ಸೋಮವಾರ, ಅಕ್ಟೋಬರ್ 18, 2021
27 °C
‘ಪ್ರಜಾವಾಣಿ’ ಓದುಗರೊಂದಿಗೆ ರವೀಂದ್ರ ಭಟ್ಟ ಸಂವಾದ

ವಿಶ್ವಾಸಾರ್ಹತೆ ಉಳಿಸಿಕೊಂಡ ಪತ್ರಿಕೆ ಬೆಳೆಯಲಿ: ಪ್ರಜಾವಾಣಿ ಬಗ್ಗೆ ಓದುಗರ ಆಶಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಐದು ದಶಕಗಳಿಂದಲೂ ‘ಪ್ರಜಾವಾಣಿ’ಯನ್ನು ಓದುತ್ತಿದ್ದೇನೆ. ನಾನು ಕಲಿತಿರುವುದರಲ್ಲಿ ಶೇ 75ರಷ್ಟನ್ನು ಈ ಪತ್ರಿಕೆಯನ್ನು ಓದಿಯೇ ಕಲಿತಿದ್ದೇನೆ. ನಿರ್ಭಿಡೆಯಿಂದ ಹಾಗೂ ನಿಷ್ಪಕ್ಷಪಾತದಿಂದ ವರದಿ ಮಾಡುವ ಬೇರೆ ಪತ್ರಿಕೆಯನ್ನು ನಾನು ನೋಡಿಲ್ಲ. ಆರಂಭದಲ್ಲಿ ಪತ್ರಿಕೆ ಹೇಗೆ ಬರುತ್ತಿತ್ತೋ, ಈಗಲೂ ಅದೇ ಗುಣಮಟ್ಟವನ್ನು ಕಾಯ್ದುಕೊಂಡಿದೆ. ನಾನು ಮೆಟ್ಟುಪಾಳ್ಯಂ ರೈಲು ಯೋಜನೆಯ ಬಗ್ಗೆ ಅಧ್ಯಯನ ನಡೆಸಿ ಬರೆದ ವರದಿಯನ್ನು ‘ಪ್ರಜಾವಾಣಿ’ ನಕ್ಷೆ ಸಮೇತ ಮೊದಲ ಪುಟದಲ್ಲಿ ಪ್ರಕಟಿಸಿತ್ತು’

– ಚಾಮರಾಜನಗರದ ಹಿರಿಯ ನಾಗರಿಕ, ‘ಪ್ರಜಾವಾಣಿ’ಯ ಕಟ್ಟಾ ಓದುಗ ಸಿ.ಪಿ.ಹುಚ್ಚೇಗೌಡ ಅವರ ನುಡಿಗಳಿವು. 

‘ಪ್ರಜಾವಾಣಿ’ಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರು ಶುಕ್ರವಾರ ನಗರದಲ್ಲಿ ಓದುಗರೊಂದಿಗೆ ನಡೆಸಿದ ಸಂವಾದದಲ್ಲಿ ಹುಚ್ಚೇಗೌಡರು ಸೇರಿದಂತೆ ಹಲವು ಓದುಗರು ಪತ್ರಿಕೆಯ ಬಗ್ಗೆ ತಮ್ಮ ಮುಕ್ತ ಅಭಿಪ್ರಾಯಗಳನ್ನು ಹಂಚಿಕೊಂಡರು.

ನಗರದ ಪತ್ರಿಕಾ ವಿತರಕ ಸಾಗರ್‌ ಅವರು ಆರಂಭಿಸಿರುವ ಸಾಗರ ಕಮ್ಯೂನಿಕೇಷನ್‌ ಸೆಂಟರ್‌ನ ಆಶ್ರಯದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರವೀಂದ್ರ ಭಟ್ಟ ಅವರು, ‘ಈ ದೇಶದಲ್ಲಿ ವಿಶ್ವಾಸಾರ್ಹ ಮಾಧ್ಯಮ ಯಾವುದಾದರೂ ಇದ್ದರೆ, ಅದು ಮುದ್ರಣ ಮಾಧ್ಯಮ ಎಂಬುದು ಕೋವಿಡ್‌ ಕಾಲದಲ್ಲಿ ಸಾಬೀತಾಗಿದೆ. ಕೋವಿಡ್ ಸಮಯದಲ್ಲಿ ಹರಡಿದ ಸುಳ್ಳು ಸುದ್ದಿಗಳಿಂದಾಗಿ ಮುದ್ರಣ ಮಾಧ್ಯಮಕ್ಕೆ ಕೊಂಚ ಹಿನ್ನಡೆಯಾದರೂ, ವಿಶ್ವಾಸಾರ್ಹತೆ ಉಳಿಸಿಕೊಂಡಿದೆ’ ಎಂದರು. 

‘ಪ್ರಜಾವಾಣಿಯು 73 ವರ್ಷಗಳಿಂದಲೂ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳದೇ ಸುದ್ದಿಗಳನ್ನು ಓದುಗರಿಗೆ ತಲುಪಿಸುತ್ತಿದೆ. ಯಾವುದೇ ಘಟನೆ, ಕಾರ್ಯಕ್ರಮಗಳಲ್ಲಿ ಏನಾಗಿದೆ ಎಂಬುದನ್ನು ಕಟ್ಟಿಕೊಡುವುದಷ್ಟೇ ನಮ್ಮ ಕೆಲಸ. ತೀರ್ಮಾನವನ್ನು ಓದುಗರಿಗೆ ಬಿಟ್ಟುಬಿಡಬೇಕು. ಓದುಗರಿಗೆ ಏನು ಬೇಕು ಎಂಬುದನ್ನು ತಿಳಿದುಕೊಂಡು ಮಾಹಿತಿಗಳನ್ನು ಸಂಪೂರ್ಣವಾಗಿ ನೀಡಲು ಪ್ರಯತ್ನ ಪಡುತ್ತಿದ್ದೇವೆ. ಜನಾಭಿಪ್ರಾಯವನ್ನು ರೂಪಿಸಿ, ಆರೋಗ್ಯಪೂರ್ಣ ಸಮಾಜವನ್ನು ಕಟ್ಟುವ ಕೆಲಸವನ್ನು ಪತ್ರಿಕೆ ಮುಂದುವರಿಸಲಿದೆ’ ಎಂದರು.  

ಸಂವಾದದಲ್ಲಿ ಪತ್ರಿಕೆಯ ಹಲವು ದಶಕಗಳ ಓದುಗ ಸಿ.ಪಿ.ಹುಚ್ಚೇಗೌಡ ಅವರನ್ನು ಸನ್ಮಾನಿಸಲಾಯಿತು. 

ಓದುಗರು ಹೇಳಿದ್ದೇನು?

‘ಪ್ರಜಾವಾಣಿ’ಯ ವಾಚಕರವಾಣಿಯಲ್ಲಿ ಪತ್ರಗಳನ್ನು ಬರೆಯುತ್ತಲೇ ನಾನು ಬರಹಗಾರನಾಗಿ ಗುರುತಿಸಿದೆ. ಸತ್ಯಕ್ಕೆ ಇನ್ನೊಂದು ಹೆಸರೇ ‘ಪ್ರಜಾವಾಣಿ’. ಚಾಮರಾಜನಗರ ಪ್ರತ್ಯೇಕ ಜಿಲ್ಲೆ‌ಯಾಗಬೇಕು ಎಂಬ ಹೋರಾಟಕ್ಕೆ ಈ ಪತ್ರಿಕೆ ಸ್ಪಂದಿಸಿದೆ. ಮೆಟ್ಟುಪಾಳ್ಯಂ ರೈಲು ಯೋಜನೆಯ ಬಗ್ಗೆ ಹೆಚ್ಚು ಬರೆದಿದ್ದೇ ‘ಪ್ರಜಾವಾಣಿ’. ಪತ್ರಿಕೆ ವರದಿಗಳು ನಿಷ್ಪಕ್ಷಪಾತವಾಗಿರುತ್ತವೆ. ನಮ್ಮ ಜಿಲ್ಲೆಯ ವಿಶೇಷಗಳನ್ನು ಎಲ್ಲ ಆವೃತ್ತಿಯಲ್ಲಿ ಪ್ರಕಟಿಸಲು ಗಮನಹರಿಸಬೇಕು. ಮೊದಲಿನಂತೆಯೇ ಪುರವಣಿಗಳನ್ನು ಪ್ರತ್ಯೇಕವಾಗಿ ನೀಡಬೇಕು.

– ಲಕ್ಷ್ಮಿನರಸಿಂಹ, ಬರಹಗಾರ

ಪತ್ರಿಕೆಯಲ್ಲಿ ವರದಿ ಬಂದರೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಿಸುತ್ತಾರೆ. ನಾನು ಅರ್ಚಕ ವೃತ್ತಿ ಮಾಡುವ ಹರಳುಕೋಟೆ ಜನಾರ್ದನಸ್ವಾಮಿ ಕೆಲವು ವರ್ಷಗಳ ಹಿಂದೆ ದೇವಸ್ಥಾನ ಸೋರುತ್ತಿತ್ತು. ಇದನ್ನು ‘ಪ್ರಜಾವಾಣಿ’ಯು ಸಚಿತ್ರವಾಗಿ ವರದಿ ಮಾಡಿತ್ತು. ಅದು ಶಾಸಕರು ಹಾಗೂ ಅಧಿಕಾರಿಗಳ ಗಮನ ಸೆಳೆಯಿತು. ದೇವಾಲಯದ ದುರಸ್ತಿಗಾಗಿ ಶಾಸಕರು ₹10 ಸಾವಿರ ಮಂಜೂರು ಮಾಡಿದರು. ಇದು ಪತ್ರಿಕೆಯ ವರದಿಗಿರುವ ಶಕ್ತಿ.

– ಅನಂತಪ್ರಸಾದ್‌, ಚಾಮರಾಜನಗರ

ಕನ್ನಡ ಸಾಹಿತ್ಯಕ್ಕೆ ‘ಪ್ರಜಾವಾಣಿ’ ಕೊಡುಗೆ ಅಪಾರ. ಪತ್ರಿಕಾ ಭಾಷೆ ಬದಲಾಗಿರುವ ಈ ಕಾಲದಲ್ಲಿ ಸ್ವಚ್ಛ ಕನ್ನಡದಲ್ಲಿ ವರದಿ ಮಾಡುವ ಪತ್ರಿಕೆ ಇದು. ರಾಜ್ಯದಲ್ಲಿ ಭಾಷೆ ಹಾಗೂ ಸಂಸ್ಕೃತಿಯನ್ನು ದೃಢವಾಗಿ ಕಟ್ಟಿದೆ. ರಾಜ್ಯದಲ್ಲಿ ಪತ್ರಿಕೆ ಖರೀದಿಸಿ ಓದುವ ಸಂಸ್ಕೃತಿಯನ್ನು ಹುಟ್ಟುಹಾಕಿರುವುದು ಇದೇ ಪತ್ರಿಕೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಪೂರಕವಾಗುವ ಸುದ್ದಿ ಮಾಹಿತಿಗಳನ್ನು ನೀಡುತ್ತಾ ನನ್ನನ್ನೂ ಸೇರಿದಂತೆ ಲಕ್ಷಾಂತರ ಜನರ ಬದುಕನ್ನು ರೂಪಿಸಿರುವ ಹೆಗ್ಗಳಿಕೆ ‘ಪ್ರಜಾವಾಣಿ’ಯದು. 

–ಸುರೇಶ್‌ ಎನ್.ಋಗ್ವೇದಿ, ಉಪನ್ಯಾಸಕ, ಚಾಮರಾಜನಗರ

ನಾನು ‘ಪ್ರಜಾವಾಣಿ’ಯನ್ನು ಮನೆಮನೆಗೆ ತಲುಪಿಸುವ ಕೆಲಸದಲ್ಲಿ ತೊಡಗಿದ ನಂತರವಷ್ಟೇ ನನಗೆ ಈ ಪತ್ರಿಕೆಯ ಮಹತ್ವ ತಿಳಿಯಿತು. ಶಿಕ್ಷಕರು, ವಿದ್ಯಾವಂತರೆಲ್ಲ ಪತ್ರಿಕೆಯ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು. ಶಾಲಾ ಮಕ್ಕಳಿಗಾಗಿ ನೀಡಲಾಗುತ್ತಿರುವ ಶಿಕ್ಷಣ ಮಾರ್ಗದರ್ಶಿಯಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಪತ್ರಿಕೆಯೂ ಮುಂದೆಯೂ ಮನೆ ಮನೆಗಳಲ್ಲಿ ಜನರ ಮನ ಮನಗಳಲ್ಲಿ ಬೆಳಗಲಿ.

–ಮಹಾಲಕ್ಷ್ಮಿ, ಚಾಮರಾಜನಗರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು