ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ ಮೀಸಲು ಕ್ಷೇತ್ರ: ಸ್ಥಳೀಯರಿಗೆ ಟಿಕೆಟ್‌, ಬಿಜೆಪಿಯಲ್ಲಿ ಹೆಚ್ಚಿದ ಕೂಗು

ಎರಡೂ ಪಕ್ಷಗಳಲ್ಲಿ ಈ ಬಾರಿ ಹೊಸ ಮುಖ ಕಣಕ್ಕೆ ಸಾಧ್ಯತೆ
Published 28 ಜನವರಿ 2024, 23:30 IST
Last Updated 28 ಜನವರಿ 2024, 23:30 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನಲ್ಲಿ ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದು, ಸ್ಥಳೀಯರಿಗೇ ಟಿಕೆಟ್‌ ನೀಡಬೇಕು ಎಂಬ ಕೂಗು ಬಿಜೆಪಿಯಲ್ಲಿ ಕೇಳುತ್ತಿದೆ. 

ಚಾಮರಾಜನಗರ ಜಿಲ್ಲೆಯ ನಾಲ್ಕು (ಚಾಮರಾಜನಗರ, ಕೊಳ್ಳೇಗಾಲ (ಎಸ್‌ಸಿ ಮೀಸಲು), ಗುಂಡ್ಲುಪೇಟೆ ಮತ್ತು ಹನೂರು) ಮತ್ತು ಮೈಸೂರು ಜಿಲ್ಲೆಯ ನಾಲ್ಕು (ನಂಜನಗೂಡು (ಎಸ್‌ಸಿ ಮೀಸಲು), ತಿ.ನರಸೀಪುರ (ಎಸ್‌ಸಿ ಮೀಸಲು), ವರುಣಾ ಮತ್ತು ಎಚ್‌.ಡಿ.ಕೋಟೆ (ಎಸ್‌ಟಿ ಮೀಸಲು)) ಸೇರಿದಂತೆ ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಈ ಬಾರಿ ಎರಡೂ ಪಕ್ಷಗಳು ಹೊಸ ಮುಖಗಳನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚಿದೆ. 

ಬಿಜೆಪಿಯ ಹಾಲಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಇನ್ನು ಮುಂದೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ; ರಾಜಕೀಯದಿಂದ ನಿವೃತ್ತಿ ಪಡೆಯುವುದಾಗಿ ಈಗಾಗಲೇ ಘೋಷಿಸಿದ್ದಾರೆ. 2009 ಮತ್ತು 2014ರಲ್ಲಿ ಕಾಂಗ್ರೆಸ್‌ನಿಂದ ಸಂಸದರಾಗಿದ್ದ, ಕಳೆದ ಚುನಾವಣೆಯಲ್ಲಿ ಸೋಲುಕಂಡಿದ್ದ ಆರ್‌.ಧ್ರುವನಾರಾಯಣ ನಿಧನರಾಗಿದ್ದಾರೆ. ಹೀಗಾಗಿ ಈ ಬಾರಿ ಚುನಾವಣಾ ಕಣದ ಹುರಿಯಾಳುಗಳು ಯಾರಾಗಬಹುದು ಎಂಬ ಕುತೂಹಲ ಮೂಡಿದೆ. 

ಕಳೆದ ಬಾರಿ ಗೆದ್ದು ಕ್ಷೇತ್ರದಲ್ಲಿ ಖಾತೆ ತೆರೆದಿರುವ ಬಿಜೆಪಿಯಲ್ಲಿ ಆಕಾಂಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಶ್ರೀನಿವಾಸ ಪ್ರಸಾದ್‌ ಕಣದಿಂದ ಹಿಂದೆ ಸರಿದಿರುವುದರಿಂದ ಕ್ಷೇತ್ರದವರು ಮಾತ್ರವಲ್ಲದೆ, ಹೊರ ಜಿಲ್ಲೆಗಳ ಮುಖಂಡರು ಕೂಡ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.  

ಮಾಜಿ ಸಚಿವ ಕೋಟೆ ಶಿವಣ್ಣ, ಕೊಳ್ಳೇಗಾಲದ ಮಾಜಿ ಶಾಸಕ ಎಸ್‌.ಬಾಲರಾಜ್‌, ಕಾಂಪೋಸ್ಟ್‌ ನಿಗಮದ ಮಾಜಿ ಅಧ್ಯಕ್ಷ ಎಸ್‌.ಮಹದೇವಯ್ಯ, ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಂ, ನಿವೃತ್ತ ಐಎಫ್‌ಎಸ್‌ ಅಧಿಕಾರಿ ಆರ್‌.ರಾಜು,  ಶ್ರೀನಿವಾಸ ಪ್ರಸಾದ್‌ ಅವರ ಕಿರಿಯ ಅಳಿಯ ಡಾ.ಎನ್‌.ಎಸ್‌.ಮೋಹನ್‌, ಮತ್ತೊಬ್ಬ ಅಳಿಯ ಹರ್ಷವರ್ಧನ್‌, ವಿಧಾನಪರಿಷತ್‌ನ ಮಾಜಿ ಸದಸ್ಯ ಸಿ.ರಮೇಶ್‌, ಅವರ ಮಗ ಅರ್ಜುನ್‌ ರಮೇಶ್‌, ದಲಿತ ಮುಖಂಡ ವೆಂಕಟರಮಣಸ್ವಾಮಿ (ಪಾಪು), ಚಿತ್ರ ನಿರ್ದೇಶಕ ಎಸ್‌.ಮಹೇಂದರ್‌, ಬೆಂಗಳೂರಿನ ಮುಖಂಡ ರವಿಪ್ರಕಾಶ್‌ ಹೆಸರು ಚಾಲ್ತಿಯಲ್ಲಿದೆ. 

ಕೊಳ್ಳೇಗಾಲದ ಮಾಜಿ ಶಾಸಕ, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎನ್‌.ಮಹೇಶ್‌, ತಾವು ಆಕಾಂಕ್ಷಿ ಎಂದು ಎಲ್ಲೂ ಹೇಳಿಕೊಂಡಿಲ್ಲ. ಆದರೆ, ಅವರ ಹೆಸರೂ ಚರ್ಚೆಯಲ್ಲಿದೆ. 

ಡಾ.ಎನ್‌.ಎಸ್‌.ಮೋಹನ್‌, ಕೆ.ಶಿವರಾಂ, ಆರ್.ರಾಜು, ರವಿಪ್ರಕಾಶ್‌ ಹೊರ ಜಿಲ್ಲೆಯವರಾಗಿದ್ದಾರೆ. ಇದು ಸ್ಥಳೀಯ ಆಕಾಂಕ್ಷಿಗಳಿಗೆ ಪಥ್ಯವಾಗಿಲ್ಲ. ಯಾರಿಗಾದರೂ ಟಿಕೆಟ್‌ ಕೊಡಿ ಆದರೆ, ಸ್ಥಳೀಯರಿಗೇ ಕೊಡಿ ಎಂದು ಕೆಲವರು ಪಕ್ಷದ ನಾಯಕರ ಮೇಲೆ ಒತ್ತಡ ಹಾಕಲು ಆರಂಭಿಸಿದ್ದಾರೆ. 

ಇತ್ತೀಚೆಗೆ ವೆಂಕಟರಮಣಸ್ವಾಮಿ ಅವರ ಅಭಿಮಾನಿ ಬಳಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಉಪಾಧ್ಯಕ್ಷ ಎನ್‌.ಮಹೇಶ್‌ ಮತ್ತು ಜಿಲ್ಲಾ ಘಟಕದ ನೂತನ ಅಧ್ಯಕ್ಷ ಸಿ.ಎಸ್‌.ನಿರಂಜನಕುಮಾರ್‌ ಅವರ ಸಮ್ಮುಖದಲ್ಲೇ ಸ್ಥಳೀಯರಿಗೇ ಟಿಕೆಟ್‌ ಕೊಡಬೇಕು ಎಂಬ ಕೂಗು ಎದ್ದಿದೆ. ಮಹದೇಯ್ಯ ಅವರು ಈ ವಿಚಾರವನ್ನು ಪ್ರಸ್ತಾಪಿಸಿದ್ದರೆ, ಇತರರು ಇದನ್ನು ಅನುಮೋದಿಸಿದ್ದಾರೆ.  

ಕೋಟೆ ಶಿವಣ್ಣ ಅವರು ಕೂಡ ಸುದ್ದಿಗೋಷ್ಠಿ ನಡೆಸಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಈ ಬಾರಿ ಎಡಗೈ ಸಮುದಾಯಕ್ಕೆ ಟಿಕೆಟ್‌ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಕೆ.ಶಿವರಾಂ ಅವರು ಹಲವು ಚುನಾವಣೆಗಳಿಂದ ಇಲ್ಲಿ ಸ್ಪರ್ಧಿಸಲು ಪ್ರಯತ್ನಿಸುತ್ತಿದ್ದಾರೆ. ಮೋಹನ್‌ ಹೆಸರು ಕಳೆದ ಲೋಕಸಭಾ ಚುನಾವಣೆಯಲ್ಲೂ ಕೇಳಿ ಬಂದಿತ್ತು. ಈ ಬಾರಿ ಅವರು ಸರ್ಕಾರಿ ಉದ್ಯೋಗವನ್ನು ತೊರೆದು ಪೂರ್ಣ ಪ್ರಮಾಣದಲ್ಲಿ ರಾಜಕೀಯಕ್ಕೆ ಬಂದಿದ್ದಾರೆ. 

ಕಾಂಗ್ರೆಸ್‌ನಲ್ಲೂ ಇದೆ ಪೈಪೋಟಿ

ಕಾಂಗ್ರೆಸ್‌ನಲ್ಲಿ ಎಂಟು ಮಂದಿಯ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿದೆ. ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್‌ ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರ ಮಗ ಸುನೀಲ್‌ ಬೋಸ್‌ ಕೊಳ್ಳೇಗಾಲದ ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಮಾಜಿ ಸಚಿವ ಬಿ.ಸೋಮಶೇಖರ್‌ ಮುಖಂಡರಾದ ಜೆ.ಸಿ.ಕಿರಣ್‌ ಡಿ.ಎನ್‌.ನಟರಾಜ್‌ ಪ್ರೊ.ಮಹದೇವು ಅವರ ಹೆಸರು ಕೇಳಿಬರುತ್ತಿದೆ.   ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಇತ್ತೀಚೆಗೆ ಹಬ್ಬಿತ್ತು. ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಹೆಸರು ಕೇಳಿಬರುತ್ತಿದೆಯಾದರೂ ಅವರು ಒಲವು ಹೊಂದಿಲ್ಲ. ಮಗನಿಗೆ ಟಿಕೆಟ್‌ ಕೊಡಿಸಲು ಕಸ‌ರತ್ತು ನಡೆಸುತ್ತಿದ್ದಾರೆ.  ಧ್ರುವನಾರಾಯಣ ಅವರ ಮಗ ನಂಜನಗೂಡು ಶಾಸಕ ದರ್ಶನ್‌ ಅವರ ಹೆಸರೂ ಚರ್ಚೆಯಲ್ಲಿದೆ. 

ಸ್ಥಳೀಯರಿಗೆ ಟಿಕೆಟ್‌ ಕೊಡಿ ಎಂದು ಮುಖಂಡರು ಹೇಳುತ್ತಿರುವುದು ನಿಜ. ಅವರ ಅಭಿಪ್ರಾಯವನ್ನು ನಾನು ವರಿಷ್ಠರ ಗಮನಕ್ಕೆ ತರುವೆ.
– ಸಿ.ಎಸ್‌.ನಿರಂಜನಕುಮಾರ್‌, ಚಾಮರಾಜನಗರ ಜಿಲ್ಲಾ ಘಟಕದ ಬಿಜೆಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT