ಬುಧವಾರ, ಮೇ 18, 2022
27 °C
ರಾಜ್ಯದಲ್ಲಿ ನಡೆಯುತ್ತಿರುವ ಕೋಮು ಸಂಘರ್ಷ ಘಟನೆಗಳಿಗೆ ಚಾಮರಾಜನಗರ ಸಂಸದರ ಪ್ರತಿಕ್ರಿಯೆ

ಧರ್ಮದ ಅಫೀಮು ತಿಂದು, ನಶೆ ಏರಿದೆ: ಶ್ರೀನಿವಾಸ ಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಧರ್ಮವನ್ನು ಮನುಷ್ಯನ ಒಳಿತಿಗೆ ಉಪಯೋಗಿಸಬೇಕು. ಆದರೆ, ನಮ್ಮಲ್ಲಿ ಧರ್ಮದ ವೈಭವೀಕರಣ ನಡೆಯುತ್ತಿದೆ. ಧರ್ಮದ ಅಫೀಮನ್ನು ನಾವು ತಿಂದಿದ್ದೇವೆ. ಅದು ನಶೆ ಏರಿ ಏನೇನೋ ಮಾಡಿಸುತ್ತಿದೆ. ದಾರಿ ತಪ್ಪಿಸುತ್ತಿದೆ’ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಹೇಳಿದರು. 

ರಾಜ್ಯದಲ್ಲಿ ವರದಿಯಾಗುತ್ತಿರುವ ಕೋಮು ಸಂಘರ್ಷ ಪ್ರಕರಣಗಳ ಬಗ್ಗೆ ನಗರದಲ್ಲಿ ಸೋಮವಾರ ಪ್ರತಿಕ್ರಿಯಿಸಿದ ಅವರು, ‘ನಮ್ಮದು ಜಾತ್ಯತೀತ ರಾಷ್ಟ್ರ. ಎಲ್ಲ ಧರ್ಮಗಳನ್ನು ಅವುಗಳ ವಿಧಿ ವಿಧಾನಗಳನ್ನು ಗೌರವಿಸಬೇಕು. ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಘಟನೆಗಳನ್ನು ನೋಡಿದರೆ ವಿಷಾದವಾಗುತ್ತದೆ. ಇಂತಹದ್ದು ನಡೆಯಬಾರದು’ ಎಂದರು. 

ಸಂಘರ್ಷವನ್ನು ನಿಭಾಯಿಸಲು ಸರ್ಕಾರ ವಿಫಲವಾಗಿದೆಯೇ ಎಂದು ಕೇಳಿದ್ದಕ್ಕೆ, ‘ಅಲ್ಲಲ್ಲಿ ನಡೆದಿರುವ ಘಟನೆಗಳಿಗೂ ಸರ್ಕಾರಕ್ಕೂ ಸಂಬಂಧ ಇಲ್ಲ. ಸರ್ಕಾರ ತಕ್ಷಣವೇ ಘಟನೆಗಳನ್ನು ತಡೆಯಲು ಕಾರ್ಯೋನ್ಮುಖವಾಗಿದೆ. ಇಂತಹದ್ದಕ್ಕೆ ರಾಜ್ಯದಲ್ಲಿ ಅವಕಾಶ ಇಲ್ಲ ಎಂದು ಮುಖ್ಯಮಂತ್ರಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದು ಉತ್ತರಿಸಿದರು. 

ಮೊದಲು ಗೆದ್ದು ತೋರಿಸಲಿ: ಮಣ್ಣಿಗೆ ಹೋಗುವುದರ ಒಳಗಾಗಿ ದಲಿತರೊಬ್ಬರನ್ನು ಮುಖ್ಯಮಂತ್ರಿ ಮಾಡುವುದಾಗಿ ಜೆಡಿಎಸ್‌ ಮುಖಂಡ ಎಚ್‌.ಡಿ.ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪ್ರಸಾದ್‌ ಅವರು, ‘ಮಾಡಲಿ ಸಂತೋಷ. ಮೊದಲು ಗೆದ್ದು ತೋರಿಸಲಿ. ಗೆದ್ದ ಮೇಲೆ ಅಲ್ಲವೇ ಮುಖ್ಯಮಂತ್ರಿಯ ಪ್ರಶ್ನೆ. ಜೆಡಿಎಸ್‌ನಲ್ಲಿ ಇರುವ ಮುಖಂಡರೆಲ್ಲಾ ಬಿಟ್ಟು ಹೋಗುತ್ತಿದ್ದಾರೆ. ಜಿ.ಟಿ.ದೇವೇಗೌಡ, ಗುಬ್ಬಿ ಶ್ರೀನಿವಾಸ್‌ ಮೊದಲದಾವರು ಪಕ್ಷ ತೊರೆಯುತ್ತಿದ್ದಾರೆ. ಎಲ್ಲವೂ ಜನರಿಗೆ ಗೊತ್ತಿದೆ. ಅವರು ತೀರ್ಮಾನ ಮಾಡುತ್ತಾರೆ. ಆ ಬಗ್ಗೆ ಮಾತನಾಡಲು ನಾವ್ಯಾರು? ಸಿ.ಎಂ.ಇಬ್ರಾಹಿಂ ಅವರು ರಾಜ್ಯಾಧ್ಯಕ್ಷರಾಗಿ ನೇಮಕವಾದ ತಕ್ಷಣ ಎಲ್ಲವೂ ಆಗಿ ಬಿಡುತ್ತದೆಯೇ’ ಎಂದು ವ್ಯಂಗ್ಯವಾಡಿದರು.   

ಮೈಸೂರಿನವರಿಗೆ ಸಚಿವ ಸ್ಥಾನ: ಸಚಿವ ಸಂಪುಟ ವಿಸ್ತರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಾನು ಸಲಹೆ ನೀಡಲು ಹೋಗುವುದಿಲ್ಲ, ಅವರು ಕೇಳುವುದೂ ಇಲ್ಲ. ಆದರೆ, ಮೈಸೂರು ಭಾಗಕ್ಕೆ ಸಚಿವ ಸ್ಥಾನ ಕೊಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ, ಖಂಡಿತ ಮೈಸೂರು ಭಾಗದವರು ಸಚಿವರಾಗಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಬಿಜೆಪಿ ಆಶಾವಾದಿ:  ‘ಆಡಳಿತ ವಿರೋಧಿ ಸನ್ನಿವೇಶವಿದ್ದರೂ ನಾಲ್ಕು‌ ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.  ಪಕ್ಷವು ಶಕ್ತಿಯುತವಾಗಿ ಹೋರಾಟ ನಡೆಸಿದೆ. ಜನರು ಬಿಜೆಪಿ ಆಡಳಿತ ಮೆಚ್ಚಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಆಡಳಿತ ಉತ್ತಮವಾಗಿದೆ. ಯೋಗಿ ಆಡಳಿತವನ್ನು ಜನರು ಮೆಚ್ಚಿದ್ದಾರೆ. ಹಾಗಾಗಿಯೇ ಬೆಲೆ ಏರಿಕೆ, ಪೆಟ್ರೋಲಿಯಂ ಉತ್ಪನ್ನಗಳ ದರ ಏರಿಕೆ, ಕೋವಿಡ್ ಸಂಕಷ್ಟಗಳ ನಡುವೆಯೂ ಜನರು ಬಿಜೆಪಿ ಗೆಲ್ಲಿಸಿದ್ದಾರೆ. ಬಿಜೆಪಿ ಸಂಘಟಿತ ಪಕ್ಷ. ಒಳ್ಳೆಯ ನಾಯಕರಿದ್ದಾರೆ. ವಿರೋಧ ಪಕ್ಷಗಳು ಬಲಹೀನವಾಗಿವೆ. ಅಲ್ಲಿ ರಾಷ್ಟ್ರೀಯ ನಾಯಕರೇ ಇಲ್ಲ. ನಾಲ್ಕು ರಾಜ್ಯಗಳ ಫಲಿತಾಂಶ ನೋಡಿಯೇ ಕರ್ನಾಟಕದಲ್ಲೂ 150 ಸ್ಥಾನಗಳನ್ನು ಗಳಿಸುವ ಬಗ್ಗೆ ಪಕ್ಷ ಆಶಾವಾದಿಯಾಗಿದೆ’ ಎಂದು ಪ್ರಶ್ನೆಯೊಂದಕ್ಕೆ ಶ್ರೀನಿವಾಸ ಪ್ರಸಾದ್ ಉತ್ತರಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು