ಬುಧವಾರ, ಆಗಸ್ಟ್ 4, 2021
29 °C
739 ಬಿಪಿಎಲ್‌ ಪಡಿತರ ಚೀಟಿ ರದ್ದು, 1,066 ಚೀಟಿ ಎಪಿಎಲ್‌ ಆಗಿ ಪರಿವರ್ತನೆ

ಚಾಮರಾಜನಗರ: 1,805 ಅನರ್ಹ ಪಡಿತರ ಚೀಟಿ ಪತ್ತೆ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆರ್ಥಿಕವಾಗಿ ಸದೃಢರಾಗಿದ್ದು, ಅಂತ್ಯೋದಯ ಮತ್ತು ‌ಬಿಪಿಎಲ್‌ ಪಡಿತರ ಚೀಟಿಗಳನ್ನು ಹೊಂದಿರುವ 1,805 ಕುಟುಂಬಗಳನ್ನು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಪತ್ತೆ ಹಚ್ಚಿದೆ.

ಈ ವರ್ಷದ ಜನವರಿಯಿಂದ ಇಲ್ಲಿಯವರೆಗೆ ಅಧಿಕಾರಿಗಳು ನಡೆಸಿರುವ ಕಾರ್ಯಾಚರಣೆಯಲ್ಲಿ ಇಷ್ಟು ಅನರ್ಹ ಪಡಿತರ ಚೀಟಿಗಳು ಪತ್ತೆಯಾಗಿದ್ದು, ಈ ಪೈಕಿ 739 ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದುಗೊಳಿಸಲಾಗಿದ್ದು, 1,066 ಅಂತ್ಯೋದಯ/ಬಿಪಿಎಲ್‌ ಚೀಟಿಗಳನ್ನು ಎಪಿಎಲ್‌ ಪಡಿತರ ಚೀಟಿಗಳಾಗಿ ಪರಿವರ್ತಿಸಲಾಗಿದೆ. 

2011ರ ಜನಗಣತಿ ಪ್ರಕಾರ, ಜಿಲ್ಲೆಯಲ್ಲಿ 2,44,874 ಕುಟುಂಬಗಳಿವೆ. ಈವರೆಗೆ ಜಿಲ್ಲೆಯಲ್ಲಿ 35,770 ಕುಟುಂಬಗಳು ಅಂತ್ಯೋದಯ ಪಡಿತರ ಕಾರ್ಡ್‌ ಹಾಗೂ 2,55,970 ಕುಟುಂಬಗಳು ಬಿಪಿಎಲ್ ಕಾರ್ಡ್‌ ಹೊಂದಿವೆ. 4,355 ಕುಟುಂಬಗಳಿಗೆ ಎಪಿಎಲ್ ಪಡಿತರ ಕಾರ್ಡ್‌ ವಿತರಿಸಲಾಗಿದೆ.

ರಾಜ್ಯದಾದ್ಯಂತ ಅನರ್ಹ ಪಡಿತರ ಚೀಟಿಗಳ ಪತ್ತೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಜಿಲ್ಲೆಯಲ್ಲೂ ನಡೆಯುತ್ತಿದೆ.

ಜಿಲ್ಲೆಯಲ್ಲೂ ಆರ್ಥಿಕವಾಗಿ ಸದೃಢರಾಗಿರುವವರು ಸುಳ್ಳು ಮಾಹಿತಿ ನೀಡಿ ಅಂತ್ಯೋದಯ ಹಾಗೂ ಬಿಪಿಎಲ್‌ ಪಡಿತರ ಚೀಟಿಗಳನ್ನು ಮಾಡಿಸಿಕೊಂಡಿದ್ದು, ಅವರು ಸ್ವಯಂ ಪ್ರೇರಿತರಾಗಿ ಪಡಿತರ ಚೀಟಿಗಳನ್ನು ವಾಪಸ್‌ ನೀಡಬೇಕು ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೇಳಿದೆ. 

ಇಲಾಖೆ ನೀಡಿರುವ ಮಾಹಿತಿಯಂತೆ, ಜಿಲ್ಲೆಯಲ್ಲಿ ಆದಾಯ ತೆರಿಗೆ ಪಾವತಿಸುತ್ತಿರುವವರು, ದೊಡ್ಡ ಮನೆಗಳನ್ನು ಹೊಂದಿರುವವರು, ಶಿಕ್ಷಣ, ಸಾರಿಗೆ, ವಿದ್ಯುತ್, ರೈಲ್ವೆ, ಪೊಲೀಸ್, ಇತರೆ ಇಲಾಖೆಯಲ್ಲಿ ಸರ್ಕಾರಿ ನೌಕರಿ ಮಾಡುತ್ತಿರುವ ಕೆಲವರು ತಮ್ಮ ಹೆಸರನ್ನು ಬಿಟ್ಟು ಹಾಗೂ ತಮ್ಮ ಹೆಸರು ಸೇರಿ ಕುಟುಂಬದ ಇತರರ ಹೆಸರಿನಲ್ಲಿ ಪಡೆದಿದ್ದಾರೆ. ಸಹಕಾರ ಸಂಘಗಳ ಕಾಯಂ ಹಾಗೂ ಸ್ವಾಯತ್ತ ಸಂಸ್ಥೆ, ಮಂಡಳಿ, ಆಸ್ಪತ್ರೆಯ ನೌಕರರು, ವಕೀಲರು, ಆಡಿಟರ್‌ಗಳು, ದೊಡ್ಡ ಅಂಗಡಿ, ಹೋಟೆಲ್ ವರ್ತಕರು, ಗುತ್ತಿಗೆದಾರರು, ಕಮಿಷನ್‌ ಏಜೆಂಟರು, ಮನೆ, ಮಳಿಗೆ ಕಟ್ಟಡಗಳನ್ನು ಬಾಡಿ ನೀಡಿದವರೂ ಬಿಪಿಎಲ್ ಪಡಿತರ ಚೀಟಿ ಪಡೆದಿದ್ದಾರೆ. 

ಜನವರಿ ತಿಂಗಳಿಂದ ಇಲ್ಲಿಯವರೆಗೆ ಆಹಾರ ಇನ್‌ಸ್ಪೆಕ್ಟರ್‌ಗಳು ಹಾಗೂ ಶಿರಸ್ತೇದಾರರು 45 ಅಂತ್ಯೋದಯ ಚೀಟಿ, 694 ಬಿಪಿಎಲ್‌ ಚೀಟಿ ಸೇರಿ 739 ಪಡಿತರ ಚೀಟಿಗಳನ್ನು ರದ್ದುಪಡಿಸಿದ್ದಾರೆ. ಐದು ಅಂತ್ಯೋದಯ ಹಾಗೂ 21 ಬಿಪಿಎಲ್‌ ಪಡಿತರ ಚೀಟಿಗಳನ್ನು ಎಪಿಎಲ್‌ ಚೀಟಿಯಾಗಿ ಪರಿವರ್ತಿಸಿದ್ದಾರೆ. 

ಆದಾಯ ತೆರಿಗೆ ಪಾವತಿಸುತ್ತಿರುವವರು 92 ಅಂತ್ಯೋದಯ ಹಾಗೂ 705 ಬಿಪಿಎಲ್‌ ಪಡಿತರ ಚೀಟಿಗಳನ್ನು ಹೊಂದಿರುವುದು ಪತ್ತೆಯಾಗಿದ್ದು, 997 ಚೀಟಿಗಳನ್ನೂ ಎಪಿಎಲ್‌ ಆಗಿ ಪರಿವರ್ತಿಸಲಾಗಿದೆ.  

1.20 ಲಕ್ಷಕ್ಕೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವ 29 ಕುಟುಂಬಗಳು ಅಂತ್ಯೋದಯ ಹಾಗೂ 214 ಬಿಪಿಎಲ್‌ ಚೀಟಿಗಳನ್ನು ಹೊಂದಿರುವುದು ಪತ್ತೆಯಾಗಿದೆ. ಇವುಗಳನ್ನು ಕೂಡ ಎಪಿಎಲ್‌ ಚೀಟಿಗಳಾಗಿ ಪರಿವರ್ತಿಸಲಾಗಿದೆ.

‘ಸ್ವಯಂ ಪ್ರೇರಿತರಾಗಿ ವಾಪಸ್‌ ನೀಡಿ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಯೋಗಾನಂದ ಅವರು, ‘ಅನರ್ಹ ಪಡಿತರ ಚೀಟಿಗಳ ಪತ್ತೆಗಾಗಿ ಜನವರಿಯಿಂದಲೂ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಹುತೇಕ ಅನರ್ಹ ಪಡಿತರ ಚೀಟಿಗಳನ್ನು ನಮ್ಮ ಅಧಿಕಾರಿ ಹಾಗೂ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಕೆಲವರು ಸ್ವಯಂ ಪ್ರೇರಿತರಾಗಿ ಬಂದು ನೀಡಿದ್ದಾರೆ’ ಎಂದು ಹೇಳಿದರು. 

‘ಸುಳ್ಳು ಮಾಹಿತಿ ನೀಡಿ ಅಂತ್ಯೋದಯ/ಬಿಪಿಎಲ್‌ ಪಡಿತರ ಚೀಟಿ ಮಾಡಿಸಿಕೊಂಡವರು ಸ್ವಯಂ ಪ್ರೇರಿತರಾಗಿ ಇಲಾಖೆಯ ಕಚೇರಿಗೆ ಬಂದು ಪಡಿತರ ಚೀಟಿಗಳನ್ನು ವಾಪಸ್‌ ನೀಡಬಹುದು. ಇದೇ 30ರ ಒಳಗಾಗಿ ನೀಡಿದರೆ‌, ಅವರಿಗೆ ಯಾವುದೇ ದಂಡ ವಿಧಿಸುವುದಿಲ್ಲ. ಕಾನೂನು ಕ್ರಮವನ್ನೂ ಕೈಗೊಳ್ಳುವುದಿಲ್ಲ’ ಎಂದು ಅವರು ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು