ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಅಧಿಕಾರಿಗಳು, ಸಿಬ್ಬಂದಿಗೆ ಕೋವಿಡ್‌ ಪರೀಕ್ಷೆ

ಹೆಚ್ಚು ಪರೀಕ್ಷೆಗೆ ಜಿಲ್ಲಾಡಳಿತ ಒತ್ತು, ಗುರಿ ಮೀರುತ್ತಿದೆ ಪರೀಕ್ಷೆಗಳ ಸಂಖ್ಯೆ
Last Updated 7 ಅಕ್ಟೋಬರ್ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ದಿನೇದಿನೇ ಹೆಚ್ಚುತ್ತಿರುವ ಕೋವಿಡ್ ಪರೀಕ್ಷೆ ನಿಯಂತ್ರಣದ ಪ್ರಯತ್ನವಾಗಿ ಸರ್ಕಾರದ ಸೂಚನೆಯಂತೆ ಜಿಲ್ಲಾಡಳಿತ ಕೋವಿಡ್‌ ಪರೀಕ್ಷೆಗಳನ್ನು ಹೆಚ್ಚು ಮಾಡುತ್ತಿದೆ. ವಿವಿಧ ಕಡೆಗಳಲ್ಲಿ ವಿಶೇಷ ಶಿಬಿರಗಳನ್ನು ನಡೆಸುತ್ತಿದೆ.

ಜಿಲ್ಲಾಡಳಿತ ಭವನದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೋವಿಡ್‌ ಪರೀಕ್ಷೆ ನಡೆಸುವ ಪ್ರಕ್ರಿಯೆಯನ್ನು ಆರೋಗ್ಯ ಇಲಾಖೆ ಆರಂಭಿಸಿದೆ. ಬುಧವಾರ ಪರೀಕ್ಷೆಗಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿಯ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಯಿತು. ಎಲ್ಲ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

‘ಅಧಿಕಾರಿಗಳು ಹಾಗೂ ಸಿಬ್ಬಂದಿ ಹೊರಗಡೆ ಹೆಚ್ಚು ಓಡಾಡುತ್ತಾ ಇರುತ್ತಾರೆ. ಸಾರ್ವಜನಿಕರೊಂದಿಗೆ ಬೆರೆಯುತ್ತಿರುತ್ತಾರೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಸಿಬ್ಬಂದಿ, ಅಧಿಕಾರಿಗಳಿಗೆ ಕೋವಿಡ್‌ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನಮ್ಮ ಇಲಾಖೆಯಿಂದಲೇ ಈ ಕಾರ್ಯವನ್ನು ಆರಂಭಿಸಲಾಗಿದೆ. ಜಿಲ್ಲಾಡಳಿತ ಭವನದ ಎಲ್ಲ ಇಲಾಖೆಗಳ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಪರೀಕ್ಷೆ ನಡೆಸಲಾಗುವುದು. ರೋಗ ಲಕ್ಷಣ ಹೊಂದಿರುವವರು, ಇತರೆ ಕಾಯಿಲೆಗಳನ್ನು ಹೊಂದಿರುವವರಿಗೆ ಆದ್ಯತೆ ನೀಡುತ್ತಿದ್ದೇವೆ. ರೋಗ ಲಕ್ಷಣ ಇಲ್ಲದವರು ಕೂಡ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಲಾಗಿದೆ’ ಎಂದರು.

ಗುರಿ ಮೀರಿದ ಪರೀಕ್ಷೆ: ಪ್ರತಿ ದಿನ 1,200 ಪರೀಕ್ಷೆಗಳನ್ನು ನಡೆಸುವಂತೆ ಆರೋಗ್ಯ ಇಲಾಖೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಎರಡು ದಿನಗಳಿಂದ ಜಿಲ್ಲೆಯಲ್ಲಿ 1,200ಕ್ಕೂ ಹೆಚ್ಚು ಪರೀಕ್ಷೆಗಳು ನಡೆದಿವೆ.

‘ಪ್ರತಿ ದಿನ ಹೆಚ್ಚು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಜಿಲ್ಲಾಸ್ಪತ್ರೆ, ನ್ಯಾಯಾಲಯ ಸೇರಿದಂತೆ ವಿವಿಧ ಕಡೆಗಳಲ್ಲಿ ಸಾರ್ವಜನಿಕರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ರೋಗ ಲಕ್ಷಣ ಹೊಂದಿಲ್ಲದವರು ಕೂಡ ಸೋಂಕಿಗೆ ತುತ್ತಾಗಿರುವ ಸಾಧ್ಯತೆ ಇರುತ್ತದೆ. ತಮಗೆ ಅನಾರೋಗ್ಯ ಇಲ್ಲ ಎಂದು ಕೊಂಡು ಅವರು ಹೊರಗಡೆ ಸುತ್ತಾಡಿದರೆ, ಅರಿವಿಲ್ಲದಂತೆ ಇತರರಿಗೂ ಹರಡುತ್ತಾರೆ. ಹಾಗಾಗಿ, ಹೆಚ್ಚು ಪರೀಕ್ಷೆಗಳನ್ನು ನಡೆಸಿ ಸೋಂಕು ಇದೆಯೇ ಇಲ್ಲವೇ ಎಂಬುದು ಒಳ್ಳೆಯದು’ ಎಂದು ಡಾ.ಎಂ.ಆರ್.ರವಿ ಅವರು ಹೇಳಿದರು.

ಮುಷ್ಕರ ವಾಪಸ್‌: ಈ ಮಧ್ಯೆ, ಸಮಾನ ವೇತನ, ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.24ರಿಂದ ಕೆಲಸಕ್ಕೆ ಹಾಜರಾಗದೇ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದ ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ, ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ನೌಕರರು ಬುಧವಾರ ಮುಷ್ಕರವನ್ನು ವಾಪಸ್‌ ಪಡೆದಿದ್ದಾರೆ.

ಜಿಲ್ಲೆಯಲ್ಲಿ 438 ಮಂದಿ ಗುತ್ತಿಗೆ, ಹೊರಗುತ್ತಿಗೆ ನೌಕರರಿದ್ದು, ಮುಷ್ಕರ ನಡೆಸುತ್ತಿದ್ದರಿಂದ ಕೋವಿಡ್‌ ಕರ್ತವ್ಯಗಳಿಗೆ ತೀವ್ರ ಹಿನ್ನಡೆಯಾಗಿತ್ತು. ಸರ್ಕಾರ ಅವರ ಕೆಲವು ಬೇಡಿಕೆಗಳನ್ನು ಒಪ್ಪಿಕೊಂಡಿರುವುದರಿಂದ ಮುಷ್ಕರ ವಾಪಸ್‌ ಪಡೆದಿದ್ದಾರೆ. ಗುರುವಾರದಿಂದ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಇದರಿಂದಾಗಿ ಕೋವಿಡ್‌ ಕರ್ತವ್ಯಕ್ಕೆ ಎದುರಾಗಿದ್ದ ಸಮಸ್ಯೆ ಬಗೆಹರಿದಂತಾಗಿದೆ.

ಜಿಲ್ಲಾಸ್ಪತ್ರೆಯಲ್ಲಿ ಲಿಕ್ವಿಡ್‌ ಆಮ್ಲಜನಕದ ಘಟಕ

ಜಿಲ್ಲಾಸ್ಪತ್ರೆಯಲ್ಲಿ ದ್ರವರೂಪದ ಆಮ್ಲಜನಕದ ಘಟಕ(ಲಿಕ್ವಿಡ್‌ ಆಕ್ಸಿಜನ್‌ ಪ್ಲಾಂಟ್‌) ನಿರ್ಮಾಣಕ್ಕೆ ಸರ್ಕಾರ ಅನುಮತಿ ನೀಡಿದೆ.

ಸದ್ಯ, ಪ್ರತಿದಿನ ಆಮ್ಲಜನಕ ಸಿಲಿಂಡರ್‌ಗಳನ್ನು ಮೈಸೂರಿನಿಂದ ತರಲಾಗುತ್ತಿದೆ. ಖಾಲಿ ಸಿಲಿಂಡರ್‌ಗಳನ್ನು ಮೈಸೂರಿಗೆ ತೆಗೆದುಕೊಂಡು ಹೋಗಿ ಅಲ್ಲಿಂದ ತುಂಬಿಸಿಕೊಂಡು ಬರಲಾಗುತ್ತಿದೆ. ಆಮ್ಲಜನಕ ಘಟಕ ಇದ್ದರೆ, ನೇರವಾಗಿ ಟ್ಯಾಂಕರ್‌ನಲ್ಲಿ ತಂದು ತುಂಬಿಸಬಹುದು. ಮೂರ್ನಾಲ್ಕು ದಿನಗಳವರೆಗೆ ಬೇಕಾದಷ್ಟು ಆಮ್ಲಜನಕವನ್ನು ತುಂಬಿಡಬಹುದು. ಪ್ರತಿ ದಿನ ಮೈಸೂರಿಗೆ ತೆಗೆದುಕೊಂಡು ಹೋಗಿಬರುವ ಕೆಲಸ ಇಲ್ಲ ಎಂದು ಹೇಳುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

ಜಿಲ್ಲಾಸ್ಪತ್ರೆಯಲ್ಲಿ 6 ಕಿಲೊ ಲೀಟರ್‌ ಸಾಮರ್ಥ್ಯದ ಲಿಕ್ವಿಡ್‌ ಆಕ್ಸಿಜನ್‌ ಘಟಕ ನಿರ್ಮಾಣವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT