ಶನಿವಾರ, 27 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಸಂರಕ್ಷಣೆ: ಚಾಮರಾಜನಗರ ಜಿಲ್ಲಾಡಳಿತ ಮಾದರಿ ಕಾರ್ಯ

ವರ್ಷದಿಂದ ಕೆರೆಗಳ ಸರ್ವೆ, ಒತ್ತುವರಿ ತೆರವು ಕೆಲಸ ಪ್ರಗತಿಯಲ್ಲಿ
Last Updated 9 ಸೆಪ್ಟೆಂಬರ್ 2021, 3:05 IST
ಅಕ್ಷರ ಗಾತ್ರ

ಚಾಮರಾಜನಗರ: ಮಳೆಯಾಶ್ರಿತ ಕೃಷಿ ಪ್ರಧಾನ ಜಿಲ್ಲೆಯಾಗಿರುವ ಜಿಲ್ಲೆಯಲ್ಲಿ ಕೆರೆಗಳ ಸಂಖ್ಯೆ ಕಡಿಮೆ ಏನೂ ಇಲ್ಲ. 606 ಕೆರೆಗಳು ಇಲ್ಲಿವೆ. ಒಂದು ಕಾಲದಲ್ಲಿ ಬೆಳೆಗಳಿಗೆ‌ ನೀರಿನ ಮೂಲವಾಗಿದ್ದ ಕೆರೆಗಳು ಈಗ ಬತ್ತಿ ಅವಸಾನದತ್ತ ಸಾಗಿವೆ.

ಕೆರೆ ಒತ್ತುವರಿ, ಹೂಳು, ಕಳೆ ಗಿಡಗಳ ಸಮಸ್ಯೆಯಿಂದ ಬಹುತೇಕ ಕೆರೆಗಳು ಪಾಳು ಬಿದ್ದಿವೆ. ಇಂತಹ ಕೆರೆಗಳನ್ನು ಗುರುತಿಸಿ ಅವುಗಳ ಸಂರಕ್ಷಣೆ ಮಾಡಲು ಜಿಲ್ಲಾಡಳಿತ ಕೈಗೊಂಡಿರುವ ಕ್ರಮ ಇತರ ಜಿಲ್ಲೆಗಳಿಗೂ ಮಾದರಿಯಾಗುವಂತಹದ್ದು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಮಾರ್ಗದರ್ಶನದಲ್ಲಿ ಒಂದು ವರ್ಷದಿಂದ ಜಿಲ್ಲೆಯಲ್ಲಿ ಕೆರೆ ಒತ್ತುವರಿ ತೆರವು ಕಾರ್ಯಕ್ರಮ ನಡೆಯುತ್ತಿದೆ. ಕೋವಿಡ್ ಕಾರಣದಿಂದ ಮಧ್ಯದಲ್ಲಿ ಸ್ವಲ್ಪ ನಿಧಾನವಾಗಿದ್ದರೂ ಈಗ ಅದು ಕೊನೆಯ ಹಂತಕ್ಕೆ ಬಂದು ನಿಂತಿದೆ.

ಕೆರೆಗಳನ್ನು ಸಂರಕ್ಷಿಸಿ, ಅವುಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಕೆರೆಗಳ ಅಳತೆ ಮಾಡಿ, ಒತ್ತುವರಿಯಾಗಿದ್ದರೆ, ಅದನ್ನು ಗುರುತಿಸಿ ತೆರವುಗೊಳಿಸಿ ಗಡಿ ಗುರುತಿಸುವ ಕೆಲಸ ನಡೆಯುತ್ತಿದೆ. ಭೂಮಾಪನ ಇಲಾಖೆ, ಕಂದಾಯ ಇಲಾಖೆ ಹಾಗೂ ಸಂಬಂಧಿಸಿದ ಸ್ಥಳೀಯ ಆಡಳಿತದ ಭಾಗೀದಾರಿಕೆಯಲ್ಲಿ ಈ ಕಾರ್ಯ‌ ನಡೆಯುತ್ತಿದೆ.

ಇದಕ್ಕಾಗಿಯೇ ಜಿಲ್ಲಾ ಮಟ್ಟದಲ್ಲಿ ಹಾಗೂ ತಾಲ್ಲೂಕು‌ ಮಟ್ಟದಲ್ಲಿ ಕಾರ್ಯ ಪಡೆಗಳನ್ನು ರಚಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ‌ ಅಧ್ಯಕ್ಷರಾಗಿದ್ದರೆ, ಭೂದಾಖಲೆಗಳ‌ ಇಲಾಖೆ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ್‌ ನೇತೃತ್ವದಲ್ಲಿ ಕಾರ್ಯಪಡೆ ಕಾರ್ಯಾಚರಿಸುತ್ತಿದೆ.

ಭೂಮಾಪನಾ ಇಲಾಖೆಯ ಸಿಬ್ಬಂದಿ ಕೆರೆ ಪ್ರದೇಶದ ಸರ್ವೆ ನಡೆಸಿ, ಹಳೆಯ ದಾಖಲೆಗಳ ಜೊತೆ ಹೋಲಿಕೆ ಮಾಡಿ ಒತ್ತುವರಿಯನ್ನು ಗುರುತಿಸುವ ಕೆಲಸ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಿ, ಕೆರೆಯ ಗಡಿಯನ್ನು ಗುರುತಿಸಿ, ಆಯಾ ಇಲಾಖೆಗಳಿಗೆ ಕೆರೆಗಳನ್ನು ಹಸ್ತಾಂತರಿಸುವ ಕಾರ್ಯ ನಡೆಸುತ್ತಿದ್ದಾರೆ.

74 ಕೆರೆ ಅಳತೆಗೆ ಬಾಕಿ: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ 606 ಕೆರೆಗಳಿದ್ದು, ಭೂಮಾಪನ‌ ಇಲಾಖೆ 532 ಕೆರೆಗಳ ಸರ್ವೆ ಕಾರ್ಯ ಪೂರ್ಣಗೊಳಿಸಿದೆ. ಈ ಪೈಕಿ 251 ಕೆರೆಗಳು ಒತ್ತುವರಿ ಯಾಗಿರುವುದನ್ನು ಗುರುತಿಸಿದೆ. ಇನ್ನು 74 ಕೆರೆಗಳ ಸರ್ವೆ ಮಾಡುವುದು ಬಾಕಿ ಇದೆ.

181 ಕೆರೆಗಳ ಒತ್ತುವರಿ ತೆರವು: 251 ಒತ್ತುವರಿಯಾಗಿರುವ ಕೆರೆಗಳ ಪೈಕಿ 181 ಕೆರೆಗಳ ಒತ್ತುವರಿ ತೆರವುಗೊಳಿಸಲಾಗಿದೆ ಎಂದು‌ ಜಿಲ್ಲಾಡಳಿತ ಹೇಳಿದೆ. ಸರ್ವೆ ಮಾಡಿರುವ ಕೆರೆಗಳ ಪೈಕಿ 70 ಕೆರೆಗಳ ಒತ್ತುವರಿ ತೆರವುಗೊಳಿಸುವುದು ಬಾಕಿ ಇದೆ.

ಕೆರೆಯಂಗಳದಲ್ಲಿ‌‌ ಮನೆಗಳು!

ಗ್ರಾಮೀಣ ಭಾಗದಲ್ಲಿರುವ ಕೆರೆಗಳ ಒತ್ತುವರಿಯನ್ನು ಅಧಿಕಾರಿಗಳು ಹಾಗೂ ಸಿಬ್ಬಂದಿ ಸುಲಭವಾಗಿ ತೆರವುಗೊಳಿಸಿ ಹಸ್ತಾಂತರಿಸಿದ್ದಾರೆ. ಆದರೆ, ಕೊಳ್ಳೇಗಾಲ ಸೇರಿದಂತೆ ಪಟ್ಟಣಗಳಲ್ಲೂ ಕೆರೆಗಳ ಒತ್ತುವರಿಯಾಗಿದೆ. ಇಲ್ಲಿ‌ ಕೃಷಿ ಚಟುವಟಿಕೆಗಳು ನಡೆಯುತ್ತಿವೆ. ಅಲ್ಲದೇ, ಕೆಲವರು ಮನೆಗಳು ಹಾಗೂ ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ.

ಸರ್ವೆ ಸಂದರ್ಭದಲ್ಲಿ ಕೆರೆಗಳ ಅಂಗಳದಲ್ಲಿ 300 ಮನೆಗಳಿರುವುದು ಕಂಡು ಬಂದಿದೆ ಎಂದು ಮೂಲಗಳು ತಿಳಿಸಿವೆ. ಇವುಗಳನ್ನು ತೆರವುಗೊಳಿಸುವುದು ಸವಾಲಿನ ಕೆಲಸ ಎಂದು ಹೇಳುತ್ತಾರೆ ಅಧಿಕಾರಿಗಳು.

ಪ್ರಭಾವಿಗಳು ರಾಜಕಾರಣಿಗಳ ಮೂಲಕ ಒತ್ತುವರಿ ತೆರವಿಗೆ ತಡೆಯೊಡ್ಡುವ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಮನೆಗಳಿರುವ ಜಾಗವನ್ನು ಬಿಟ್ಟು ಉಳಿದ ಭಾಗವನ್ನು ಬಿಟ್ಟು ಉಳಿದ ಭಾಗವನ್ನು ತೆರವುಗೊಳಿಸಬೇಕು ಎಂದು ಕೆಲವು ರಾಜಕಾರಣಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

–––

14,507 ಎಕರೆ –ಜಿಲ್ಲೆಯಲ್ಲಿರುವ 606 ಕೆರೆಗಳ ಒಟ್ಟು ವಿಸ್ತೀರ್ಣ|532 –ಸರ್ವೆ ಪೂರ್ಣಗೊಂಡಿರುವ ಕೆರೆಗಳು|1,904 ಎಕರೆ–ಈವರೆಗೆ ಒತ್ತುವರಿ ಗುರುತಿಸಿರುವ ವಿಸ್ತೀರ್ಣ|1,595 ಎಕರೆ–ಒತ್ತುವರಿ ತೆರವುಗೊಳಿಸಿರುವ ಪ್ರದೇಶ

–––

ಕೆರೆಗಳ ಸರ್ವೆ ಕಾರ್ಯ ಈಗ ಕೊನೆಯ‌ ಹಂತಕ್ಕೆ ಬಂದಿದ್ದು, ಈ ತಿಂಗಳಲ್ಲಿ‌ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅವರು ಸೂಚಿಸಿದ್ದಾರೆ. ಅದರಂತೆ ಕೆಲಸ ಮಾಡುತ್ತಿದ್ದೇವೆ
ಎಂ.ಬಿ.ವಿದ್ಯಾಯಿನಿ, ಭೂ ದಾಖಲೆಗಳ ಇಲಾಖೆ ಉಪನಿರ್ದೇಶಕಿ

–––

ಕೆರೆಗಳನ್ನು ಸಂರಕ್ಷಿಸುವ ಉದ್ದೇಶದಿಂದ ಪ್ರತಿ ತಿಂಗಳಲ್ಲಿ ಒಂದು ದಿನ ಸರ್ವೆ ನಡೆಸಿ, ಒತ್ತುವರಿಯಾಗಿದ್ದರೆ ತೆರವುಗೊಳಿಸಿ ಆಯಾ ಇಲಾಖೆಗಳಿಗೆ ಹಸ್ತಾಂತರಿಸುವ ಕೆಲಸ ನಡೆಯುತ್ತಿದೆ
–ಎಸ್‌.ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT