ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳಿಗೆ ಶಿಕ್ಷಣ ಕೊಡಿಸಿ, ಬಾಲ್ಯ ವಿವಾಹ ತಪ್ಪಿಸಿ: ಸ್ವಾಮೀಜಿ

ಜಿಲ್ಲಾಡಳಿತದಿಂದ ವಿಜೃಂಭಣೆಯ ಭಗೀರಥ ಜಯಂತಿ; ಎಸ್‌ಟಿ, ಎಸ್‌ಸಿಗೆ ಸೇರಿಸಲು ಶಾಸಕ ಪುಟ್ಟರಂಗಶೆಟ್ಟಿ ಮನವಿ
Last Updated 8 ಮೇ 2022, 15:17 IST
ಅಕ್ಷರ ಗಾತ್ರ

ಚಾಮರಾಜನಗರ: ‘ಉಪ್ಪಾರ ಸಮುದಾಯದ ಸ್ಥಿತಿ ಶೋಚನೀಯವಾಗಿದ್ದು, ಅನಕ್ಷರತೆ–ಬಡತನ, ಮೂಢನಂಬಿಕೆ ಸಮಾಜವನ್ನು ಕಿತ್ತು ತಿನ್ನುತ್ತಿವೆ. ಇದರಿಂದ ಹೊರ ಬರಬೇಕಾದರೆ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಬಾಲ್ಯವಿವಾಹ ಮಾಡಬೇಡಿ’ ಎಂದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಭಗೀರಥ ಪೀಠಾಧ್ಯಕ್ಷ ಪುರುಷೋತ್ತಮಾನಂದಪುರಿ ಸ್ವಾಮೀಜಿ ಭಾನುವಾರ ಇಲ್ಲಿ ತಿಳಿಸಿದರು.

ಜಿಲ್ಲಾಡಳಿತ ಆಯೋಜಿಸಿದ್ದ ಭಗೀರಥ ‌ಜಯಂತಿಯಲ್ಲಿ ಮಾತನಾಡಿದಅವರು ‘ಒಂದು ಕಾಲದಲ್ಲಿ ಉಪ್ಪಾರ ಸಮುದಾಯ ಶ್ರೀಮಂತವಾಗಿತ್ತು. ತಯಾರಿಸುತ್ತಿದ್ದ ಉಪ್ಪಿಗೆ ತೆರಿಗೆ ಪಾವತಿಸುತ್ತಿತ್ತು. ಬದಲಾದ ಕಾಲಘಟ್ಟದಲ್ಲಿ ಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದೆ ಉಳಿದಿದೆ. ಸಮುದಾಯದ ಶೈಕ್ಷಣಿಕ ಪ್ರಗತಿ ಶೇ 55ಕ್ಕಿಂತ ಕಡಿಮೆ ಇದೆ. ಮೂಢನಂಬಿಕೆ ಹೆಚ್ಚಿದೆ. ಹೆಣ್ಣುಮಕ್ಕಳು ವಯಸ್ಕರಾಗುವವರೆಗೂ ಮದುವೆ ಮಾಡಲು ಪೋಷಕರು ಮುಂದಾಗಬಾರದು. ಮಕ್ಕಳಿಗೆ ಶಿಕ್ಷಣ ನೀಡುವುದರ ಜೊತೆಗೆ ಸಂಸ್ಕಾರವನ್ನೂ ನೀಡಬೇಕು’ ಎಂದು ಸಲಹೆ ನೀಡಿದರು.

‘ಪ್ರಯತ್ನಕ್ಕೆ ಮತ್ತೊಂದು ಹೆಸರೇ ಭಗೀರಥ. ಅಸಾಮಾನ್ಯವಾದ ಕೆಲಸವನ್ನು ಛಲ ಬಿಡದೆ ಕಾರ್ಯರೂಪಕ್ಕೆ ತಂದವರು. ಮನುಕುಲದ ಒಳಿತಿಗಾಗಿ ಶ್ರಮಿಸಿದವರು’ ಎಂದು ಹೇಳಿದರು.

ಶಾಸಕ ಪುಟ್ಟರಂಗಶೆಟ್ಟಿ ಮಾತನಾಡಿ ‘ಉಪ್ಪಾರ ಸಮುದಾಯವನ್ನು ಪರಿಶಿಷ್ಟ ಜಾತಿ ಇಲ್ಲವೇ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ಎಂಬ ಬೇಡಿಕೆಯನ್ನು ಸರ್ಕಾರದ ಮುಂದಿಟ್ಟಿದ್ದೇವೆ. ಈಗಾಗಲೇ ಕುಲಶಾಸ್ತ್ರೀಯ ಅಧ್ಯಯನ ನಡೆದಿದೆ. ವರದಿ ಬರಬೇಕಿದೆ. ಸಮಾಜದ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿದ ಬಳಿಕವಷ್ಟೇ ಸರ್ಕಾರ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಸಾಧ್ಯ’ ಎಂದರು.

ಚುಡಾ ಅಧ್ಯಕ್ಷ ಕೆ.ಬಿ.ಶಾಂತಮೂರ್ತಿ ಕುಲಗಾಣ ಮಾತನಾಡಿದರು. ತಿಪಟೂರಿನ ನಿವೃತ್ತ ತಹಶೀಲ್ದಾರ್‌ ಎನ್‌.ಚನ್ನಬಸಪ್ಪ ಭಗೀರಥರ ಚರಿತ್ರೆ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾ, ಮಂಗಲ 88 ಗಡಿಯ ಪೀಠಾಧ್ಯಕ್ಷ ಮಂಜುನಾಥ ಸ್ವಾಮೀಜಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್‌, ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿದೇವಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಉಪ್ಪಾರ ಸಮುದಾಯದ ಮುಖಂಡರಾದ ಮಂಗಲ ಶಿವಕುಮಾರ್‌, ಹನುಮಂತ ಶೆಟ್ಟಿ, ಮಹದೇವಶೆಟ್ಟಿ, ಜಿ.ಎಂ.ಗಾಡ್ಕರ್‌, ಚಿಕ್ಕ ಮಹದೇವ್‌, ವೆಂಕೋಬಾ, ಗಡಿ ಯಜಮಾನರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ ಇದ್ದರು.

ಅದ್ದೂರಿ ಮೆರವಣಿಗೆಗೆ ಸಚಿವ ಚಾಲನೆ

ವೇದಿಕೆ ಸಮಾರಂಭಕ್ಕಿಂತಲೂ ಮೊದಲು ಭಗೀ‌ರಥ ಮಹರ್ಷಿಗಳ ಭಾವಚಿತ್ರದ ಅದ್ದೂರಿ ಮೆರವಣಿಗೆ ನಗರದಲ್ಲಿ ನಡೆಯಿತು.

ಸತ್ಯಮಂಗಲ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತುಂಬಿದವು. ಕಂಡಾಯ, ಸೂರಪಾನಿ, ಸತ್ತಿಗೆಗಳು ಮೆರವಣಿಗೆಗೆ ಕಳೆ ಕಟ್ಟುವಂತೆ ಮಾಡಿದವು.

‘ಯಾಕೆ ರದ್ದಾಯಿತೋ ಗೊತ್ತಿಲ್ಲ’

ರಾಜ್ಯ ಮಟ್ಟದ ಭಗೀರಥ ಜಯಂತಿಯನ್ನು ಜಿಲ್ಲೆಯಲ್ಲಿ ಆಚರಿಸುವ ಸಂಬಂಧ ಉಂಟಾಗಿರುವ ಗೊಂದಲದ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ‘ಚಾಮರಾಜನಗರದಲ್ಲಿ ಜಯಂತಿ ಆಚರಿಸಲು ಸರ್ಕಾರ ತೀರ್ಮಾನಿಸಿತ್ತು. ನಮಗಾಗಲಿ, ಶಾಸಕ ಪುಟ್ಟರಂಗಶೆಟ್ಟಿ ಅವರಿಗಾಗಲಿ ಇದರ ಬಗ್ಗೆ ಮಾಹಿತಿ ಇರಲಿಲ್ಲ. ನಂತರ ರದ್ದಾಗಿ, ಚಿತ್ರದುರ್ಗ ಜಿಲ್ಲೆಗೆ ವರ್ಗಾವಣೆಗೊಂಡಿತು. ಮುಖ್ಯಮಂತ್ರಿ ಇಲ್ಲಿಗೆ ಬರುವುದಿಲ್ಲ ಎಂಬ ಕಾರಣಕ್ಕೋ ಅಥವಾ ಬೇರೆ ಯಾವ ಕಾರಣಕ್ಕೋ ರದ್ದಾಯಿತು ಎಂಬುದು ಗೊತ್ತಿಲ್ಲ. ಆದರೆ, ‘ಚಿತ್ರದುರ್ಗದಲ್ಲಿ ಬೇರೆ ದಿನ ಕಾರ್ಯಕ್ರಮ ಹಮ್ಮಿಕೊಳ್ಳೋಣ. ಖಂಡಿತ ಬರುವೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುದ್ದಾಗಿ ತಿಳಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT