ಭಾನುವಾರ, ಸೆಪ್ಟೆಂಬರ್ 19, 2021
24 °C

ರಾಜ್ಯದ ಹುಲಿ ಸಂರಕ್ಷಣೆಯ ಪ್ರಯತ್ನಕ್ಕೆ ಅಂತರರಾಷ್ಟ್ರೀಯ ಸಿಎ|ಟಿಎಸ್‌ ಮಾನ್ಯತೆ ಗರಿ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ರಾಜ್ಯದ ಐದು ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಕನ್ಸರ್ವೇಶನ್‌ ಅಶ್ಯೂರ್ಡ್‌| ಟೈಗರ್‌ ಸ್ಟ್ಯಾಂಡರ್ಡ್‌ (ಸಿಎ|ಟಿಎಸ್‌) ಮಾನ್ಯತೆ ಸಿಕ್ಕಿದೆ.

ಈ ಬಾರಿ ದೇಶದ 14 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಸಿಎ|ಟಿಎಸ್‌ ಮಾನ್ಯತೆ ನೀಡಲಾಗಿದ್ದು, ಅದರಲ್ಲಿ ಬಂಡೀಪುರವೂ ಒಂದಾಗಿರುವುದು ವಿಶೇಷ. ಸಿಎ|ಟಿಎಸ್‌ ಎನ್ನುವುದು ಹುಲಿ ಸಂರಕ್ಷಣೆಗೆ ಸಂಬಂಧಿಸಿ ಜಾಗತಿಕ ಮಟ್ಟದಲ್ಲಿ ಅಂಗೀಕರಿಸಿರುವ ಸಂರಕ್ಷಣಾ ಮಾನದಂಡವಾಗಿದ್ದು, ಹುಲಿಗಳ ರಕ್ಷಣೆ ಹಾಗೂ ಸಂರಕ್ಷಣೆಗೆ ಕೈಗೊಂಡ ಕ್ರಮಗಳು ಹಾಗೂ ಅನುಸರಿಸುತ್ತಿರುವ ವಿಧಾನಗಳನ್ನು ಆಧರಿಸಿ ಮಾನ್ಯತೆ ನೀಡಲಾಗುತ್ತದೆ. 

ಜಗತ್ತಿನಾದ್ಯಂತ ಹುಲಿ ಸಂರಕ್ಷಣೆಯ ಉದ್ದೇಶದಿಂದ, ಜಾಗತಿಕ ಮಟ್ಟದ ಹುಲಿ ತಜ್ಞರು ಹಾಗೂ ಸಂರಕ್ಷಿತ ಪ್ರದೇಶಗಳ ತಜ್ಞರು ಒಟ್ಟಾಗಿ ಸಿಎ|ಟಿಸ್‌ ಮಾನದಂಡಗಳನ್ನು ರೂಪಿಸಿದ್ದಾರೆ. ಭಾರತ ಸೇರಿದಂತೆ ಹುಲಿಗಳು ಹೆಚ್ಚಿರುವ ಪ್ರದೇಶಗಳನ್ನು ಹೊಂದಿರುವ ಏಳು ರಾಷ್ಟ್ರಗಳಲ್ಲಿ (ಬಾಂಗ್ಲಾದೇಶ, ಭೂತಾನ್‌, ಕಾಂಬೋಡಿಯಾ, ಮ್ಯಾನ್ಮಾರ್‌, ನೇಪಾಳ ಮತ್ತು ವಿಯೆಟ್ನಾಂ) ಅನುಷ್ಠಾನಗೊಳಿಸಲಾಗುತ್ತಿದೆ. 

ದೇಶದಲ್ಲಿ ಜಾಗತಿಕ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಗ್ಲೋಬಲ್‌ ಟೈಗರ್‌ ಫೋರಂ (ಜಿಟಿಎಫ್‌) ಹಾಗೂ ವರ್ಲ್ಡ್‌ ವೈಲ್ಡ್‌ಲೈಫ್‌ ಫಂಡ್‌ ಇಂಡಿಯಾ ಸಂಸ್ಥೆ ಜಂಟಿಯಾಗಿ ಜಾರಿಗೊಳಿಸುವ ಹೊಣೆ ಹೊತ್ತಿವೆ.

17 ಮಾನದಂಡ: ಹುಲಿ ಸಂರಕ್ಷಣೆ ಮಹತ್ವ ಹಾಗೂ ಸ್ಥಿತಿಗತಿ, ನಿರ್ವಹಣೆ, ಸಮುದಾಯ, ಪ್ರವಾಸೋದ್ಯಮ, ರಕ್ಷಣೆ, ಆವಾಸದ ನಿರ್ವಹಣೆ ಮತ್ತು ಹುಲಿಗಳ ಸಂಖ್ಯೆ– ಈ ಏಳು ವಿಭಾಗಗಳ 17 ಮಾನದಂಡಗಳನ್ನು ಪರಿಗಣಿಸಿ ಮಾನ್ಯತೆ ನೀಡಲಾಗುತ್ತಿದೆ. 

ಸಂರಕ್ಷಿತ ಪ್ರದೇಶದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಜೈವಿಕ ಮಹತ್ವ, ಪ್ರದೇಶದ ವಿನ್ಯಾಸ, ಕಾನೂನಾತ್ಮಕ ಸ್ಥಿತಿಗತಿ, ನಿಯಂತ್ರಣ ನಿಯಮಗಳು ಹಾಗೂ ಅವುಗಳ ಪಾಲನೆ, ನಿರ್ವಹಣಾ ಯೋಜನೆ, ಸಿಬ್ಬಂದಿ ಸಂಖ್ಯೆ, ಮೂಲಸೌಕರ್ಯ, ಸೌಲಭ್ಯಗಳು, ಸಲಕರಣೆಗಳು, ಆರ್ಥಿಕ ಸಂಪನ್ಮೂಲಗಳ ಸುಸ್ಥಿರತೆ, ಮಾನವ–ವನ್ಯಜೀವಿ ಸಂಘರ್ಷ, ಸಮುದಾಯಗಳೊಂದಿಗೆ ಸಂಬಂಧ, ಆವಾಸ ಮತ್ತು ಬಲಿ ಪ್ರಾಣಿಗಳ ನಿರ್ವಹಣೆ ವಿಚಾರಗಳು ಮಾನದಂಡಗಳ ಪಟ್ಟಿಯಲ್ಲಿವೆ. ಮಾನ್ಯತೆಯು ಮೂರು ವರ್ಷಗಳ ಅವಧಿಗೆ ಜಾರಿಯಲ್ಲಿರುತ್ತದೆ. ಆ ಬಳಿಕ ಮತ್ತೆ ನವೀಕರಣಗೊಳಿಸಲಾಗುತ್ತದೆ. 

‘ಸಂರಕ್ಷಣೆಗೆ ದೊರಕಿದ ಜಾಗತಿಕ ಮನ್ನಣೆ’

912.04 ಚದರ ಕಿ.ಮೀ ವಿಸ್ತೀರ್ಣ ಹೊಂದಿರುವ ಬಂಡೀಪುರದಲ್ಲಿ 130ಕ್ಕೂ ಹೆಚ್ಚು ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್‌.ಆರ್‌.ನಟೇಶ್‌, ‘ನಮ್ಮ ಹುಲಿ ಸಂರಕ್ಷಣಾ ಪ್ರಯತ್ನಕ್ಕೆ ಸಿಕ್ಕಿದ ಮನ್ನಣೆ ಇದು. ಮಾನ್ಯತೆ ನೀಡುವ ಸಂಸ್ಥೆಯ ತಂಡ ಬಂಡೀಪುರಕ್ಕೆ ಬಂದು ಇಲ್ಲಿನ ಸಂರಕ್ಷಣಾ ಕಾರ್ಯ, ಅನುಸರಿಸುತ್ತಿರುವ ವಿಧಾನಗಳ ಬಗ್ಗೆ ವಿಸ್ತೃತ ಅಧ್ಯಯನ ನಡೆಸಿತ್ತು’ ಎಂದರು.

----------

ಸಿಎ|ಟಿಎಸ್‌ ಮಾನ್ಯತೆ ಸಿಕ್ಕಿರುವುದು ಖುಷಿಯ ವಿಚಾರ. ವ್ಯಾಘ್ರನ ಸಂತತಿ ಉಳಿಸುವ ರಾಜ್ಯದ ಪ್ರಯತ್ನವನ್ನು ಪ್ರೋತ್ಸಾಹಿಸಿದಂತಾಗಿದೆ
–ಮಲ್ಲೇಶಪ್ಪ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು