ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಹದೇಶ್ವರ ಬೆಟ್ಟ: ಹೋಟೆಲ್‌ಗಳಾಗಿ ಬದಲಾದ ಬಸ್‌ ತಂಗುದಾಣ

ಆದಾಯಕ್ಕಾಗಿ ವಾಣಿಜ್ಯ ಉದ್ದೇಶದ ಕಟ್ಟಡವಾಗಿ ಪರಿವರ್ತನೆ ಆರೋಪ
Published 30 ಜುಲೈ 2023, 5:11 IST
Last Updated 30 ಜುಲೈ 2023, 5:11 IST
ಅಕ್ಷರ ಗಾತ್ರ

ಜಿ.ಪ್ರದೀಪ್‌ಕುಮಾರ್‌ ಮಹದೇಶ್ವರ ಬೆಟ್ಟ: ಬೆಟ್ಟದ ಬಸ್ ನಿಲ್ದಾಣದಲ್ಲಿರುವ ಪ್ರಯಾಣಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿದ್ದ ಎರಡು ಬಸ್‌ ತಂಗುದಾಣ ಕಟ್ಟಡಗಳು ಹಲವು ವರ್ಷಗಳಿಂದ ಹೋಟೆಲ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಅವುಗಳನ್ನು ಮತ್ತೆ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣಗಳಾಗಿ ಮಾಡಬೇಕು ಎಂಬ ಕೂಗು ಎದ್ದಿದೆ. 

ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಆದಾಯಗಳಿಸುವ ಉದ್ದೇಶದಿಂದ ತಂಗುದಾಣಗಳನ್ನು ಹೋಟೆಲ್‌ಗಳನ್ನಾಗಿ ಪರಿವರ್ತಿಸಿದೆ. ಇದರಿಂದಾಗಿ ಭಕ್ತರಿಗೆ, ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಜಾಗ ಸಾಕಾಗುತ್ತಿಲ್ಲ. ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಕ್ಷೇತ್ರಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಈ ಎರಡು ಕಟ್ಟಡಗಳನ್ನು ಮತ್ತೆ ಪ್ರಯಾಣಿಕರಿಗಾಗಿ ಮೀಸಲಿಡಬೇಕು ಎಂಬ ಚರ್ಚೆಯನ್ನು ಭಕ್ತರು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದ್ದಾರೆ. 

2006ರಲ್ಲಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರದಲ್ಲಿ ದೇವಾಲಯಕ್ಕೆ ಬರುವಂತಹ ಭಕ್ತಾದಿಗಳ ಹಿತ ದೃಷ್ಟಿಯಿಂದ ಬಸ್ ನಿಲ್ದಾನದಲ್ಲಿ ಎರಡು ತಂಗುದಾಣಗಳನ್ನು ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ನಿರ್ಮಿಸಲಾಗಿತ್ತು.

ತಂಗುದಾಣಗಳನ್ನು ಅಂದಿನ ಜಿಲ್ಲಾಧಿಕಾರಿಯಾಗಿದ್ದ ಕೆ.ಆರ್.ಶಶಿಧರ್, ಅಂದಿನ ಹನೂರು ಶಾಸಕಿ ಪರಿಮಳನಾಗಪ್ಪ ಹಾಗೂ ಸಾಲೂರು ಮಠದ ಶ್ರೀ ಪಟ್ಟದ ಗುರುಸ್ವಾಮಿಗಳ ಸಮ್ಮುಖದಲ್ಲಿ ಭಕ್ತರ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಈ ಸಂಬಂಧದ ಶಿಲಾಫಲಕ ಈಗಲೂ ಕಟ್ಟಡದ ಗೋಡೆಯಲ್ಲಿದೆ.

ಮಲೆ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ಬಳಿಕ ಎರಡು ತಂಗುದಾಣಗಳನ್ನು ವಾಣಿಜ್ಯ ಕಟ್ಟಡವಾಗಿ ಬದಲಾಯಿಸಿ ಹೋಟೆಲ್‌ ನಡೆಸಲು ಪ್ರಾಧಿಕಾರ ಗುತ್ತಿಗೆ ನೀಡಿದೆ. ಈ ಎರಡು ಕಟ್ಟಡಗಳಿಂದ ವಾರ್ಷಿಕವಾಗಿ ₹50 ಲಕ್ಷದಷ್ಟು ಆದಾಯ ಪ್ರಾಧಿಕಾರಕ್ಕೆ ಬರುತ್ತಿದೆ.  

ಈ ಎರಡು ಕಟ್ಟಡಗಳನ್ನು ಭಕ್ತರ ತಂಗುದಾಣವನ್ನಾಗಿ ಪರಿವರ್ತಿಸಿದರೆ ಸಾವಿರಾರು ಭಕ್ತರಿಗೆ ನೆರಳಿನ ವ್ಯವಸ್ಥೆ ಹಾಗೂ ಮಳೆಯಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ವ್ಯವಸ್ಥೆ ದೊರೆಯಲಿದೆ ಎಂದು ಸಾಮಾಜಿಕ ಜಾಲಾತಾಣದಲ್ಲಿ ಸಂದೇಶಗಳು ಹರಿದಾಡುತ್ತಿವೆ.

‘ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಈಗ ಹೆಚ್ಚಾಗುತ್ತಿದ್ದು, ಬಸ್‌ ನಿಲ್ದಾಣದಲ್ಲಿ ಎಲ್ಲರಿಗೂ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟ/ ಇಂತಹ ಸಂದರ್ಭದಲ್ಲಿ ತಂಗುದಾಣಗಳಿದ್ದರೆ, ಭಕ್ತರಿಗೆ ಅದರಲ್ಲೂ ಮಹಿಳೆಯರಿಗೆ, ಹಾಲುಣಿಸುವ ತಾಯಂದರಿಗೆ ಹೆಚ್ಚು ಅನುಕೂಲವಾಗುತ್ತದೆ’ ಎಂದು ಭಕ್ತ ಮಹದೇವಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬೆಟ್ಟಕ್ಕೆ ಹಲವಾರು ವರ್ಷಗಳಿಂದ ಬರುತ್ತಿದ್ದೇನೆ. ದೇವಾಲಯದ ಮುಂಭಾಗ ಬರುವ ರಂಗಮಂದಿರದ ಆವರಣದಲ್ಲಿ ನೆರಳಿನ ವ್ಯವಸ್ಥೆ, ಬಸ್‌ ನಿಲ್ದಾಣ ಬಿಟ್ಟರೆ ಬೆಟ್ಟದ ಸುತ್ತಮುತ್ತ ಭಕ್ತರಿಗೆ ಶಾಶ್ವತವಾದ ನೆರಳಿನ ವ್ಯವಸ್ಥೆ ಇಲ್ಲ. ಬಸ್ ನಿಲ್ದಾಣದಲ್ಲಿ ಮಕ್ಕಳಿಗೆ ಹಾಲುಣಿಸಬೇಕಾದರೆ ಹಿಂದೆ ಮುಂದೆ ನೋಡಬೇಕು. ಮಳೆ ಬಂದಾಗ ಬಿಸಿಲು ಇದ್ದಾಗ ಬಸ್ ನಿಲ್ದಾಣದಲ್ಲಿ ಕೂರಲು ವ್ಯವಸ್ಥೆ ಇರುವುದಿಲ್ಲ. ತಂಗುದಾಣ ಇಲ್ಲದಿರುವುದು ತೊಂದರೆಯಾಗಿದೆ.  ದೇವಾಲಯದ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸಿ ಭಕ್ತಾದಿಗಳಿಗಾಗಿ ತಂಗುದಾಣ ಮಾಡಬೇಕು’ ಎಂದು ಮೈಸೂರಿನ ಭಕ್ತೆ ಭಾಗ್ಯ ಒತ್ತಾಯಿಸಿದರು. 

ಕಟ್ಟಡದ ಗೋಡೆಯಲ್ಲಿರುವ ನಾಮಫಲಕ
ಕಟ್ಟಡದ ಗೋಡೆಯಲ್ಲಿರುವ ನಾಮಫಲಕ
‘ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಕ್ರಮ’
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದ ‘ತಂಬಾಕು ಹಾಗೂ ಗುಟ್ಕಾ ಮಾರಾಟ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್‌ ಬಳಕೆ ವಿರುದ್ಧ ಕಾರ್ಯಾಚರಣೆ ಮಾಡಿದ ಸಂದರ್ಭದಲ್ಲಿ ಹೋಟೆಲ್‌ನಲ್ಲಿದ್ದ ನಾಮಫಲಕವನ್ನು ಗಮನಿಸಿದ್ದೇನೆ. ಈ ವಿಚಾರದ ಬಗ್ಗೆ  ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT