ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕೋವಿಡ್‌ ಲಸಿಕೆ ವಿತರಣೆಗೆ ಸಿದ್ಧತೆ, ಆರು ಕೇಂದ್ರಗಳಲ್ಲಿ ವ್ಯವಸ್ಥೆ

Last Updated 15 ಜನವರಿ 2021, 13:56 IST
ಅಕ್ಷರ ಗಾತ್ರ

ಚಾಮರಾಜನಗರ: ರಾಷ್ಟ್ರದಾದ್ಯಂತ ಶನಿವಾರ ಆಯೋಜಿಸಲಾಗಿರುವ ಕೋವಿಡ್‌–19 ಲಸಿಕೆ ವಿತರಣೆ ಅಭಿಯಾನ ಜಿಲ್ಲೆಯಲ್ಲೂ ನಡೆಯಲಿದ್ದು, ಜಿಲ್ಲಾಡಳಿತ ಎಲ್ಲ ಸಿದ್ಧತೆಗಳನ್ನು ನಡೆಸಿದೆ.

ಜಿಲ್ಲೆಗೆ ಈಗಾಗಲೇ 4,000 ಡೋಸ್‌ ‘ಕೋವಿಶೀಲ್ಡ್‌’ ಲಸಿಕೆ ಬಂದಿವೆ. ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ 6,363 ಆರೋಗ್ಯ ಕಾರ್ಯಕರ್ತರನ್ನು ಲಸಿಕೆ ವಿತರಣೆಗೆ ಗುರುತಿಸಲಾಗಿದೆ. ಆರಂಭದಲ್ಲಿ 814 ಮಂದಿ ಕೊರೊನಾ ವಾರಿಯರ್ಸ್‌ಗೆ ಲಸಿಕೆ ನೀಡಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.ಶನಿವಾರ ಬೆಳಿಗ್ಗೆ 11 ಗಂಟೆಗೆ ಜಿಲ್ಲೆಯ ಏಕಕಾಲಕ್ಕೆ ಆರು ಕಡೆಗಳಲ್ಲಿ ಲಸಿಕೆ ಹಾಕುವ ಕಾರ್ಯ ಆರಂಭವಾಗಲಿದೆ.

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಲಸಿಕೆ ವಿತರಣೆ ಅಭಿಯಾನದ ಬಗ್ಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರಾಷ್ಟ್ರದಾದ್ಯಂತ ಲಸಿಕೆ ವಿತರಣೆ ಅಭಿಯಾನ ನಡೆಯಲಿದ್ದು, ರಾಜ್ಯದ 243 ಕಡೆಗಳಲ್ಲಿ ಲಸಿಕೆ ಹಾಕುವ ಕಾರ್ಯಕ್ರಮ ನಡೆಯಲಿದೆ. ನಮ್ಮ ಜಿಲ್ಲೆಯಲ್ಲೂ ಆರು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಎಡಬೆಟ್ಟದಲ್ಲಿರುವ ವೈದ್ಯಕೀಯ ಕಾಲೇಜು, ಗುಂಡ್ಲುಪೇಟೆಯ ತಾಲ್ಲೂಕು ಆಸ್ಪತ್ರೆ, ಯಳಂದೂರು ತಾಲ್ಲೂಕು ಆಸ್ಪತ್ರೆ, ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆ, ಕೊಳ್ಳೇಗಾಲ ನಗರ ಆರೋಗ್ಯ ಕೇಂದ್ರ ಹಾಗೂ ‌ಹನೂರು ತಾಲ್ಲೂಕಿನ ರಾಮಾಪುರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುವುದು’ ಎಂದು ಹೇಳಿದರು.

‘ಪ್ರತಿ ಕೇಂದ್ರದಲ್ಲೂ ಐದು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದರಲ್ಲಿ ಒಬ್ಬರು ವೈದ್ಯರು ಇರುತ್ತಾರೆ. ಜಿಲ್ಲೆಯಲ್ಲಿ ನಡೆಯುವ ಅಭಿಯಾನದ ಮೇಲ್ವಿಚಾರಣೆ ನಡೆಸಲು ಒಂದು ನಿಯಂತ್ರಣ ಕೊಠಡಿ ತೆರೆಯಲಾಗುವುದು. ಎಲ್ಲ ಕೇಂದ್ರಗಳಲ್ಲಿ ನಡೆಯುವ ಲಸಿಕೆ ಹಾಕುವ ಕಾರ್ಯಕ್ರಮದ ಮೇಲ್ವಿಚಾರಣೆಯನ್ನು ಈ ಕೊಠಡಿಯಿಂದ ಮಾಡಲಾಗುವುದು. ಅಲ್ಲಿ ವೈದ್ಯರು, ಲಸಿಕಾ ಅಧಿಕಾರಿ ಹಾಗೂ ಇತರ ಅಧಿಕಾರಿಗಳು ಇರುತ್ತಾರೆ. ಈ ನಿಯಂತ್ರಣ ಕೊಠಡಿಯು ರಾಜ್ಯ ಮಟ್ಟದ ಮೇಲ್ವಿಚಾರಣಾ ಕೇಂದ್ರದೊಂದಿಗೆ ಸಂಪರ್ಕದಲ್ಲಿರುತ್ತದೆ’ ಎಂದು ಜಿಲ್ಲಾಧಿಕಾರಿ ಅವರು ಮಾಹಿತಿ ನೀಡಿದರು.

ಕಡ್ಡಾಯ ಅಲ್ಲ: ‘ಮೊದಲ ಎರಡು ದಿನಗಳಲ್ಲಿ (ಶನಿವಾರ ಮತ್ತು ಸೋಮವಾರ) 814 ಮಂದಿಗೆ ಲಸಿಕೆ ಹಾಕಲಾಗುವುದು. ಒಂದು ಕೇಂದ್ರದಲ್ಲಿ ದಿನಕ್ಕೆ ಗರಿಷ್ಠ 100 ಮಂದಿಗೆ ಮಾತ್ರ ಲಸಿಕೆ ನೀಡಲಾಗುವುದು. ಹಾಗಾಗಿ, ಶನಿವಾರ 500ರಿಂದ 600 ಮಂದಿಗೆ ಲಸಿಕೆ ಹಾಕಲು ಸಾಧ್ಯವಾಗಬಹುದು. ಉಳಿದವರಿಗೆ ಸೋಮವಾರ ಹಾಕಲಾಗುವುದು’ ಎಂದರು.

‘ಲಸಿಕೆ ಪಡೆಯಲಿರುವ ಆರೋಗ್ಯ ಕಾರ್ಯಕರ್ತರನ್ನು ಈಗಾಗಲೇ ಪಟ್ಟಿ ಮಾಡಲಾಗಿದೆ. ಲಸಿಕೆ ಪಡೆಯುವುದು ಕಡ್ಡಾಯವೇನಲ್ಲ. ಲಸಿಕೆ ಪಡೆಯುವವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಅವರ ಮನವರಿಕೆ ಮಾಡಿದ ನಂತರವೇ ಲಸಿಕೆ ಕೊಡಲಾಗುವುದು’ ಎಂದರು.

‘18 ವರ್ಷದ ಒಳಗಿನವರಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ, ಹೆಚ್ಚು ರಕ್ತದೊತ್ತಡ ಇರುವವರಿಗೆ ಲಸಿಕೆ ನೀಡುವುದಿಲ್ಲ’ ಎಂದು ಜಿಲ್ಲಾಧಿಕಾರಿ ಅವರು ವಿವರಿಸಿದರು.

ಹಂತ ಹಂತವಾಗಿ ವಿತರಣೆ

ಜಿಲ್ಲೆಯಲ್ಲಿ ಲಸಿಕೆ ಹಾಕಲು ಗುರುತಿಸಿರುವವರಿಗೆ ಹಂತ ಹಂತವಾಗಿ ವಿತರಣೆ ನಡೆಯಲಿದೆ.ಎರಡನೇ ಹಂತದ ಅಭಿಯಾನ ಜನವರಿ 23 ಮತ್ತು 24ರಂದು ನಡೆಯಲಿದೆ.

‘ನಗರ ಸ್ಥಳೀಯರ ಸಂಸ್ಥೆಗಳಲ್ಲಿರುವ ಅಧಿಕಾರಿಗಳು, ಸಿಬ್ಬಂದಿ, ನಂತರ ಕಂದಾ‌ಯ ಇಲಾಖೆ, ಆರ್‌ಡಿಪಿಆರ್‌ ಸಿಬ್ಬಂದಿ ಅಧಿಕಾರಿಗಳಿಗೆ ಎರಡನೇ ಹಂತದಲ್ಲಿ ಲಸಿಕೆ ವಿತರಣೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT