ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಸೂಚನೆ

Last Updated 17 ಫೆಬ್ರುವರಿ 2021, 15:50 IST
ಅಕ್ಷರ ಗಾತ್ರ

ಚಾಮರಾಜನಗರ: ‘ಭಾರತೀಯ ಸಂಸ್ಕೃತಿಯಲ್ಲಿ ಗೋವುಗಳಿಗೆ ಪೂಜ್ಯ ಸ್ಥಾನವಿದ್ದು ಅವುಗಳ ರಕ್ಷಣೆ ಮತ್ತು ಸಂರಕ್ಷಣೆ ಮುಖ್ಯ ಜವಾಬ್ದಾರಿಯಾಗಿದ್ದು ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಬೇಕು’ ಎಂದು ಪಶುಸಂಗೋಪನೆ ಸಚಿವ ಪ್ರಭು ಬಿ.ಚವಾಣ್ ಅವರು ಬುಧವಾರ ಸೂಚಿಸಿದರು.

ಜಾನುವಾ‌ರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆಯ ಅನುಷ್ಠಾನ ಹಾಗೂ ಪಶುಸಂಗೋಪನೆ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ‘ಗೋಹತ್ಯೆ ನಿಷೇಧ ಕಾಯ್ದೆಯ ಅರಿವು ಪಶುಸಂಗೋಪನೆ ಇಲಾಖೆಯ ಅಧಿಕಾರಿಗಳಿಗೆ ಸಂಪೂರ್ಣವಾಗಿ ಇರಬೇಕು. 1964 ಹಾಗೂ 2020ರಲ್ಲಿನ ಕಾಯ್ದೆಗಳನ್ನು ಚೆನ್ನಾಗಿ ಓದಿಕೊಳ್ಳಬೇಕು. ಕಾಯ್ದೆಯ ಬಗ್ಗೆ ಪೂರ್ಣ ಪ್ರಮಾಣದಲ್ಲಿ ಮನನ ಮಾಡಿಕೊಂಡು ಗೋವುಗಳ ಸಂರಕ್ಷಣೆ ಮಾಡಬೇಕು’ ಎಂದರು.

‘ಕಾಯ್ದೆ ಜಾರಿಗೆ ಬಂದ ಮೇಲೆ ಇಲಾಖೆಯ ಕರ್ತವ್ಯ, ಜವಾಬ್ದಾರಿ ಹೆಚ್ಚಾಗಿದೆ. ಇದಕ್ಕೆ ಪೂರಕವಾಗಿ ಕಟ್ಟು ನಿಟ್ಟಾದ ಕ್ರಮ ಕೈಗೊಂಡು ಕಾರ್ಯ ನಿರ್ವವಹಿಸಬೇಕು. ಕಾಯ್ದೆ ಜಾರಿಯಾಗಿರುವ ಹಿನ್ನಲೆಯಲ್ಲಿ ಪ್ರತಿಯೊಬ್ಬರಿಗೂ ಮಾಹಿತಿ ತಲುಪಬೇಕು ಅದಕ್ಕಾಗಿ ಪಶುಸಂಗೋಪನಾ ಇಲಾಖೆಯು ಗ್ರಾಮ ಸಭೆಗಳಲ್ಲೂ ಕಾಯ್ದೆ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

‘ಜಿಲ್ಲೆಯಲ್ಲಿ ಅಂತರ್ ರಾಜ್ಯ ಗಡಿ ಭಾಗಗಳು ಸಂಪರ್ಕದಲ್ಲಿರುವುದರಿಂದ ಗೋವುಗಳ ಸಾಗಾಣಿಕೆ ಮೇಲೆ ನಿಗಾ ಇಡಬೇಕು. ಇಲಾಖೆಯ ಅಧಿಕಾರಿಗಳು, ವೈದ್ಯರನ್ನು ನಿಯೋಜಿಸಿ ನಿಯಮ ಪಾಲನೆ ಮಾಡದೇ ಇರುವ ಗೋವು ಸಾಗಾಣಿಕೆಯನ್ನು ತಡೆಯಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾತನಾಡಿ, ‘ಗೋವು ಸಾಗಣೆ ತಡೆಯುವ ನಿಟ್ಟಿನಲ್ಲಿ ಬಿಗಿ ಕ್ರಮಗಳನ್ನು ವಹಿಸಲಾಗಿದೆ. ಚೆಕ್‍ಪೋಸ್ಟ್‌ಗಳಲ್ಲಿ ಪಶುಪಾಲನೆ ಇಲಾಖೆಯ ಅಧಿಕಾರಿ ವೈದ್ಯರು ಇರುವಂತೆ ಸೂಚಿಸಲಾಗಿದೆ’ ಎಂದರು.

ಜಿಲ್ಲಾ ಪಂಚಾಯಿತಿಯ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ.ಸದಾಶಿವ ಮೂರ್ತಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ. ಶಾಂತಮೂರ್ತಿ ಕುಲಗಾಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ.ಬಿ ಹದ್ದಣ್ಣವರ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಸಿ.ವೀರಭದ್ರಯ್ಯ ಸಭೆಯಲ್ಲಿ ಇದ್ದರು.

ಗೋಮಾಳ ಒತ್ತುವರಿ ತೆರವುಗೊಳಿಸಿ

‘ಗೋಮಾಳ ಜಮೀನನ್ನು ಗುರುತಿಸಿ ಇಲಾಖೆಗೆ ಕೊಟ್ಟರೆ ಅಲ್ಲಿ ಮೇವು ಬೆಳೆಯಲು ಸಹಾಯವಾಗುತ್ತದೆ. ಸಾಧ್ಯವಾದಷ್ಟು ಬೇಗ ಗೋಮಾಳ ಜಮೀನು ಗುರುತಿಸಿ ಮತ್ತು ಒತ್ತುವರಿ ಆಗಿದ್ದರೆ ತೆರವುಗೊಳಿಸಿ’ ಎಂದು ಸಚಿವರು ಜಿಲ್ಲಾಧಿಕಾರಿ ಅವರಿಗೆ ತಿಳಿಸಿದರು.

ಜಿಲ್ಲೆಯಲ್ಲಿರುವ ಗೋವುಗಳಿಗೆ ಸಕಾಲಕ್ಕೆ ಔಷಧಿ ಪೂರೈಕೆ, ಕೃತಕ ಗರ್ಭಧಾರಣೆ, ಆರೋಗ್ಯ ಶಿಬಿರಗಳು, ಬರಗಿ ಕೇಂದ್ರದ ಅಭಿವೃದ್ಧಿ, ರೈತರಿಗೆ ನೀಡಲಾಗುತ್ತಿರುವ ವೈಜ್ಞಾನಿಕ ಹೈನುಗಾರಿಕೆ ಕುರಿತು ಸಚಿವರು ಪ್ರಗತಿ ಪರಿಶೀಲಿಸಿದರು.

ಚಾಮುಲ್‍ನಲ್ಲಿ ಉತ್ಪಾದನೆಯಾಗುತ್ತಿರುವ ಹಾಲು ಇನ್ನಿತರ ಉತ್ಪನ್ನಗಳು, ಪ್ರೋತ್ಸಾಹ ಧನ, ಮೇವು ಬೆಳೆ ಸೇರಿದಂತೆ ಇತರೆ ಅಭಿವೃದ್ದಿ ಕಾರ್ಯಗಳ ಪ್ರಗತಿ ಪರಾಮರ್ಶೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT