ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ ಬಿಜೆಪಿ ಅಭ್ಯರ್ಥಿ ಬಾಲರಾಜ್‌ಗೆ ಡಾ.ಮೋಹನ್‌ ಬೆಂಬಲ ಘೋಷಣೆ

ಬಿಜೆಪಿಯಲ್ಲೇ ಇರುವೆ: ಡಾ.ಮೋಹನ್‌ ಸ್ಪಷ್ಟನೆ
Published 18 ಮಾರ್ಚ್ 2024, 15:01 IST
Last Updated 18 ಮಾರ್ಚ್ 2024, 15:01 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅಳಿಯ ಡಾ.ಎನ್‌.ಎಸ್‌.ಮೋಹನ್‌ ಅವರು ಬಿಜೆಪಿಯಲ್ಲೇ ಇರುವುದಾಗಿ ಘೋಷಿಸಿದ್ದು, ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್‌.ಬಾಲರಾಜ್‌ ಅವರನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. 

ಬಾಲರಾಜ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡುತ್ತಿದ್ದಂತೆಯೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದ ಮೋಹನ್‌ ಅವರು ಸೋಮವಾರ ಪತ್ರಿಕಾ ಹೇಳಿಕೆ ನೀಡಿದ್ದು, ‘ಚಾಮರಾಜನಗರ ಕ್ಷೇತ್ರದಿಂದ ಬಿಜೆಪಿಯ ಸಂಸದರನ್ನು ಆಯ್ಕೆ ಮಾಡುವುದು ನಮ್ಮ ಗುರಿ’ ಎಂದು ಹೇಳಿದ್ದಾರೆ.   

‘ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ನಾನು ಪ್ರಮುಖನಾಗಿದ್ದೆ. ವರಿಷ್ಠರು ಎಲ್ಲವನ್ನೂ ಪರಿಗಣಿಸಿ, ಅಂತಿಮವಾಗಿ ಎಸ್.ಬಾಲರಾಜ್‌ ಅವರಿಗೆ ಅವಕಾಶ ನೀಡಿದ್ದಾರೆ. ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ನಾನು ಕೂಡ ಸಮಯವನ್ನು ಕೊಡುವ ಜೊತೆಗೆ ಕ್ಷೇತ್ರದಲ್ಲಿ ಮುಖಂಡರೊಂದಿಗೆ ಪ್ರವಾಸ ಮಾಡಿ, ದೇಶದ ಅಭಿವೃದ್ದಿಗಾಗಿ ಮೋದಿ ಬೇಕು ಎಂಬುದನ್ನು ಮತದಾರರಿಗೆ ತಿಳಿಸುವ ಮೂಲಕ ನಮ್ಮ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಮತ್ತೊಮ್ಮೆ ದೆಹಲಿಗೆ ಕಳುಹಿಸಬೇಕಾಗಿದೆ. ಇದಕ್ಕಾಗಿ ಸಾಮಾನ್ಯ ಕಾರ್ಯಕರ್ತನಂತೆ ದುಡಿಯುತ್ತೇನೆ’ ಎಂದು ಹೇಳಿದ್ದಾರೆ. 

‘ಏಳು ವರ್ಷಗಳಿಂದ ಕ್ಷೇತ್ರದಲ್ಲಿ ಸಕ್ರಿಯವಾಗಿ ಸಂಘಟನೆ ಮಾಡುವ ಜೊತೆಗೆ ಆರೋಗ್ಯ ಶಿಬಿರಗಳು, ಸಾಮಾಜಿಕ ಸೇವಾ ಕಾರ್ಯಗಳು ಮಾಡಿಕೊಂಡು, ಕ್ಷೇತ್ರದ ಜನರಿಗೆ ಚಿರಪರಿಚತನಾಗಿದ್ದೆ. ಮುಂದೆಯೂ ನನ್ನ ಸೇವೆಯನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ಬಿಜೆಪಿ ಸದಸ್ಯನಾಗಿರುತ್ತೇನೆ. ಸರ್ಕಾರಿ ಹುದ್ದೆಯನ್ನು ತ್ಯಜಿಸಿ ರಾಜಕೀಯ ಜೀವನದಲ್ಲಿ ಇರಬೇಕು ಎಂದು ನಿರ್ಧರಿಸಿದ್ದೇನೆ’ ಎಂದಿದ್ದಾರೆ. 

‘ಬಿಜೆಪಿ ದೇಶದ ದೊಡ್ಡ ಪಕ್ಷವಾಗಿದ್ದು, ಅತಿ ದೊಡ್ಡ ಕಾರ್ಯಕರ್ತರ ಪಡೆ ಹೊಂದಿದೆ. ರಾಷ್ಟ್ರೀಯ ವಿಚಾರ ಧಾರೆಗಳನ್ನು ಹೊಂದಿರುವ ಏಕೈಕ ಪಕ್ಷ. ವ್ಯಕ್ತಿಗಿಂತ ಪಕ್ಷ ಮುಖ್ಯ‌,  ಪಕ್ಷಕ್ಕಿಂತ ದೇಶ ಮುಖ್ಯ ಎಂಬ ವಿಚಾರ ಧಾರೆ ಹೊಂದಿದೆ. ಅಭಿವೃದ್ದಿಯ ಆಧಾರದಲ್ಲಿ ಚುನಾವಣೆ ನಡೆಯುತ್ತಿದೆ. ಹೀಗಾಗಿ ಮುಖಂಡರೆಲ್ಲರೂ ವೈಯಕ್ತಿಕ ಮನಸ್ತಾಪಗಳನ್ನು ಬದಿಗೊತ್ತಿ ಈ ಬಾರಿಯೂ ಬಿಜೆಪಿ ಗೆಲುವಿಗೆ ಶ್ರಮಿಸಬೇಕಾಗಿದೆ. ನಾನು ರಾಜಕೀಯದಿಂದ ಹಿಂದೆ ಸರಿಯುವುದಿಲ್ಲ. ಎಂದಿನಂತೆ ಎಲ್ಲರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನನ್ನ ಚಟುವಟಿಕೆಗಳು ನಿರಂತರವಾಗಿ ಮುಂದುವರಿಸುತ್ತೇನೆ’ ಎಂದು ಡಾ.ಮೋಹನ್‌ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT