ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ ಲೋಕಸಭಾ ಕ್ಷೇತ್ರ | ಅನಿರೀಕ್ಷಿತ ಹೊಡೆತಕ್ಕೆ ಬಿಜೆಪಿ ತತ್ತರ

ಪ್ರಬಲ ಪೈಪೋಟಿಯ ನಿರೀಕ್ಷೆಯಲ್ಲಿದ್ದ ಮುಖಂಡರು, ಮತ್ತೆ ಪಕ್ಷ ಸಂಘಟನೆಯ ಸವಾಲು
Published 8 ಜೂನ್ 2024, 5:50 IST
Last Updated 8 ಜೂನ್ 2024, 5:50 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಈ ಬಾರಿಯ ಫಲಿತಾಂಶ ಬಿಜೆಪಿಗೆ ಅನಿರೀಕ್ಷಿತ ಹೊಡೆತ ನೀಡಿದೆ. ಹೀನಾಯ ಸೋಲನ್ನು ಜೀರ್ಣಿಸಿಕೊಳ್ಳಲು ಮುಖಂಡರಿಗೆ ಆಗುತ್ತಿಲ್ಲ.

ಸೋಲಿಗೆ ಹಲವು ಕಾರಣಗಳನ್ನು ನೀಡಬಹುದಾದರೂ, ಜೆಡಿಎಸ್‌ನೊಂದಿಗೆ ಮೈತ್ರಿಮಾಡಿಕೊಂಡಿದ್ದರಿಂದ ಗೆಲುವು ಸಾಧ್ಯ, ಒಂದು ವೇಳೆ ಇಲ್ಲದಿದ್ದರೂ, ಪ್ರಬಲ ಪೈಪೋಟಿ ಇರಲಿದೆ ಎಂಬ ಲೆಕ್ಕಾಚಾರದಲ್ಲಿ ಮುಖಂಡರು ಇದ್ದರು. ದಾಖಲೆ ಪ್ರಮಾಣದ ಮತದಾನದ ಬಳಿಕ ಸೋಲಿನ ಸಾಧ್ಯತೆಯ ಬಗ್ಗೆ ಕೆಲವರು ಊಹಿಸಿದ್ದರಾದರೂ, 1.88 ಲಕ್ಷ ಮತಗಳ ಸೋಲನ್ನು ಯಾರೂ ನಿರೀಕ್ಷಿಸಿರಲಿಲ್ಲ. 

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯ ನಾಲ್ಕೂ ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋತು ಸುಣ್ಣವಾಗಿದ್ದ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಾದರೂ ಗೆದ್ದು ಪಕ್ಷವನ್ನು ಬಲಪಡಿಸುವ ಲೆಕ್ಕಾಚಾರದಲ್ಲಿತ್ತು. ಅದು ತಲೆಕೆಳಾಗಿದೆ.

ಜಿಲ್ಲೆಯಲ್ಲಿ ಪಕ್ಷವು ಪಾತಾಳಕ್ಕೆ ಕುಸಿದಿದ್ದು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆಯ ಹೊತ್ತಿಗೆ ‍ಪಕ್ಷವನ್ನು ಮತ್ತೆ ಸಂಘಟಿಸುವ ಬಹು ದೊಡ್ಡ ಸವಾಲು ಜಿಲ್ಲಾ ಘಟಕದ ಅಧ್ಯಕ್ಷ ನಿರಂಜನ್‌ಕುಮಾರ್‌ ಮತ್ತು ಅವರ ತಂಡದ ಮುಂದಿದೆ. 

ಸೋಲಾಯಿತೇಕೆ?: ಈ ಬಾರಿ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಾಗಿದ್ದರೂ, ಚುನಾವಣಾ ವೇಳಾಪಟ್ಟಿ ಪ್ರಕಟವಾಗುವುದಕ್ಕಿಂತಲೂ ಮೊದಲೇ ಅಭ್ಯರ್ಥಿಯನ್ನಾಗಿ ಎಸ್‌.ಬಾಲರಾಜ್‌ ಹೆಸರನ್ನು ಘೋಷಿಸಲಾಗಿತ್ತು. ಕಾಂಗ್ರೆಸ್‌ ಅಭ್ಯರ್ಥಿ ಸುನಿಲ್‌ ಬೋಸ್‌ ಎಂಬುದು ಖಚಿತವಾಗುತ್ತಿದ್ದಂತೆಯೇ, ಬಿಜೆಪಿ ಮುಖಂಡರು ಗೆಲುವು ಖಂಡಿತ ಎಂದು ಮಾತನಾಡಲು ಶುರುಮಾಡಿದ್ದರು. 

ಸುನಿಲ್‌ ಬೋಸ್‌ ಚುನಾವಣಾ ರಾಜಕಾರಣಕ್ಕೆ ಹೊಸಬರಾಗಿದ್ದುದು ಮತ್ತು ವೈಯಕ್ತಿಕವಾಗಿ ಪ್ರಭಾವಿ ವರ್ಚಸ್ಸು ಹೊಂದದಿರುವುದು ಅದಕ್ಕೆ ಪ್ರಮುಖ ಕಾರಣ. 

ಆದರೆ, ಚುನಾವಣೆಯನ್ನು ಪ್ರತಿಷ್ಠೆಯನ್ನಾಗಿ ಪರಿಗಣಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು ಚುನಾವಣಾ ತಂತ್ರಗಳನ್ನು ಹೆಣೆದು ಸುನಿಲ್‌ ಬೋಸ್‌ ಪರವಾದ ವಾತಾವರಣ ಸೃಷ್ಟಿಮಾಡಲು ಯಶಸ್ವಿಯಾದರು. ತಮ್ಮ ಮಗನೇ ಅಭ್ಯರ್ಥಿಯಾಗಿದ್ದರಿಂದ ಮಹದೇವಪ್ಪ ಅವರು ತಾವೇ ಅಭ್ಯರ್ಥಿ ಎನ್ನುವಂತೆ ಕೆಲಸ ಮಾಡಿದರು.  

‘ಚುನಾವಣಾ ರಾಜಕೀಯದಿಂದ ನಿವೃತ್ತಿಯಾದ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಸಿದ್ದರಾಮಯ್ಯ, ಮಹದೇವಪ್ಪ, ಸುನಿಲ್‌ ಬೋಸ್‌ ಭೇಟಿ ಮಾಡಿದ್ದು ಕ್ಷೇತ್ರದಲ್ಲಿ ದೊಡ್ಡ ಸಂದೇಶ ರವಾನಿಸಿತು. ಇದೂ ನಮ್ಮ ಗೆಲುವಿಗೆ ಮುಳುವಾಯಿತು’ ಎಂದು ಹೇಳುತ್ತಾರೆ ಬಿಜೆಪಿ ಮುಖಂಡರು. 

ಇದೇ ಸಮಯಕ್ಕೆ ಬಿಜೆಪಿ ಟಿಕೆಟ್‌ ಸಿಗದ ಕಾರಣಕ್ಕೆ ಅಸಮಾಧಾನಗೊಂಡಿದ್ದ ಶ್ರೀನಿವಾಸ ಪ್ರಸಾದ್‌ ಅಳಿಯ ಡಾ.ಮೋಹನ್‌ ಕೂಡ ಏನೂ ಮಾತಾಡದೆ ತಟಸ್ಥರಾದರು. 

‘ಶ್ರೀನಿವಾಸ್‌ ಪ್ರಸಾದ್‌ ತಮ್ಮ ಬೆಂಬಲ ಯಾರಿಗೆ ಎಂದು ಹೇಳಿರಲಿಲ್ಲ. ಬಿಜೆಪಿ ಸಂಸದನಾಗಿಯೇ ಇದ್ದೇನೆ ಎಂದು ಹೇಳಿದ್ದರು. ಹಾಗಿದ್ದರೂ, ಅವರು ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ್ದಾರೆ ಎಂದು ಕಾಂಗ್ರೆಸ್‌ನವರು ಕ್ಷೇತ್ರದಾದ್ಯಂತ ಪ್ರಚಾರ ಮಾಡಿದರು. ಇದೇ ಸಮಯಕ್ಕೆ ಪಕ್ಷದಲ್ಲಿದ್ದ ಕೆಲವು ಮುಖಂಡರು ಕಾಂಗ್ರೆಸ್‌ ಸೇರಿದರು’ ಎಂದು ಪಕ್ಷದ ಜಿಲ್ಲಾ ಪದಾಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

‘ಬಿಜೆಪಿ ಗೆದ್ದರೆ ಸಂವಿಧಾನ ಬದಲಾಯಿಸುತ್ತದೆ ‌ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಮಹದೇವಪ್ಪ ಸೇರಿದಂತೆ ಕಾಂಗ್ರೆಸ್‌ ಶಾಸಕರು, ಮುಖಂಡರು ಹೇಳುತ್ತಲೇ ಬಂದರು. ನಮ್ಮ ಅಭ್ಯರ್ಥಿಯ ವಿರುದ್ಧ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಯಿತು’ ಎಂದು ಅವರು ಹೇಳಿದರು. 

ಕಾಣದ ಒಗ್ಗಟ್ಟು: ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಬಿಟ್ಟು, ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಯಲ್ಲಿ ಭಾರಿ ಮತಗಳ ಅಂತರದಲ್ಲಿ ಪಕ್ಷ ಗೆದ್ದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್‌ನಲ್ಲಿದ್ದಷ್ಟು ಒಗ್ಗಟ್ಟು ಬಿಜೆಪಿಯಲ್ಲಿ ಕಾಣಲಿಲ್ಲ. 

‘ಜನರನ್ನು ಸೆಳೆಯಬಲ್ಲ ನಾಯಕರು ಇರಲಿಲ್ಲ. ತಾರಾ ಪ್ರಚಾರಕರ ಕೊರತೆಯೂ ಕಾಣಿಸಿತು. ಸ್ಥಳೀಯ ಮುಖಂಡರಲ್ಲಿ ಹಲವರು ನೆಪ ಮಾತ್ರಕ್ಕೆ ‍‍ಪ್ರಚಾರ ನಡೆಸಿದ್ದರು. ಕೆಲವರಷ್ಟೇ ಶ್ರಮ ಹಾಕಿ ಪ್ರಚಾರ ನಡೆಸಿದ್ದರು. ಸಂಪನ್ಮೂಲದ ಕೊರೆತೆಯೂ ಕಾಡಿತು. ಕೈಯಿಂದ ಖರ್ಚು ಮಾಡಲು ಯಾವ ಮುಖಂಡರೂ ತಯಾರಿರಲಿಲ್ಲ’ ಎಂಬುದು ಪಕ್ಷದ ಕಾರ್ಯಕರ್ತರ ಮಾತು. 

ಗ್ಯಾರಂಟಿಯ ಏಟು: ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿ ಯೋಜನೆಗಳು ಜಿಲ್ಲೆಯಲ್ಲಿ ಯಶಸ್ಸು ಕಂಡಿವೆ. ಆರ್ಥಿಕವಾಗಿ ದುರ್ಬಲರೇ ಹೆಚ್ಚಿರುವ ಜಿಲ್ಲೆಯಲ್ಲಿ ಈ ಯೋಜನೆಗಳು ಬಡವರ ಕೈಯಲ್ಲಿ ಒಂದಷ್ಟು ಹಣ ಓಡಾಡುವಂತೆ ಮಾಡಿದೆ. ಯೋಜನೆಗಳ ದೊಡ್ಡ ಫಲಾನುಭವಿಗಳಾದ ಮಹಿಳೆಯರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಇತರ ಹಿಂದುಳಿದ ವರ್ಗಗಳ ಮತದಾರರು ಒಟ್ಟಾಗಿ ಕಾಂಗ್ರೆಸ್‌ ಬೆಂಬಲಿಸಿದ್ದಾರೆ ಎನ್ನುವುದನ್ನು ಫಲಿತಾಂಶ ಸ್ಟಷ್ಟವಾಗಿ ಹೇಳುತ್ತದೆ. 

ಸಿ.ಎಸ್‌.ನಿರಂಜನ್‌ಕುಮಾರ್‌
ಸಿ.ಎಸ್‌.ನಿರಂಜನ್‌ಕುಮಾರ್‌
ಇಷ್ಟು ಅಂತರದ ಸೋಲನ್ನು ನಿರೀಕ್ಷಿಸಿರಲಿಲ್ಲ. ಫಲಿತಾಂಶ ಬಗ್ಗೆ ಹೆಚ್ಚು ಯೋಚಿಸದೆ ಜಿಲ್ಲೆಯಲ್ಲಿ ಪಕ್ಷವನ್ನು ಮತ್ತೆ ಕಟ್ಟಲು ಶ್ರಮ ಹಾಕಲಿದ್ದೇವೆ
ಸಿ.ಎಸ್‌.ನಿರಂಜನ್‌ಕುಮಾರ್‌ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಫಲ ನೀಡದ ಮೈತ್ರಿ ಬಿಜೆಪಿಯು ಜೆಡಿಎಸ್‌ನೊಂದಿಗೆ ಮಾಡಿಕೊಂಡ ಮೈತ್ರಿ ಜಿಲ್ಲೆಯಲ್ಲಿ ಹೆಚ್ಚು ಫಲ ನೀಡಿದಂತೆ ಕಾಣುತ್ತಿಲ್ಲ. ಲೋಕಸಭಾ ಕ್ಷೇತ್ರ ವ್ಯಾಪ್ತಿಯ ತಿ.ನರಸೀಪುರದಲ್ಲಿ ಮೈತ್ರಿ ಕೆಲಸ ಮಾಡಿದೆ. ಆದರೆ ಜೆಡಿಎಸ್‌ ಶಾಸಕರಿರುವ ಹನೂರಿನಲ್ಲಿ ಪರಿಣಾಮ ಬೀರಿಲ್ಲ.  ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಎಂ.ಆರ್.ಮಂಜುನಾಥ್‌ ಅವರು ಕಾಂಗ್ರೆಸ್‌ನ ಆರ್‌.ನರೇಂದ್ರ ಅವರ ವಿರುದ್ಧ 17654 ಮತಗಳ ಅಂತರದಿಂದ ಗೆದ್ದಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಹನೂರು ಕ್ಷೇತ್ರದಲ್ಲಿ ಸುನಿಲ್‌ ಬೋಸ್‌ ಅವರು 36957 ಮತಗಳಿಂದ ಮುನ್ನಡೆ ಸಾಧಿಸಿದ್ದರು.  ಬಿಎಸ್‌ಪಿ ವೈಫಲ್ಯ: 2019ರ ಚುನಾವಣೆಯಲ್ಲಿ ಬಿಜೆಪಿ ಗೆಲುವಿನಲ್ಲಿ ಬಿಎಸ್‌ಪಿ ಪಡೆದ ಮತಗಳು ನಿರ್ಣಾಯಕವಾಗಿದ್ದವು. ಈ ಬಾರಿ ಬಿಎಸ್‌ಪಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮತಗಳಿಸಿಲ್ಲ. ಇದು ಕೂಡ ಸೋಲಿಗೆ ಕಾರಣ. 

‘ಗ್ಯಾರಂಟಿ ಯೋಜನೆ ಅಪಪ್ರಚಾರದಿಂದ ಸೋಲು’ ಫಲಿತಾಂಶದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಿ.ಎಸ್‌.ನಿರಂಜನ್‌ಕುಮಾರ್‌ ‘ಬಾಲರಾಜ್‌ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದಾಗ ನಮಗೆ ಗೆಲುವಿನ ವಾತಾವರಣ ಇತ್ತು. ಕಾಂಗ್ರೆಸ್‌ ಅಭ್ಯರ್ಥಿಯನ್ನು ಆಯ್ಕೆ ಮಾಡಿದ ನಂತರ ನಮ್ಮ ಅಭ್ಯರ್ಥಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿತು. ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳಲು ಆರಂಭಿಸಿತು’ ಎಂದರು.  ‘ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳಿಂದಾಗಿ ಅವರು ಗೆದ್ದಿದ್ದರು. ಈಗ ರಾಷ್ಟ್ರಮಟ್ಟದಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್‌ ಘೋಷಿಸಿದ್ದರಿಂದ ಮತದಾರರು ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಿದ್ದಾರೆ. ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಕೊಳ್ಳೇಗಾಲ ಮತ್ತು ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್‌ ಪಡೆದಿರುವ ಮತಗಳ ಮುನ್ನಡೆ ಅಂತರ ಕಡಿಮೆಯಾಗಿದೆ’ ಎಂದು ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT