ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕೊರೊನಾದಿಂದ ನ್ಯಾಯಾಧೀಶರು ಗುಣಮುಖ, ವ್ಯವಸ್ಥೆಗೆ ಮೆಚ್ಚುಗೆ

ಕೋವಿಡ್‌ ಆಸ್ಪತ್ರೆಗೂ ಭೇಟಿ, ವೈದ್ಯರು, ನರ್ಸ್‌, ಸಿಬ್ಬಂದಿಗೆ ಅಭಿನಂದನೆ
Last Updated 17 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ಚಾಮರಾಜನಗರ: ಕೋವಿಡ್‌–19ಗೆ ತುತ್ತಾಗಿದ್ದ ಜಿಲ್ಲೆಯ ನ್ಯಾಯಾಧೀಶ ಶರತ್‌ ಚಂದ್ರ ಅವರು ಗುಣಮುಖರಾಗಿದ್ದು, ಸೋಮವಾರ ಮನೆಗೆ ತೆರಳಿದ್ದಾರೆ.

ಕೋವಿಡ್‌ ಕೇರ್‌ ಕೇಂದ್ರದಲ್ಲಿನ ವ್ಯವಸ್ಥೆ ಹಾಗೂ ನೀಡಿರುವ ಚಿಕಿತ್ಸೆಯ ಬಗ್ಗೆ ಅವರು ಮೆಚ್ಚುಗೆ ಸೂಚಿಸಿದ್ದು, ಕೇರ್‌ ಸೆಂಟರ್‌ನಲ್ಲಿ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಅವರು ಮಾತನಾಡಿರುವ ವಿಡಿಯೊವನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಫೇಸ್‌ ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೋವಿಡ್‌ ದೃಢಪಟ್ಟಿದ್ದರೂ, ಯಾವುದೇ ರೋಗ ಲಕ್ಷಣ ಇಲ್ಲದೇ ಇದ್ದುದರಿಂದ ಶರತ್‌ ಚಂದ್ರ ನಗರದ ಹೊರವಲಯದಲ್ಲಿರುವ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಆಗಸ್ಟ್‌ 9ರಿಂದ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ನೀಡಿರುವ ವೈದ್ಯರು ಹಾಗೂ ನರ್ಸ್‌ಗಳ ಕಾರ್ಯವನ್ನು ಶ್ಲಾಘಿಸಿರುವ ಅವರು, ಕೋವಿಡ್‌ ವಿರುದ್ಧದ ಹೋರಾಟದಲ್ಲಿ ನಿರತರಾಗಿರುವ ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.

‘ಕೋವಿಡ್‌ ಕೇರ್ ಕೇಂದ್ರದಲ್ಲಿ ವೈದ್ಯಾಧಿಕಾರಿಗಳು, ನರ್ಸ್‌ಗಳು ಶ್ರಮ ಹಾಕಿ ದುಡಿಯುತ್ತಿದ್ದಾರೆ. ಅತ್ಯುತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ನರ್ಸ್‌ಗಳು ವಾರ್ಡ್‌ಗಳಿಗೆ ಹೋಗಿ ಸೋಂಕಿತರ ಆರೋಗ್ಯ ವಿಚಾರಿಸಿ, ಔಷಧ ನೀಡುತ್ತಿದ್ದಾರೆ. ವೈದ್ಯರು ದಿನಕ್ಕೆ ಕನಿಷ್ಠ ಎರಡು ಬಾರಿ ಬರುತ್ತಾರೆ. ನರ್ಸ್‌ಗಳು ಮೂರು ಬಾರಿ ಬರುತ್ತಾರೆ. ‌ಚಿಕಿತ್ಸೆ ವಿಚಾರದಲ್ಲಿ ಲೋಪ ಕಂಡು ಬಂದಿಲ್ಲ’ ಎಂದು ಹೇಳಿದ್ದಾರೆ.

‘ಆಹಾರವೂ ಚೆನ್ನಾಗಿದೆ. ಸಮಯಕ್ಕೆ ಸರಿಯಾಗಿ ಬಿಸಿಊಟ ಒದಗಿಸುತ್ತಿದ್ದಾರೆ. ಪೌಷ್ಟಿಕತೆ ಆಹಾರವನ್ನೇ ಕೊಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ಸ್ವಚ್ಛತೆಗೆ ಗಮನ ಬೇಕು: ‘ಸ್ವಚ್ಛತೆಯ ಬಗ್ಗೆ ಸ್ವಲ್ಪ ಗಮನ ಹರಿಸಬೇಕಾಗಿದೆ. ಉಳಿದ ವ್ಯವಸ್ಥೆಗೆ ಹೋಲಿಸಿದರೆ, ಸ್ವಚ್ಛತೆಯಲ್ಲಿ ಒಂದು ಹೆಜ್ಜೆ ಹಿನ್ನಡೆಯಲ್ಲಿದೆ. ವಾರ್ಡ್‌ಗಳು, ಕಾರಿಡಾರ್‌ ಇನ್ನಷ್ಟು ಸ್ವಚ್ಛವಾಗಿರಬೇಕು. ಈ ವಿಚಾರವನ್ನು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಅವರು ಕ್ರಮ ಕೈಗೊಳ್ಳಬಹುದು’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಕ್ರಮ: ‘ನ್ಯಾಯಾಧೀಶರು ತಿಳಿಸಿರುವಂತೆ ಶುಚಿತ್ವದ ವಿಚಾರದಲ್ಲಿ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಫೇಸ್‌ ಬುಕ್‌ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ನಿರ್ಲಕ್ಷ್ಯ ಬೇಡ; ಆರಂಭದಲ್ಲೇ ಚಿಕಿತ್ಸೆ ಪಡೆಯಿರಿ

ಮನೆಗೆ ತೆರಳುವುದಕ್ಕೂ ಮೊದಲು ನ್ಯಾಯಾಧೀಶರು ಕೋವಿಡ್‌ ಆಸ್ಪತ್ರೆಗೂ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು. ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯವನ್ನೂ ವಿಚಾರಿಸಿದರು.

‘ಸೋಂಕಿತರು ಗುಣಮುಖರಾಗಿ ಮನೆಗೆ ಹೋಗುತ್ತಿದ್ದಾರೆ ಅಂದರೆ ಅದಕ್ಕೆ ವೈದ್ಯರು, ನರ್ಸ್‌ಗಳು ಕಾರಣ. ಪಿಪಿಇ ಕಿಟ್‌ ಧರಿಸಿ ಚಿಕಿತ್ಸೆ ನೀಡುವುದು ಎಷ್ಟು ಕಷ್ಟ ಎಂಬುದು ಇಲ್ಲಿ ಬಂದು ನೋಡಿದಾಗ ಗೊತ್ತಾಗುತ್ತದೆ. ಕೆಲವರು ಸಾವಿಗೀಡಾಗಿದ್ದಾರೆ ನಿಜ. ಆದರೆ, ಅವರ ಪರಿಸ್ಥಿತಿ ಗಂಭೀರವಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ವೈದ್ಯರು, ನರ್ಸ್‌ಗಳು, ಗ್ರೂಪ್‌ ಡಿ ನೌಕರರು ಸೇರಿದಂತೆ ಎಲ್ಲರೂ ಶ್ರದ್ಧೆಯಿಂದ ಕೆಲಸ ಮಾಡುತ್ತಿದ್ದಾರೆ. ಅವರ ಪರಿವಾರವನ್ನು ಬಿಟ್ಟು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ನಾವು ಕೋವಿಡ್‌ ಅನ್ನು ಗೆಲ್ಲಬಹುದು’ ಎಂದು ಹೇಳಿದ್ದಾರೆ.

‘ಜನರಲ್ಲಿ ಈ ರೋಗದ ಬಗ್ಗೆ ಇನ್ನಷ್ಟು ಅರಿವು ಮೂಡಬೇಕು. ಆರಂಭದಲ್ಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಯಾರೂ ನಿರ್ಲಕ್ಷ್ಯ ಮಾಡಬಾರದು’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT