ಶನಿವಾರ, ಡಿಸೆಂಬರ್ 5, 2020
19 °C
ಜಿಲ್ಲಾಡಳಿತದಿಂದ ವಿನೂತನ ಯೋಜನೆ

PV Web Exclusive: ಚಾಮರಾಜನಗರದ ಶತಮಾನ ಕಂಡ ಶಾಲೆಗಳಿಗೆ ಅಭಿವೃದ್ಧಿ ಭಾಗ್ಯ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಇನ್ನಷ್ಟು ಶಕ್ತಿ ತುಂಬಿ, ಅವುಗಳನ್ನು ಉಳಿಸುವ ಕೆಲಸ ಮಾಡಬೇಕು ಎಂಬ ಕೂಗು ಕೇಳಿ ಬರುತ್ತಿರುವುದರ ನಡುವೆಯೇ ಗಡಿ ಜಿಲ್ಲೆ ಚಾಮರಾಜನಗರದ ಜಿಲ್ಲಾಡಳಿತ, ಶತಮಾನ ಕಂಡಿರುವ ಶಾಲೆಗಳ ಅಭಿವೃದ್ಧಿಗಾಗಿ ವಿನೂತನ ಯೋಜನೆ ರೂಪಿಸಿದೆ. 

ಪಾರಂಪರಿಕ ಶಾಲೆಗಳನ್ನು ರಕ್ಷಿಸಿ ಅಭಿವೃದ್ಧಿ ಪಡಿಸುವ ಯೋಜನೆ ಶಿಕ್ಷಣ ಇಲಾಖೆಯಲ್ಲಿದೆ. ಅದಕ್ಕೆ ಅನುದಾನವನ್ನೂ ಬಿಡುಗಡೆ ಮಾಡುತ್ತದೆ. ಆದರೆ, 100 ವರ್ಷಗಳನ್ನು ಪೂರೈಸಿರುವ ಎಲ್ಲ ಸರ್ಕಾರಿ ಶಾಲೆಗಳನ್ನು ಸಂರಕ್ಷಿಸಿ, ಅವುಗಳನ್ನು ಮಾದರಿ ಶಾಲೆಗಳನ್ನಾಗಿ ಅಭಿವೃದ್ಧಿ ಪಡಿಸುವ ಯೋಜನೆ ಬಗ್ಗೆ ಪ್ರಸ್ತಾಪ ಆಗಿರುವುದು ರಾಜ್ಯದಲ್ಲೇ ಮೊದಲು.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರ ಪರಿಕಲ್ಪನೆಯಲ್ಲಿ ರೂಪುಗೊಂಡಿರುವ ಈ ಯೋಜನೆ, ಶೀಘ್ರದಲ್ಲಿ ಅನುಷ್ಠಾನಕ್ಕೆ ಬರಲಿದೆ. ಶತಮಾನಕ್ಕಿಂತಲೂ ಹೆಚ್ಚು ಸಮಯದಿಂದ ಮಕ್ಕಳಿಗೆ ಜ್ಞಾನಧಾರೆ ಎರೆಯುತ್ತಿರುವ ಶಾಲೆಗಳನ್ನು ಗುರುತಿಸುವ ಕೆಲಸ ಈಗಾಗಲೇ ನಡೆದಿದೆ.

ಜಿಲ್ಲೆಯ ಐದು ತಾಲ್ಲೂಕುಗಳ 35 ಶಾಲೆಗಳು ಶತಮಾನ ಕಂಡಿವೆ. ಚಾಮರಾಜನಗರ ತಾಲ್ಲೂಕಿನಲ್ಲಿ 11, ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲ ತಾಲ್ಲೂಕಿನಲ್ಲಿ ತಲಾ 10, ಹನೂರು ಮತ್ತು ಯಳಂದೂರು ತಾಲ್ಲೂಕುಗಳಲ್ಲಿ ತಲಾ ಎರಡು ಶಾಲೆಗಳಿವೆ. ಇಲ್ಲಿ 5,710 ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.

ಈ ಶಾಲೆಗಳ ಅಭಿವೃದ್ಧಿ ಸಂಬಂಧ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಅಧಿಕಾರಿಗಳ ಹಲವು ಸಭೆಗಳನ್ನು ನಡೆಸಿದ್ದಾರೆ. ಶಿಕ್ಷಣ ಇಲಾಖೆಯ ಅಧಿಕಾರಿಗಳು ಕ್ರಿಯಾ ಯೋಜನೆ ಸಿದ್ಧಪಡಿಸುತ್ತಿದ್ದಾರೆ. ಎರಡು ಮೂರು ದಿನಗಳಲ್ಲಿ ಅದು ಕೂಡ ಅಂತಿಮವಾಗಲಿದೆ.

‘ಒಂದು ಶಾಲೆಗೆ 100 ವರ್ಷಗಳು ಆಗಿದೆ ಎಂದರೆ, ಅದು ಸಣ್ಣ ವಿಷಯವಲ್ಲ. ಅದು ದೊಡ್ಡ ಪರಂಪರೆಯೊಂದನ್ನು ಹುಟ್ಟುಹಾಕಿರುತ್ತದೆ. ಸಾವಿರಾರು ವಿದ್ಯಾರ್ಥಿಗಳಿಗೆ ಆ ಶಾಲೆ ಜ್ಞಾನವನ್ನು ನೀಡಿರುತ್ತದೆ. ಬದುಕನ್ನು ಕಟ್ಟಿ ಕೊಟ್ಟಿರುತ್ತದೆ. ಆ ಶಾಲೆಯನ್ನು ನಂಬಿ ಸಾವಿರಾರು ಜನ ಬಾಳಿರುತ್ತಾರೆ. ಅಂತಹ ಶಾಲೆಗಳನ್ನು ಹೇಗೆ ಉಳಿಸಬಹುದು, ಪುನರುಜ್ಜೀವನಗೊಳಿಸಬಹುದು ಎಂಬ ಯೋಚನೆ ಬಂತು. ಅದು ಶತಮಾನ ಕಂಡ ಶಾಲೆಗಳ ಅಭಿವೃದ್ಧಿ ಯೋಜನೆಗೆ ಪ್ರೇರಣೆಯಾಯಿತು’ ಎಂದು ಯೋಜನೆಯ ಕಲ್ಪನೆ ಚಿಗುರೊಡೆದ ಬಗೆಯನ್ನು ವಿವರಿಸುತ್ತಾರೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು. 

‘ಶಿಕ್ಷಣ ಇಲಾಖೆ ಮೂರು ಪಾರಂಪರಿಕ ಶಾಲೆಗಳ ಅಭಿವೃದ್ಧಿಗಾಗಿ ತಲಾ ₹5 ಲಕ್ಷ ಅನುದಾನ ನೀಡುತ್ತದೆ. ಅದೇ ರೀತಿಯಲ್ಲಿ ಉಳಿದ ಶಾಲೆಗಳನ್ನು ಅಭಿವೃದ್ಧಿ ಪಡಿಸುವುದು ನಮ್ಮ ಉದ್ದೇಶ. ಶತಮಾನ ಕಂಡ ಶಾಲೆಗಳನ್ನು ಮಾದರಿ ಶಾಲೆಗಳನ್ನಾಗಿ ಪರಿವರ್ತಿಸುವ ಯೋಜನೆ ಹಾಕಿಕೊಂಡಿದ್ದೇವೆ. ಈ ಕಾರ್ಯದಲ್ಲಿ ಸಮುದಾಯದ ಭಾಗವಹಿಸುವಿಕೆ ಇರಬೇಕು.  ಶಾಲೆಗಳ ಹಳೆ ವಿದ್ಯಾರ್ಥಿಗಳು ತೊಡಗಿಕೊಳ್ಳಬೇಕು. ಗ್ರಾಮಸ್ಥರು, ಪೋಷಕರು, ಸ್ವಯಂ ಸೇವಾ ಸಂಸ್ಥೆಗಳು ಹೀಗೆ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಈ ಯೋಜನೆಯಲ್ಲಿ ಭಾಗಿಯಾಗಬೇಕು’ ಎಂಬ ಆಶಯವನ್ನು ಅವರು ವ್ಯಕ್ತಪಡಿಸುತ್ತಾರೆ.

ಯೋಜನೆಯ ರೂಪು– ರೇಷೆ

ಶಾಲಾ ಕಟ್ಟಡಕ್ಕೆ ಹಾನಿಯಾಗಿದ್ದರೆ ಅದನ್ನು ದುರಸ್ತಿಗೊಳಿಸುವುದು, ಬಣ್ಣ ಬಳಿಯುವುದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ಆಧುನೀಕರಣ, ಪೀಠೋಪಕರಣಗಳನ್ನು ಒದಗಿಸುವುದು, ಜಾಗ ಇದ್ದರೆ ಕೈತೋಟ ನಿರ್ಮಾಣ, ಆಧುನಿಕ ತಂತ್ರಜ್ಞಾನದ ಸ್ಮಾರ್ಟ್‌ ತರಗತಿಗಳಿಗೆ ಅಗತ್ಯವಾದ ಉಪರಕಣಗಳನ್ನು ಒದಗಿಸುವುದು ಹಾಗೂ ಅದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಕಲ್ಪಿಸುವುದು... ಇಂತಹ ಕಣ್ಣಿಗೆ ಕಾಣುವ ಅಭಿವೃದ್ಧಿ ಕೆಲಸಗಳನ್ನು ಶಾಲೆಗಳಲ್ಲಿ ಜಿಲ್ಲಾಡಳಿತ ಕೈಗೊಳ್ಳಲಿದೆ.

ಯೋಜನೆ ಅನುಷ್ಠಾನ ಸಂಬಂಧ ಜಿಲ್ಲಾಧಿಕಾರಿ ಅವರು ಈಗಾಗಲೇ ಸಮನ್ವಯ ಸಮಿತಿ ರಚಿಸಿದ್ದಾರೆ. ಜಿಲ್ಲೆಯ ಸಾಹಿತಿಗಳು, ಶಿಕ್ಷಣ ತಜ್ಞರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದರಲ್ಲಿದ್ದಾರೆ. ಆಯಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಯೋಜನೆ ಅನುಷ್ಠಾನದ ಜವಾಬ್ದಾರಿ ನೀಡಲಾಗಿದೆ.

‘ಈಗಾಗಲೇ ಒಂದು ಬಾರಿ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದ್ದೆವು. ಅವರು ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ. ಪರಿಷ್ಕೃತ ಕ್ರಿಯಾ ಯೋಜನೆಯನ್ನು ಶೀಘ್ರದಲ್ಲೇ ಸಲ್ಲಿಸಲಿದ್ದೇವೆ’ ಎಂದು ಹೇಳುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್‌.ಟಿ.ಜವರೇಗೌಡ.

ಮೊದಲ ಹಂತದಲ್ಲಿ ಗಣಿಬಾಧಿತ ಪ್ರದೇಶದ ಶಾಲೆಗಳು

‘ಯೋಜನೆಗೆ ಸಂಪನ್ಮೂಲ ಸಂಗ್ರಹಿಸುವುದು ದೊಡ್ಡ ಕೆಲಸವೇನಲ್ಲ. ಆಯಾ ಶಾಲೆಗಳ ಹಳೆ ವಿದ್ಯಾರ್ಥಿಗಳನ್ನು ಗುರುತಿಸಿ, ಅವರ ಸಂಘವನ್ನು ರಚಿಸಲು ಪ್ರೇರೇಪಿಸುತ್ತೇವೆ. 40–50 ವರ್ಷಗಳ ಹಿಂದೆ ಈ ಶಾಲೆಗಳಲ್ಲಿ ಓದಿದವರು ಈಗ ದೊಡ್ಡ ದೊಡ್ಡ ಹುದ್ದೆಯಲ್ಲಿ ಇರಬಹುದು. ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಏರಿರಬಹುದು. ಅವರು ಸ್ವಲ್ಪ ಕಾಳಜಿ ವಹಿಸಿದರೂ ಸಾಕು. ಸ್ವಯಂಸೇವಾ ಸಂಸ್ಥೆಗಳು ಕೂಡ ಇದರಲ್ಲಿ ಭಾಗಿಯಾಗಬಹುದು. ಕಾರ್ಪೊರೇಟ್‌ ಕಂಪನಿಗಳ ಸಿಎಸ್‌ಆರ್‌ (ಸಾಮಾಜಿಕ ಜವಾಬ್ದಾರಿ) ಯೋಜನೆ ಅಡಿಯಲ್ಲಿ ಅನುದಾನ ಪಡೆಯುವುದಕ್ಕೂ ಅವಕಾಶ ಇದೆ’ ಎಂದು ರವಿ ಅವರು ವಿವರಿಸುತ್ತಾರೆ.


ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ

ಗುರುತಿಸಲಾಗಿರುವ 35 ಶಾಲೆಗಳ ಪೈಕಿ ಆರು ಶಾಲೆಗಳು ಗಣಿಬಾಧಿತ ಪ್ರದೇಶಗಳಿವೆ. ಮೊದಲ ಹಂತದಲ್ಲಿ ಇವುಗಳನ್ನು ಅಭಿವೃದ್ಧಿ ಪಡಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಗಣಿಬಾಧಿತ ಪ್ರದೇಶದ ಅಭಿವೃದ್ಧಿಗೆ ಜಿಲ್ಲಾ ಖನಿಜ ನಿಧಿಯಿಂದ ಹಣಕಾಸು ನೆರವು ಪಡೆಯುವುದಕ್ಕೆ ಅವಕಾಶ ಇದೆ. ಈ ನಿಧಿಯನ್ನು ಬಳಸಿಕೊಂಡು ಆರು ಶಾಲೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಸಿದ್ಧತೆ ನಡೆದಿದೆ.

‘ನಾಲ್ಕು ಗೋಡೆಗಳ ಒಳಗೆ ಪಾಠ ಮಾಡುವುದು/ಕೇಳುವುದು ಶಿಕ್ಷಣವಲ್ಲ. ಶಾಲೆ ಹಾಗೂ ಆದರ ಸುತ್ತಲಿನ ಪರಿಸರ ಸುತ್ತಲಿನ ಪರಿಸರದಲ್ಲಿ ಸುಸ್ಥಿರ ಅಭಿವೃದ್ಧಿಯಾಗಬೇಕು. ಕಣ್ಣಿಗೆ ಕಾಣುವಂತಹ ಬದಲಾವಣೆಗಳಾಗಬೇಕು. ಆಗ ಶಿಕ್ಷಣಕ್ಕೊಂದು ಅರ್ಥ ಬರುತ್ತದೆ. ಶತಮಾನಗಳಿಂದ ಶಿಕ್ಷಣ ನೀಡುತ್ತ ಬಂದಿರುವ ಶಾಲೆಗಳು ಜಿಲ್ಲೆಯ ಆಸ್ತಿ. ಅದರ ಅಭಿವೃದ್ಧಿಗೆ ಜನರೂ ಸಹಕಾರ ನೀಡಬೇಕು’ ಎಂದು ಪ್ರತಿಪಾದಿಸುತ್ತಾರೆ ಜಿಲ್ಲಾಧಿಕಾರಿ ಎಂ.ಆರ್.ರವಿ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು