ಸೋಮವಾರ, ಜನವರಿ 17, 2022
21 °C
ಗುಂಡಾಲ್‌ ಜಲಾಶಯ: ದುರಸ್ತಿಯಾಗದ ನಾಲೆ–ರೈತರ ಆಕ್ರೋಶ

ಜಲಾಶಯದ ನೀರು ರಸ್ತೆಯ ಮೇಲೆ!

ಬಿ.ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ಸಾವಿರಾರು ಎಕರೆ ಕೃಷಿ ಭೂಮಿಗೆ ನೀರುಣಿಸಿ ನೂರಾರು ರೈತರಿಗೆ ಜೀವನಾಡಿಯಾಗಬೇಕಿದ್ದ ಗುಂಡಾಲ್ ಜಲಾಶಯದ ನೀರು ಜಲಾಶಯದಲ್ಲೂ ಇರದೇ; ಇತ್ತ ಕೃಷಿ ಜಮೀನಿಗೂ ಬಳಕೆಯಾಗದೆ ಪೋಲಾಗುತ್ತಿದೆ.

ಮಳೆ ಕೊರತೆಯಿಂದಾಗಿ ಕಳೆದ ಐದಾರು ವರ್ಷಗಳಿಂದ ನೀರಿಲ್ಲದೇ ಬರಿದಾಗಿದ್ದ ಜಲಾಶಯ ನವೆಂಬರ್ ತಿಂಗಳಲ್ಲಿ ಬಿದ್ದ ಸತತ ಮಳೆಗೆ ಕೋಡಿ ಬಿದ್ದಿದೆ. ಇದರ ಬೆನ್ನಲ್ಲೇ ಜಲಾಶಯದ ಸುತ್ತಮುತ್ತಲಿನ ಕೊಳವೆಬಾವಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. 

ಜಲಾಶಯ ಭರ್ತಿಯಾದ ಬಳಿಕ ಬಲ, ಎಡದಂಡೆ ನಾಲೆಗಳಲ್ಲಿ ನೀರು ಬಿಡಲಾಗುತ್ತಿದೆ. ಆದರೆ, ನಾಲೆಯಲ್ಲಿ ಹರಿದು ಬರುತ್ತಿರುವ ನೀರು ಕೃಷಿ ಭೂಮಿಗೆ ಬಳಕೆಯಾಗದೆ ಎಲ್ಲೆಂದರಲ್ಲಿ ರಸ್ತೆಗೆ ಹರಿದು ಪೋಲಾಗುತ್ತಿದೆ. ನಾಲೆ ಬದಿಯಲ್ಲೇ ನೀರು ಹರಿಯುತ್ತಿರುವುದರಿಂದ ನಾಲೆಗೆ ಹೊಂದಿಕೊಂಡಂತಿರುವ ರಸ್ತೆಗಳು ಕೆಸರುಮಯವಾಗಿವೆ.

ರೈತರ ಆಕ್ರೋಶ: ನೀರು ಹರಿಸುವ ಮುನ್ನ ನಾಲೆಗಳನ್ನು ಸರಿಪಡಿಸಬೇಕು ಎಂದು ರೈತರು ನೀರಾವರಿ ಇಲಾಖೆ (ಕಾವೇರಿ ನೀರಾವರಿ ನಿಗಮ) ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ, ನಾಲೆ ದುರಸ್ತಿ ಮಾಡದೇ ನೀರು ಬಿಟ್ಟಿರುವುದರಿಂದ ನೀರು ರಸ್ತೆಗೆ ಹರಿಯುತ್ತಿದೆ. ನಾಲೆಯ ಎರಡೂ ಬದಿಗಳಲ್ಲಿ ಹಾಕಿದ್ದ ಕಲ್ಲುಗಳೆಲ್ಲಾ ಕಿತ್ತು ಬಂದಿವೆ. ಅಲ್ಲಲ್ಲಿ ಗಿಡಗಂಟಿಗಳೆಲ್ಲಾ ಬೆಳೆದು ಬರುವ ನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗದೇ ಒಂದೇ ಕಡೆ ನಿಲ್ಲುತ್ತಿದೆ.

‘ಬಲದಂಡೆ ನಾಲೆಯಲ್ಲಿ ಹರಿಯುತ್ತಿರುವ ನೀರು ಪೋಲಾಗುತ್ತಿದೆ. ನಾಲೆಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ನೀರು ಹರಿಸಿದ್ದರೆ ರೈತರಿಗೆ ಅನುಕೂಲವಾಗುತ್ತಿತ್ತು. ನಾಲೆಗಳಲ್ಲಿ ಹೂಳು ತುಂಬಿದೆ. ಇದರಿಂದಾಗಿ ನಾಲೆಯಲ್ಲಿ ಹರಿದು ಬರುವ ನೀರು ಆಳ ಕಡಿಮೆ ಇರುವ ಕಡೆಗಳಲ್ಲಿ ನಾಲೆಯಿಂದ, ಹೊರ ಬಂದು ರಸ್ತೆ ಮೇಲೆ ಹರಿಯುತ್ತಿದೆ. ನೀರು ವ್ಯರ್ಥವಾಗುವುದರ ಜತೆಗೆ ಜನರಿಗೆ ಓಡಾಡಲು ತೊಂದರೆಯಾಗಿದೆ’ ಎಂದು ಕಣ್ಣೂರಿನ ಜಗದೀಶ್ ‘ಪ್ರಜಾವಾಣಿ’ಗೆ ತಿಳಿಸಿದರು. 

‘ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ನಾಲೆಯಲ್ಲಿ ನೀರು ಹರಿಬಿಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. 15 ದಿನಗಳಿಂದ ನಾಲೆಗಳಲ್ಲಿ ನೀರು ಹರಿದು ಕೆರೆ–ಕಟ್ಟೆಗಳೆಲ್ಲಾ ಭರ್ತಿಯಾಗಿವೆ. ಉಳಿದ ನೀರನ್ನು ಜಲಾಶಯದಲ್ಲೇ ಶೇಖರಣೆ ಮಾಡಿ ಬೇಸಿಗೆ ಸಂದರ್ಭದಲ್ಲಿ ಹರಿಸಿದರೆ ಖುಷ್ಕಿ ಜಮೀನು ಹೊಂದಿರುವ ರೈತರಿಗೂ ಅನುಕೂಲವಾಗುತ್ತದೆ’ ಎಂದು ಎಕಾಮಗೆರೆ ಗ್ರಾಮದ ನಟೇಶ್ ಹೇಳಿದರು. 

‘ಜಲಾಶಯ ಭರ್ತಿಯಾದ ಪ್ರಾರಂಭದಲ್ಲೇ ಗೇಟ್‌ಗಳನ್ನು ಸರಿಪಡಿಸಿ, ಕಿರುನಾಲೆಗಳನ್ನು ನಿರ್ವಹಣೆ ಮಾಡಿ ನಂತರ ನೀರು ಹರಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ಹೇಳಿದ್ದೆವು. ಇದಾವುದನ್ನು ಕಿವಿಗೆ ಹಾಕಿಕೊಳ್ಳದೆ ಏಕಾಏಕಿ ನೀರು ಹರಿಸಿದ್ದಾರೆ. ಇದರಿಂದ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ’ ಎಂದು ಅವರು ದೂರಿದರು.

‘ನಾಲೆ ದುರಸ್ತಿಗೆ ಕ್ರಮ’

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಶಾಂತಕುಮಾರ್‌, ‘ದೊಡ್ಡಿಂದುವಾಡಿ, ಕಾಮಗೆರೆ, ಸಿಂಗನಲ್ಲೂರು ಕೆರೆಗಳಿಗೆ ನೀರು ತುಂಬಿಸುವ ಉದ್ದೇಶದಿಂದ ನಾಲೆಗಳಲ್ಲಿ ನೀರು ಹರಿಸಲಾಗುತ್ತಿದೆ. ಕೆಲವು ಕಡೆ ನಾಲೆಗಳಿಂದ ನೀರು ಹೊರ ಚೆಲ್ಲುತ್ತಿರುವುದು ಗಮನಕ್ಕೆ ಬಂದಿದೆ. ಎರಡು ದಿನದಲ್ಲಿ ನೀರನ್ನು ನಿಲ್ಲಿಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ನಾಲೆಗಳನ್ನು ಸರಿಪಡಿಸಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು