ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗಳಿಗೆ ವರವಾದ 'ಬುಕ್ ಬ್ಯಾಂಕ್'

ಶೇ 35 ಹೊಸಪಠ್ಯ ಪೂರೈಕೆ: ವಿದ್ಯಾರ್ಥಿಗಳಿಂದ ವಿಶೇಷ ಕೊಡುಗೆ
Last Updated 22 ಮೇ 2022, 3:02 IST
ಅಕ್ಷರ ಗಾತ್ರ

ಯಳಂದೂರು: ಜಿಲ್ಲೆಯಾದ್ಯಂತ ಇದೇ 16ರಿಂದ ಶಾಲೆಗಳು ಶುರುವಾಗಿವೆ. ಈ ಸಾಲಿನಲ್ಲಿ ಸರ್ಕಾರಿ ಶಾಲೆಗಳಲ್ಲಿ ‘ಮಳೆಬಿಲ್ಲು’ ಕಾರ್ಯಕ್ರಮ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಸರ್ಕಾರಿ ಶಾಲೆಗಳ ದಾಖಲಾತಿ ಏರಿಕೆ ಕಂಡಿದ್ದು, ಜಿಲ್ಲೆಯಾದ್ಯಂತ ಹೊಸ ಪಠ್ಯ ಪುಸ್ತಕ ಶೇ 45ರಷ್ಟು ಪೂರೈಕೆ ಆಗಿದೆ. ಮಕ್ಕಳ ಕಲಿಕೆಗೆ ಹಿನ್ನೆಡೆ ಆಗದಂತೆ ಸರ್ಕಾರಿ ಶಾಲೆಗಳಲ್ಲಿ ಸ್ಥಾಪಿಸಿರುವ ಬುಕ್ ಬ್ಯಾಂಕ್ ಸೌಲಭ್ಯ ಪಠ್ಯಪುಸ್ತಕ ಕೊರತೆ ನೀಗಿಸಿದೆ.

ತಾಲ್ಲೂಕಿನಲ್ಲಿ 1ರಿಂದ 10ನೇ ತರಗತಿಗೆ ಸರಾಸರಿ 10 ಸಾವಿರ ವಿದ್ಯಾರ್ಥಿಗಳು ಇದ್ದಾರೆ. 60 ಸಾವಿರ ಪುಸ್ತಕಗಳಿಗೆ ಬೇಡಿಕೆ ಸಲ್ಲಿಸಿದ್ದು, ಶೇ 35 ಭಾಗ ಪೂರೈಕೆ ಆಗಿದೆ. ರಷ್ಯಾ-ಉಕ್ರೇನ್ ಯುದ್ಧದ ಕಾರಣದಿಂದ ಕಾಗದದ ಕೊರತೆ ಹಾಗೂ ಮುದ್ರಣ ವೆಚ್ಛದ ಏರಿಕೆಗೆ ಕಾರಣವಾಗಿದ್ದು, ಬುಕ್ ವಿತರಣೆಗೆ ಅಡ್ಡಿಯಾಗಿದೆ. ಹಾಗಾಗಿ, ಈ ಬಾರಿ ಹೊಸ ಪುಸ್ತಕ ವಿಳಂಬವಾಗುವ ಸಾಧ್ಯತೆ ಇದೆ.

‘ಕೋವಿಡ್‌ ಕಾರಣದಿಂದ ಎರಡು ವರ್ಷ ಮುದ್ರಣ ತಡವಾಗಿತ್ತು. ಈ ಸಂದರ್ಭ ವಿದ್ಯಾರ್ಥಿಗಳ ಕಲಿಕೆಗೆ ಅಡ್ಡಿಯಾಗದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ’ಬುಕ್‌ ಬ್ಯಾಂಕ್’ ಯೋಜನೆ ಜಾರಿಮಾಡಿತ್ತು. ಉತ್ತೀರ್ಣರಾದ ಮಕ್ಕಳಿಂದ ಪಠ್ಯ ಪುಸ್ತಕಗಳನ್ನು ಸಂಗ್ರಹಿಸಿ, ನೂತನ ವರ್ಷದ ವಿದ್ಯಾರ್ಥಿಗಳಿಗೆ ವಿತರಿಸುವ ಉದ್ಧೇಶ ಹೊಂದಲಾಗಿತ್ತು. ಪ್ರಸ್ತುತ ಶೇ 70ರಷ್ಟು ಹಳೆಯ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ’ ಎನ್ನುತ್ತಾರೆ ಶಿಕ್ಷಕರು.

ಮೊದಲ ದಿನವೇ ಪುಸ್ತಕ: ‘6 ರಿಂದ 10ನೇ ತರಗತಿಯಲ್ಲಿ 400 ಮಕ್ಕಳು ಕಲಿಯುತ್ತಾರೆ. ವಾರ್ಷಿಕ ಪರೀಕ್ಷೆ ಮುಗಿಯುತ್ತಲೇ 1 ರಿಂದ 9ನೇ ತರಗತಿ ಮಕ್ಕಳಿಂದ ಹಳೆಯ ಪಠ್ಯ ಪುಸ್ತಕಗಳನ್ನು ಸಂಗ್ರಹಿಸುತ್ತೇವೆ. ಇವುಗಳನ್ನು ಶಿಕ್ಷಕರು ವಿಷಯವಾರು ಪ್ರತ್ಯೇಕಿಸುತ್ತಾರೆ. ಶಾಲಾ ಹಂತದಲ್ಲಿ ನೂತನ ವರ್ಷ ದಾಖಲಾದ ವಿದ್ಯಾರ್ಥಿಗಳಿಗೆ ಮೊದಲ ದಿನವೇ ಪಠ್ಯಪುಸ್ತಕ ಹಂಚಿಕೆ ಮಾಡುತ್ತೇವೆ. ಎಸ್ಸೆಸ್ಸೆಲ್ಸಿ ಮಕ್ಕಳು ಫಲಿತಾಂಶ ಬಂದ ನಂತರ ಹಿಂದಿರುಗಿಸುತ್ತಾರೆ’ ಎಂದು ಮೆಲ್ಲಹಳ್ಳಿ ಸರ್ಕಾರಿ ಆದರ್ಶ ವಿದ್ಯಾಲಯದ ಮುಖ್ಯ ಶಿಕ್ಷಕ ಗುರುಮೂರ್ತಿ ಅವರು ’ಪ್ರಜಾವಾಣಿ’ಗೆ ತಿಳಿಸಿದರು.

ದಾಖಲಾತಿ ಚೇತರಿಕೆ:ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ವಿದ್ಯಾರ್ಥಿ ವೇತನ, ಹಾಲು, ಬಿಸಿಯೂಟ ನೀಡುತ್ತಿದ್ದೇವೆ. ಕೋವಿಡ್‌ ಕಾಲಘಟ್ಟದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ. ದಾಖಲಾತಿಯಲ್ಲೂ ಹೆಚ್ಚಳ ಆಗುತ್ತಿದ್ದು, ಈ ವರ್ಷ ‘ಕಲಿಕಾ ಚೇತರಿಕೆ ಉಪಕ್ರಮ’ದ ಮೂಲಕ ವಿದ್ಯಾರ್ಥಿಗಳಿಗೆ ಹೊಸ ಶೈಕ್ಷಣಿಕ ವರ್ಷದ ಬೋಧನೆ ಆರಂಭವಾಗಿದೆ.

ಹೊಸ ಪಠ್ಯಕ್ಕೂ ಅವಕಾಶ

‘ಹಿಂದಿನ ವರ್ಷ ಶಾಲಾ ಹಂತದಲ್ಲಿ ಬುಕ್‌ ಬ್ಯಾಂಕ್‌ ನೆರವು ಯಶಸ್ವಿಯಾಗಿತ್ತು. ಈ ಬಾರಿಯೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಶಾಲಾ ಹಂತದಲ್ಲಿ ಬುಕ್‌ ಬ್ಯಾಂಕ್‌ ಸೌಲಭ್ಯ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಆರ್ಥಿಕ ಮಿತವ್ಯಯ ಹಾಗೂ ಪರಿಸರ ಸ್ನೇಹಿ ದೃಷ್ಟಿಯಿಂದಲೂ ಬ್ಯಾಂಕ್ ಪರಿಕಲ್ಪನೆ ಉತ್ತಮ ಬೆಳವಣಿಗೆ. ಈ ವಿಧಾನದಿಂದ ಅಗತ್ಯಕ್ಕೆ ತಕ್ಕಂತೆ ಪಠ್ಯಗಳ ಮರು ಹೊಂದಾಣಿಕೆ ಸಾಧ್ಯವಾಗಲಿದೆ. ಹೊಸಪಠ್ಯ ಪೂರೈಕೆ ತಡವಾದರೂ, ಮಕ್ಕಳ ಕಲಿಕೆಯ ಉದ್ಧೇಶ ಈಡೇರಲಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು ’ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT