ಗುರುವಾರ , ಆಗಸ್ಟ್ 11, 2022
20 °C
ಭಾನುವಾರವೂ ಕರ್ತವ್ಯಕ್ಕೆ ಹಾಜರಾಗದ ನೌಕರರು, ರಸ್ತೆಗೆ ಇಳಿಯದ ಕೆಎಸ್‌ಆರ್‌ಟಿಸಿ ಬಸ್‌ಗಳು

ಮುಷ್ಕರ: ಚಾಮರಾಜನಗರ ವಿಭಾಗಕ್ಕೆ ₹1 ಕೋಟಿಗೂ ಹೆಚ್ಚು ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ಭಾನುವಾರವೂ ಮುಷ್ಕರ ಮುಂದುವರಿಸಿದ್ದರಿಂದ ಮೂರನೇ ದಿನವೂ ಜಿಲ್ಲೆಯಲ್ಲಿ ಬಸ್‌ಗಳು ಸಂಚರಿಸಲಿಲ್ಲ. 

ಮುಷ್ಕರದ ಮೊದಲ ದಿನವಾದ ಶುಕ್ರವಾರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಧ್ಯಾಹ್ನದವರೆಗೆ ಚಾಲಕರು, ನಿರ್ವಾಹಕರು ಹಾಗೂ ಇತರ ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದರು. ಹಾಗಾಗಿ ಬಸ್‌ಗಳು ಸಂಚರಿಸಿದ್ದವು.

ಶುಕ್ರವಾರ ಮಧ್ಯಾಹ್ನದ ಮೇಲೆ ಚಾಮರಾಜನಗರದಲ್ಲಿ ನೌಕರರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದರು. ಆ ಬಳಿಕ ಬಸ್‌ ಸಂಚಾರ ವ್ಯತ್ಯಯವಾಗಿತ್ತು.

ಶನಿವಾರ ಇಡೀ ದಿನ ಹಾಗೂ ಭಾನುವಾರವೂ ಬಸ್‌ಗಳು ಸಂಚರಿಸದೇ ಇರುವುದರಿಂದ ಕೆಎಸ್‌ಆರ್‌ಟಿಸಿ ಚಾಮರಾಜನಗರ ವಿಭಾಗಕ್ಕೆ ₹1.10 ಕೋಟಿಗೂ ಹೆಚ್ಚು ನಷ್ಟವಾಗಿದೆ. 

ವಿಭಾಗದಲ್ಲಿ 560 ಬಸ್‌ಗಳು ಇವೆ. ಸದ್ಯ 400 ಬಸ್‌ಗಳು ಸಂಚರಿಸುತ್ತಿವೆ. ಪ್ರತಿ ದಿನ ₹45 ಲಕ್ಷಗಳಷ್ಟು ಆದಾಯ ಬರುತ್ತಿತ್ತು. ಎರಡೂವರೆ ದಿನಗಳಿಂದ ಅಷ್ಟು ಆದಾಯ ತಪ್ಪಿ ಹೋಗಿದೆ. 

ಕೋವಿಡ್‌ ಸಂದರ್ಭದಲ್ಲಿ ಇಳಿಮುಖವಾಗಿದ್ದ ಕೆಎಸ್‌ಆರ್‌ಟಿಸಿಯ ಆದಾಯ ಇತ್ತೀಚೆಗೆ ಚೇತರಿಸಿಕೊಂಡಿತ್ತು. ಕಡಿಮೆ ಬಸ್‌ಗಳನ್ನು ಓಡಿಸುತ್ತಿದ್ದರೂ, ಆದಾಯದಲ್ಲಿ ಪ್ರಗತಿ ಕಂಡು ನಷ್ಟ ಇಳಿಮುಖವಾಗಿತ್ತು. 

‘ಎರಡೂವರೆ ದಿನಗಳಿಂದ ಬಸ್‌ಗಳ ಓಡಾಟ ಸಂಪೂರ್ಣವಾಗಿ ಸ್ಥಗಿತವಾಗಿದೆ. ಒಂದು ಕೋಟಿ ರೂಪಾಯಿಗೂ ಹೆಚ್ಚು ಆದಾಯ ಖೋತಾ ಆಗಿದೆ. ಮಾತುಕತೆ ಇನ್ನೂ ಪ್ರಗತಿಯಲ್ಲಿರುವುದರಿಂದ ಬಸ್‌ ಸಂಚಾರ ಯಾವಾಗಿನಿಂದ ಪುನರಾರಂಭವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್‌.ಬಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಯಾಣಿಕರಿಗೆ ತೊಂದರೆ: ಭಾನುವಾರವೂ ಕೆಎಸ್‌ಆರ್‌ಟಿಸಿ ಬಸ್‌ಗಳಿಲ್ಲದೇ ಸಾರ್ವಜನಿಕರು ತೊಂದರೆ ಅನುಭವಿಸಿದರು. ರಜಾ ದಿನವಾಗಿದ್ದರಿಂದ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಜನರ ಸಂಖ್ಯೆ ಕಡಿಮೆ ಇತ್ತು. ಆದರೂ, ಮೈಸೂರು, ಬೆಂಗಳೂರು ಹಾಗೂ ಜಿಲ್ಲೆಯ ‌ಪ್ರಮುಖ ಪಟ್ಟಣಗಳಿಗೆ ಹೊರಟಿದ್ದ ಜನರು ಖಾಸಗಿ ಬಸ್‌ಗಳನ್ನು ಅವಲಂಬಿಸಬೇಕಾಯಿತು. 

ಗ್ರಾಮೀಣ ಭಾಗಕ್ಕೆ ಹೋಗುವ ಜನರು ಆಟೊ, ಮ್ಯಾಕ್ಸಿ ಕ್ಯಾಬ್‌ ಹಾಗೂ ಖಾಸಗಿ ಬಸ್‌ಗಳ ಮೊರೆ ಹೋಗುವುದು ಅನಿವಾರ್ಯವಾಯಿತು. ನಗರದ ಖಾಸಗಿ ಬಸ್‌ ನಿಲ್ದಾಣದಲ್ಲಿ ಜನರ ಓಡಾಟ ಹೆಚ್ಚಿತ್ತು. ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕೆಲವು ಖಾಸಗಿ ಬಸ್‌ಗಳು ಕೆಎಸ್‌ಆರ್‌ಟಿಸಿ ನಿಲ್ದಾಣದ ಬಳಿಯಿಂದಲೇ ಸಂಚರಿಸುತ್ತಿದ್ದವು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು