ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಕ್ರಿಸ್‌ಮಸ್‌ ಆಚರಣೆಗೆ ಕ್ರಿಶ್ಚಿಯನ್ನರು ಸಜ್ಜು

ಕ್ರಿಸ್ತ ಜಯಂತಿ ನಾಳೆ: ಚರ್ಚುಗಳಿಗೆ ವಿಶೇಷ ಅಲಂಕಾರ, ಈ ಬಾರಿ ಅದ್ಧೂರಿ ಆಚರಣೆ
Last Updated 23 ಡಿಸೆಂಬರ್ 2022, 23:30 IST
ಅಕ್ಷರ ಗಾತ್ರ

ಕೊಳ್ಳೇಗಾಲ: ಪ್ರೀತಿ, ಮಮತೆ, ಶಾಂತಿ ಸಂದೇಶ ಸಾರಿದ ಯೇಸು ಕ್ರಿಸ್ತನ ಜನ್ಮ ದಿನದ ಪ್ರತೀಕವಾದ ಕ್ರಿಸ್‍ಮಸ್ ಹಬ್ಬದ ಆಚರಣೆಗೆ ಜಿಲ್ಲೆಯಾದ್ಯಂತ ಕ್ರಿಶ್ಚಿಯನ್ನರು ಸಜ್ಜಾಗಿದ್ದಾರೆ.

ಭಾನುವಾರ (ಡಿ.25) ನಡೆಯಲಿರುವ ಕ್ರಿಸ್‌ಮಸ್‌ ಅದ್ಧೂರಿ ಆಚರಣೆಗೆ ಜಿಲ್ಲೆಯಾದ್ಯಂತ ಚರ್ಚುಗಳು ಸಿಂಗಾರಗೊಂಡು ಸನ್ನದ್ಧವಾಗಿವೆ. ಸಮುದಾಯದವರು ಕೂಡ ತಮ್ಮ ಮನೆಗಳಲ್ಲಿ ಕ್ರಿಸ್‌ಮಸ್‌ ಟ್ರೀ, ಆಕಾಶಬುಟ್ಟಿ ಅಳವಡಿಸಿದ್ದಾರೆ. ಗೋದಲಿ ನಿರ್ಮಿಸಿದ್ದಾರೆ.

ಎರಡು ವರ್ಷ ಕೋವಿಡ್‌ ಕಾರಣಕ್ಕೆ ಕ್ರಿಸ್‌ಮಸ್‌, ಸರಳ ಹಾಗೂ ಸಾಂಪ್ರದಾಯಿಕ ಆಚರಣೆಗೆ ಸೀಮಿತವಾಗಿತ್ತು. ಈ ಬಾರಿ ಯಾವುದೇ ನಿರ್ಬಂಧಗಳನ್ನು ಹೇರಲಾಗಿಲ್ಲ. ಹೀಗಾಗಿ ವಿಜೃಂಭಣೆಯಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಹಬ್ಬಕ್ಕಾಗಿ ಹೊಸ ಬಟ್ಟೆ, ಅಲಂಕಾರದ ವಸ್ತುಗಳು, ಕೇಕ್, ಖರೀದಿಯೂ ಜೋರಾಗಿ ನಡೆಯುತ್ತಿದೆ. ಮನೆಗಳಲ್ಲಿ ಬಗೆ ಬಗೆಯ ಕೇಕ್, ಲಾಡು, ರೋಜ್ ಕುಕ್ಸ್, ಕರ್ಜಿಕಾಯಿ, ಚಕ್ಕುಲಿ, ನಿಪ್ಪಟು, ಜಾಮೂನು, ಸೇರಿದಂತೆ ಅನೇಕ ಸಿಹಿ ತಿಂಡಿಗಳು ಜೊತೆಗೆ ಐಸ್‍ಕ್ರೀಂಗಳು ಹಬ್ಬಕ್ಕೆ ತಯಾರಾಗುತ್ತಿದೆ.

ಗೋದಲಿ ಹಾಗೂ ಆಕಾಶ ಬುಟ್ಟಿ ಆಕರ್ಷಣೆ: ಕೊಟ್ಟಿಗೆಯಲ್ಲಿ ಜನಿಸಿರುವ ಏಸು ಕ್ರಿಸ್ತರ ಜನನ ವೃತ್ತಾಂತವನ್ನು ಸಾಂಕೇತಿಸುವ ಗೋದಲಿಗಳನ್ನು ಚರ್ಚ್‌ಗಳಲ್ಲಿ ನಿರ್ಮಿಸಲಾಗಿದೆ.

ಗೋದಲಿಯಲ್ಲಿ ಯೇಸುವಿನ ತಂದೆ ಜೋಸೆಫ್, ತಾಯಿ ಕನ್ಯ ಮರಿಯ, ಬಾಲ ಯೇಸು, ಕುರಿಗಾಹಿಗಳು, ದೇವ ದೂತರು, ಕುರಿ, ಆಡು, ಹಸು, ಒಂಟೆ, ಸೇರಿದಂತೆ ಅನೇಕರ ಪ್ರತಿಕೃತಿಗಳನ್ನು ಇಡಲಾಗಿದೆ.

ಮನೆ ಮನೆಗಳಲ್ಲಿ ಭಜನೆ: ಕ್ರಿಸ್‌ಮಸ್ ಸಂದರ್ಭದಲ್ಲಿ ಪ್ರತಿ ಚರ್ಚ್‌ ವ್ಯಾಪ್ತಿಗೆ ಸೇರಿರುವ ಕ್ರಿಶ್ಚಿಯನ್ನರು ಅವರವರ ಸಭೆಗಳ ಮನೆಗಳಿಗೆ ಹೋಗಿ ಕರೋಲ್ (ಭಜನೆ) ಹಾಡುಗಳನ್ನು ಹಾಡುವುದು ರೂಢಿಯಲ್ಲಿದೆ.

ಭಜನೆಗೆ ಬರುವವರು ಗಿಟಾರ್, ಕೀ ಬೋರ್ಡ್, ತಬಲ, ಡ್ರಂ, ಗಿಲಕಿ ಸೇರಿದಂತೆ ವಿವಿಧ ಸಂಗೀತ ವಾದ್ಯಗಳನ್ನು ಬಳಸಿ ಇಂಗ್ಲಿಷ್‌ , ಹಿಂದಿ, ತಮಿಳು, ಕನ್ನಡ ಸೇರಿದಂತೆ ವಿವಿಧ ಭಾಷೆಗಳ ದೇವರ ಹಾಡುಗಳನ್ನು ಹಾಡಿ ಯುವಕರು, ಯುವತಿಯರು ಕುಣಿದು ಕುಪ್ಪಳಿಸುತ್ತಾರೆ.

ದೀಪಾಲಂಕಾರ: ನಗರದ ಕ್ರಿಶ್ಚಿಯನ್ನರ ಬಡಾವಣೆಯಲ್ಲಿ ವಿದ್ಯುತ್ ದೀಪಗಳು ಕಂಗೊಳಿಸುತ್ತಿದೆ. ಇದರ ಜೊತೆಗೆ ಯುವಕರು ಬಡಾವಣೆಗಳಲ್ಲಿ ಕ್ರಿಸ್‌ಮಸ್‌ ಆಚರಣೆಗೆ ಸಿದ್ಧತೆ ಮಾಡಿದ್ದಾರೆ.

ಕೊಳ್ಳೇಗಾಲದ ಸಂತ ಫ್ರಾಸಿಸ್ ಅಸ್ಸಿಸಿ ಚರ್ಚ್, ಬೇತೆಲ್‌ ಲೂಥರನ್ ಚರ್ಚ್, ಸೆವೆಂತ್ ಡೇ ಚರ್ಚ್, ಕಲ್ವಾರಿ ಎಜೆ ಚರ್ಚ್, ಅರುಣೋದಯ ಯೇಸು ಚರ್ಚ್, ಸಿ.ಎಸ್.ಐ ಚರ್ಚ್, ಬ್ರದರನ್ ಚರ್ಚ್, ಸಂತ ಅಗಸ್ಟಿನ್ ಚರ್ಚ್‌ ಸೇರಿದಂತೆ ಜಿಲ್ಲೆಯಾದ್ಯಂತ ಎಲ್ಲ ಚರ್ಚುಗಳು ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸುತ್ತಿವೆ.

2 ವರ್ಷ ಕೋವಿಡ್ ಇದ್ದ ಕಾರಣ ಕ್ರಿಸ್‌ಮಸ್‌ ಅನ್ನು ಸರಳವಾಗಿ ಆಚರಣೆ ಮಾಡಲಾಗಿತ್ತು. ಈ ಬಾರಿ ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿದೆ.
ಜಾನ್ ಪೀಟರ್, ಅಖಿಲ ಭಾರತ ಕ್ರಿಶ್ಚಿಯನ್‌ ಮಹಾಸಭಾ ಜಿಲ್ಲಾಧ್ಯಕ್ಷ

ಕ್ರಿಸ್‌ಮಸ್‌ ಶಾಂತಿಯ ಸಂಕೇತ. ಪ್ರತಿಯೊಬ್ಬರೂ ಈ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಬೇಕು. ಬಡವರಿಗೆ ದಾನ ಮಾಡಬೇಕು.
ಜೋಶುಹಾ ಪ್ರಸನ್ನ ಕುಮಾರ್, ಬೇತೆಲ್ ಲೂಥರನ್ ಚರ್ಚ್ ಧರ್ಮಗುರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT