ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಂಬೆ ವೈಭವ: ಕಣ್ಣೆರಡು ಸಾಲದು...

Last Updated 13 ಅಕ್ಟೋಬರ್ 2021, 7:12 IST
ಅಕ್ಷರ ಗಾತ್ರ

ಸಂತೇಮರಹಳ್ಳಿ:ಮನೆಯೊಳಗೆ ಇಣುಕಿ ನೋಡುತ್ತಿದ್ದಂತೆ ಹಜಾರದ ತುಂಬೆಲ್ಲಾ ಹಂತ ಹಂತವಾಗಿ ಜೋಡಿಸಿಟ್ಟ ಸಣ್ಣ ಸಣ್ಣ ಬೊಂಬೆಗಳು ಆಕರ್ಷಿಸುತ್ತವೆ. ಯಾರಾದರೂ ನೋಡಿದರೇ ಸ್ವಲ್ಪ ಹೊತ್ತು ನಿಂತು ಮನಸಾರೆ ಸಾಲು ಗೊಂಬೆಗಳನ್ನು ಕಣ್ತುಂಬಿಕೊಳ್ಳದೇ ಅಲ್ಲಿಂದ ಮುಂದೆ ಹೋಗಲಾರರು.

ಇದು ಈ ವರ್ಷ ಮಾತ್ರ ಕಂಡು ಬರುವ ದೃಶ್ಯವಲ್ಲ. ಸಂತೇಮರಹಳ್ಳಿಯರೇಷ್ಮೆಗೂಡಿನ ಮಾರುಕಟ್ಟೆ ಬಳಿ ಹೋಟೆಲ್ ನಡೆಸುತ್ತಿರುವ ಬಾಲ್ಯಸುಬ್ರಹ್ಮಣ್ಯ ಅವರ ಮನೆಯಲ್ಲಿ ಪ್ರತಿ ವರ್ಷ ನವರಾತ್ರಿ ಸಮಯದಲ್ಲಿ ಕಂಡು ಬರುವ ದೃಶ್ಯ.

ಎಂತಹುದೇ ಸ್ಥಿತಿಯಲ್ಲಿದ್ದರೂ, ದಸರಾ ಸಮಯದಲ್ಲಿ ಗೊಂಬೆಗಳನ್ನು ಕೂರಿಸುವುದನ್ನು ಬಾಲಸುಬ್ರಹ್ಮಣ್ಯಕುಟುಂಬದವರು ತಪ್ಪಿಸುವುದಿಲ್ಲ.ಇವರ ತಂದೆಯ ಕಾಲದಿಂದಲೂ ತಪ್ಪದೇ ನವರಾತ್ರಿ ಸಮಯದಲ್ಲಿ ಬೊಂಬೆಗಳನಿಟ್ಟು ಒಂಬತ್ತು ದಿನ ನವ ದುರ್ಗೆಯರನ್ನು ಪೂಜಿಸುತ್ತಾ ಬಂದಿದ್ದಾರೆ.

ಅಂಬಾರಿ, ಗಣಪತಿ, ಚಾಮುಂಡೇಶ್ವರಿ, ಪಲ್ಲಕ್ಕಿ, ಲಕ್ಷ್ಮಿದೇವಿ, ತ್ರಿಮೂರ್ತಿಗಳು, ದಶಾವತಾರ ಸೇರಿದಂತೆ ವಿವಿಧ ದೇವ ಮಾನವರ ಬೊಂಬೆಗಳನ್ನಿಟ್ಟಿದ್ದಾರೆ. ಆನೆಗಳು, ಕುದುರೆಗಳು, ಒಂಟೆಗಳನ್ನು ಇಟ್ಟಿದ್ದಾರೆ. ಪಟ್ಟದ ಬೊಂಬೆಗಳು, ರಾಜ–ರಾಣಿ ಜಂಬೂಸವಾರಿ ಮಾಡುವ ಬೊಂಬೆಗಳು ಸೇರಿದಂತೆ ನೂರಾರು ಬೊಂಬೆಗಳನ್ನು ಇಟ್ಟು ಪೂಜಿಸಿಕೊಂಡು ಬರುತ್ತಿದ್ದಾರೆ.

ನವರಾತ್ರಿ ಅಂಗವಾಗಿ ದಿನಕ್ಕೊಂದು ದೇವಿಯ ಪೂಜೆ ಆಚರಣೆಯಂತೆ ಪ್ರತಿ ನಿತ್ಯ ನೈವೇದ್ಯ ಇಟ್ಟು ಮಕ್ಕಳನ್ನು ಕರೆದು ಕಳಸಕ್ಕೆ ಪೂಜೆ ಸಲ್ಲಿಸಿ ಪ್ರಸಾದ ನೀಡುತ್ತಾರೆ. ಸರಸ್ವತಿ ದೇವಿಯ ಪೂಜಾ ದಿನದಂದು ಮಕ್ಕಳಿಗೆ ವಿದ್ಯೆ ಕರುಣಿಸಲೆಂದು ವಿಶೇಷ ಪೂಜೆ ಸಲ್ಲಿಸಿ ಮಕ್ಕಳಿಗೆ ಆಶೀರ್ವದಿಸುವ ಪದ್ಧತಿ ಇವರಲ್ಲಿದೆ.

ನವರಾತ್ರಿಯ 9ನೇ ದಿನ ಮುಗಿಯುತ್ತಿದ್ದಂತೆ ಬೊಂಬೆಗಳ ಬಳಿ ಇಟ್ಟಿರುವ ಕಳಸಕ್ಕೆ ಬನ್ನಿಸೊಪ್ಪು ಹಾಕಿ ಪೂಜೆ ಸಲ್ಲಿಸಿ ಬೊಂಬೆಗಳನ್ನು ತೆಗೆಯಲಾಗುತ್ತದೆ.

‘ನಾಡಹಬ್ಬ ದಸರಾ ಅಂಗವಾಗಿ ಮನೆಯಲ್ಲಿ ಬೊಂಬೆಗಳನ್ನಿಟ್ಟು ಪ್ರತಿವರ್ಷ ಪೂಜಿಸಿಕೊಂಡು ಬರುತ್ತಿದ್ದೇವೆ. ಈ ಸಂಪ್ರದಾಯವನ್ನು ನಮ್ಮ ಮಕ್ಕಳೂ ಮುಂದುವರೆಸಿಕೊಂಡು ಹೋಗಬೇಕು ಎಂಬುದು ನಮ್ಮ ಆಶಯ’ ಎಂದು ಹೇಳುತ್ತಾರೆ ಬಾಲಸುಬ್ರಹ್ಮಣ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT