ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಮರಣ ಪ್ರಮಾಣ ಇಳಿಮುಖ

ಫೇಸ್‌ಬುಕ್‌ ಲೈವ್‌ನಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹೇಳಿಕೆ
Last Updated 9 ಅಕ್ಟೋಬರ್ 2020, 16:10 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದ ಮರಣ ಪ್ರಮಾಣ ಇಳಿಮುಖವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ತಿಳಿಸಿದರು.

ಫೇಸ್‌ಬುಕ್‌ ಲೈವ್‌ನಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಎರಡು ತಿಂಗಳಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚು ಕಂಡು ಬಂದಿದ್ದವು. ಮರಣದ ಪ್ರಮಾಣವೂ ಹೆಚ್ಚಳವಾಗಿತ್ತು. ಡೆತ್ ಆಡಿಟ್ ವರದಿಯನ್ನು ವಿಶ್ಲೇಷಿಸಿ ತಕ್ಷಣವೇ ವೈದ್ಯರ ಸಹಕಾರದೊಂದಿಗೆ ಮರಣಕ್ಕೆ ಯಾವ ಅಂಶಗಳು ಕಾರಣವಾಗುತ್ತಿವೆ ಎಂಬುದನ್ನು ತಿಳಿದುಕೊಳ್ಳಲಾಗಿತ್ತು. ನಂತರ ಕೈಗೊಂಡ ಕ್ರಮಗಳಿಂದಕಳೆದ ತಿಂಗಳು ಶೇ 1.80ರಷ್ಟಿದ್ದ ಮರಣದ ಪ್ರಮಾಣ, 15 ದಿನಗಳಲ್ಲಿ ಶೇ 1.27ಕ್ಕೆ ಇಳಿದಿದೆ. ಕಳೆದ ವಾರ 1.02ಕ್ಕೆ ಇಳಿದಿದ್ದು, ಈ ವಾರ ಶೇ 1ಕ್ಕಿಂತಲೂ ಕಡಿಮೆಯಾಗಿದೆ’ ಎಂದರು.

‘ಕೋವಿಡ್ ಆಸ್ಪತ್ರೆಯಲ್ಲಿರುವ ತೀವ್ರ ನಿಗಾ ಘಟಕದಲ್ಲಿ ಪರಿಣಾಮಕಾರಿಯಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸೋಂಕು ಹಾಗೂ ಮರಣ ಹೆಚ್ಚು ಕಂಡು ಬಂದ ಪ್ರದೇಶಗಳಲ್ಲಿ ತೀವ್ರ ಕಣ್ಗಾವಲು ವ್ಯವಸ್ಥೆ ಕೈಗೊಂಡ ಕಾರಣದಿಂದಲೂ ಮರಣ ಪ್ರಮಾಣ ಇಳಿದಿದೆ’ ಎಂದು ಅವರು ಹೇಳಿದರು.

ಮಾದರಿ ಸಂಗ್ರಹ ಹೆಚ್ಚಳ: ಎರಡು ವಾರಗಳಿಂದೀಚೆಗೆ ಗಂಟಲು ದ್ರವ ಮಾದರಿಗಳ ಸಂಗ್ರಹಣೆಯನ್ನು ಹೆಚ್ಚಿಸಲಾಗಿದೆ. ಪ್ರತಿ ದಿನ 950 ಮಂದಿಯ ಗಂಟಲು ದ್ರವ ಸಂಗ್ರಹಿಸಲು ಸರ್ಕಾರ ಗುರಿ ನೀಡಿದೆ. ಆದರೆ, ಜಿಲ್ಲೆಯಲ್ಲಿ 1,250 ಪರೀಕ್ಷೆಗಳ ಗುರಿ ಇಟ್ಟುಕೊಂಡು ಕೆಲಸ ಮಾಡಲಾಗುತ್ತಿದೆ. ಇದರಿಂದ ಇದರಿಂದ ಸೋಂಕಿತರ ಪ್ರಮಾಣವೂ ಜಾಸ್ತಿಯಾಗಿದೆ. ಆದರೆ, ಇದಕ್ಕೆ ಆತಂಕ ಪಡಬೇಕಾಗಿಲ್ಲ. ಸೋಂಕಿತರ ಸಂಪರ್ಕಿತರನ್ನು ಪತ್ತೆ ಹಚ್ಚಿ ಆರೈಕೆ ಮಾಡುವುದರಿಂದ ಮತ್ತಷ್ಟು ಜನರಿಗೆ ಸೋಂಕು ವ್ಯಾಪಿಸದಂತೆ ತಡೆಯಬಹುದಾಗಿದೆ’ ಎಂದರು.

ಕೋವಿಡ್‌ನಿಂದ ಮೃತಪಟ್ಟವರ ಪೈಕಿ 40 ವರ್ಷದಿಂದ 60 ವರ್ಷದವರು 37 ಮಂದಿ ಇದ್ದಾರೆ. ಹೀಗಾಗಿ ಈ ವಯಸ್ಸಿನವರು ಹೆಚ್ಚು ಎಚ್ಚರದಿಂದ ಇರಬೇಕು.ಮಾಸ್ಕ್ ಧರಿಸುವುದು, ಅಂತರ ಕಾಯ್ದುಕೊಳ್ಳುವುದು, ಆರೋಗ್ಯ ತಪಾಸಣೆ ಒಳಗಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಅವರು ಸಲಹೆ ನೀಡಿದರು.

57 ಹೊಸ ಪ್ರಕರಣ, 105 ಮಂದಿ ಗುಣಮುಖ

ಜಿಲ್ಲೆಯಲ್ಲಿ ಶುಕ್ರವಾರ 105 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. 57 ಹೊಸ ಪ್ರಕರಣಗಳು ದೃಢಪಟ್ಟಿವೆ. ಸಾವಿನ ಪ್ರಕರಣ ವರದಿಯಾಗಿಲ್ಲ.

ಜಿಲ್ಲೆಯಲ್ಲಿ ಈವರೆಗೆ 4,787 ಪ್ರಕರಣಗಳು ದೃಢಪಟ್ಟಿವೆ. 3,984 ಮಂದಿ ಗುಣಮುಖರಾಗಿದ್ದಾರೆ. 702 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ, 222 ಮಂದಿ ಹೋಂ ಐಸೊಲೇಷನ್‌ನಲ್ಲಿದ್ದಾರೆ. 44 ಮಂದಿ ಐಸಿಯುನಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ. ಕೋವಿಡ್‌ನಿಂದಾಗಿ ಈವರೆಗೆ 73 ಮಂದಿ ಮೃತಪಟ್ಟಿದ್ದರೆ, ಸೋಂಕು ದೃಢಪಟ್ಟಿದ್ದರೂ, ಬೇರೆ ಅನಾರೋಗ್ಯಗಳಿಂದ 28 ಮಂದಿ ಕೊನೆಯುಸಿರೆಳೆದಿದ್ದಾರೆ.

ಶುಕ್ರವಾರ ದಾಖಲೆಯ 1,435 ಮಂದಿಯ ಗಂಟಲು ದ್ರವದ ಮಾದರಿ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಪೈಕಿ ಆರ್‌ಟಿಪಿಸಿಆರ್‌ನಲ್ಲಿ 1,037 ಪರೀಕ್ಷೆ ನಡೆಸಲಾಗಿದೆ. 398 ಪರೀಕ್ಷೆಗಳನ್ನು ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಗಳನ್ನು ಮಾಡಲಾಗಿದೆ. 1,379 ಮಂದಿಯ ವರದಿ ನೆಗೆಟಿವ್‌ ಬಂದಿವೆ. 56 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಮೈಸೂರಿನಲ್ಲಿ ಒಂದು ಪ್ರಕರಣ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT