ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌.ವಿಶ್ವನಾಥ್‌ ಪರ ಪಕ್ಷ, ಸರ್ಕಾರ ಇದೆ: ಆರ್‌.ಅಶೋಕ, ವಿಜಯೇಂದ್ರ

Last Updated 1 ಡಿಸೆಂಬರ್ 2020, 11:23 IST
ಅಕ್ಷರ ಗಾತ್ರ

ಕೊಳ್ಳೇಗಾಲ: ವಿಧಾನ ಪರಿಷತ್ತಿಗೆ ನಾಮ ನಿರ್ದೇಶನಗೊಂಡಿರುವ ಅಡಗೂರು ಎಚ್‌.ವಿಶ್ವನಾಥ್‌ ಅವರ ಪರವಾಗಿ ಪಕ್ಷ, ಸರ್ಕಾರ ನಿಂತಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ ಹಾಗೂ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದರು.

ಕೊಳ್ಳೇಗಾಲದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅಶೋಕ ಅವರು, ‘ಹೈಕೋರ್ಟ್‌ ನೀಡಿರುವ ಮಧ್ಯಂತರ ಆದೇಶದಿಂದ ವಿಶ್ವನಾಥ್‌ ಅವರು ದೃತಿಗೆಡವುದು ಬೇಡ. ಅವರ ಜೊತೆ ನಾವಿದ್ದೇವೆ.ಸುಪ್ರೀಂಕೋರ್ಟ್ ಕೊಟ್ಟಿರುವ ತೀರ್ಪಿನ ಪ್ರಕಾರ, ಹೈಕೋರ್ಟ್ ಈ ರೀತಿ ಅಭಿಪ್ರಾಯಪಟ್ಟಿದೆ ಎಂದು ವಕೀಲರು ಹೇಳಿದ್ದಾರೆ. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಪಕ್ಷ ಈಗಾಗಲೇ ತೀರ್ಮಾನ ಮಾಡಿದೆ’ ಎಂದರು.

‘ಕೋರ್ಟ್‌ನಲ್ಲಿ ಹಿನ್ನಡೆಯಾಗಿರುವುದರಿಂದ, ವಕೀಲರು ಸರಿಯಾಗಿ ವಾದ ಮಂಡಿಸಲಿಲ್ಲ ಎಂದು ನೋವಿನಿಂದಎಚ್.ವಿಶ್ವನಾಥ್ ಮಾತನಾಡಿದ್ದಾರೆ. ಆದರೆ ನಮ್ಮ ವಕೀಲರು ಉತ್ತಮವಾಗಿ ವಾದ ಮಂಡಿಸಿದ್ದಾರೆ’ ಎಂದರು.

ಇದೇ ವಿಚಾರವಾಗಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಬಿ.ವೈ.ವಿಜಯೇಂದ್ರ ಅವರು, ‘ಎಚ್‌.ವಿಶ್ವನಾಥ್‌ ಅವರು ಸಚಿವರಾಗಲು ಅರ್ಹರಲ್ಲ ಎಂದು ಹೈಕೋರ್ಟ್‌ ಮಧ್ಯಂತರ ಆದೇಶ ನೀಡಿರುವುದು ಆಘಾತ ತಂದಿದೆ. ಪಕ್ಷವನ್ನು ನಂಬಿ ಬಂದವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಯಾವಾಗಲೂ ಬೆಂಬಲ ಕೊಟ್ಟಿದ್ದಾರೆ. ಹಿರಿಯರು ಕುಳಿತುಕೊಂಡು ಮುಂದಿನ ನಡೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಮೇಲ್ಮನವಿ ಸಲ್ಲಿಸುವ ಬಗ್ಗೆ ಮುಖ್ಯಮಂತ್ರಿ ಹಾಗೂ ಪ‍ಕ್ಷದ ರಾಜ್ಯ ಘಟಕದ ಅಧ್ಯಕ್ಷರು ಕುಳಿತು ಚರ್ಚೆ ಮಾಡುತ್ತಾರೆ. ವಿಶ್ವನಾಥ್‌ ಅವರು ಭಯಪಡುವ ಅಗತ್ಯವಿಲ್ಲ’ ಎಂದರು.

ಎಲ್ಲವೂ ಸರಿಯಾಗಲಿದೆ: ಸಂಪುಟ ವಿಸ್ತರಣೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ ಅವರು, ‘ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಶಕ್ತಿ ಬಿ.ಎಸ್.ಯಡಿಯೂರಪ್ಪ ಅವರಿಗಿದೆ. ಮುಂಬರುವ ದಿನಗಳಲ್ಲಿ ಎಲ್ಲವೂ ಸರಿಯಾಗಲಿದೆ’ ಎಂದರು.

ಸಿ.ಪಿ.ಯೋಗೇಶ್ವರ್‌ ಸಚಿವರಾಗಲಿದ್ದಾರೆಯೇ ಎಂದು ಕೇಳಿದ್ದಕ್ಕೆ, ‘ಯಾರನ್ನು ಮಂತ್ರಿ ಮಾಡಬೇಕು ಎಂಬುದು ಮುಖ್ಯಮಂತ್ರಿ ಅವರ ಪರಮಾಧಿಕಾರ. ಅವರ ವಿವೇಚನೆಗೆ ಬಿಟ್ಟದ್ದು. ಕಾಂಗ್ರೆಸ್ ಮುಖಂಡರು ನಮ್ಮ ಸರ್ಕಾರದ ಬಗ್ಗೆ ಮತ್ತು ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ನೈತಿಕತೆ ಕಳೆದುಕೊಂಡಿದ್ದಾರೆ. ಶಿರಾ ಮತ್ತು ಆರ್.ಆರ್.ನಗರದ ಉಪಚುನಾವಣೆಗಳಲ್ಲಿ ಅದು ಗೊತ್ತಾಗಿದೆ’ ಎಂದರು.

ಅಪ್ಪ ಚೆಕ್ ಮೂಲಕ, ಮಗ ಆರ್‌ಟಿಜಿಎಸ್‌ ಮೂಲಕ ಲಂಚ ತಗೆದುಕೊಳ್ಳುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಸಿದ್ದರಾಮಯ್ಯ ಅವರು ಒಬ್ಬ ವಕೀಲ. ನಾನು ಚೆಕ್ ಅಥವಾ ಆರ್‌ಟಿಜಿಎಸ್‌ ಮೂಲಕ ಲಂಚ ತೆಗೆದುಕೊಂಡಿದ್ದರೆ ಮಾಧ್ಯಮಗಳ ಮುಂದೆ ಬಂದು ತೋರಿಸಲಿ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT