ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗೆಲ್ಲುವ ಅಭ್ಯರ್ಥಿಗಾಗಿ ಕಾಂಗ್ರೆಸ್‌ ಹುಡುಕಾಟ!

ಸ್ಪರ್ಧಿಸಲು ಸಚಿವ ಮಹದೇವಪ್ಪ ನಿರಾಸಕ್ತಿ * ಶಾಸಕ ದರ್ಶನ್‌ ಮೇಲೆ ನಾಯಕರ ಒಲವು?
Published 8 ಮಾರ್ಚ್ 2024, 22:05 IST
Last Updated 8 ಮಾರ್ಚ್ 2024, 22:05 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಲು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ನಿರಾಸಕ್ತಿ ಹಿನ್ನೆಲೆಯಲ್ಲಿ ಗೆಲ್ಲುವ ಸಾಮರ್ಥ್ಯವಿರುವ ಬೇರೆ ಅಭ್ಯರ್ಥಿಗಾಗಿ ಕಾಂಗ್ರೆಸ್‌ ಪಕ್ಷ ಹುಡುಕಾಟ ನಡೆಸಿದೆ.

‘ಮಾಜಿ ಸಂಸದ ಆರ್‌.ಧ್ರುವನಾರಾಯಣ ಅವರ ಮಗ, ಸದ್ಯ ನಂಜನಗೂಡು ಶಾಸಕರಾಗಿರುವ ದರ್ಶನ್‌ ಅವರನ್ನು ಕಣಕ್ಕಿಳಿಸುವ ಬಗ್ಗೆ ರಾಜ್ಯ ನಾಯಕರು ಒಲವು ತೋರಿದ್ದಾರೆ. ಆದರೆ, ಅವರೂ ಸ್ಪರ್ಧೆಗೆ ಆಸಕ್ತಿ ಹೊಂದಿಲ್ಲ’ ಎಂದು ಮೂಲಗಳು ತಿಳಿಸಿವೆ. ಧ್ರುವನಾರಾಯಣ ಅಭಿಮಾನಿಗಳು ಕೂಡ ಈ ಪ್ರಸ್ತಾವವನ್ನು ವಿರೋಧಿಸುತ್ತಿದ್ದಾರೆ. 

ಕ್ಷೇತ್ರದಿಂದ ಕಾಂಗ್ರೆಸ್‌ನಲ್ಲಿ ಎಂಟು ಆಕಾಂಕ್ಷಿಗಳಿದ್ದಾರೆ. ಸಚಿವ ಡಾ.ಎಚ್‌.ಸಿ.ಮಹದೇವಪ್ಪ, ಅವರ ಪುತ್ರ ಸುನೀಲ್‌ ಬೋಸ್‌, ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌, ಮಾಜಿ ಸಚಿವ ಸೋಮಶೇಖರ್‌, ಮುಖಂಡರಾದ ಜೆ.ಸಿ.ಕಿರಣ್‌, ಡಿ.ಎನ್‌.ನಟರಾಜು ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿದೆ. 

‘ಈ ಪೈಕಿ ಮೂವರ ಹೆಸರನ್ನು ಮುಖಂಡರು ಅಂತಿಮಗೊಳಿಸಿದ್ದಾರೆ’ ಎನ್ನಲಾಗುತ್ತಿದೆ. ಅವರಲ್ಲಿ ಸಚಿವ ಮಹದೇವಪ್ಪ ಹೆಸರು ಇರುವುದನ್ನು ಮುಖಂಡರು ಖಚಿತಪಡಿಸಿದ್ದಾರೆ. ಕ್ಷೇತ್ರ ವ್ಯಾಪ್ತಿಯ ಏಳು ಶಾಸಕರು ಸಚಿವರನ್ನು ಬೆಂಬಲಿಸುತ್ತಿದ್ದಾರೆ. ಆದರೆ, ಅವರು ಲೋಕಸಭೆಗೆ ಸ್ಪರ್ಧಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಪಕ್ಷದ ನಾಯಕರಿಗೂ ತಿಳಿಸಿದ್ದಾರೆ. ‘ಮಗ ಸುನೀಲ್‌ ಬೋಸ್‌ಗೆ ಟಿಕೆಟ್‌ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಮೂಲಗಳು ತಿಳಿಸಿವೆ. 

‘ಮಹದೇವಪ್ಪ ಅವರಿಗೆ ಕೊಡದಿದ್ದರೆ, ಅವರ ಮಗನಿಗೆ ಸಿಗಲಿದೆ’ ಎಂಬ ಮಾತು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿತ್ತು. ಆದರೆ, ಕೆಲವು ದಿನಗಳಿಂದ ಮುಖಂಡರು, ಕಾರ್ಯಕರ್ತರು ದರ್ಶನ್‌ ಹೆಸರು ಹೇಳುತ್ತಿದ್ದಾರೆ. 

ಆರಂಭದಲ್ಲಿ ತಮ್ಮ ಹೆಸರು ಪ್ರಸ್ತಾಪವಾದಾಗಲೇ, ಶಾಸಕರಾಗಿ ಮುಂದುವರಿಯುವುದಾಗಿ ದರ್ಶನ್ ಸ್ಪಷ್ಟಪಡಿಸಿದ್ದರು. ಅವರ ಅಭಿಮಾನಿಗಳೂ, ‘ಧ್ರುವನಾರಾಯಣ ರಾಷ್ಟ್ರ ರಾಜಕಾರಣಕ್ಕೆ ಹೋಗಿದ್ದರಿಂದ ರಾಜ್ಯದಲ್ಲಿ ಸಚಿವರಾಗುವ ಅವಕಾಶ ತಪ್ಪಿಹೋಯಿತು. ನೀವು ಶಾಸಕರಾಗಿಯೇ ಮುಂದುವರಿಯಿರಿ’ ಎಂದು ಒತ್ತಾಯಿಸುತ್ತಿದ್ದಾರೆ. 

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆಪ್ತ ವಲಯದಲ್ಲಿ ಇರುವ ಮಾಜಿ ಶಾಸಕ ಜಿ.ಎನ್‌.ನಂಜುಂಡಸ್ವಾಮಿ ಅವರು ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರ ದೃಷ್ಟಿ ವರಿಷ್ಠರ ತೀರ್ಮಾನದತ್ತ ನೆಟ್ಟಿದೆ.

ದರ್ಶನ್ ಧ್ರುವನಾರಾಯಣ
ದರ್ಶನ್ ಧ್ರುವನಾರಾಯಣ
ಸುನೀಲ್ ಬೋಸ್
ಸುನೀಲ್ ಬೋಸ್
ಜಿ.ಎನ್‌.ನಂಜುಂಡಸ್ವಾಮಿ
ಜಿ.ಎನ್‌.ನಂಜುಂಡಸ್ವಾಮಿ
ಈ ಕ್ಷೇತ್ರವು ಕಾಂಗ್ರೆಸ್‌ ಪಕ್ಷದ ಭದ್ರಕೋಟೆ. ಏಳು ಮಂದಿ ಶಾಸಕರಿದ್ದಾರೆ. ಎದುರಾಳಿ ಯಾರೇ ಆಗಿದ್ದರೂ ನಾವೇ ಗೆಲ್ಲುತ್ತೇವೆ.
ಪಿ.ಮರಿಸ್ವಾಮಿ ಚಾಮರಾಜನಗರ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ

ಮುಖಂಡರ ಲೆಕ್ಕಾಚಾರವೇನು?

‘ಧ್ರುವನಾರಾಯಣ ಅವರು ಕಳೆದ ಬಾರಿ 1817 ಮತಗಳ ಅಂತರದಿಂದ ಸೋತಿದ್ದರು. ವಿಧಾನಸಭೆಗೆ ನಂಜನಗೂಡಿನಿಂದ ಸ್ಪರ್ಧಿಸಲು ಆಶಿಸಿದ್ದರು. ಅಕಾಲಿಕವಾಗಿ ನಿಧನರಾದರು. ಅದೇ ಅನುಕಂಪದ ಆಧಾರದಲ್ಲಿ ಅವರ ಮಗ ದರ್ಶನ್‌ ಭಾರಿ ಅಂತರದಿಂದ ಗೆದ್ದರು. ಕ್ಷೇತ್ರದಾದ್ಯಂತ ಧ್ರುವನಾರಾಯಣ ಅವರನ್ನು ಬೆಂಬಲಿಸುವವರಿದ್ದಾರೆ. ಈಗ ಎಲ್ಲರಿಗೂ ಪರಿಚಯವಾಗಿರುವ ದರ್ಶನ್ ಜನರನ್ನು ತಲುಪುವುದು ಸುಲಭ’ ಎಂಬುದು ಕಾಂಗ್ರೆಸ್‌ ನಾಯಕರ ಲೆಕ್ಕಾಚಾರ.  ‘ಗೃಹ ಸಚಿವ ಡಾ.ಜಿ.ಪರಮೇಶ್ವರ ಸೇರಿದಂತೆ ಕೆಲವು ನಾಯಕರು ಚುನಾವಣೆ ಸ್ಫರ್ಧೆ ಬಗ್ಗೆ ದರ್ಶನ್‌ ಬಳಿ ನೇರವಾಗಿ ಕೇಳಿದ್ದಾರೆ’ ಎಂದು ಅವರ ಆಪ್ತರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.   ‘ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ರಾಷ್ಟ್ರೀಯ ನಾಯಕರು ಸೂಚಿಸಿದರೆ ಸ್ಪರ್ಧಿಸುವುದು ಅನಿವಾರ್ಯವಾಗುತ್ತದೆ’ ಎನ್ನುತ್ತಾರೆ ಮುಖಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT