ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹನೂರು: ಅಪಾಯ ಆಹ್ವಾನಿಸುತ್ತಿದೆ ಶಿಥಿಲ ಕೊಠಡಿ

ಚೆನ್ನಾಲಿಂಗನಹಳ್ಳಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ಜೀವ ಭಯ
Published 9 ಜನವರಿ 2024, 6:10 IST
Last Updated 9 ಜನವರಿ 2024, 6:10 IST
ಅಕ್ಷರ ಗಾತ್ರ

ಹನೂರು: ಸಮೀಪದ ಚೆನ್ನಾಲಿಂಗನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊಠಡಿ ಶಿಥಿಲಗೊಂಡು ಹೆಂಚುಗಳು ಬೀಳುತ್ತಿದ್ದು, ಅಪಾಯ ಆಹ್ವಾನಿಸುತ್ತಿದೆ.  

ಕೊಠಡಿಯಲ್ಲಿ ಪಾಠ ನಡೆಯುತ್ತಿಲ್ಲ. ಆದರೆ, ಅದನ್ನು ತೆರವುಗೊಳಿಸಿಲ್ಲ. ಶಾಲಾ ಮಕ್ಕಳು ಅಲ್ಲೇ ಓಡಾಡುವುದರಿಂದ ಪೋಷಕರು, ಶಿಕ್ಷಕರು ಭಯಗೊಂಡಿದ್ದಾರೆ. 

‘ನಾಲ್ಕೈದು ವರ್ಷಗಳ ಹಿಂದೆಯೇ ಕಟ್ಟಡ ಶಿಥಿಲಗೊಂಡಿದೆ. ಅಧಿಕಾರಿಗಳಿಗೆ ಗೊತ್ತಿದ್ದರೂ ದುರಸ್ತಿಪಡಿಸುವ ಗೋಜಿಗೆ ಹೋಗಿಲ್ಲ. ಪ್ರತಿನಿತ್ಯ ಮಕ್ಕಳು ಈ ಕಟ್ಟಡದ ಬಳಿಯೇ ಓಡಾಡಬೇಕಿದೆ. ಇಂಥ ಸಂದರ್ಭದಲ್ಲಿ ಮಕ್ಕಳಿಗೆ ಏನಾದರೂ ಅನಾಹುತವಾದರೆ ಅದಕ್ಕೆ ಯಾರು ಹೊಣೆ’ ಎಂದು ಅವರು ಪ್ರಶ್ನಿಸುತ್ತಾರೆ.

‘ಶಿಥಿಲಗೊಂಡಿರುವ ಕೊಠಡಿಯು ತರಗತಿಗಳು ನಡೆಯುವ ಕೊಠಡಿಗಳ ಮಧ್ಯೆ ಇದೆ. ಬೆಳಿಗ್ಗೆ ಹಾಗೂ ಮಧ್ಯಾಹ್ನದ ಸಮಯದಲ್ಲಿ ಮಕ್ಕಳು ಆ ಕೊಠಡಿ ಬಳಿಗೆ ಹೋಗುವುದರಿಂದ ಪ್ರತಿನಿತ್ಯ ಮಕ್ಕಳನ್ನು ಕಾಯುವುದೇ ಕೆಲಸವಾಗಿದೆ. ಕಟ್ಟಡ ಶಿಥಿಲಗೊಳ್ಳುತ್ತಿರುವುದರಿಂದ ಯಾವ ಸಂದರ್ಭದಲ್ಲಾದರೂ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಅನಾಹುತ ನಡೆಯುವ ಮೊದಲು ಕಟ್ಟಡವನ್ನು ನೆಲಸಮಗೊಳಿಸಿದರೆ ಒಳಿತು’ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

‘ನಾನು ಬಂದು ಮೂರು ವರ್ಷಗಳಾಗಿವೆ. ಮೊದಲೇ ಕಟ್ಟಡ ಶಿಥಿಲಗೊಂಡಿದೆ. ಇತ್ತೀಚೆಗೆ ಕೊಠಡಿ ಮೇಲಿನ ಹೆಂಚುಗಳು ಬೀಳುತ್ತಿವೆ. ಇದನ್ನು ಗಮನಿಸಿ ಕಟ್ಟಡವನ್ನು ನೆಲಸಮಗೊಳಿಸಬೇಕು ಅಥವಾ ಹೆಂಚುಗಳನ್ನು ಕೆಳಗಿಳಿಸುವಂತೆ ಕಣ್ಣೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನಾಲ್ಕು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಇದುವರೆಗೆ ಪ್ರಯೋಜನವಾಗಿಲ್ಲ. ಈ ಬಗ್ಗೆ ಬಿಇಒ ಅವರಿಗೂ ಮಾಹಿತಿ ನೀಡಲಾಗಿದೆ’ ಎಂದು ಮುಖ್ಯಶಿಕ್ಷಕಿ ಪಿ.ತೆರೆಸಾ ತಿಳಿಸಿದರು.

‘ಶಾಲಾಭಿವೃದ್ಧಿ ಸಮಿತಿಯಿಂದ ಪಂಚಾಯಿತಿಗೆ ಮೂರು ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಎಸ್‌ಡಿಎಂಸಿ ವತಿಯಿಂದಲೇ ಶಿಥಿಲಗೊಂಡಿರುವ ಕೊಠಡಿಯ ಹೆಂಚುಗಳನ್ನು ತೆರವುಗೊಳಿಸಲು ಕ್ರಮ ವಹಿಸಲಾಗುವುದು’ ಎಂದು ಎಸ್‌ಡಿಎಂಸಿ ಅಧ್ಯಕ್ಷ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರತಿಕ್ರಿಯೆಗಾಗಿ ಕಣ್ಣೂರು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹಾದೇವ ಪ್ರಭು ಅವರಿಗೆ ಕರೆ ಮಾಡಿದರೆ ಸಂಪರ್ಕಕ್ಕೆ ಸಿಗಲಿಲ್ಲ. 

ದುರಸ್ತಿಗಾಗಿ ಪಂಚಾಯಿತಿಗೆ ಪತ್ರ ಬರೆಯುವಂತೆ ಮುಖ್ಯಶಿಕ್ಷಕರಿಗೆ ಸೂಚಿಸಿದ್ದೇನೆ. ಹಿರಿಯ ಅಧಿಕಾರಿಗಳಿಗೂ ಮನವಿ ಮಾಡಲಾಗುವುದು
-ಎಂ. ಶಿವರಾಜು ಬಿಇಒ ಹನೂರು
ಸೌಕರ್ಯಗಳ ಕೊರತೆ
ಶಾಲೆಯಲ್ಲಿ 1 ರಿಂದ 7ರವರೆಗೆ ತರಗತಿಗಳಿದ್ದು 133 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಶಾಲೆಯಲ್ಲಿ ಮೂಲಸೌಕರ್ಯಗಳ ಕೊರತೆ ಇದೆ.  ಶಾಲೆ ಸುತ್ತುಗೋಡೆ ಕಾಮಗಾರಿ ಅರ್ಧಕ್ಕೆ ನಿಂತಿದ್ದು ಶಾಲೆಗೆ ಸುರಕ್ಷತೆ ಇಲ್ಲದಂತಾಗಿದೆ. ಹಿಂಭಾಗದಲ್ಲಿರುವ ಮೂರು ಕೊಠಡಿಗಳು ಸುಣ್ಣ ಬಣ್ಣ. ಕಂಡಿಲ್ಲಕುಡಿಯುವ ನೀರಿನ ಸಮಸ್ಯೆಯೂ ಹಾಗಾಗ ತಲೆದೋರುತ್ತಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT