ಅವರಿಗೂ ಘನತೆಯ ಬದುಕನ್ನು ಕಟ್ಟಿಕೊಳ್ಳಲು ಅನುಕೂಲವಾಗುವಂತೆ ಫುಡ್ ಜೋನ್‌ಳನ್ನು ಸ್ಥಾಪಿಸಲಾಗುತ್ತಿದೆ. ಚಾಮರಾಜನಗರ, ಗುಂಡ್ಲುಪೇಟೆಗಳಲ್ಲಿ ಮೂರು ಕಡೆ ಹಾಗೂ ಕೊಳ್ಳೇಗಾಲದಲ್ಲಿ ಒಂದು ಕಡೆ ಫುಡ್ ಜೋನ್ ಪ್ರಾರಂಭಿಸಲು ಕಾರ್ಯ ಯೋಜನೆ ರೂಪಿಸಲಾಗಿದೆ‌’ ಎಂದು ಜಿಲ್ಲಾಧಿಕಾರಿ ಎಂದು ಹೇಳಿದರು.

ಪ್ರಾಕೃತಿಕ ಭೂವಿಜ್ಞಾನ  ಮ್ಯೂಸಿಯಂ: ‘ಚಾಮರಾಜನಗರ ತಾಲ್ಲೂಕಿನ ಮಲ್ಲಯ್ಯನಪುರ ಸುತ್ತಮುತ್ತಲ ಪ್ರದೇಶದಲ್ಲಿ ವಿಶಿಷ್ಟವಾದ ಖನಿಜಗಳು ಕಂಡು ಬಂದಿದ್ದು, ಆ ಪ್ರದೇಶದಲ್ಲಿ ಪ್ರಾಕೃತಿಕ ಭೂವಿಜ್ಞಾನ ಮ್ಯೂಸಿಯಂ ಆರಂಭಿಸಲು ಉದ್ದೇಶಿಸಲಾಗಿದೆ. ನ್ಯಾಷನಲ್ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾಗೆ ಪತ್ರ ಬರೆಯಲಾಗಿತ್ತು. ಅದರಂತೆ ವಿಜ್ಞಾನಿಗಳ ತಂಡವು ಭೇಟಿ ನೀಡಿದ್ದು ಪ್ರದೇಶದ ಸರ್ವೆ ಕಾರ್ಯವನ್ನು ಮಾಡುತ್ತಿದೆ’ ಎಂದು ಅವರು ಮಾಹಿತಿ ನೀಡಿದರು. 

ಪುನೀತ್‌ ಸಂದೇಶ: ‘ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು ಇಲ್ಲಿನ ಪ್ರವಾಸಿ ತಾಣಗಳನ್ನು ಪರಿಚಯಿಸಿ ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಈಗಾಗಲೇ ಪ್ರವಾಸಿ ತಾಣಗಳ ಪ್ರಮೋಷನಲ್ ವಿಡಿಯೊಗಳನ್ನು ಮಾಡಲಾಗುತ್ತಿದೆ. ಜಿಲ್ಲೆಯವರೇ ಆದ ಕನ್ನಡದ ನಟ ಪವರ್‌ಸ್ಟಾರ್ ಪುನೀತ್‌ರಾಜ್‌ಕುಮಾರ್ ರವರು ಜಿಲ್ಲೆಯ ಅಭಿವೃದ್ದಿಯ ರಾಯಭಾರಿಯಾಗಿ ಭಾಗವಹಿಸುವುದಾಗಿ ಹೇಳಿದ್ದಾರೆ. ಪ್ರಸ್ತುತ ಚಿತ್ರೀಕರಿಸಲಾಗುತ್ತಿರುವ ಪ್ರವಾಸಿ ತಾಣಗಳ ಕುರಿತ ವಿಡಿಯೊಗೆ ಸಂದೇಶ ನೀಡುವುದಾಗಿ ಹೇಳಿದ್ದಾರೆ’ ಎಂದರು. 

 ಕೊಳ್ಳೇಗಾಲ ರೇಷ್ಮೆ ಸೀರೆ ಬ್ರ್ಯಾಂಡ್‌

‘ರೇಷ್ಮೆ ಕೃಷಿ ಹಾಗೂ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದ ಜಿಲ್ಲೆಯಲ್ಲಿ ರೇಷ್ಮೆ ನೇಕಾರರು, ರೀಲರ‍್ಸ್ ಗಳು ಹಾಗೂ ರೇಷ್ಮೆ ಕೃಷಿ ಅವಲಂಬಿತರಿಗೆ ನೆರವಾಗಬೇಕೆಂಬ ಉದ್ದೇಶದಿಂದ ಯೋಜನೆ ರೂಪಿಸಲಾಗಿದೆ. ರೇಷ್ಮೆ ನೇಕಾರರ ಸಹಕಾರ ಸಂಘಗಳನ್ನು ಕ್ಲಸ್ಟರ್ ಮಾಡಿ ಕೊಳ್ಳೇಗಾಲದ ಕೈಮಗ್ಗ ರೇಷ್ಮೆ ಸೀರೆಯನ್ನು ‘ಕೊಳ್ಳೇಗಾಲ ರೇಷ್ಮೆ ಸೀರೆ’ ಎಂದೇ ಬ್ರ್ಯಾಂಡ್‌ ಮಾಡಲಾಗುತ್ತಿದೆ. ಕೊಳ್ಳೇಗಾಲ ಪಟ್ಟಣದಲ್ಲಿ ರೇಷ್ಮೆ ಸೀರೆ ಮಾರಾಟಕ್ಕಾಗಿ ಸ್ಮಾರ್ಟ್ ಹ್ಯಾಂಡ್‌ಲೂಂ ಮಳಿಗೆ ತೆರೆಯಲು ನಿರ್ಧರಿಸಲಾಗಿದೆ. ರೇಷ್ಮೆ ಕೃಷಿ ಉದ್ಯಮವನ್ನೇ ಅವಲಂಬಿಸಿರುವ 779 ಕುಟುಂಬಗಳ ಭದ್ರತೆ,  ಸುರಕ್ಷತೆ ಸೇರಿದಂತೆ ಎಲ್ಲ ರೀತಿಯಲ್ಲಿ ನೆರವಾಗಲು ಯೋಜನಾ ವರದಿ ಮಾಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.