ಶನಿವಾರ, ಅಕ್ಟೋಬರ್ 1, 2022
23 °C
ದಲಿತ, ಪ್ರಗತಿಪರ ಒಕ್ಕೂಟದಿಂದ ಬಿ.ರಾಚಯ್ಯ ಶತಮಾನೋತ್ಸವ ಸಂಭ್ರಮ

ಜನಪರ ನಿಲುವಿನ ಪಾರದರ್ಶಕ ಆಡಳಿತಗಾರ: ಮಹದೇವಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಜನಪರ ನಿಲುವು, ಪಾರದರ್ಶಕ ಆಡಳಿತದ ಮೂಲಕ ಚರಿತ್ರೆ ಸೃಷ್ಟಿಸಿರುವ ಮಾಡಿರುವ ಬಿ.ರಾಚಯ್ಯ ಅವರು ಸಮ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಐತಿಹಾಸಿಕವಾದ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಂಡಿದ್ದರು’ ಎಂದು ಕಾಂಗ್ರೆಸ್‌ ಮುಖಂಡ ಡಾ.ಎಚ್‌.ಸಿ.ಮಹದೇವಪ್ಪ ಅವರು ಬುಧವಾರ ಹೇಳಿದರು. 

ದಲಿತ ಮತ್ತು ಪ್ರಗತಿ‍‍ಪ‍ರ ಒಕ್ಕೂಟವು ಹಮ್ಮಿಕೊಂಡಿದ್ದ ಬಿ.ರಾಚಯ್ಯ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,  ‘ಬುದ್ಧ, ಬಸವ, ಅಂಬೇಡ್ಕರ್‌ ಅನುಯಾಯಿಗಳಾಗಿದ್ದ ರಾಚಯ್ಯ ಅವರು ಸಾರ್ವಜನಿಕ ಬದುಕು ಎಂದರೆ ಜನರಿಗೆ ಮೀಸಲಿಟ್ಟಿದ್ದು ಎಂಬುದನ್ನು ಸಾಧಿಸಿ ತೋರಿಸಿದ್ದರು. ರಾಜಕೀಯಕ್ಕೆ ಬರುವಾಗ ಅವರಿಗೆ ಯಾರ ಬೆಂಬಲ ಇರಲಿಲ್ಲ. ಹಣವೂ ಇರಲಿಲ್ಲ. ಸಾಮಾನ್ಯ ರೈತ ಕುಟುಂಬದಿಂದ ಬಂದು ಜಿಲ್ಲೆ, ರಾಜ್ಯಕ್ಕೆ ಹಲವು ಕೊಡು‌ಗೆಗಳನ್ನು ನೀಡಿದರು’ ಎಂದರು. 

‘ದಲಿತ ಎಂಬ ಕಾರಣಕ್ಕೆ ರಾಚಯ್ಯ ಅವರಿಗೆ ಸ್ಥಾನಮಾನಗಳು ಸಿಕ್ಕಿಲ್ಲ. ಅವರ ಯೋಗ್ಯತೆ ಹಾಗೂ ಅರ್ಹತೆ ಆಧಾರದಲ್ಲಿ ಸಿಕ್ಕಿದೆ. ಯಾವುದೇ ಹುದ್ದೆಗಳನ್ನು ನೀಡಿದ್ದರೂ ಸಮರ್ಥವಾಗಿ ನಿಭಾಯಿಸುವ ಚಾಕಚಕ್ಯತೆ ಅವರಲ್ಲಿತ್ತು. ದಲಿತ ಮುಖ್ಯಮಂತ್ರಿ ವಿಚಾರ ಈಗ ಚರ್ಚೆಯಾಗುತ್ತಿದೆ. ಮುಖ್ಯಮಂತ್ರಿ ಎಂಬುದು ಜಾತಿಯ ಹುದ್ದೆ ಅಲ್ಲ. ಸಂವಿಧಾನಾತ್ಮಕ ಹುದ್ದೆ. 1987ರಲ್ಲೇ ರಾಚಯ್ಯ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ  ಇತ್ತು. ನಾನು ಶಾಸಕಾಂಗ ಸಭೆಯಲ್ಲಿ ಅವರ ಹೆಸರನ್ನು ಸೂಚಿಸಿದ್ದೆ. 27 ಮಂದಿ ದಲಿತ ಶಾಸಕರೂ ಇದ್ದರು. ಆದರೆ ಯಾರೂ ಅವರ ಹೆಸರು ಅನುಮೋದಿಸಲಿಲ್ಲ’ ಎಂದು ಸ್ಮರಿಸಿದರು. 

ಕಾಡಾ ಅಧ್ಯಕ್ಷ ನಿಜಗುಣರಾಜು ಮಾತನಾಡಿ, ‘ಜಿಲ್ಲೆಯಲ್ಲಿ 16 ಗ್ರಾಮಗಳನ್ನು ನಿರ್ಮಿಸಿ, ತಾಲ್ಲೂಕಿನ ಎರಡು ಜಲಾಶಯಗಳ ನಿರ್ಮಾತೃ ಆಗಿ ರಾಜ್ಯದ ದಕ್ಷಿಣ ಭಾಗದಲ್ಲಿ 11 ಸಾವಿರ ಎಕರೆಗೆ ನೀರಾವರಿ ವ್ಯವಸ್ಥೆಗೆ ಕಾರಣಕರ್ತರಾಗಿದ್ದರೆ ಅದು ರಾಚಯ್ಯನವರು. ಜಾತಿ, ಧರ್ಮ ವರ್ಗಗಳನ್ನು ನೋಡದೇ ಕೆಲಸ ಮಾಡಿದವರು ಅವರು. ‘ಬದುಕುವುದಕ್ಕಾಗಿ ರಾಜಕೀಯಕ್ಕೆ ಬರಬೇಡಿ. ಮತ್ತೊಬ್ಬರ ಬದುಕನ್ನು ಹಸನು ಮಾಡಿಕೊಳ್ಳುವುದಕ್ಕೆ ಬನ್ನಿ’ ಎಂದು ಡಾ.ಅಂಬೇಡ್ಕರ್‌ ಹೇಳಿದ್ದನ್ನು ಅಕ್ಷರಶಃ ಸಾಕಾರಗೊಳಿಸಿದ ಮೊದಲ ಪೀಳಿಗೆಯ ನಾಯಕರಲ್ಲಿ ರಾಚಯ್ಯ ಮೊದಲಿಗರು’ ಎಂದು ಬಣ್ಣಸಿದರು.    

ಪ್ರಾಸ್ತಾವಿಕವಾಗಿ ಮಾತನಾಡಿದ ದಲಿತ ಮಹಾಸಭಾದ ವೆಂಕಟರಮಣಸ್ವಾಮಿ (ಪಾಪು), ‘ಬಿ.ರಾಚಯ್ಯ ಅವರು ಜಿಲ್ಲೆಯ ಹೆಮ್ಮೆಯ ಪುತ್ರ. ಪ್ರಾತಃಸ್ಮರಣೀಯರು. ಅವರಷ್ಟು ಸಾಧನೆ ಮಾಡಿದ ಬೇರೆ ವ್ಯಕ್ತಿ ಈ ದೇಶದಲ್ಲಿಲ್ಲ. ಜಿಲ್ಲೆಯು ಹಲವು ಸಜ್ಜನ ರಾಜಕಾರಣಿಗಳನ್ನು ನಾಡಿಗೆ ಕೊಟ್ಟ ಜಿಲ್ಲೆ. ಅದರಲ್ಲಿ ರಾಚಯ್ಯ ಮೊದಲಿಗರು. ಜಿಲ್ಲೆಗೆ ಅವರು ಕೊಟ್ಟ ಕೊಡುಗೆಗಳು ಹಲವು. ಅವರಿಗೆ ಮುಖ್ಯಮಂತ್ರಿಯಾಗುವ ಅರ್ಹತೆ ಎಲ್ಲ ಇತ್ತು. ಆದರೆ, ಜಾತಿ ರಾಜಕೀಯದಿಂದ ಅದು ಸಾಧ್ಯವಾಗಲಿಲ್ಲ’ ಎಂದರು. 

ಸಾನಿಧ್ಯ ವಹಿಸಿದ್ದ ಮುಡುಕನಪುರದ ಷಡಕ್ಷರಿ ದೇಶಿಕೇಂದ್ರ ಸ್ವಾಮೀಜಿ ಅವರು ಮಾತನಾಡಿದರು. ಶಾಸಕ ಸಿ.ಪುಟ್ಟರಂಗಶೆಟ್ಟಿ, ರಾಚಯ್ಯ ಅಳಿಯ ಬಿ.ಬಿ.ನಿಂಗಯ್ಯ, ಬರಹಗಾರ ಲಕ್ಷ್ಮಿ ನರಸಿಂಹ ಮಾತನಾಡಿದರು. 

ರಾಚಯ್ಯ ಪುತ್ರರಾದ ಎ.ಆರ್‌.ಕೃಷ್ಣಮೂರ್ತಿ, ಎ.ಆರ್‌.ಬಾಲರಾಜು, ಬಿಜೆಪಿ ಮುಖಂಡ ಸಿ.ಎನ್‌.ಬಾಲರಾಜು, ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ ಇತರರು ಇದ್ದರು.

‘ನನ್ನ ರಾಜಕೀಯ ಗುರು’

‘ನನ್ನನ್ನು ಗುರುತಿಸಿದವರು ರಾಚಯ್ಯನವರು. ನನ್ನ ಚಲನವಲನಗಳನ್ನು ಗಮನಿಸಿ ಮುಂದೆ ಒಳ್ಳೆಯ ಭವಿಷ್ಯ ಇದೆ ಎಂದು ಹೇಳಿದ್ದರು. 1995ರಲ್ಲಿ ನನಗೆ ಟಿಕೆಟ್‌ ನೀಡಿದವರೂ ಅವರೇ. ಅವರ ಮಗ ಕೃಷ್ಣಮೂರ್ತಿ ಇದ್ದರೂ, ನನ್ನನ್ನು ಉತ್ತರಾಧಿಕಾರಿ ಎಂದು ಕರೆದರು. ಸಿದ್ದರಾಮಯ್ಯ ಅವರು ಕೂಡ ಉತ್ತಮ ನಾಯಕರಾಗುತ್ತಾರೆ ಎಂದು ಭ್ಯವಿಷ್ಯ ನುಡಿದಿದ್ದರು. ಅವರನ್ನು ರೇಷ್ಮೆ  ಸಚಿವರನ್ನಾಗಿ ಮಾಡಿದರು. ರಾಜಕೀಯ ಗುರುವಿನ ಗೌರವಾರ್ಥ ಬಿ.ರಾಚಯ್ಯ ಜೋಡಿ ರಸ್ತೆ ಅಭಿವೃದ್ಧಿಗೆ ₹35 ಕೋಟಿ ಬಿಡುಗಡೆ ಮಾಡಿದ್ದೆವು. ನಂಜನಗೂಡಿನಿಂದ ನಗರದ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮಾಡಿದ್ದೆವು’ ಎಂದರು. 

‘ಕಬಿನಿ 2ನೇ ಹಂತದ ನೀರಾವರಿ ಯೋಜನೆ ಅವರ ಕನಸಾಗಿತ್ತು. ಬದನವಾಳು ಏತ ನೀರಾವರಿ ಯೋಜನೆಯ ಕನಸು ಕಂಡಿದ್ದರು. ಕಾವೇರಿ ವಿವಾದದ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಕೆರೆಗಳಿಗೆ ನೀರು ತುಂಬಿಸುವ ಕಲ್ಪನೆಯೂ ಅವರದ್ದೇ. ಆದರೆ, ಅವರು ಎಲ್ಲೂ ಹೇಳಿಕೊಳ್ಳುತ್ತಿರಲಿಲ್ಲ. ತಾವು ಮಾಡಿದ ಕೆಲಸಗಳನ್ನು ಜನರೇ ಹೇಳುವಂತೆ ಅವರು ಬಿಟ್ಟು ಹೋಗಿದ್ದಾರೆ’ ಎಂದು ಮಹದೇವಪ್ಪ ಹೇಳಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು