ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶ ವಿಭಜನೆಗೆ ಹೊರಟ ಕಾಂಗ್ರೆಸ್‌: ಗೋ ಮಧುಸೂದನ್‌

Published 25 ಏಪ್ರಿಲ್ 2024, 4:35 IST
Last Updated 25 ಏಪ್ರಿಲ್ 2024, 4:35 IST
ಅಕ್ಷರ ಗಾತ್ರ

ಚಾಮರಾಜನಗರ: ‘ಸಂಪತ್ತಿನ ಹಂಚಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಆದ್ಯತೆ ನೀಡುವುದಾಗಿ ಹೇಳುವ ಮೂಲಕ ಕಾಂಗ್ರೆಸ್‌ ಈ ದೇಶವನ್ನು ಮತ್ತೆ ವಿಭಜನೆ ಮಾಡಲು ಹೊರಟಿದೆ. ಅಲ್ಲದೇ ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸಲು ಮುಂದಾಗಿದೆ’ ಎಂದು ಬಿಜೆಪಿ ಮುಖಂಡ, ವಿಧಾನ ಪರಿಷತ್‌ ಮಾಜಿ ಸದಸ್ಯ ಗೋ.ಮಧುಸೂದನ್‌ ಬುಧವಾರ ದೂರಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಸಿದ್ಧಾಂತಕ್ಕೆ ವಿರುದ್ಧವಾಗಿ ಕಾಂಗ್ರೆಸ್‌ ನಡೆದುಕೊಳ್ಳುತ್ತಿದೆ. ಮೀಸಲಾತಿ ನೀತಿಗೆ ಅದು ಕೈ ಹಾಕಿದೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಡುವ ಬಗ್ಗೆ ಪ್ರಸ್ತಾಪಿಸಿದೆ.  ಹುಟ್ಟಿನಿಂದ ಅಸ್ಪೃಶ್ಯರಾದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡಬೇಕು ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನ ರಚನಾ ಸಭೆಯಲ್ಲಿ ಹೇಳಿದ್ದರು. ಹಾಗಾಗಿ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ನೀಡಲಾಗಿದೆ. ಇತರ ಹಿಂದುಳಿದ ವರ್ಗಗಳಿಗೂ ಮೀಸಲಾತಿ ಕಲ್ಪಿಸಬಹುದು ಎಂದೂ ಅವರು ಹೇಳಿದ್ದಾರೆ. ಹಾಗಾಗಿ, ಎಸ್‌ಸಿ, ಎಸ್‌ಟಿಗಳಿಗೆ ಶೇ 24ರಷ್ಟು ಮತ್ತು ಉಳಿದ ಶೇ 26ರಷ್ಟು ಮೀಸಲಾತಿ ಇತರೆ ಹಿಂದುಳಿದ ವರ್ಗಗಳಿಗೆ ಮೀಸಲಾಗಿದೆ’ ಎಂದರು. 

‘ಕಾಂಗ್ರೆಸ್‌ ಸರ್ಕಾರ ಈ ದೇಶದಲ್ಲಿ ಶೇ 18ರಷ್ಟು ಇರುವ ಮುಸ್ಲಿಮರಿಗೆ ಮೀಸಲಾತಿ ನೀಡಲು  ಮುಂದಾಗಿದೆ. ಮುಸ್ಲಿಮರು ಅಸ್ಪಶ್ಯ ಜಾತಿಗಳಲ್ಲ. ಹಾಗಾಗಿ, ಅವರಿಗೆ ಮೀಸಲಾತಿ ನೀಡುವುದು ಸಂವಿಧಾನವನ್ನು ಉಲ್ಲಂಘಿಸಿದಂತೆ. ಶೇ 50ಕ್ಕಿಂತ ಹೆಚ್ಚು ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲದೇ ಇರುವುದರಿಂದ, ಮುಸ್ಲಿಮರಿಗೆ ಮೀಸಲಾತಿ ನೀಡಿದರೆ ಇತರ ಹಿಂದುಳಿದ ವರ್ಗಗಳಿಗೆ ಸೌಲಭ್ಯ ತಪ್ಪಲಿದೆ’ ಎಂದರು. 

‘ಸಂಪತ್ತು ಹಂಚಿಕೆಯ ಬಗ್ಗೆಯೂ ಕಾಂಗ್ರೆಸ್‌ ಪ್ರಸ್ತಾಪಿಸಿದೆ. ಅದರಲ್ಲಿ ಮುಸ್ಲಿಮರಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದೆ. ಹಿಂದೆ, ಪ್ರಧಾನಿ ಮನಹೋಹನ್‌ ಸಿಂಗ್‌ ಕೂಡ, ಸಂಪತ್ತು ಹಂಚಿಕೆಯಲ್ಲಿ ಅಲ್ಪಸಂಖ್ಯಾತರಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದರು. ಈ ದೇಶದಲ್ಲಿ ಹಿಂದೂಗಳ ಬಳಿಯಲ್ಲಿ ಆಸ್ತಿ ಹೆಚ್ಚಾಗಿದೆ. ಒಂದು ವೇಳೆ ಸಂಪತ್ತಿನ ಹಂಚಿಕೆಯಾದರೆ ಹಿಂದೂಗಳು ಆಸ್ತಿ ಕಳೆದುಕೊಳ್ಳಬೇಕಾಗುತ್ತದೆ. ದೇಶವನ್ನು ಮತ್ತೆ ಹಿಂದೂ ಸ್ತಾನ ಮತ್ತು ಪಾಕಿಸ್ತಾನ ಎಂದು ವಿಭಜಿಸಲು ಹೊರಟಿದೆ’ ಎಂದರು. 

ಬಿಜೆಪಿ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಜಿ.ನಾರಾಯಣ ಪ್ರಸಾದ್‌, ಮಹಿಳಾ ಮೋರ್ಚಾಜಿಲ್ಲಾ ಅಧ್ಯಕ್ಷೆ ಕಮಲಮ್ಮ, ಪ್ರಧಾನ ಕಾರ್ಯದರ್ಶಿ ಶೈಲಾ, ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ, ಮುಖಂಡ ಪರಶಿವಮೂರ್ತಿ, ಜಿಲ್ಲಾ ವಕ್ತಾರ ಕಾಡಹಳ್ಳಿ ಕುಮಾರ್‌ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT