ಶುಕ್ರವಾರ, ಮೇ 20, 2022
23 °C
20 ವರ್ಷಗಳ ಹಿಂದೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದ ಡಾ.ಎಂ.ಆರ್‌.ರವಿ

ಚಾಮರಾಜನಗರ: ಪದವಿ ವಿದ್ಯಾರ್ಥಿಗಳಿಗೆ ಇತಿಹಾಸದ ಮೇಷ್ಟ್ರಾದ ಜಿಲ್ಲಾಧಿಕಾರಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿಗಳಿಗೆ ಮಂಗಳವಾರ ಬೆಳಿಗ್ಗೆ ಅಚ್ಚರಿ ಕಾದಿತ್ತು.

ಮೊದಲ ತರಗತಿಗೆ ತಮ್ಮ ಕಾಯಂ ಪ್ರಾಧ್ಯಾಪಕರೇ ಬರುತ್ತಾರೆ ಎಂಬ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳಿದ್ದರು. ಆದರೆ, ಪಾಠ ಹೇಳಲು ತರಗತಿಗೆ ಬಂದವರು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು. 

ಕರ್ನಾಟಕ ಆಡಳಿತ ಸೇವೆಗೆ (ಕೆಎಎಸ್‌) ಸೇರುವುದಕ್ಕೂ ಮೊದಲು ಎಂ.ಆರ್‌.ರವಿ ಅವರು ಬೋಧನಾ ವೃತ್ತಿಯಲ್ಲಿದ್ದವರು. 1992ರಿಂದ 2001ರವರೆಗೂ ಇದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದರು. 

ಮಂಗಳವಾರ ಬೆಳಿಗ್ಗೆ ಎಂ.ಆರ್.ರವಿ ಅವರು, ಜಿಲ್ಲಾಧಿಕಾರಿ ಕೆಲಸಕ್ಕೆ ಒಂದಷ್ಟು ಹೊತ್ತು ಬಿಡುವು ನೀಡಿ ಪ್ರಾಧ್ಯಾಪಕರಾದರು. 20 ವರ್ಷಗಳ ಬಳಿಕ ತಾವು ಬೋಧಿಸಿದ ಕಾಲೇಜಿನಲ್ಲೇ ಮತ್ತೆ ಮೇಷ್ಟ್ರಾದರು.

‘ನಾನು ಜಿಲ್ಲಾಧಿಕಾರಿ ಎಂಬುದನ್ನು ಮರೆತುಬಿಡಿ. ಮೇಷ್ಟ್ರಾಗಿ ಬಂದಿದ್ದೇನೆ. 20 ವರ್ಷಗಳ ಹಿಂದೆ ಇದೇ ಕಾಲೇಜಿನಲ್ಲಿ ಪಾಠ ಮಾಡಿದ್ದೇನೆ’ ಎಂದು ಮಾತು ಆರಂಭಿಸಿದ ರವಿ ಅವರು, ಒಂದೂಕಾಲು ಗಂಟೆ ಮೈಸೂರು ಒಡೆಯರ ಸಂಸ್ಥಾನದ ಬಗ್ಗೆ, ಸಂಸ್ಥಾನ ಹಾಗೂ ಚಾಮರಾಜನಗರದ ನಡುವಿನ ಬಾಂಧವ್ಯವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.  

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾಲೇಜು ಪ್ರಾಂಶುಪಾಲರಾದ ಪ್ರೇಮಲತಾ ಅವರು, ‘ಜಿಲ್ಲಾಧಿಕಾರಿ ಅವರು ಕಾಲೇಜಿಗೆ ಬಂದು ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದು ನಮಗೆ ಖುಷಿ ತಂದಿದೆ. ಅಧ್ಯಾಪನಾ ವೃತ್ತಿಯ ಬಗ್ಗೆ ಅವರಿಗೆ ಅಭಿಮಾನವಿದ್ದು, ಬುಧವಾರವೂ ಅವರು ಪಾಠ ಮಾಡಲಿದ್ದಾರೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು