ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಕೋವಿಡ್‌ ಲಾಕ್‌ಡೌನ್‌ನಿಂದ ಆಟೊ ಚಾಲಕರ ಬದುಕು ದಿಕ್ಕಾಪಾಲು

ಬಾಡಿಗೆ ಇಲ್ಲದೆ ಸಂಕಷ್ಟ, ಸಂಪಾದನೆಗೆ ಬೇರೆ ವೃತ್ತಿ ಹುಡುಕಿದರು
Last Updated 17 ಜೂನ್ 2021, 19:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಕೋವಿಡ್‌ 2ನೇ ಅಲೆ ಆಟೊ, ಟ್ಯಾಕ್ಸಿ ಚಾಲಕರ ಜೀವನದಲ್ಲೂ ಬಿರುಗಾಳಿ ಉಂಟು ಮಾಡಿದೆ. ಒಂದೂವರೆ ತಿಂಗಳಿಂದ ಸರಿಯಾಗಿ ಕೆಲಸ ಇಲ್ಲದೇ ಚಾಲಕರು, ಮಾಲೀಕರು ಕಂಗಾಲಾಗಿದ್ದಾರೆ.

ಸಾಲ ಮಾಡಿ ತೆಗೆದ ವಾಹನದ ಸಾಲದ ಕಂತು ಪಾವತಿಸಲೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಬಸ್‌ಗಳು ಓಡಾಡುತ್ತಿರುವವರೆ ಕಷ್ಟಪಟ್ಟು ಒಂದಿಷ್ಟು ರೂಪಾಯಿ ಸಂಪಾದಿಸುತ್ತಿದ್ದ ಅವರಿಗೆ ಈಗ ಒಂದು ರೂಪಾಯಿ ಸಂಪಾದನೆಯೂ ಇಲ್ಲ.

ನಗರ ಸೇರಿದಂತೆ ಹಾಗೂ ತಾಲ್ಲೂಕಿನಲ್ಲಿ 700ಕ್ಕೂ ಹೆಚ್ಚು ಪ್ರಯಾಣಿಕರ ಆಟೊಗಳು ಇವೆ. ಸರಕು ಸಾಗಣೆ ಆಟೊಗಳೂ ಇವೆ. ಸಾವಿರಾರು ಜನರು ಇವುಗಳನ್ನೇ ನಂಬಿದ್ದಾರೆ.ಬಹುತೇಕ ಕುಟುಂಬಗಳಿಗೆ ಚಾಲಕ ವೃತ್ತಿಯಲ್ಲಿರುವವೇ ದಿಕ್ಕು. ಅವರ ಸಂಪಾದನೆಯ ಮೇಲೆಯೇ ಜೀವನ ನಡೆಯುತ್ತದೆ.ಕಳೆದ ವರ್ಷದ ಲಾಕ್‌ಡೌನ್‌ ಅವಧಿಯಲ್ಲೂ ತೊಂದರೆಗೆ ಸಿಲುಕಿದ್ದ ಅವರ ಬದುಕು ಈ ವರ್ಷವೂ ಭಿನ್ನವಾಗಿಲ್ಲ. ಆಟೊಗಳನ್ನೇ ನಂಬಿಕೊಂಡಿದ್ದ ಜನರು ಈಗ ಬೀದಿಗೆ ಬಿದ್ದಿದ್ದಾರೆ. ಕೆಲವರು ಬೇರೆ ವೃತ್ತಿಯಲ್ಲಿ ತೊಡಗಿಕೊಂಡು ಸಂಪಾದನೆಯ ದಾರಿ ಕಂಡುಕೊಂಡಿದ್ದಾರೆ.

ಸರ್ಕಾರ ಚಾಲಕರಿಗೆ ₹3,000 ಪರಿಹಾರ ಧನ ಘೋಷಣೆ ಮಾಡಿದೆ. ಆದು ಎಷ್ಟು ಜನರಿಗೆ ಸಿಗುವುದೋ ಹೇಳಲು ಸಾಧ್ಯವಿಲ್ಲ. ಪರಿಹಾರ ಎಲ್ಲರಿಗೂ ಸಿಗುವುದಿಲ್ಲ. ಕೆಲವರಿಗಷ್ಟೇ ಬರುತ್ತದೆ ಎಂಬುದು ಆಟೊ ಚಾಲಕರ ಮಾತು.

‘₹3000 ಹಣ ಬಂದರೂ ಅದು ಯಾವುದಕ್ಕೂ ಸಾಲುವುದಿಲ್ಲ. ಅಡುಗೆ ಎಣ್ಣೆ, ಅಡುಗೆ ಅನಿಲ ಸೇರಿದಂತೆ ಅನೇಕ ವಸ್ತುಗಳ ಬೆಲೆ ಗಗನಕ್ಕೇರಿದೆ. ಬಂದ ಹಣದಿಂದ ಯಾವುದನ್ನು ಖರೀದಿಸಬೇಕು ಎಂಬುದು ತಿಳಿಯುತ್ತಿಲ್ಲ’ ಎಂದು ಆಟೊ ಚಾಲಕ ಸಮೀಉಲ್ಲಾ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತುರ್ತು ಸಂದರ್ಭದಲ್ಲಿ ಸೇವೆ: ಕೆಲವು ಆಟೊ ಚಾಲಕರಿಗೆ ತುರ್ತು ಪರಿಸ್ಥಿತಿಗಳಲ್ಲಿ ಬಾಡಿಗೆ ಸಿಗುತ್ತಿದೆ. ಕೆಲವರು ಇದನ್ನು ಕನಿಷ್ಠ ಬಾಡಿಗೆ ಪಡೆದು ಸೇವೆಯ ರೂಪದಲ್ಲಿ ಮಾಡುತ್ತಿದ್ದಾರೆ. ಇದೇ ಅವಕಾಶ ಎಂದು ಹೆಚ್ಚು ಹಣ ವಸೂಲಿ ಮಾಡುವವರೂ ಇಲ್ಲದಿಲ್ಲ.

‘ಕೋವಿಡ್‌ ಸಂಕಷ್ಟದ ಕಾಲದಲ್ಲಿ ಆಂಬುಲೆನ್ಸ್ ತಡ ಮಾಡಿದ ಸಂದರ್ಭದಲ್ಲಿ ಕೆಲವರು ಆಟೊಗಳಲ್ಲಿಯೇ ರೋಗಿಗಳನ್ನು ಕರೆ ತಂದು ಜೀವವನ್ನು ಉಳಿಸಿದ್ದಾರೆ. ತಾಲ್ಲೂಕಿನ ಜಾಗೇರಿ ಗ್ರಾಮದ ಗುಡ್ಡಗಾಡು ಪ್ರದೇಶದಲ್ಲಿ ಮಧ್ಯರಾತ್ರಿ ಜೋರು ಮಳೆ ಸುರಿಯುತ್ತಿತ್ತು. ಒಬ್ಬ ಗರ್ಭಿಣಿಗೆ ಹೊಟ್ಟೆ ನೋವು ಆರಂಭವಾಯಿತು. ಆಗ ಅವರು ಆಂಬುಲೆನ್ಸ್ ಅವರಿಗೆ ಕರೆ ಮಾಡಿದರು. ದೂರವಾಣಿ ಸರಿಯಾಗಿ ಸಂಪರ್ಕಕ್ಕೆ ಸಿಗಲಿಲ್ಲ. ನಂತರ ಆಟೊ ಚಾಲಕನಿಗೆ ಕರೆ ಮಾಡಿದರು. ತಕ್ಷಣ ಸ್ಪಂದಿಸಿದ ಚಾಲಕ, ತನ್ನ ಆಟೊದಲ್ಲಿ ಮಹಿಳೆಯನ್ನು ಕರೆದುಕೊಂಡು ಬಂದು ಆಸ್ಪತ್ರೆಗೆ ದಾಖಲಿಸಲು ನೆರವಾದ. ಇಂತಹ ಹಲವು ಘಟನೆಗಳು ನಡೆದಿವೆ’ ಎಂದು ಹೇಳುತ್ತಾರೆ ಆಟೊ ಚಾಲಕ ಸುಜಯ್.

ಬೇರೆ ವೃತ್ತಿ ನೋಡಿಕೊಂಡ ಚಾಲಕರು

ಆಟೊವನ್ನೇ ನಂಬಿಕೊಂಡು ಜೀವನ ನಡೆಸುವವರು ಕೆಲವರಾದರೆ, ಇನ್ನೂ ಕೆಲವರು ಲಾಕ್‌ಡೌನ್‌ ಅವಧಿಯಲ್ಲಿ ಬೇರೆ ಕೆಲಸ ಮಾಡಿ, ಜೀವನಕ್ಕೆ ಬೇಕಾದಷ್ಟು ಸಂಪಾದನೆ ಮಾಡುತ್ತಿದ್ದಾರೆ.

‘ಲಾಕ್ ಡೌನ್ ಸಂದರ್ಭದಲ್ಲಿ ಅನೇಕರು ಚಾಲಕರು ತೊಂದರೆಗೆ ಸಿಲುಕಿದ್ದಾರೆ. ಕೆಲವರುತಮ್ಮ ಜೀವನವನ್ನು ನಡೆಸಲು ಬೇರೆ ಬೇರೆ ವೃತ್ತಿಯನ್ನು ಮಾಡುತ್ತಿದ್ದಾರೆ. ತರಕಾರಿ, ಹಣ್ಣು ವ್ಯಾಪಾರ, ಹೋಟೇಲ್, ಬೇಕರಿ, ಗಾರೆಕೆಲಸ, ಕೃಷಿ, ಟೈಲರ್, ಮಟನ್ ಸ್ಟಾಲ್ ಸೇರಿದಂತೆ ಅನೇಕ ವೃತ್ತಿಗಳನ್ನು ಮಾಡಿ ಜೀವನ ಸಾಗಿಸುತ್ತಿದ್ದಾರೆ. ಜೀವನ ನಡೆಸುವುದಕ್ಕೆ ಯಾವ ವೃತ್ತಿಯಾದರೇನು? ಕೆಲಸ ಮಾಡಿ ಹೆಂಡತಿ ಮಕ್ಕಳನ್ನು ಸಾಕುತ್ತಿದ್ದಾರೆ’ ಎಂದು ಕೊಳ್ಳೇಗಾಲ ಪ್ರಯಾಣಿಕರ ಆಟೊ ಚಾಲಕರ ಸಂಘದ ಅಧ್ಯಕ್ಷ ಲೋಕೇಶ್ ಅವರು ‘ಪ್ರಜಾವಾಣಿ’ಗೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT