ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮುಲ್‌ ಚುನಾವಣೆ: ಕಾಂಗ್ರೆಸ್‌ ಮೇಲುಗೈ, ಬಿಜೆಪಿಗೆ ಹಿನ್ನಡೆ

ಐವರು ಹಾಲಿ ನಿರ್ದೇಶಕರಿಗೆ ಸೋಲು, ಇಬ್ಬರಿಗೆ ಜಯ, ಇಬ್ಬರು ಬಂಡಾಯಗಾರರಿಗೆ ಗೆಲುವು
Last Updated 14 ಜೂನ್ 2022, 16:25 IST
ಅಕ್ಷರ ಗಾತ್ರ

ಚಾಮರಾಜನಗರ/ಸಂತೇಮರಹಳ್ಳಿ:‌ ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ (ಚಾಮುಲ್‌) ಒಂಬತ್ತು ನಿರ್ದೇಶಕರ ಸ್ಥಾನಕ್ಕೆ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆದಿದ್ದು, ಫಲಿತಾಂಶವೂ ಹೊರಬಿದ್ದಿದೆ.

ಒಂಬತ್ತು ಸ್ಥಾನಗಳ ಪೈಕಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ನಾಲ್ಕು ಸ್ಥಾನಗಳಲ್ಲಿ ಗೆದ್ದಿದ್ದರೆ, ಬಿಜೆಪಿ ಬೆಂಬಲಿತರಿಗೆ ಎರಡು ಸ್ಥಾನಗಳಷ್ಟೇ ದಕ್ಕಿದೆ. ಜೆಡಿಎಸ್‌ ಬೆಂಬಲಿತ ಒಬ್ಬರು ಗೆದ್ದಿದ್ದಾರೆ. ಕಾಂಗ್ರೆಸ್‌ ಹಾಗೂ ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಇಬ್ಬರು ಗೆಲುವು ಸಾಧಿಸಿದ್ದಾರೆ.

ಯಾವ ಪಕ್ಷದ ಬೆಂಬಲಿತರೂ ಅಧಿಕಾರ ಚುಕ್ಕಾಣಿ ಹಿಡಿಯಲು ಬೇಕಾದಷ್ಟು (ಏಳು ಸ್ಥಾನಗಳು) ಗೆಲ್ಲದಿರುವುದರಿಂದ, ಚಾಮುಲ್‌ ಆಡಳಿತ ಯಾರ ಕೈಗೆ ಸಿಗಲಿದೆ ಎಂಬ ಕುತೂಹಲ ಮೂಡಿದೆ.

ಮಹಿಳಾ ಮೀಸಲು ಕ್ಷೇತ್ರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಅವರ ಮಗಳು ಶೀಲಾ ಅವರು ಗೆಲುವು ಸಾಧಿಸಿದ್ದಾರೆ. ಕೊಳ್ಳೇಗಾಲದಲ್ಲಿ ಕಾಂಗ್ರೆಸ್‌ ಬೆಂಬಲಿತ ನಂಜುಂಡಸ್ವಾಮಿ, ಯಳಂದೂರಿನ ಒಂದು ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ನಾಗೇಂದ್ರ ಅವರು ಗೆಲುವಿನ ನಗೆ ಬೀರಿದ್ದಾರೆ.

ಎರಡು ಕ್ಷೇತ್ರಗಳನ್ನು ಹೊಂದಿರುವ ಚಾಮರಾಜನಗರದಲ್ಲಿ ಬಿಜೆಪಿ ಬೆಂಬಲಿತಎಚ್‌.ಎಸ್‌.ಬಸವರಾಜು ವಿ.ಸಿ.ಹೊಸೂರು ಹಾಗೂ ಕಾಂಗ್ರೆಸ್‌ ವಿರುದ್ಧ ಬಂಡಾಯವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸದಾಶಿವಮೂರ್ತಿ ಅವರು ವಿಜಯಶಾಲಿಯಾಗಿದ್ದಾರೆ.

ಗುಂಡ್ಲುಪೇಟೆ ತಾಲ್ಲೂಕಿನ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನವನ್ನು ಚಾಮುಲ್‌ ಹಾಲಿ ಅಧ್ಯಕ್ಷ ಎಚ್‌.ಎಸ್‌.ನಂಜುಂಡಪ್ರಸಾದ್‌ ಅವರು ಗೆದ್ದಿದ್ದಾರೆ. ಇನ್ನೊಂದು ಸ್ಥಾನದಲ್ಲಿ, ಬಿಜೆಪಿ ಮುಖಂಡರೊಂದಿಗೆ ಮುನಿಸಿಕೊಂಡು ಸ್ವತಂತ್ರವಾಗಿ ಸ್ಪರ್ಧಿಸಿದ್ದ ಎಂ.ಪಿ.ಸುನೀಲ್‌ ಅವರು ಗೆಲುವು ಸಾಧಿಸಿದ್ದಾರೆ.

ಹನೂರು ತಾಲ್ಲೂಕಿನ ಎರಡು ಕ್ಷೇತ್ರಗಳ ಪೈಕಿ ಒಂದರಲ್ಲಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಮಹದೇವಸ್ವಾಮಿ ಅವರು ಗೆದ್ದಿದ್ದಾರೆ. ಇನ್ನೊಂದು ಸ್ಥಾನದಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಶಾಹುಲ್‌ ಅಹಮದ್‌ ಅವರು ಜಯ ಸಾಧಿಸಿದ್ದಾರೆ.

ಐವರಿಗೆ ಸೋಲು: ಚಾಮುಲ್‌ನ ಹಾಲಿ ಆಡಳಿತ ಮಂಡಳಿಯ ಏಳು ಸದಸ್ಯರು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು ಈ ಪೈಕಿ ಐವರು ಸೋಲುಂಡು ಇಬ್ಬರು ಮಾತ್ರ ಮತ್ತೆ ನಿರ್ದೇಶಕರಾಗಲು ಯಶಸ್ವಿಯಾಗಿದ್ದಾರೆ.

ಚಾಮುಲ್‌ನ ಹಾಲಿ ಅಧ್ಯಕ್ಷ, ಗುಂಡ್ಲುಪೇಟೆಯಿಂದ ಸ್ಪರ್ಧಿಸಿದ್ದ ಎಚ್‌.ಎಸ್‌.ನಂಜುಂಡಪ್ರಸಾದ್‌ ಹಾಗೂ ಕೊಳ್ಳೇಗಾಲದಿಂದ ಕಣಕ್ಕಿಳಿದಿದ್ದ ಎಂ.ನಂಜುಂಡಸ್ವಾಮಿ ಅವರು ಮಾತ್ರ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಉಳಿದಂತೆ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ ಸಿ.ಎಸ್‌., ಕಿಲಗೆರೆ ಬಸವರಾಜು, ಎಂ.ಎಸ್‌.ರವಿಶಂಕರ್‌ ಮಲೆಯೂರು, ಡಿ.ಮಾದಪ್ಪ (ಕಣ್ಣೇಗಾಲ ಸ್ವಾಮಿ) ಹಾಗೂ ಪ್ರಮೋದ ಜಿ. ಅವರು ಸೋಲುಂಡಿದ್ದಾರೆ.

ಪಕ್ಷಗಳಿಗೆ ಮುಖಭಂಗ: ‍ಪಕ್ಷದ ತೀರ್ಮಾನದ ವಿರುದ್ಧ ಬಂಡಾವೆದ್ದು ಸ್ವತಂತ್ರವಾಗಿ ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳು ಗೆದ್ದಿರುವುದರಿಂದ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ಕಾಂಗ್ರೆಸ್‌ಗೆ ಚಾಮರಾಜನಗರದಲ್ಲಾದರೆ, ಬಿಜೆಪಿಗೆ ಗುಂಡ್ಲುಪೇಟೆಯಲ್ಲಾಗಿದೆ.

ಚಾಮರಾಜನಗರ‌ದಲ್ಲಿ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದ ಸದಾಶಿವಮೂರ್ತಿ ಅವರನ್ನು ಪಕ್ಷ ಕಣಕ್ಕೆ ಇಳಿಸಲಿಲ್ಲ. ಇದರಿಂದ ಬೇಸರಗೊಂಡ ಅವರು ಸ್ವತಂತ್ರವಾಗಿ ಕಣಕ್ಕಿಳಿದಿದ್ದರು. ಅದೇ ರೀತಿ ಗುಂಡ್ಲಪೇಟೆಯಲ್ಲಿ ಬಿಜೆಪಿ ಮುಖಂಡರಾದ ಎಂ.ಪಿ.ಸುನೀಲ್‌ ಅವರನ್ನು ಪಕ್ಷ ನಿರ್ಲಕ್ಷಿಸಿತ್ತು. ಅವರು ಸ್ವತಂತ್ರವಾಗಿ ಸ್ಪರ್ಧಿಸಿ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡಿದ್ದಾರೆ.

ಗುಂಡ್ಲುಪೇಟೆಯಲ್ಲಿ ಇಬ್ಬರು ಅಭ್ಯರ್ಥಿಗಳನ್ನೂ ಶಾಸಕ ಸಿ.ಎಸ್‌.ನಿರಂಜನಕುಮಾರ್‌ ಅವರು ಆಯ್ಕೆ ಮಾಡಿದ್ದರು. ಕನಿಷ್ಠ ಒಬ್ಬರು ಗೆಲ್ಲದಿರುವುದರಿಂದ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಶೇ 100ರಷ್ಟು ಮತದಾನ!

ನಿರ್ದೇಶಕರ ಆಯ್ಕೆಗಾಗಿ ಮಂಗಳವಾರ ತಾಲ್ಲೂಕಿನ ಕುದೇರಿನಲ್ಲಿರುವ ಚಾಮುಲ್‌ ಆವರಣದಲ್ಲಿ ಬಿರುಸಿನ ಮತದಾನ ನಡೆಯಿತು. ಶೇ 100ರಷ್ಟು ಮತದಾನ ನಡೆದಿದೆ.

ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆವರೆಗೂ ಮತದಾನಕ್ಕೆ ಅವಕಾಶ ಇತ್ತು. ಒಂಬತ್ತು ಸ್ಥಾನಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಲು 449 ಮತದಾರರು ಇದ್ದರು. ಎಲ್ಲ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಎಲ್ಲರೂ ಮತ ಚಲಾಯಿಸಿದ್ದರು. ಆದರೆ, ನಾಲ್ಕು ಗಂಟೆಯವರೆಗೆ ಸಮಯವಿದ್ದುದರಿಂದ ಆ ಬಳಿಕವೇ ಮತ ಎಣಿಕೆ ನಡೆಸಲಾಯಿತು.

ಪಕ್ಷಗಳ ಮುಖಂಡರು, ಕಾರ್ಯಕರ್ತರ ಅಬ್ಬರ

ಕುದೇರುಚಾಮುಲ್‌ ಆವರಣದ ಹೊರಗಡೆ ಜನ ಜಾತ್ರೆಯೇ ನೆರೆದಿತ್ತು. ಈ ಚುನಾವಣೆ ರಾಜಕೀಯ ಪಕ್ಷದ ಚಿಹ್ನೆಗಳ ಆಧಾರದಲ್ಲಿ ನಡೆಯದಿದ್ದರೂ, ಬಿಜೆಪಿ ಹಾಗೂ ಕಾಂಗ್ರೆಸ್‌ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದವು.

ಹಾಗಾಗಿ ಮತದಾನ ನಡೆಯುತ್ತಿದ್ದ ಸ್ಥಳದಲ್ಲಿ ಪಕ್ಷಗಳ ಮುಖಂಡರು, ಕಾರ್ಯಕರ್ತರ ಅಬ್ಬರ ಜೋರಾಗಿತ್ತು.

ಶಾಸಕರು, ಪಕ್ಷಗಳ ಮುಖಂಡರು, ಅಭ್ಯರ್ಥಿಗಳ ಬೆಂಬಲಿಗರು, ಕಾರ್ಯಕರ್ತರು ಸೇರಿದಂತೆ ನೂರಾರು ಜನರು ಸೇರಿದ್ದರು. ಇದರಿಂದ ಸಂತೇಮರಹಳ್ಳಿ, ಕುದೇರು ನಡುವಿನ ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಆಯಿತು.

ಚುನಾವಣೆಯಲ್ಲಿ ಮತದಾರರು 449 ಮಂದಿ ಇದ್ದರೆ ಹೊರಗಡೆ ಪಕ್ಷಗಳ ಕಾರ್ಯಕರ್ತರು ನೂರಾರು ಸಂಖ್ಯೆಯಲ್ಲಿ ಇದ್ದರು.

ಚಾಮುಲ್‌ ಆವರಣದ ಒಳಗಡೆ ಪ್ರವೇಶಿಸುತ್ತಲೇ ಬಲಭಾಗದಲ್ಲಿ ಎಲ್ಲ ಅಭ್ಯರ್ಥಿಗಳೂ ನೆರೆದಿದ್ದರು. ಮತ ಚಲಾಯಿಸಲು ತೆರಳುತ್ತಿದ್ದ ತಮ್ಮ ಕ್ಷೇತ್ರ ವ್ಯಾಪ್ತಿಗೆ ಬರುವ ಮತದಾರರನ್ನು ಕರೆದು ಮಾತನಾಡಿಸಿ ತಮ್ಮತ್ತ ಸೆಳೆಯುವ ಪ್ರಯತ್ನ ನಡೆಸಿದರು.

ಲಕ್ಷಾಂತರ ರೂಪಾಯಿ ವ್ಯವಹಾರ?: ಗೆಲ್ಲಲೇ ಬೇಕು ಎಂಬ ಪಣತೊಟ್ಟಿದ್ದ ಬಹುತೇಕ ಅಭ್ಯರ್ಥಿಗಳು ಮತದಾರರನ್ನು ಓಲೈಸಲು ಹಲವು ಕಸರತ್ತುಗಳನ್ನು ನಡೆಸಿದ್ದರು.

ಚುನಾವಣೆಯಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರ ನಡೆದಿರುವ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

‘ಅಭ್ಯರ್ಥಿಗಳು ಒಂದು ಮತಕ್ಕೆ ₹25 ಸಾವಿರದಿಂದ ₹50 ಸಾವಿರದವರೆಗೂ ನೀಡಿದ್ದಾರೆ’ ಎಂದು ಹೇಳಲಾಗುತ್ತಿದ್ದು, ಚಾಮುಲ್‌ ಆವರಣದ ಹೊರಗಡೆ ನೆರೆದಿದ್ದ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಈ ವಿಚಾರವಾಗಿ ಚರ್ಚೆಯಲ್ಲಿ ತೊಡಗಿದ್ದುದೂ ಕಂಡು ಬಂತು.

ಸಂಭ್ರಮಾಚರಣೆ: ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ವಿಜೇತರ ಬೆಂಬಲಿಗರು ಹಾಗೂ ಪಕ್ಷದ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದರು. ಗೆದ್ದ ಅಭ್ಯರ್ಥಿಗಳಿಗೆ ಹೂವಿನ ಹಾರ, ಶಾಲು ಹೊದೆಸಿ ಅಭಿನಂದಿಸಿ, ಜೈಕಾರ ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT