ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದರಿ ವಾರ್ಡ್‌ ಮಾಡಲು ಪ್ರಾಮಾಣಿಕ ಯತ್ನ: ಗೌರಿ

ಚಾಮರಾಜನಗರ ನಗರಸಭೆಯ 2ನೇ ವಾರ್ಡ್‌ ಸದಸ್ಯೆ ಮಾತು
Last Updated 12 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರ ನಗರಸಭೆಯ 2ನೇ ವಾರ್ಡ್‌ ಅನ್ನು ಪ್ರತಿನಿಧಿಸುತ್ತಿರುವ ಗೌರಿ ಅವರು ತಮ್ಮ ವಾರ್ಡ್‌ನಲ್ಲಿರುವ ಸಮಸ್ಯೆಗಳು, ತಾವು ಹಾಕಿಕೊಂಡಿರುವ ಯೋಜನೆಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ್ದಾರೆ.

* ಮತದಾರರು ನಿಮ್ಮನ್ನು ಗೆಲ್ಲಿಸಲು ಏನು ಕಾರಣ?

ನನ್ನ ಪತಿ ಸೆಂದಿಲ್‌ ಕುಮಾರ್‌ ಅವರು ಈ ಭಾಗದಲ್ಲಿ 25 ವರ್ಷಗಳಿಂದ ಕೇಬಲ್ ಆಪರೇಟರ್‌ ಆಗಿಕೆಲಸ ಮಾಡುತ್ತಿದ್ದಾರೆ.ಎಲ್ಲರೊಂದಿಗೂ ಒಡನಾಟ ಹೊಂದಿರುವ ಅವರು ಜನರ ಜೊತೆಗೆ ಗುರುತಿಸಿಕೊಂಡಿದ್ದಾರೆ. ಈ ಹಿಂದೆ ವಾರ್ಡ್‌ ಸದಸ್ಯರಾಗಿದ್ದ ಸೆಲ್ವಿ ಬಾಬು ಅವರು ನಮಗೆ ಆತ್ಮೀಯರು. ಅವರ ಜೊತೆಗೆ ಇದ್ದೆವು. ಜನರ ಸಣ್ಣ ಪುಟ್ಟ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೆವು. ಇವೆಲ್ಲ ನನಗೆ ಚುನಾವಣೆಯಲ್ಲಿ ವರದಾನವಾಯಿತು.

* ವಾರ್ಡ್‌ನಲ್ಲಿ ಏನೇನು ಸಮಸ್ಯೆಗಳಿವೆ?

ಹಿಂದಿನ ಸದಸ್ಯೆ ಸೆಲ್ವಿ ಬಾಬು ಅವರು ಉತ್ತಮ ಜನಪರ ಕೆಲಸಗಳನ್ನು ಮಾಡಿದ್ದಾರೆ. ಹಾಗಿದ್ದರೂ ಸಮಸ್ಯೆಗಳಿವೆ. ಕುಡಿಯುವ ನೀರು, ರಸ್ತೆ, ಚರಂಡಿ, ಒಳಚರಂಡಿ ಸಮಸ್ಯೆ ಪ್ರಮುಖವಾದವು. ಗಾಳಿಪುರದ ಸಮೀಪ ಕರು ಮಾರಿಯಮ್ಮ ದೇವಾಲಯದ ಬಳಿಯಲ್ಲಿರುವ ಐದು ಬೀದಿಗಳಲ್ಲಿ ಸ್ವಲ್ಪ ಮಟ್ಟಿಗೆ ಸೌಲಭ್ಯಗಳಿವೆ. ಆದರೆ, ವರದರಾಜಪುರದ ಐದು ಬೀದಿಗಳಲ್ಲಿ ಏನೇನೂ ಸೌಲಭ್ಯಗಳಿಲ್ಲ. ಒಳಚರಂಡಿ ವ್ಯವಸ್ಥೆ ಇಲ್ಲ. ರಸ್ತೆಗೆ ಡಾಂಬರು ಇಲ್ಲ. ಚರಂಡಿ ನಿರ್ಮಾಣವೂ ಆಗಿಲ್ಲ. ವಾರ್ಡ್‌ನಾದ್ಯಂತ ನೀರಿನ ಸಮಸ್ಯೆ ಇದೆ. ದೇವಸ್ಥಾನದ ಬಳಿ ಇರುವ ಐದು ಬೀದಿಗಳಲ್ಲಿ ಮನೆ ಮನೆಗೆ ನಲ್ಲಿ ವ್ಯವಸ್ಥೆ ಇದೆ. ಆದರೆ ವರದರಾಜಪುರದಲ್ಲಿ ಅದೂ ಇಲ್ಲ. ಸದ್ಯಕ್ಕೆ ಜನರು ಕೊಳವೆಬಾವಿ ನೀರನ್ನು ಬಳಸುತ್ತಿದ್ದಾರೆ. ಜನರು ನನ್ನನ್ನು ಭೇಟಿ ಮಾಡಿದಾಗಲೆಲ್ಲಾ ನೀರಿನ ಸಮಸ್ಯೆ ಬಗ್ಗೆಯೇ ದೂರು ನೀಡುತ್ತಾರೆ.

* ತಕ್ಷಣದ ಯೋಜನೆಗಳೇನು?

ನಲ್ಲಿಗಳಿರುವ ಬೀದಿಗಳಿಗೂ ಈಗ ನೀರು ಬರುತ್ತಿಲ್ಲ. ಗಾಳಿಪುರದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ನಿಂದ ನೀರು ಬರಬೇಕು. ಈಗ ಪೈಪ್‌ಲೈನ್‌ ಆ ಭಾಗದ ಎಲ್ಲ ಮನೆಗಳಿಗೂ ನೀರು ಪೂರೈಕೆ ಮಾಡುವುದರಿಂದ ಇಲ್ಲಿಗೆ ಸರಿಯಾಗಿ ನೀರು ತಲುಪುತ್ತಿಲ್ಲ. ಹಾಗಾಗಿ, ಅಲ್ಲಿಂದ ಪ್ರತ್ಯೇಕ ಪೈಪ್‌ಲೈನ್‌ ಹಾಕುವ ಅಗತ್ಯವಿದೆ. ನಗರಸಭೆಯ ಆಯುಕ್ತರೊಂದಿಗೆ ಈ ಬಗ್ಗೆ ಚರ್ಚಿಸಿದ್ದೇನೆ. ಅವರು ಎಂಜಿನಿಯರ್‌ ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರತ್ಯೇಕ ಪೈಪ್‌ಲೈನ್‌ ಹಾಕುವಂತೆ ಸೂಚಿಸಿದ್ದಾರೆ.

* ವಾರ್ಡ್‌ನಲ್ಲಿ ಎಲ್ಲ ಮನೆಗಳಲ್ಲೂ ಶೌಚಾಲಯಗಳಿವೆಯೇ? ಸ್ವಚ್ಛತೆಯನ್ನು ಕಾಪಾಡಲು ಏನು ಕ್ರಮ ಕೈಗೊಂಡಿದ್ದೀರಿ?

ನಮ್ಮಲ್ಲಿ ಅನೈರ್ಮಲ್ಯದ ಸಮಸ್ಯೆ ಅಷ್ಟಾಗಿ ಇಲ್ಲ. ಪೌರಕಾರ್ಮಿಕರು ಸಕ್ರಿಯರಾಗಿದ್ದಾರೆ. ಪ್ರತಿ ದಿನವೂ ಕಸ ಸಂಗ್ರಹಿಸುತ್ತಾರೆ. ಎಲ್ಲ ಮನೆಗಳಲ್ಲೂ ಶೌಚಾಲಯಗಳಿವೆ.

* ಸದಸ್ಯರಾಗಿನಿಮ್ಮ ಗುರಿ ಏನು?

ಒಂದೇ ವಾಕ್ಯದಲ್ಲಿ ಹೇಳುವುದಾದರೆ, 2ನೇ ವಾರ್ಡ್‌ ಅನ್ನು ಮಾದರಿ ವಾರ್ಡ್‌ ಆಗಿ ಮಾಡುವುದು. ನಗರಸಭೆಯ ಆಯುಕ್ತರಿಂದ ಹಿಡಿದು ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ಜನರು ನನ್ನ ಮೇಲೆ ಇಟ್ಟಿರುವನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ ಎಂಬ ವಿಶ್ವಾಸವಿದೆ.

* ವಾರ್ಡ್‌ ಅಭಿವೃದ್ಧಿಗೆ ಹಾಕಿಕೊಂಡಿರುವ ಇತರ ಯೋಜನೆಗಳೇನು?

ನಮ್ಮಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಇಲ್ಲ. ಅದನ್ನು ಸ್ಥಾಪನೆ ಮಾಡಬೇಕಾಗಿದೆ. ವರದರಾಜಪುರ ಮತ್ತು ಸೋಮವಾರಪೇಟೆಯಲ್ಲಿ ರಸ್ತೆಗಳು ಸರಿ ಇಲ್ಲ. ಹೊಸ ಸುಸಜ್ಜಿತ ರಸ್ತೆಯನ್ನು ನಿರ್ಮಿಸಲು ಪ್ರಯತ್ನ ಮಾಡುತ್ತೇನೆ. ವರದರಾಜಪುರದಲ್ಲಿ ಚರಂಡಿ, ಒಳಚರಂಡಿ ನಿರ್ಮಿಸಲು ಪ್ರತ್ಯೇಕ ಯೋಜನೆ ರೂಪಿಸಬೇಕಿದೆ. ಈ ಬಗ್ಗೆಯೂ ಆಯುಕ್ತರೊಂದಿಗೆ ಮಾತುಕತೆ ನಡೆಸಲಾಗಿದೆ. ಮನೆ ಮನೆಗೆ ನಲ್ಲಿ, ಮೀಟರ್‌ ಅಳವಡಿಸಿಕಾವೇರಿ ನೀರು ಪೂರೈಸುವ ಕೆಲಸವೂ ಆಗಬೇಕಿದೆ.

ಗೌರಿ ಅವರಿಗೆ ಹೊಸ ಅನುಭವ

ಗೌರಿ ಅವರು ರಾಜಕೀಯ ಹಿನ್ನೆಲೆಯವರಲ್ಲ. ಬಿಜೆಪಿಯಿಂದ ಸ್ಪರ್ಧಿಸಿದ್ದ ಅವರುಇದೇ ಮೊದಲ ಬಾರಿಗೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹಾಗಾಗಿ ರಾಜಕೀಯ ಅವರಿಗೆ ಹೊಸದು. ಹಾಗಿದ್ದರೂಪತಿಯ ಬೆಂಬಲದೊಂದಿಗೆ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ವಿಶ್ವಾಸದಲ್ಲಿ ಅವರಿದ್ದಾರೆ. ಅವರ ಸಂಪರ್ಕ ಸಂಖ್ಯೆ: 9448165925.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT