ಮಂಗಳವಾರ, ಮೇ 11, 2021
25 °C
ಜಿಲ್ಲಾಡಳಿತದಿಂದ ಸಂವಿಧಾನ ಶಿಲ್ಪಿಯ 130ನೇ ಜನ್ಮ ದಿನಾಚರಣೆ

ಅಂಬೇಡ್ಕರ್‌ ವ್ಯಕ್ತಿಯಲ್ಲ, ಜ್ಞಾನದ ಶಕ್ತಿ: ಮುಕುಂದರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ದೇಶದ ಶೇ97ರಷ್ಟು ಜನರ ಆರಾಧ್ಯ ದೈವ. ಅವರನ್ನು ಮರೆತರೆ ನಮ್ಮ ಬದುಕು ಹೀನಾಯವಾಗುತ್ತದೆ’ ಎಂದು ಕೇಂದ್ರ ಸಾಹಿತ್ಯ ಅಕಾಡಮಿ ಸದಸ್ಯ ಡಾ.ಎಲ್‌.ಎನ್‌.ಮುಕುಂದರಾಜ್‌ ಅವರು ಬುಧವಾರ ಪ್ರತಿಪಾದಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಮ್ಮ ದೇಶದ ಮೊದಲ ದೈವ ಬುದ್ಧ, ಎರಡನೇ ದೈವ ಬಸವಣ್ಣ, ಮೂರನೇ ದೈವ ಅಂಬೇಡ್ಕರ್‌, ನಾಲ್ಕನೇ ದೈವ ಮಹಾತ್ಮಗಾಂಧಿ. ನಮ್ಮ ದೇಶದಲ್ಲಿ ದಲಿತರು, ಶೂದ್ರರು ಮತ್ತು ಮಹಿಳೆಯರ ಪರವಾಗಿ ಮಾತನಾಡಿದ ಯಾರನ್ನೂ ಉಳಿಸಿಲ್ಲ. ಮಹಿಳೆಯರ ಬಗ್ಗೆ ಧ್ವನಿ ಎತ್ತಿದ ಬುದ್ಧನನ್ನು ಇಲ್ಲಿಂದ ಓಡಿಸಲಾಯಿತು. ಬಸವಣ್ಣ ಅವರಿಗೂ ಇದೇ ಸ್ಥಿತಿ ಬಂತು’ ಎಂದರು.

‘ಸಂವಿಧಾನ ಎಲ್ಲ ಸಮುದಾಯದವರ ಹಿತವನ್ನು ಬಯಸುತ್ತದೆ. ಹಾಗಿದ್ದರೂ, ಅಂಬೇಡ್ಕರ್‌ ಅವರು ದಲಿತ ಸಮುದಾಯದ ನಾಯಕ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಗಾಂಧೀಜಿ ಅವರು ತಲುಪಿದ ರೀತಿಯಲ್ಲಿ ಅಂಬೇಡ್ಕರ್‌ ಅವರು ಜನರನ್ನು ತಲುಪಿಲ್ಲ. ಜಗತ್ತಿನ ಯಾವ ಚಿಂತಕರಿಗಿಂತಲೂ ಅವರು ಕಡಿಮೆ ಇಲ್ಲ. ಅವರು ಒಬ್ಬ ವ್ಯಕ್ತಿಯಲ್ಲ. ಜ್ಞಾನದ ಶಕ್ತಿ. ಅವರು ಎಷ್ಟು ಬರೆದಿದ್ದಾರೆ ಎಂದರೆ, ನಮ್ಮ ಜೀವನ ಪೂರ್ತಿ ಕೂತು ಓದಿದರೂ ಅವುಗಳನ್ನು ಪೂರ್ಣಗೊಳಿಸಲು ಸಾಧ್ಯವಿಲ್ಲ. ಭಾರತದಲ್ಲಿ ಮುಚ್ಚಿಟ್ಟಿದ್ದ ಇತಿಹಾಸಗಳನ್ನು ಅವರು ತಮ್ಮ ಬರಹಗಳಲ್ಲಿ ತೋರಿಸಿದ್ದಾರೆ’ ಎಂದು ಮುಕುಂದರಾಜ್‌ ಅವರು ಹೇಳಿದರು. 

‘ಅಂಬೇಡ್ಕರ್‌ ಅವರ ಚಿಂತನೆಗಳನ್ನು ನಾವು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಅವರ ಬಗ್ಗೆ ಶ್ರಮ ಜೀವಿಗಳಿಗೆ ಗೌರವವಿರಬೇಕು. ಅವರ ಚಿಂತನೆ, ಬರಹಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದರು. 

ತಿ.ನರಸೀಪುರ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ ಅವರು ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್‌ ಅವರನ್ನು ವಿರೋಧಿಸುತ್ತಾ ಬಂದಿದ್ದವರೇ ಇವತ್ತು ಅವರನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇದು ಅಂಬೇಡ್ಕರ್‌ ಅವರ ಪವಾಡ. ಯಾರು ವಿರೋಧಿಸುತ್ತಿದ್ದರೋ, ಅವರಿಗೆ ಇವತ್ತು ಅಂಬೇಡ್ಕರ್‌ ಅವರ ಅವಶ್ಯಕತೆ ಇದೆ’ ಎಂದರು. 

‘ಈ ದೇಶದಲ್ಲಿ ಈಗಲೂ ಎರಡು ಸಂವಿಧಾನ ಇದೆ. ಒಂದು ಅಂಬೇಡ್ಕರ್‌ ಅವರು ಬರೆದಿರುವ ಲಿಖಿತ ಸಂವಿಧಾನ. ಇನ್ನೊಂದು ಮೌಖಿಕವಾಗಿ ಜನರ ಮನಸ್ಸನ್ನು ನಿಯಂತ್ರಿಸುವ ಮನುವಾದ. ಅಂಬೇಡ್ಕರ್‌ ಅವರು ಮನುಸ್ಮೃತಿಯನ್ನು 1927ರ ಡಿಸೆಂಬರ್‌ 25ರಂದು ಸುಟ್ಟುಹಾಕಿದ್ದರು. ಹಾಗಿದ್ದರೂ, ಇನ್ನೂ ಅದರ ನಿಯಮಗಳು ಅಸ್ತಿತ್ವದಲ್ಲಿವೆ. ದೇಶದ ಸಂವಿಧಾನ ಯಥಾವತ್ತಾಗಿ ಜಾರಿಗೆ ಬಂದಿದ್ದರೆ 20 ವರ್ಷಗಳಲ್ಲಿ ಈ ದೇಶ ಎಲ್ಲ ಸಮುದಾಯಗಳು ಉದ್ಧಾರವಾಗುತ್ತಿತ್ತು. ಆದರೆ, 70 ವರ್ಷಗಳಾದರೂ ನಮ್ಮ ಸ್ಥಿತಿಯಲ್ಲಿ ಬದಲಾಗಿಲ್ಲ. ಶೇ 97ರಷ್ಟು ಜನರ ಮನಸ್ಸಿನ ಮೇಲೆ ಶೇ 3ರಷ್ಟು ಮಂದಿ ಕಡಿವಾಣ ಹಾಕುತ್ತಿದ್ದಾರೆ’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೊಯರ್ ನಾರಾಯಣರಾವ್  ಅವರು ಮಾತನಾಡಿ, ‘ಅಂಬೇಡ್ಕರ್ ಅವರು ಒಂದು ಜನಾಂಗಕ್ಕೆ ಸೀಮಿತವಲ್ಲ. ಎಲ್ಲ ಜನಾಂಗಗಳ ಹಿತ ಕಾಯ್ದ ಮಹಾನ್ ವ್ಯಕ್ತಿ. ಸಮಾನತೆಯನ್ನು ತರಲು ಜೀವನ ಪರ್ಯಂತ ಶ್ರಮಿಸಿದರು’ ಎಂದು ಹೇಳಿದರು. 

ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ ಅವರು ಮಾತನಾಡಿ, ‘ನಾನು ಸೇರಿದಂತೆ ತಳ ಸಮುದಾಯದವರು ರಾಜಕೀಯ ಸ್ಥಾನಮಾನ ಗಳಿಸಲು ಸಾಧ್ಯವಾಗಿದ್ದರೆ ಅದಕ್ಕೆ ಅಂಬೇಡ್ಕರ್‌ ಅವರ ಸಂವಿಧಾನ ಕಾರಣ. ಕಷ್ಟಪಟ್ಟು ಓದಿ, ನೋವುಗಳನ್ನು ಅನುಭವಿಸಿ ಶೋಷಿತರನ್ನು ಸಾಮಾಜಿಕವಾಗಿ ಮೇಲಕ್ಕೆ ಎತ್ತಬೇಕು ಎಂಬ ಉದ್ದೇಶದಿಂದ ಸಂವಿಧಾನವನ್ನು ರಚಿಸಿದಂತಹ ಮಹಾನ್‌ ವ್ಯಕ್ತಿ ಅಂಬೇಡ್ಕರ್‌’ ಎಂದು ಬಣ್ಣಿಸಿದರು. 

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಅಶ್ವಿನಿ, ಉಪಾಧ್ಯಕ್ಷೆ ಶಶಿಕಲಾ, ನಗರಸಭಾ ಅಧ್ಯಕ್ಷೆ ಆಶಾ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಆರ್.ಬಾಲರಾಜ್, ರಮೇಶ್, ನಗರಸಭಾ ಸದಸ್ಯೆ ಕುಮುದಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಭಾಗೀರಥಿ ಇದ್ದರು. 

 ಇದಕ್ಕೂ ಮುನ್ನ ಜಿಲ್ಲಾಡಳಿತ ಭವನದಲ್ಲಿರುವ ಅಂಬೇಡ್ಕರ್ ಅವರ ಪುತ್ಥಳಿಗೆ ಗಣ್ಯರು ಮಾಲಾರ್ಪಣೆ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು