ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಸಿದ ಕಾಫಿ ಇಳುವರಿ: ಬೆಲೆಗೂ ಬರ

ಬಯಲು ಸೀಮೆಯಲ್ಲಿ ಹೂ ಅರಳಿಸಿದ ಕಾಫಿ
ನಾ.ಮಂಜುನಾಥಸ್ವಾಮಿ
Published 28 ನವೆಂಬರ್ 2023, 6:27 IST
Last Updated 28 ನವೆಂಬರ್ 2023, 6:27 IST
ಅಕ್ಷರ ಗಾತ್ರ

ಯಳಂದೂರು: ಈ ಬಾರಿ ಮಳೆ ಕೊರತೆ ಕಾಫಿ ಕೃಷಿಗೆ ಹಿನ್ನಡೆ ಉಂಟು ಮಾಡಿದೆ.  ನವೆಂಬರ್-ಡಿಸೆಂಬರ್ ನಡುವೆ  ಕೊಯ್ಲಿಗಾಗಿ ಕಾದಿರುತ್ತಿದ್ದ ಶ್ರಮಿಕರು ಈ ಬಾರಿ ಕಾಣದಾಗಿದ್ದಾರೆ. ಇಳುವರಿ ಕಳೆದುಕೊಂಡ ಗಿಡಗಳಲ್ಲಿ ಕಾಫಿ ಹಣ್ಣು ಸಂಗ್ರಹಿಸಿ, ಬೀಜ ತೆಗೆದು, ಒಣಗಿಸುವ ಪ್ರಕ್ರಿಯೆಗಳು ವೇಗ ಪಡೆದಿಲ್ಲ. ಬೆಲೆ ಮತ್ತು ಬೇಡಿಕೆ ಎರಡನ್ನೂ ಕಾಫಿ ಕಳೆದುಕೊಂಡಿದೆ. 

ತಾಲ್ಲೂಕಿನ ಬಿಳಿಗಿರಿಬೆಟ್ಟ ಮತ್ತು ಬಯಲು ಸೀಮೆಗಳಲ್ಲಿ ಕಾಫಿ ಬೆಳೆಗಾರರು ಇದ್ದಾರೆ. ರೈತರು ಉತ್ತಮ ತಳಿಯ ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. ನೀರಾವರಿ ಪ್ರದೇಶದಲ್ಲಿ ಬೆಳೆದ ಕಾಫಿ ಕಟಾವಿಗೆ ಬಂದಿದೆ. ಆದರೆ. ಕಳೆದ ವರ್ಷ ನಿರೀಕ್ಷೆಗೂ ಮೀರಿ ಸುರಿದ ಮಳೆಯಿಂದಾಗಿ ಗಿಡಗಳಲ್ಲಿ ರೋಗ-ರುಜಿನ ಕಾಣಿಸಿಕೊಂಡು ಬೆಟ್ಟದ ಸುತ್ತಮುತ್ತಲ ಪೋಡುಗಳ ತೋಟಗಳಲ್ಲಿ ಕಾಫಿ ಉತ್ಪಾದನೆ ಕುಸಿದಿತ್ತು.

‘ಕಳೆದ ಋತುವಿನಲ್ಲಿ ವರ್ಷ ಪೂರ್ತಿ ಮಳೆ ಸುರಿಯಿತು. ಇದರಿಂದ ಕಾಫಿ ಬೆಳೆ ನಿರ್ವಹಣೆಗೆ ಸಮಸ್ಯೆಯಾಯಿತು. ಈ ವರ್ಷ ಹೂವಾಡುವ ಸಮಯದಲ್ಲಿ ಮಳೆ ಕೈಕೊಟ್ಟಿತು. ನಂತರದ ದಿನಗಳಲ್ಲಿ ಬರದ ಬೇಗೆ ಕಾಡಿತು. ನವೆಂಬರ್ ಆರಂಭದಲ್ಲಿ ಗಿಡದ ಮೇಲೆ ಮಂಜು ಆವರಿಸಿದೆ. ಈ ಕಾರಣಗಳಿಂದ ಕಾಫಿ  ಉತ್ಪಾದನೆ ಶೇ 40ರಷ್ಟು ಕುಸಿದಿದೆ’ ಎಂದು ಹೇಳುತ್ತಾರೆ ಕಾಫಿ ಬೆಳೆಗಾರರು. 

‘ಬೆಟ್ಟದಲ್ಲಿ 600ಕ್ಕೂ ಹೆಚ್ಚು ಬೆಳೆಗಾರರು ಕಾಫಿ, ಮೆಣಸು ಕೃಷಿಗೆ ಒತ್ತು ನೀಡಿದ್ದಾರೆ. ಇವರು ಕಳೆದ ಸಾಲಿನಲ್ಲಿ 130 ಟನ್ ಅರೇಬಿಕಾ ಕಾಫಿ ಉತ್ಪಾದಿಸಿದ್ದರು. ಈ ಬಾರಿ 80 ಟನ್‌ ಕುಸಿದಿದೆ. ಕೆಜಿಗೆ ₹290 ಇದ್ದ ಬೆಲೆ, ಈಗ ₹245ಕ್ಕೆ ಇಳಿದಿದೆ. ಇದರಿಂದ ನೀಡಿಕೆ ಕೊರತೆ ನಡುವೆಯೂ ಉತ್ತಮ ಬೆಲೆ ನಿರೀಕ್ಷಿಸಿದ್ದ ಬೆಳೆಗಾರರು ಕಂಗಾಲಾಗಿದ್ದಾರೆ’ ಎಂದು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕಾಫಿಗೆ ಅಕಾಲಿಕ ಮಳೆ ಕಾಡಿತ್ತು. ಇದರಿಂದಾಗಿ ಮೊಗ್ಗು ಅರಳಲೇ ಇಲ್ಲ. ಕಾರ್ಮಿಕರ ಕೊರತೆಯಿಂದ ನಿರ್ವಹಣೆಯೂ ಕಷ್ಟವಾಗಿದೆ. ವರ್ಷದಿಂದ ವರ್ಷಕ್ಕೆ ಕಾಫಿ ಕೃಷಿಗೆ ಪ್ರತಿಕೂಲವಾದಂತಹ ವಾತಾವರಣವನ್ನೇ ಕಾಣುತ್ತಿದ್ದೇವೆ. ಬೆಳೆಗಾರರು ಪರ್ಯಾಯ ಕೃಷಿಗೆ ಒತ್ತು ನೀಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಾಫಿ ಬೆಳೆಗಾರರ ಕಷ್ಟಕ್ಕೆ ಸರ್ಕಾರ ಸ್ಪಂದಿಸಬೇಕು’ ಎಂದು ಬಿಳಿಗಿರಿ ಸೋಲಿಗರ ಕಾಫಿ ಉತ್ಪಾದಕ ಕಂಪನಿ ಸದಸ್ಯ ಹೊಸಪೋಡು ಶಿವಣ್ಣ ಆಗ್ರಹಿಸಿದರು. 

ಬಯಲು ಸೀಮೆಯಲ್ಲಿ ಹೂ: ನೀರಾವರಿ ಪ್ರದೇಶ ಹಾಗೂ ಕಾಡಂಚಿನ ತೋಟದಲ್ಲಿ ಈಚೆಗೆ ಸುರಿದ ಮಳೆಗೆ ಕಾಫಿ ಗಿಡಗಳು ಹೂ ಅರಳಿಸಿದೆ. ಬಿಸಿಲು ಹೆಚ್ಚಾದರೆ ಹೂ ಉದುರುತ್ತದೆ. ಈಗ ಕಾಫಿ ಗಿಡದಲ್ಲಿ ಹೂ ಕಂಡರೂ ಪ್ರಯೋಜನ ಇಲ್ಲ.   ಮಾರ್ಚ್-ಏಪ್ರಿಲ್ ನಡುವೆ ಉತ್ತಮ ಮಳೆ ಸುರಿದರೆ ಮಾತ್ರ ಹೂ ಅರಳಿ, ಫಸಲು ಕೈಸೇರುತ್ತದೆ. ಬರ ಮತ್ತು ಮಳೆ ನಡುವೆ ಕಾಯಿ ಕಟ್ಟುವ ಅವಧಿಯಲ್ಲಿ ವ್ಯತ್ಯಯ ಉಂಟಾಗಿದ್ದು, ಕಾಫಿ  ಬೆಳೆಗಾರರಲ್ಲಿ ಆತಂಕ ತಂದಿದೆ’ ಎಂದು ಬಂಗ್ಲೆಪೋಡು ಸಿದ್ದಮ್ಮ ಹೇಳಿದರು. 

600ಕ್ಕೂ ಹೆಚ್ಚು ಕಾಫಿ ಬೆಳೆಗಾರರು ಕಾಫಿ ಬೆಳೆಗಿಲ್ಲ ಪೂರಕ ವಾತಾವರಣ ವರ್ಷದಿಂದ ವರ್ಷಕ್ಕೆ ಇಳುವರಿ ಕುಂಠಿತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT