ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು | ವಾಹನಗಳ ವೇಗಕ್ಕೆ ಬೇಕಿದೆ ಕಡಿವಾಣ

ಮಹದೇಶ್ವರ ಬೆಟ್ಟ: ರಸ್ತೆಯಲ್ಲಿ ವಾಹನಗಳಿಗೆ ಸಿಲುಕುತ್ತಿರುವ ಪ್ರಾಣಿಗಳು
Published 26 ಜನವರಿ 2024, 7:32 IST
Last Updated 26 ಜನವರಿ 2024, 7:32 IST
ಅಕ್ಷರ ಗಾತ್ರ

ಹನೂರು: ಜಿಲ್ಲೆಯ ಸುಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ವಾಹನಗಳ ವೇಗಕ್ಕೆ ಕಡಿವಾಣ ಇಲ್ಲದಂತಾಗಿದ್ದು, ವಾಹನಗಳಿಗೆ ಸಿಲುಕಿ ವನ್ಯಪ್ರಾಣಿಗಳು ಗಾಯಗೊಳ್ಳುವ, ಸಾವಿಗೀಡಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. 

ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳು ತಮ್ಮ ಮೇಲೆ ದಾಳಿ ಮಾಡಬಹುದು ಎಂಬ ಭಯದಿಂದ ವಾಹನಗಳನ್ನು ವೇಗವಾಗಿ ಚಲಾಯಿಸುತ್ತಾರೆ. ಮಹದೇಶ್ವರ ಬೆಟ್ಟದಲ್ಲಿ ಜಾತ್ರೆ ನಡೆಯುವ ಸಂದರ್ಭದಲ್ಲಿ ರಾತ್ರಿಯಿಡೀ ಇಲ್ಲಿ ವಾಹನಗಳು ಸಂಚರಿಸುತ್ತಲೇ ಇರುತ್ತವೆ. ಇಂತಹ ಸಮಯದಲ್ಲಿ ಪ್ರಾಣಿಗಳು ರಸ್ತೆ ದಾಟುವಾಗ ಗಾಯಗೊಳ್ಳುತ್ತಿವೆ ಇಲ್ಲವೇ ಸಾಯುತ್ತಿವೆ.  

ವನ್ಯಜೀವಿ ಸಂರಕ್ಷಿತ ಪ್ರದೇಶಗಳಲ್ಲಿ ವಾಹನಗಳು 40 ಕಿ.ಮೀ ವೇಗದ ಮಿತಿಯಲ್ಲಿ ಸಂಚರಿಸಬೇಕು ಎಂಬುದು ನಿಯಮ. ಆದರೆ, ಇಲ್ಲಿ ಇದು ಪಾಲನೆಯಾಗುತ್ತಿಲ್ಲ. 

‘ಇಲಾಖೆ ವತಿಯಿಂದ ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಸಲಾಗಿತ್ತಿ. ಆದರೆ, ವನ್ಯಜೀವಿಗಳ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡದ ವಿನಾ ಪ್ರಯೋಜನವಾಗದು’ ಎಂದು ಹೇಳುತ್ತಾರೆ ಅರಣ್ಯಾಧಿಕಾರಿಗಳು.

ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡುವ ವಾಹನ ಸವಾರರು ಎಲ್ಲೆಂದರಲ್ಲಿ ಕೋತಿಗಳಿಗೆ ಹಣ್ಣು, ತರಕಾರಿ ಹಾಗೂ ಇನ್ನಿತರ ಆಹಾರ ಪದಾರ್ಥಗಳನ್ನು ನೀಡುತ್ತಾರೆ. ವಾಹನದಿಂದ ಎಸೆಯುತ್ತಾರೆ.  ಅವುಗಳನ್ನು ತಿನ್ನಲು ರಸ್ತೆ ಮಧ್ಯೆ ಭಾಗಕ್ಕೆ ಬರುವ ಕೋತಿಗಳು ಹಿಂಬದಿಯಿಂದ ಬರುವ ವಾಹನಗಳಿಗೆ ಸಿಲುಕಿ ಕೈ ಕಾಲುಗಳನ್ನು ಕಳೆದುಕೊಳ್ಳುತ್ತಿವೆ.

ಈ ಹಿಂದೆ ಇದೇ ರೀತಿ ಆಹಾರ ಪದಾರ್ಥ ತಿನ್ನಲು ಬಂದ ಕೋತಿ ಹಿಂಬದಿಯಿಂದ ಬಂದ ವಾಹನಕ್ಕೆ ಸಿಕ್ಕಿ ನಾಲ್ಕು ಕಾಲುಗಳನ್ನು ಕಳೆದುಕೊಂಡಿತ್ತು.

‘ಇದರ ಜೊತೆಗೆ ಹಬ್ಬ ಹಾಗೂ ಅಮಾವಾಸ್ಯೆ ಸಂದರ್ಭದಲ್ಲಿ ಕಾಲ್ನಡಿಗೆಯಲ್ಲಿ ಬರುವ ಭಕ್ತರು ರಸ್ತೆ ಮಧ್ಯೆದಲ್ಲೇ ಕುಳಿತು ಊಟ ಮಾಡುತ್ತಾರೆ. ಬಳಿಕ ಎಲೆ, ಹಾಗೂ ಆಹಾರವನ್ನು ಅಲ್ಲೇ ಬಿಟ್ಟು ಹೋಗುತ್ತಾರೆ. ಇದನ್ನು ತಿನ್ನಲು ಬರುವ ವನ್ಯಪ್ರಾಣಿಗಳು ವಾಹನಗಳಿಗೆ ಬಲಿಯಾಗುತ್ತಿವೆ’ ಎನ್ನುತ್ತಾರೆ ಅರಣ್ಯ ಇಲಾಖೆ ಸಿಬ್ಬಂದಿ.

ತಾಳ ಬೆಟ್ಟದಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯಲ್ಲಿ ಸಿಗುವ ಶನಿಮಹಾತ್ಜ ದೇವಾಲಯ, ಪೊನ್ನಾಚಿ ಕ್ರಾಸ್, 9ನೇ ಕ್ರಾಸ್ ರಂಗಸ್ವಾಮಿ ಒಡ್ಡು, ಹಾಲಳ್ಳ ಹಾಗೂ ಮಾವಿನಹಳ್ಳ ಮುಂತಾದ ಕಡೆಗಳಲ್ಲಿ ವಾಹನಗಳು ನಿಲ್ಲುತ್ತಿವೆ.

ಅಪಘಾತದಲ್ಲಿ ಗಾಯಗೊಂಡಿರುವ ಕೋತಿಯ ಕೈ ಕಾಲುಗಳಿಗೆ ಬ್ಯಾಂಡೇಜ್‌ ಹಾಕಿರುವುದು
ಅಪಘಾತದಲ್ಲಿ ಗಾಯಗೊಂಡಿರುವ ಕೋತಿಯ ಕೈ ಕಾಲುಗಳಿಗೆ ಬ್ಯಾಂಡೇಜ್‌ ಹಾಕಿರುವುದು

‘ವಾಹನ ಸವಾರರಿಗೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತಿದೆ. ಜತೆಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ 38 ಕಡೆಗಳಲ್ಲಿ ಸೂಚನಾಫಲಕಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ’ ಎಂದು ಮಹದೇಶ್ವರ ಬೆಟ್ಟ ವಲಯ ಅರಣ್ಯಾಧಿಕಾರಿ ಭಾರತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶೀಘ್ರ ಚೆಕ್‌ಪೋಸ್ಟ್‌ ನಿರ್ಮಾಣ’

‘ಮಹದೇಶ್ವರ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಿರುವುದು ಸಂತಸದ ವಿಚಾರ. ಇದೇ ರೀತಿ ವನ್ಯಧಾಮದೊಳಗೆ ಭಕ್ತರು ವನ್ಯಪ್ರಾಣಿಗಳು ಹಾಗೂ ವನ್ಯಪ್ರಾಣಿಗಳಿಗೆ ತೊಂದರೆ ನೀಡದಂತೆ ಅರಿವು ಮೂಡಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಕೆಲವು ಕಡೆ ಚೆಕ್ ಪೋಸ್ಟ್‌ ನಿರ್ಮಾಣ ಮಾಡಲು ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿ ಸಿಬ್ಬಂದಿಯನ್ನು ನಿಯೋಜಿಸಿ ಭಕ್ತರಿಗೆ ಅರಿವು ಮೂಡಿಸಲಾಗುವುದು’ ಎಂದು ಮಲೆಮಹದೇಶ್ವರ ವನ್ಯಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ ಸಂತೋಷ್ ಕುಮಾರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT