ಶನಿವಾರ, ಜನವರಿ 18, 2020
21 °C
2016ರಲ್ಲಿ ನಡೆದ ಪ್ರಕರಣ: ಆರು ಮಂದಿ ವಿರುದ್ಧ ಮೊಕದ್ದಮೆ, ಇಬ್ಬರ ಖುಲಾಸೆ

ಬಾಲ್ಯವಿವಾಹ: ವರ, ಪೋಷಕರಿಗೆ 2 ವರ್ಷ ಜೈಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಬಾಲ್ಯ ವಿವಾಹಕ್ಕೆ ಪ್ರೋತ್ಸಾಹ ನೀಡಿದ ವರ, ಆತನ ಹಾಗೂ ವಧುವಿನ ಪೋಷಕರಿಗೆ ತಲಾ ಎರಡು ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿ ನಗರದ ಸಿವಿಲ್‌ ನ್ಯಾಯಾಲಯ ಆದೇಶ ಹೊರಡಿಸಿದೆ. ಜೈಲು ಶಿಕ್ಷೆಯೊಂದಿಗೆ ತಲಾ ₹5,000 ದಂಡ ವಿಧಿಸಿದೆ.

ಕೊಳ್ಳೇಗಾಲ ತಾಲ್ಲೂಕಿನ ಗುಂಡಿಮಾಳದ ಗ್ರಾಮದ ಮಹದೇವ, ಬಸಮ್ಮ ದಂಪತಿ, ವರ ಮಹದೇವಸ್ವಾಮಿ ಹಾಗೂ ಯಳಂದೂರು ತಾಲ್ಲೂಕಿನ ನಾಗಮ್ಮ ಶಿಕ್ಷೆಗೆ ಗುರಿಯಾದವರು. 

ಈ ಪೋಷಕರು 18 ವರ್ಷ ತುಂಬದ ಹೆಣ್ಣು ಮಗುವಿಗೆ 2016ರ ಮೇ 2ರಂದು ನಗರದ ಮಹದೇಶ್ವರ ಕಲ್ಯಾಣ ಮಂ‌ಟಪದಲ್ಲಿ ಮದುವೆ ಸಮಾರಂಭ ಏರ್ಪಡಿಸಿದ್ದರು. 

ಅಂದಿನ ಸಿಡಿಪಿಒ ಶೇಷಾದ್ರಿ ನೇತೃತ್ವದ ತಂಡ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿದಾಗ ವಧು ಇನ್ನೂ ಬಾಲಕಿ ಎಂಬುದು ಗೊತ್ತಾಗಿತ್ತು.

ವರ ಹಾಗೂ ಮೂವರು ಪೋಷಕರು, ಕಲ್ಯಾಣ ಮಂಟಪದ ಮಾಲೀಕ ಸೋಮಣ್ಣ, ವಯಸ್ಸು ದೃಢೀಕರಣ ಮಾಡಿದ ನೋಟರಿ ವಕೀಲ ಕೃಷ್ಣ ವಿರುದ್ಧ ನಗರದ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿರುವ ಹಿರಿಯ ಸಿವಿಲ್‌ ನ್ಯಾಯಾಧೀಶ ಎಸ್‌.ಜೆ.ಕೃಷ್ಣ ಅವರು ಕಲ್ಯಾಣ ಮಂಟಪ ಮಾಲೀಕರು ಹಾಗೂ ನೋಟರಿ ವಕೀಲರನ್ನು ಖುಲಾಸೆಗೊಳಿಸಿ, ಉಳಿದ ನಾಲ್ವರು ಅಪರಾಧಿಗಳು ಎಂದು ಘೋಷಿಸಿ, ಜೈಲು ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. 

ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ರೂಪಾಲಕ್ಷ್ಮಿ ವಾದಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು