ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: 14 ಕರ್ನಾಟಕ ಪಬ್ಲಿಕ್‌ ಶಾಲೆ ಆರಂಭಕ್ಕೆ ಪ್ರಸ್ತಾವ

ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ಶಾಲೆಗಳು ಆರಂಭವಾಗುವ ನಿರೀಕ್ಷೆ
Published 25 ಫೆಬ್ರುವರಿ 2024, 5:52 IST
Last Updated 25 ಫೆಬ್ರುವರಿ 2024, 5:52 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂದಿನ ಶೈಕ್ಷಣಿಕ ವರ್ಷದಿಂದ (2024–25) ಜಿಲ್ಲೆಯಲ್ಲಿ 14 ಕರ್ನಾಟಕ ಪಬ್ಲಿಕ್‌ ಶಾಲೆಗಳು (ಕೆಪಿಎಸ್‌) ಆರಂಭವಾಗುವ ನಿರೀಕ್ಷೆ ಇದೆ. 

ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ, ಈಗಿರುವ ಸರ್ಕಾರಿ ಶಾಲೆಗಳನ್ನು ಪಬ್ಲಿಕ್‌ ಶಾಲೆಗಳಾಗಿ ಪರಿವರ್ತಿಸುವ ಸಂಬಂಧ ಇಲಾಖೆಗೆ ಪ್ರಸ್ತಾವ ಸಲ್ಲಿಸಿದೆ. ‌

ಸರ್ಕಾರಿ ಶಾಲೆಗಳಲ್ಲೂ ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ವ ಕಾಲೇಜುವರೆಗೆ ಇಂಗ್ಲಿಷ್‌ ಮಾಧ್ಯಮದಲ್ಲಿ  ಶಿಕ್ಷಣ ನೀಡುವ ಉದ್ದೇಶದಿಂದ ಸರ್ಕಾರ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿದೆ.   

ಜಿಲ್ಲೆಯಲ್ಲಿ ಈಗಾಗಲೇ ನಾಲ್ಕೂ ವಿಧಾನಸಭಾ ಕ್ಷೇತ್ರಗಳಲ್ಲೂ ತಲಾ ಒಂದೊಂದು  ಕೆಪಿಎಸ್‌ಗಳು ಕಾರ್ಯಾಚರಿಸುತ್ತಿವೆ. ಚಾಮರಾಜನಗರದ ಚಂದಕವಾಡಿ, ಗುಂಡ್ಲುಪೇಟೆಯ ಹಂಗಳ, ಯಳಂದೂರು ಮತ್ತು ಹನೂರು ತಾಲ್ಲೂಕಿನ ಲೊಕ್ಕನಹಳ್ಳಿಯಲ್ಲಿ ಕೆಪಿಎಸ್‌ಗಳಿದ್ದು, ಚೆನ್ನಾಗಿ ನಡೆಯುತ್ತಿವೆ. 

‌ಈ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಪೋಷಕರೂ ಮನಸ್ಸು ಮಾಡುತ್ತಿದ್ದಾರೆ. ನಾಲ್ಕೂ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವುದು ಇದಕ್ಕೆ ಸಾಕ್ಷಿ. ಚಂದಕವಾಡಿಯ ಕೆಪಿಎಸ್‌ನಲ್ಲಿ 1,180 ಮಕ್ಕಳು, ಹಂಗಳದಲ್ಲಿ 789, ಯಳಂದೂರಿನಲ್ಲಿ 829 ಮತ್ತು ಹನೂರಿನ ಲೊಕ್ಕನಹಳ್ಳಿಯ ಕೆಪಿಎಸ್‌ನಲ್ಲಿ 572 ಮಕ್ಕಳು ಓದುತ್ತಿದ್ದಾರೆ. ‌‌

ಪ್ರಾಥಮಿಕ ಪೂರ್ವ ತರಗತಿಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಮಕ್ಕಳ ದಾಖಲಾತಿಗಾಗಿ ಸಾಮರ್ಥ್ಯಕ್ಕಿಂತಲೂ ಹೆಚ್ಚು ಅರ್ಜಿಗಳು ಬರುತ್ತಿವೆ. ಲಾಟರಿ ಮೂಲಕ ಮಕ್ಕಳನ್ನು ಆಯ್ಕೆ ಮಾಡುವ ಸನ್ನಿವೇಶವೂ ಈ ಹಿಂದೆ ನಿರ್ಮಾಣವಾಗಿತ್ತು. 

‘ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಬೇಕು ಎಂಬುದು ಪೋಷಕರ ಕನಸು. ಎಲ್ಲರಿಗೂ ಖಾಸಗಿ ಶಾಲೆಗಳಿಗೆ ಸೇರಿಸಲು ಆಗುವುದಿಲ್ಲ. ಸರ್ಕಾರ ಕೆಪಿಎಸ್‌ ಮೂಲಕ ಇಂಗ್ಲಿಷ್‌ ಮಾಧ್ಯಮದಲ್ಲಿ ಶಿಕ್ಷಣ ನೀಡುವುದರಿಂದ ಮಕ್ಕಳನ್ನು ಸೇರಿಸುತ್ತಿದ್ದಾರೆ’ ಎಂದು ಹೇಳುತ್ತಾರೆ ಶಿಕ್ಷಣ ಇಲಾಖೆ ಅಧಿಕಾರಿಗಳು ಹಾಗೂ ಶಾಲೆಗಳ ಶಿಕ್ಷಕರು. 

14 ಕೆಪಿಸಿಎಸ್‌ಗಳು: ‘ಇತ್ತೀಚೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಮೈಸೂರಿನಲ್ಲಿ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ್ದರು. ಅಲ್ಲಿ ಪಬ್ಲಿಕ್‌ ಶಾಲೆಗಳ ಬಗ್ಗೆ ಚರ್ಚಿಸಿದ್ದರು. ಹೊಸ ಶಾಲೆ ಆರಂಭಕ್ಕೆ ಪ್ರಸ್ತಾವ ಸಲ್ಲಿಸುವಂತೆಯೂ ಹೇಳಿದ್ದರು’ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಾಲಿನ ಬಜೆಟ್‌ನಲ್ಲೂ ಸಿಎಸ್‌ಆರ್‌ ನೆರವನ್ನು ಬಳಸಿಕೊಂಡು ಕರ್ನಾಟಕ ಪಬ್ಲಿಕ್‌ ಶಾಲೆಗಳನ್ನು ಸ್ಥಾಪನೆ ಮಾಡುವ ಘೋಷಣೆ ಮಾಡಿದ್ದಾರೆ. 

ಹೊಸದಾಗಿ 14 ಪಬ್ಲಿಕ್‌ ಶಾಲೆಗಳ ಸ್ಥಾಪನೆ ಸಂಬಂಧ ಶಿಕ್ಷಣ ಇಲಾಖೆಯ ಅಧಿಕಾರಿಗಳು ಪ್ರಸ್ತಾವ ಸಿದ್ಧಪಡಿಸಿ, ಇಲಾಖೆಗೆ ಕಳುಹಿಸಿದ್ದಾರೆ. ಚಾಮರಾಜನಗರ ಮತ್ತು ಗುಂಡ್ಲುಪೇಟೆಯಲ್ಲಿ ತಲಾ ನಾಲ್ಕು, ಕೊಳ್ಳೇಗಾಲದಲ್ಲಿ ಮೂರು, ಹನೂರಿನಲ್ಲಿ ಎರಡು ಮತ್ತು ಯಳಂದೂರಿನದಲ್ಲಿ ಒಂದು ಶಾಲೆಯನ್ನು ಕೆಪಿಎಸ್‌ ಆಗಿ ಮೇಲ್ದರ್ಜೆಗೆ ಏರಿಸುವ ಪ್ರಸ್ತಾವವನ್ನು ಅಧಿಕಾರಿಗಳು ಮುಂದಿಟ್ಟಿದ್ದಾರೆ. ‌‌‌

ಸರ್ಕಾರ ಒಪ್ಪಿದರೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇವು ಆರಂಭವಾಗಲಿವೆ ಎಂದು ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ. 

ಪ್ರತಿಕ್ರಿಯೆಗಾಗಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಮಚಂದ್ರ ಅರಸ್‌ ಅವರು ದೂರವಾಣಿ ಸಂಪರ್ಕಕ್ಕೆ ಸಿಗಲಿಲ್ಲ.  

ಎಲ್‌ಕೆಜಿಯಿಂದ ಪಿಯುವರೆಗೆ ಇಂಗ್ಲಿಷ್‌ ಮಾಧ್ಯಮ‌ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ ಪಡೆಯಲು ಅವಕಾಶ ನಾಲ್ಕೂ ಕೆಪಿಎಸ್‌ಗಳಲ್ಲಿ ಉತ್ತಮ ಸಂಖ್ಯೆಯಲ್ಲಿ ಮಕ್ಕಳು

ಎಲ್ಲೆಲ್ಲಿ ಹೊಸ ಕೆಪಿಎಸ್‌ಗಳು?

ಚಾಮರಾಜನಗರ: ಅಮಚವಾಡಿ ಹರದನಹಳ್ಳಿ ಸಂತೇಮರಹಳ್ಳಿ ಕುದೇರು ಗುಂಡ್ಲುಪೇಟೆ: ಬೇಗೂರು ತೆರಕಣಾಂಬಿ ಗುಂಡ್ಲುಪೇಟೆ (ಊಟಿ ರಸ್ತೆ) ಮತ್ತು ಕಬ್ಬಳ್ಳಿ ಕೊಳ್ಳೇಗಾಲ: ಕೊಳ್ಳೇಗಾಲದ ಎಸ್‌ವಿಕೆ ಎಂಜಿಎಸ್‌ವಿ ಮತ್ತು ದೊಡ್ಡಿಂದುವಾಡಿ ಹನೂರು:ರಾಮಾಪುರ ಮತ್ತು ಕೂಡ್ಲೂರು ಯಳಂದೂರು: ಕೆಸ್ತೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT