ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಗ್ರಾಮದಲ್ಲಿ ಆಂಜನೇಯ ದೇವಾಲಯ ನಿರ್ಮಿಸಿದ ಉದ್ಯಮಿ; ಗೋಶಾಲೆಯೂ ಆರಂಭ

ತಂಕಲಹುಂಡಿ: ರಾಮ ಬಂಟನ ಸೇವೆಗೆ ಮುಂದಾದ ನವೀನ್‌
Last Updated 15 ಆಗಸ್ಟ್ 2021, 1:50 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ತೆಂಕಲಹುಂಡಿ ಗ್ರಾಮದಲ್ಲಿ ₹1 ಕೋಟಿಗೂ ಅಧಿಕ ವೆಚ್ಚದಲ್ಲಿ ‘ಜೈ ವೀರಅಭಯ ಪಂಚಮುಖಿ ಶಕ್ತಿ ಆಂಜನೇಯ ಸ್ವಾಮಿ ದೇವಾಲಯ' ನಿರ್ಮಾಣವಾಗುತ್ತಿದೆ. ಮೂಲತಃ ಗ್ರಾಮದವರಾದ ಮೈಸೂರಿನಲ್ಲಿ ಉದ್ಯಮಿಯಾಗಿರುವ ಬಿ.ನವೀನ್‌ ಅವರು ಸ್ವಂತ ಖರ್ಚಿನಲ್ಲಿ ದೇವಾಲಯವನ್ನು ನಿರ್ಮಿಸುತ್ತಿದ್ದಾರೆ.

ಇದರ ಜೊತೆಗೆ ಗೋ ಶಾಲೆಯನ್ನು ತೆರೆದು ಸ್ಥಳೀಯ ರೈತರಿಗೆ ಅವರು ನೆರವಾಗುತ್ತಿದ್ದಾರೆ.ಆಂಜನೇಯ ಸ್ವಾಮಿ ಪ್ರೇರಣೆಯಿಂದ ಈ ಕೆಲಸವನ್ನು ಮಾಡುತ್ತಿರುವುದಾಗಿ ಹೇಳಿರುವ ನವೀನ್ ಅವರು, ತಂದೆ ತಾಯಿಯೊಂದಿಗೆ ಮೈಸೂರಿನಲ್ಲಿ ನೆಲೆಸಿದ್ದರೂ ಊರಿಗೆ ಏನಾದರೂ ಮಾಡಬೇಕು ಎಂಬ ತುಡಿತ ಈ ಸಾಹಕ್ಕೆ ಕೈಹಾಕುವಂತೆ ಮಾಡಿದೆ.

ಮೂರು ವರ್ಷಗಳಿಂದ ಹಂತ ಹಂತವಾಗಿ ದೇವಸ್ಥಾನ ನಿರ್ಮಾಣ ಕೆಲಸ ನಡೆಯುತ್ತಿದ್ದು, ರಾಜ ಗೋಪುರದ ಮಧ್ಯಭಾಗದಲ್ಲಿ ನಂಜನಗೂಡು ಮಾದರಿ ಗೋಪುರ ನಿರ್ಮಿಸಿದರೆ ಬಹುಭಾಗ ಕಾಮಗಾರಿ ಮುಗಿದಂತಾಗುತ್ತದೆ. ದೇವಾಲಯದಲ್ಲಿ ಮೂರು ಗರ್ಭಗುಡಿಗಳಿದ್ದು, ಪಂಚಮುಖಿ ಆಂಜನೇಯ, ಚಿಕ್ಕದೇವಮ್ಮ, ದುರ್ಗಾಪರಮೇಶ್ವರಿ ಮೂರ್ತಿಯ ಕೆತ್ತನೆ ಕಾರ್ಯ ನಡೆಯುತ್ತಿದೆ.

‘ದೇವಸ್ಥಾನದ ಬಲ ಭಾಗದಲ್ಲಿ ನಾಗರಕಟ್ಟೆಯಿದ್ದು, ಎಡ ಭಾಗದಲ್ಲಿ 35 ಅಡಿಯ ಪಂಚಮುಖಿ ಆಂಜನೇಯ ಸ್ವಾಮಿಯ ದೊಡ್ಡ ವಿಗ್ರಹವನ್ನು ₹ 10 ಲಕ್ಷ ವೆಚ್ಚದಲ್ಲಿ ಸಿಮೆಂಟ್ ಮತ್ತು ಕಬ್ಬಿಣ ಬಳಸಿ ನಿರ್ಮಾಣ ಮಾಡಲಾಗಿದೆ. ಇದು ಈಶಾನ್ಯ ಮೂಲೆಯಲ್ಲಿದ್ದು, ದೇವಾಲಯ ಪ್ರದಕ್ಷಿಣೆ ಹಾಕುವಾಗ ಆಂಜನೇಯನ ಕಾಲ ಕೆಳಗಾಗಿ ಭಕ್ತಾದಿಗಳು ನಡೆದು ಬರುವಂತೆ ದೇವಾಲಯವನ್ನು ವಿನ್ಯಾಸ ಮಾಡಲಾಗಿದೆ. ಈ ಶೈಲಿಯಲ್ಲಿ ಕರ್ನಾಟಕದ ಯಾವ ಮೂಲೆಯಲ್ಲೂ ಸಹ ವಿಗ್ರಹ ಕೆತ್ತನೆಯಾಗಿಲ್ಲ. ದೇವರ ಕಾಲ ಕೆಳಗೆ ನಡೆದು ಬರುವುದರಿಂದ ಪಾಪ ಕರ್ಮ ತೊಳೆದು ಹೋಗಿ, ಖಿನ್ನತೆ ದೂರವಾಗುತ್ತದೆ ಎಂಬ ನಂಬಿಕೆ ಇದೆ’ ಎಂದು ಉದ್ಯಮಿ ನವೀನ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸ್ವಂತ ಹಣ: ನವೀನ್ ಅವರು ಈ ದೇವಾಲಯವನ್ನು ಸ್ವಂತ ಹಣದಲ್ಲಿ ನಿರ್ಮಿಸುತ್ತಿದ್ದಾರೆ. ಹತ್ತಿರದ ಸ್ನೇಹಿತರಾದ ಭರತ್, ಶ್ರೀಶ, ಪ್ರಮೋದ್ ಸೇರಿದಂತೆ ಮುಖಂಡರು, ಯುವಕರು ಮತ್ತು ಸ್ನೇಹಿತರು ಅವರೊಂದಿಗೆ ಕೈಜೋಡಿಸಿದ್ದಾರೆ.

ಟ್ರಸ್ಟ್ ರಚನೆ: ದೇವಸ್ಥಾನ ಮುಗಿಯುವ ಹಂತಕ್ಕೆ ತಲುಪಿರುವುದರಿಂದ, ಅದರ ನಿರ್ವಹಣೆಗಾಗಿ ಗ್ರಾಮಸ್ಥರನ್ನೂ ಸೇರಿಸಿಕೊಂಡು ಟ್ರಸ್ಟ್ ನೋಂದಣಿ ಮಾಡಿಸಿದ್ದಾರೆ. ದೇವಸ್ಥಾನಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳು ಮುಂದಿನ ದಿನಗಳಲ್ಲಿ ಈ ಟ್ರಸ್ಟ್ ಮೂಲಕವೇ ನಡೆಯಲಿದೆ.

ಗೋಶಾಲೆ ಆರಂಭ, ರೈತರಿಗೆ ಅನುಕೂಲ

ದೇವಸ್ಥಾನ ನಿರ್ಮಾಣ ಕಾಮಗಾರಿ ಪ್ರಾರಂಭ ಮಾಡುತ್ತಿದ್ದಂತೆ ಸ್ನೇಹಿತರು, ತೆಂಕಲಹುಂಡಿ ಸ್ಥಳೀಯರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ದೇವಾಲಯಕ್ಕೆ ಜಾನುವಾರು ದಾನ ನೀಡಲು ಮುಂದಾದರು. ಇದನ್ನು ಗಮನಿಸಿ ₹30 ಲಕ್ಷ ಖರ್ಚು ಮಾಡಿ ಗೋಶಾಲೆಯನ್ನು ನಿರ್ಮಾಣ ಮಾಡಲಾಗಿದೆ.

‘ಸದ್ಯ ದಾನ ರೂಪದಲ್ಲಿ ಬಂದ 10 ಜಾನುವಾರುಗಳು ಗೋ ಶಾಲೆಯಲ್ಲಿದೆ. ಇದರ ಸಾಕಣೆಗೆ ಎರಡು ಎಕರೆ ಜಮೀನಿನಲ್ಲಿ ಮೇವಿನ ಕಡ್ಡಿ ಹಾಕಲಾಗಿದ್ದು, ಮೂವರು ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದಾರೆ. ಗೋ ಸಾಕಣೆ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿರುವ ರೈತರು ಇಲ್ಲಿಗೆ ತಂದು ಬಿಡಬಹುದು’ ಎಂದು ನವೀನ್ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT