ಗುರುವಾರ , ಮಾರ್ಚ್ 4, 2021
22 °C
ಮತದಾನ ಬಹಿಷ್ಕರಿಸಲು ಉಪ್ಪಾರ ಸಮುದಾಯದವರ ನಿರ್ಧಾರ, ಹರಾಜು ನಡೆದಿಲ್ಲ ಮುಖಂಡರ ಸ್ಪಷ್ಟನೆ

ಯಳಂದೂರಿನ ಬನ್ನಿಸಾರಿಗೆಯಲ್ಲಿ ಗ್ರಾ. ಪಂ ಸ್ಥಾನ ಲಕ್ಷಾಂತರ ರೂಪಾಯಿಗೆ ಹರಾಜು: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಯಳಂದೂರು ತಾಲ್ಲೂಕಿನ ಬನ್ನಿಸಾರಿಗೆ ಮತ್ತು ರಾಮಪುರ ಗ್ರಾಮಗಳ ಮೂರು ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಲಕ್ಷಾಂತರ ರೂಪಾಯಿಗೆ ಹರಾಜು ಹಾಕಲಾಗಿದೆ’ ಎಂದು ಬನ್ನಿಸಾರಿಗೆ ಗ್ರಾಮದ ಉಪ್ಪಾರ ಸಮುದಾಯದ ಮುಖಂಡರು ಆರೋಪಿಸಿದ್ದಾರೆ. 

ಈ ಆರೋಪಕ್ಕೆ ಪೂರಕವೆಂಬಂತೆ, ಉಪ್ಪಾರ ಮುಖಂಡರೊಬ್ಬರು ಹಾಗೂ ನಾಯಕ ಸಮುದಾಯದ ಮುಖಂಡರೊಬ್ಬರು ಫೋನಿನಲ್ಲಿ ಮಾತನಾಡುತ್ತಿರುವ ಆಡಿಯೊ ತುಣುಕೊಂದು ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಅದರಲ್ಲಿ ಮುಖಂಡರೊಬ್ಬರು, ‘ಜನರಲ್‌ನವರು 1.60ಕ್ಕೆ, ಎಸ್‌ಟಿಯವರು ಮೂರು ಚಿಲ್ಲರೆಗೆ ಕೂಗಿದರು’ ಎಂದು ಹೇಳುತ್ತಿರುವುದು ಕೇಳಿಸುತ್ತದೆ.

ಬನ್ನಿಸಾರಿಗೆ ಗ್ರಾಮವು ಗೌಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಇಲ್ಲಿ 19 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಬನ್ನಿಸಾರಿಗೆ ಮತ್ತು ರಾಮಪುರ ಗ್ರಾಮಗಳಿಂದ ನಾಲ್ಕು ಅಭ್ಯರ್ಥಿಗಳ ಆಯ್ಕೆಗೆ ಅವಕಾಶ ಇದೆ. ಸಾಮಾನ್ಯ (ಪುರುಷ ಮತ್ತು ಮಹಿಳೆ)-2, ಎಸ್‌ಸಿ (ಪುರುಷ)-1 ಮತ್ತು ಎಸ್‌ಟಿ (ಮಹಿಳೆ)-1 ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಹರಾಜಿನ ಮೂಲಕ ಆಯ್ಕೆ: ‘ಸಾಮಾನ್ಯ ಸ್ಥಾನಕ್ಕೆ ಸ್ಪರ್ಧಿಸುವ 2 ಸ್ಥಾನಗಳಿಗೆ ₹4.5 ಲಕ್ಷ ಮತ್ತು ₹1.5
ಲಕ್ಷಕ್ಕೆ ಹರಾಜು ಮಾಡಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದಾರೆ. ಈ ಬಗ್ಗೆ ವಿಚಾರಿಸಿದರೆ ಸಾಕ್ಷಿ ಒದಗಿಸುವಂತೆ ಕೇಳುತ್ತಿದ್ದಾರೆ’ ಎಂದು ಉಪ್ಪಾರ ಯಜಮಾನರಾದ ಶ್ರೀನಿವಾಸ, ನಿಂಗಣ್ಣ ಹಾಗೂ ಸಿದ್ದಪ್ಪ ಅವರು ಆರೋಪಿಸಿದ್ದಾರೆ. 

ಮತದಾನಕ್ಕೆ ಬಹಿಷ್ಕಾರಕ್ಕೆ ನಿರ್ಧಾರ: ‘ಗ್ರಾಮದಲ್ಲಿ ಉಪ್ಪಾರ ಸಮುದಾಯವನ್ನು ನಿರ್ಲಕ್ಷಿಸಲಾಗುತ್ತಿದೆ. 25 ವರ್ಷಗಳಿಂದ ಸ್ಪರ್ಧೆಗೆ ಅವಕಾಶ ನೀಡಲಾಗುತ್ತಿಲ್ಲ’ ಎಂದು ಆರೋಪಿಸಿರುವ ಯಜಮಾನರು, ಈ ಬಾರಿ ಮತದಾನ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ. 

ಗ್ರಾಮದಲ್ಲಿ ಉಪ್ಪಾರ, ಗೌಡ, ಪರಿಶಿಷ್ಟ ಜಾತಿ ಮತ್ತು ನಾಯಕ ಜನಾಂಗದವರು ಇದ್ದಾರೆ. ಸಾಮಾನ್ಯ ಅಭ್ಯರ್ಥಿಗಳ ಗೆಲುವಿಗೆ ಗೌಡ ಮತ್ತು ನಾಯಕ ಜನಾಂಗದವರ 800 ಮತಗಳು ನಿರ್ಣಾಯಕ ಆಗಲಿವೆ. 

‘ಉಪ್ಪಾರ ಸಮುದಾಯದ 120 ಮತಗಳಿದ್ದು, ನಿರ್ಣಾಯಕವೇನಲ್ಲ. ಸಾಮಾನ್ಯ (ಮಹಿಳೆ) ಮತ್ತು ಸಾಮಾನ್ಯ (ಪುರುಷ) ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಉಪ್ಪಾರರು ಮತ ಹಾಕದಿದ್ದರೂ ಆಯ್ಕೆ ಆಗುತ್ತಾರೆ ಎಂಬ ಕಾರಣಕ್ಕೆ ನಿರ್ಲಕ್ಷಿಸಲಾಗುತ್ತಿದೆ’ ಎಂಬುದು ಮುಖಂಡರ ದೂರು. 

‘ಮೀಸಲಾತಿ ಪ್ರಕಟವಾಗುವ ಮೊದಲು, ಈ ಬಾರಿ ಉಪ್ಪಾರ ಜನಾಂಗಕ್ಕೆ ಒಂದು ಸ್ಥಾನವನ್ನು ಬಿಟ್ಟು ಕೊಡುವ ಭರವಸೆಯನ್ನು ಗ್ರಾಮಸ್ಥರು ನೀಡಿದ್ದರು. ಕಡಿಮೆ ಸಂಖ್ಯೆಯ ಮತದಾರರನ್ನು ಹೊಂದಿರುವ ಉಪ್ಪಾರರ ಮತಗಳ ಅವಶ್ಯಕತೆ ಯಾರಿಗೂ ಇಲ್ಲ. ನಾವು ಮತ ಹಾಕದಿದ್ದರೂ, ಸಾಮಾನ್ಯ ಅಭ್ಯರ್ಥಿಗಳು ಆಯ್ಕೆ ಆಗುವ ಪರಿಸ್ಥಿತಿ ಇರುವುದರಿಂದ ನಮ್ಮನ್ನು ಆಯ್ಕೆಗೆ ಪರಿಗಣಿಸುತ್ತಿಲ್ಲ’ ಎಂದು ಶ್ರೀನಿವಾಸ ಹಾಗೂ ನಾಗಣ್ಣ ಅವರು ದೂರಿದ್ದಾರೆ. 

ಸೌಲಭ್ಯದ ಕೊರತೆ: ‘ನಮ್ಮ ಜನಾಂಗದ ಮತದಾರರ ಕ್ಷೇತ್ರವನ್ನು ಗೌಡಹಳ್ಳಿ ಪಂಚಾಯಿತಿಯಿಂದ ತೆಗೆದು, ಸಮೀಪದ ಅಗರ ಗ್ರಾಮ ಪಂಚಾಯಿತಿಗೆ ಸೇರಿಸಬೇಕು. ನಮ್ಮ ಬಡಾವಣೆಯಲ್ಲಿ ಸರಿಯಾದ ಮೂಲ ಸೌಕರ್ಯಗಳೇ ಇಲ್ಲ. ಪಂಚಾಯಿತಿ ಚುನಾವಣೆ ಬಂದಾಗ ನಮ್ಮ ಜನಾಂಗದ ಅಭ್ಯರ್ಥಿಗಳು ಆಯ್ಕೆ ಆಗದಂತೆ ತಂತ್ರ ಹೆಣೆಯಲಾಗುತ್ತದೆ. ಈಗ ಸ್ಪರ್ಧೆಗೆ ಅವಕಾಶ ಇದ್ದರೂ ಉಪ್ಪಾರ ಜನಾಂಗವನ್ನು ಪರಿಗಣಿಸದಿರಲು ಹರಾಜು ಪ್ರಕ್ರಿಯೆ ನಡೆಸುತ್ತಾರೆ. ನಮ್ಮ ಸಮುದಾಯದವರು ಸ್ಪರ್ಧಿಸದಂತೆ ನಿರ್ಬಂಧಿಸಲಾಗಿದೆ’ ಎಂದು ಶುಕ್ರವಾರ ಸಂಜೆ ಆಯೋಜಿಸಲಾದ ಯಜಮಾನರ ಸಭೆಯಲ್ಲಿ ಉಪ್ಪಾರ ಮುಖಂಡರು ದೂರಿದ್ದಾರೆ.

‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಗ್ರಾಮದ ನಾಯಕ ಸಮುದಾಯದ ಯಜಮಾನ ನಾಗೇಶ್‌ ಅವರು, ‘ನಾವು ಸದಸ್ಯ ಸ್ಥಾನಗಳನ್ನು ಹರಾಜು ಹಾಕಿಲ್ಲ. ಮೀಸಲಾತಿ ಅನುಸಾರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹರಾಜು ಹಾಕಲಾಗಿದೆ ಎಂಬುದೆಲ್ಲ ಸುಳ್ಳು’ ಎಂದು ಸ್ಪಷ್ಟಪಡಿಸಿದರು. 

ಹರಾಜು ಹಾಕಿದರೆ ಕಾನೂನು ಕ್ರಮ: ಡಿ.ಸಿ

ಈ ಮಧ್ಯೆ, ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಹರಾಜಿನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ ಪ್ರಕರಣಗಳು ಕಂಡು ಬಂದಲ್ಲಿ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಎಚ್ಚರಿಸಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳ ಕೆಲವು ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಹರಾಜಿನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂಬ ವರದಿಗಳು ಕೆಲ ದಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುವುದು ಕಂಡುಬಂದಿದೆ.

‘ಚುನಾವಣೆಯನ್ನು ನ್ಯಾಯಸಮ್ಮತ, ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ನಡೆಸುವುದು ಚುನಾವಣಾ ಆಯೋಗದ ಉದ್ದೇಶ. ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಹರಾಜಿನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಂಡು ಬಂದಲ್ಲಿ ಇಂತಹ ಪ್ರಕರಣಗಳನ್ನು ಸಂವಿಧಾನ ಮತ್ತು ಪ್ರಜಾಪ್ರಭುತ್ವ ವಿರೋಧಿ ಚಟುವಟಿಕೆ ಎಂದು ಪರಿಗಣಿಸಿ ಅಂತಹವರ ವಿರುದ್ದ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು  ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಡಾ.ಎಂ.ಆರ್.ರವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು