ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ: ಅಪರಾಧ ಪತ್ತೆಗೆ ಶ್ವಾನದಳ ಸ್ಥಾಪನೆಗೆ ಚಿಂತನೆ

ಕಡಿಮೆಯಾದ ಚುರುಕುತನ, ನಿವೃತ್ತಿ ಅಂಚಿನಲ್ಲಿ ‘ರಾಣಾ’
Last Updated 5 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಅರಣ್ಯ ಅಪರಾಧಗಳ ಪತ್ತೆಗಾಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ‘ರಾಣಾ’ ಎಂಬ ಶ್ವಾನ ನಿವೃತ್ತಿಯ ಅಂಚಿಗೆ ಬರುತ್ತಿದ್ದಂತೆಯೇ, ಹೊಸ ಶ್ವಾನದಳವನ್ನು ಸ್ಥಾಪಿಸಲು ಅರಣ್ಯ ಇಲಾಖೆ ಚಿಂತನೆ ನಡೆಸುತ್ತಿದೆ.

ಎರಡು ಶ್ವಾನಗಳನ್ನು ಸಾಕಿ, ಅವುಗಳಿಗೆ ಅಪರಾಧ ಪತ್ತೆ ತರಬೇತಿ ನೀಡುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಯೋಚಿಸುತ್ತಿದ್ದಾರೆ.

‘ರಾಣಾನಿಗೆ ನಿವೃತ್ತಿ ವಯಸ್ಸು ಹತ್ತಿರವಾಗುತ್ತಿದೆ. ಅರಣ್ಯದಲ್ಲಿ ನಡೆಯುವ ಅಪರಾಧ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಶ್ವಾನಗಳ ಅವಶ್ಯಕತೆ ಇಲಾಖೆಗೆ ಇದೆ. ಹಾಗಾಗಿ ಎರಡು ಶ್ವಾನಗಳನ್ನೊಳಗೊಂಡ ದಳವನ್ನು ಸ್ಥಾಪಿಸಲು ಚಿಂತನೆ ನಡೆಯುತ್ತಿದೆ. ಕೆಲವು ಸಮಯದಲ್ಲಿ ಇದು ಕಾರ್ಯಗತವಾಗಲಿದೆ’ ಎಂದು ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಟಿ.ಬಾಲಚಂದ್ರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೊದಲ ಶ್ವಾನ: ಅರಣ್ಯ ಇಲಾಖೆ ರಾಜ್ಯದಲ್ಲೇ ಮೊದಲ ಬಾರಿಗೆ 2015ರಲ್ಲಿ ಬಂಡೀಪುರದಲ್ಲಿ ತರಬೇತಿ ಹೊಂದಿದ ‘ರಾಣಾ’ನನ್ನು ಅಪರಾಧ ಪತ್ತೆಗಾಗಿ ನಿಯೋಜಿಸಿತ್ತು.ಜರ್ಮನ್‌ ಷಫರ್ಡ್‌ ತಳಿಯ ‘ರಾಣಾ’ ತನ್ನ ಚುರುಕು ತನದಿಂದಾಗಿ ಇಲಾಖೆಯಲ್ಲಿ ಮನೆ ಮಾತಾಗಿತ್ತು.

ಅಧಿಕಾರಿಗಳಿಂದ ಪತ್ತೆ ಹಚ್ಚಲು ಸಾಧ್ಯವಾಗದೇ ಇದ್ದ ಅನೇಕ ಪ್ರಕರಣಗಳನ್ನೂ ‘ರಾಣಾ’ ಭೇದಿಸಿತ್ತು. ವನ್ಯಜೀವಿಗಳ ಇರುವಿಕೆ ಹಾಗೂ ಜಾಡನ್ನು ಹಲವು ಕಿ.ಮೀ ದೂರದಿಂದಲೇ ಪತ್ತೆ ಹಚ್ಚುವುದರಲ್ಲೂ ನಿಷ್ಣಾತವಾಗಿದ್ದಶ್ವಾನ, ಈಗ ನಿವೃತ್ತಿಯ ಅಂಚಿಗೆ ತಲುಪಿದೆ. ಮುಂದಿನ ವರ್ಷ ಸೇವೆಯಿಂದ ಬಿಡುಗಡೆಯಾಗಲಿದೆ.

ಮಧ್ಯಪ್ರದೇಶದ ಭೋಪಾಲ್‌ನಲ್ಲಿ 11 ತಿಂಗಳು ತರಬೇತಿ ಪಡೆದು ಅರಣ್ಯ ಇಲಾಖೆಗೆ ಸೇರಿದ್ದ ರಾಣಾಗೆ ಈಗ ಏಳು ವರ್ಷ ವಯಸ್ಸು.

ಆರಂಭದಲ್ಲಿ ಪ್ರಕಾಶ್‌ ಎಂಬುವವರು ಶ್ವಾನದ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದರು. ಅವರ ವರ್ಗಾವಣೆ ನಂತರ ಕಾಳ ಎಂಬುವವರು ನೋಡಿಕೊಳ್ಳುತ್ತಿದ್ದಾರೆ. ಅವರ ಮಾತನ್ನು ಬಿಟ್ಟು ಬೇರೆ ಯಾರು ಹೇಳಿದ್ದನ್ನೂ ಅದು ಕೇಳುವುದಿಲ್ಲ. ಬೇರೆಯವರು ಕೊಟ್ಟ ಆಹಾರವನ್ನೂ ಅದು ಸೇವಿಸು‌ವುದಿಲ್ಲ.

‘ಆದರೆ, ರಾಣಾನಲ್ಲಿ ಈಗ ಮೊದಲಿನ ಚುರುಕುತನವಿಲ್ಲ.ಹೇಳಿದ ಮಾತನ್ನು ಕೇಳುತ್ತಿಲ್ಲ, ಹೆಚ್ಚು ಒತ್ತಡ ಹಾಕಿದರೆ ಕಚ್ಚಲು ಮುಂದಾಗುತ್ತದೆ’ ಎಂದು ಹೇಳುತ್ತಾರೆ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT